ಬಸಿರ ಬಯಕೆ

ಬಸಿರ ಬಯಕೆ

ಕವನ

ಗಿಡನೆಟ್ಟ ಪುಣ್ಯಾತ್ಮನಾರೊ ಅರಿಯೆ

ಬದುಕ ನೀಡಿದ ಮಹಾತ್ಮನಾರೊ ತಿಳಿಯೆ

ಜಗದ ಜೀವರಿಗೆ ಉಸಿರು ನೀಡುವ ಕಾಯಕ  ನನಗದೇ ಬಾಳ ಹಾದಿಯಲಿ ತೃಪ್ತಿದಾಯಕ

ನೀರು ನೆರಳು ತಂಪು ಕಂಪುಗಳ ಪಸರಿಸುವೆ

ಖಗ-ಮಿಗಗಳಿಗೆ ಆಶ್ರಯ ಒದಗಿಸುವೆ

 

ಬಸಿರು ಬಯಕೆ ಮನದಿ ನೂರಾರು ಕನಸುಗಳು

ಉಸಿರು ನಿಟ್ಟುಸಿರ ಆಡೊಂಬಲದ ತಾಕಲಾಟಗಳು

ಮೇಲು-ಕೀಳೆಂಬ ಭೇದಭಾವಗಳಿಲ್ಲದ ನಡೆಗಳು

ಕಲಿಯುಗದ ಕಾಮಧೇನುವಿನ ಉದರ ಹೊತ್ತು ನಿಂತಿಹ ಭಂಗಿಗಳು

ಮನುಜನ ಸ್ವಾರ್ಥಕೆ ಬಲಿಪಶುವಾಗಿ ನರಳುವೆವು

ತನುವಿನ ಹಿಂಸೆಯ ಶೋಕವ ನುಂಗಿಹೆವು

 

ನನ್ನುದರವ ಬಗೆದು ರಕುತವ ಬಸಿಯದಿರಿ

ಕಣ್ಣಿದ್ದೂ ಕುರುಡರಂತೆ ಸಮಾಜದಲಿ ವರ್ತಿಸದಿರಿ

ಪರಿಸರ ಸ್ನೇಹಿಯಾಗಿ ವೃಕ್ಷಗಳ ಕಾಪಾಡಿರಿ

ಅರಿಯದೆ ಎಸಗುವ ತಪ್ಪುಗಳ ಮನ್ನಿಸುವೆವು

ಅರಿತರಿತು ಮಾಡುವ ದುಷ್ಟಕಾರ್ಯಕೆ ಕ್ಷಮೆ ನೀಡೆವು

ನಿಮ್ಮ ಮನೆಮಗಳ ಭಾವನೆಗಳ ಹೊಸಕದಿರೆಂದು ಬೇಡುವೆವು

 

ಸಹಸ್ರಾರು ಬೀಜ ಹುಟ್ಟಿಗೆ ಬುವಿಯೊಡಲು ಬೇಕಲ್ಲವೇ

ನೀರೆರೆದು ಪೋಷಿಸಲು ಸದ್ಗುಣವಂತರಾಗಿ ಸಹಕರಿಸಿ

ಪ್ರಕೃತಿ ಮಾತೆಯ ಅಳಲನ್ನು ಅರ್ಥೈಸಿ ವ್ಯವಹರಿಸಿ

ನಮ್ಮೊಂದಿಗೆ ಇತರರನ್ನು  ಏಣಿಯಾಗಿ ಏರಿಸಿ

ಸಹಕಾರ ತತ್ವ ನರನಾಡಿಯಲಿ ಬಿಂಬಿಸಿ

ವನದೇವತೆಯ ಮಡಿಲ ಕಂದಮ್ಮಗಳ ರಕ್ಷಿಸಿ

 

-ರತ್ನಾ ಕೆ.ಭಟ್, ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್