ಬಹುಬೆಳೆಗಳಿಂದ ಆದಾಯ ಸಮತೋಲನ
“ಕಾಫಿ ಒಂದನ್ನೇ ನಂಬಿಕೊಂಡು ಕೂತ್ರೆ ಆಗೋದಿಲ್ಲ. ತೋಟದಲ್ಲಿ ನಾಲ್ಕೈದು ಬೆಳೆಗಳನ್ನಾದ್ರೂ ಬೆಳೆಸಬೇಕು. ಆಗ ಒಂದರ ಬೆಲೆ ಇಳಿದರೂ, ಉಳಿದ ಬೆಳೆಗಳ ಆದಾಯದಿಂದ ತೋಟ ಮತ್ತು ಮನೆ ಖರ್ಚು ನಿಭಾಯಿಸಬಹುದು” ಎಂದವರು ಮಡಿಕೇರಿಯ ಜಿ.ಆರ್. ನಾರಾಯಣ ರಾವ್.
ಅಲ್ಲಿಯ ಬ್ರಾಹ್ಮಣರ ವ್ಯಾಲಿಯ ಮನೆಯಲ್ಲಿ ಕುಳಿತು ಮಾತನಾಡುತ್ತಿದ್ದ ನಾರಾಯಣರಾಯರ ಧ್ವನಿಯಲ್ಲಿ ಆತ್ಮವಿಶ್ವಾಸವಿತ್ತು. ಅದಕ್ಕೆ ಕಾರಣ ತಂದೆಯಿಂದ ಪಡೆದ ಕಾಫಿ ತೋಟವನ್ನು ಐದು ದಶಕಗಳ ಕಾಲ ನಿರ್ವಹಿಸಿದ ಅನುಭವ.
ಅವತ್ತು ೨೧ ಜನವರಿ ೨೦೦೭. ಆಗಷ್ಟೇ ಹೆರವನಾಡು ಗ್ರಾಮದಲ್ಲಿರುವ ಅವರ ೧೫೦ ಎಕ್ರೆಗಳ ಜ್ಯೋತಿ ಎಸ್ಟೇಟನ್ನು ಸುತ್ತಿ ಬಂದಿದ್ದೆ. ಮಡಿಕೇರಿಯಿಂದ ಭಾಗಮಂಡಲ ರಸ್ತೆಯಲ್ಲಿ ೮ ಕಿಮೀ ಸಾಗಿದಾಗ, ರಸ್ತೆಯ ಎಡ ಪಕ್ಕದಲ್ಲಿ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರ. ಅದರ ಹಿಂಭಾಗದಲ್ಲಿದೆ ಜ್ಯೋತಿ ಎಸ್ಟೇಟ್.
ಅಲ್ಲಿ ಈಗಲೂ ೧೫ ಎಕ್ರೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ೨೦ ಎಕ್ರೆಯಲ್ಲಿ ಏಲಕ್ಕಿ ತೋಟ. ಜಾನುವಾರು ಮೇಯಿಸುವುದಕ್ಕಾಗಿ ೧೦ ಎಕ್ರೆ ಬ್ಯಾಣ. ಉಳಿದ ಜಾಗದಲ್ಲೆಲ್ಲ ರೋಬಸ್ಟ ಮತ್ತು ಅರಾಬಿಕಾ ಕಾಫಿ ಗಿಡಗಳು. ಬಹುಪಾಲು ನೆರಳುಮರಗಳಿಗೆ ಹಬ್ಬಿರುವ ಕರಿಮೆಣಸಿನ ಬಳ್ಳಿಗಳು. ಕಾಫಿ ಗಿಡಗಳೊಂದಿಗೆ ಕೊಕ್ಕೋ ಹಾಗೂ ಲಿಂಬೆ ಗಿಡಗಳು.
ಕಾಫಿಯ ಬೆಲೆಯ ಏರುಪೇರು ಅವರನ್ನು ಬಾಧಿಸದೆ ಬಿಟ್ಟಿಲ್ಲ. ಆದರೆ ಏಲಕ್ಕಿ ಹಾಗೂ ಕರಿಮೆಣಸಿನ ಆದಾಯ ಕೈಸೇರುತ್ತಿರುವ ಕಾರಣ ಅವರು ಚಿಂತಿತರಾಗಿಲ್ಲ. ಜೊತೆಗೆ ೧,೦೦೦ ಕೊಕ್ಕೋ ಗಿಡಗಳಿಂದಲೂ ಸಾಕಷ್ಟು ಆದಾಯ. ಕೊಕ್ಕೋ ಹಣ್ಣುಗಳನ್ನು ಡ್ರೈಯರಿನಲ್ಲಿ ಒಣಗಿಸಿ ಕ್ಯಾಡ್ಬರೀಸ್ ಕಂಪೆನಿಗೆ ಮಾರುತ್ತಿದ್ದಾರೆ. ಸಂಸ್ಕರಿಸಿ ಮಾರಿದರೆ ಜಾಸ್ತಿ ಬೆಲೆ ಸಿಗುತ್ತದೆ. ಹೀಗೆ ಪ್ರತಿಯೊಂದು ಬೆಳೆಯಲ್ಲಿಯೂ ಲೆಕ್ಕಾಚಾರ ಬೇಕೆನ್ನುತ್ತಾರೆ ನಾರಾಯಣ ರಾವ್.
“ಭತ್ತದ ಬೆಳೆಯಿಂದ ಲಾಭವಾಗ್ತಿದೆಯೇ?” ಎಂದು ಅವರಿಗೆ ನನ್ನ ನೇರ ಪ್ರಶ್ನೆ. ನಾರಾಯಣರಾಯರು ಅನುಭವದಿಂದ ಮಾಗಿದ ಧ್ವನಿಯಲ್ಲಿ ಉತ್ತರಿಸಿದರು, “ಇಲ್ಲಿಯ ವರೆಗೆ ನಷ್ಟ ಆಗಿಲ್ಲ. ಆದರೆ ಅದರಿಂದ ಕಷ್ಟ ಆಗಿದೆ. ಹಾಗಂತ ಅದನ್ನು ಬಿಡಲಾಗದು. ನಮಗೆ ಊಟಕ್ಕೆ ನಾವು ಬೆಳೆಸಿದ ಅಕ್ಕಿಯೇ ಆಗಬೇಕು. ಮಿಕ್ಕಿದ್ದು ಮಾರುತ್ತೇವೆ.”
ಭತ್ತ ಬೆಳೆಸುವುದರಲ್ಲಿ ಮಾತ್ರವಲ್ಲ, ಭತ್ತ ಸಂಸ್ಕರಿಸುವುದರಲ್ಲಿಯೂ ಪಳಗಿದ ಕೈ ಅವರದು. ಜ್ಯೋತಿ ಎಸ್ಟೇಟಿನಲ್ಲಿ ೩೫ ವರುಷಗಳಿಂದ ಅವರ ಭತ್ತದ ಮಿಲ್ ಸುತ್ತಲಿನ ರೈತರಿಗೆ ಅನುಕೂಲವಾಗಿದೆ. ಮಡಿಕೇರಿಯ ಮನೆಯ ಪಕ್ಕದಲ್ಲಿಯೂ ಭತ್ತದ ಮಿಲ್ ನಡೆಸುತ್ತಿದ್ದಾರೆ. ಎಸ್ಟೇಟಿನಲ್ಲಿ ಭತ್ತ ಗಾಳಿಗೆ ತೂರಲು ಪವರ್ ಟಿಲ್ಲರಿನ ಬಳಕೆ. ಅದಕ್ಕೆ ಅಳವಡಿಸಿದ ಘ್ಯಾನ್ ಗಾಳಿಯಿಂದ ಭತ್ತ ತೂರುವ ಕೆಲಸ ಸುಲಭ ಹಾಗೂ ಶೀಘ್ರ.
ಕೆಲವು ವರುಷಗಳಿಂದೀಚೆಗೆ ಜ್ಯೋತಿ ಎಸ್ಟೇಟಿನ ಉಸ್ತುವಾರಿ ಮಗ ರಾಮಚಂದ್ರ ರಾವ್ ಅವರಿಗೆ ವಹಿಸಿದ್ದಾರೆ. ಕಾಲೇಜು ಶಿಕ್ಷಣದ ನಂತರ ಬೆಂಗಳೂರಿನಲ್ಲಿ ಒಂದು ವರುಷ ಕೆಲಸ ಮಾಡಿದ ರಾಮಚಂದ್ರರಿಗೆ ಅದು ಬೇಡವೆನಿಸಿತು. ಕೃಷಿಯಲ್ಲೇ ಬದುಕಿನ ನೆಲೆ ಕಾಣಲು ನಿರ್ಧರಿಸಿ ಊರಿಗೆ ಮರಳಿದರು.
ಎಲ್ಲವೂ ಚೆನ್ನಾಗಿ ಸಾಗುತ್ತಿದ್ದಾಗ, ಒಂದು ಅಪಘಾತದಲ್ಲಿ ಸಿಲುಕಿದ ರಾಮಚಂದ್ರ ರಾವ್ ಅವರಿಗೆ ನಡೆದಾಡುವುದು ಕಷ್ಟವಾಯಿತು. ಆದರೂ ಎದೆಗುಂದದೆ, ಜೀಪಿನಲ್ಲೇ ಎಸ್ಟೇಟ್ ಸುತ್ತಲು ಆರಂಭಿಸಿದರು. ಈಗ ಅದರಲ್ಲಿ ಸುತ್ತುತ್ತಲೇ ಕೃಷಿ ಕೆಲಸಗಳ ನಿರ್ವಹಣೆ ಮತ್ತು ಉಸ್ತುವಾರಿ. ಪೇಟೆಮನೆಯಿಂದ ತೋಟಕ್ಕೆ ಗೋಬರ್ ಗ್ಯಾಸಿನ ಸ್ಲರಿ ಸಾಗಿಸುವುದು, ತೋಟದಿಂದ ಪೇಟೆಮನೆಗೆ ಕಾಫಿಬೀಜ ಇತ್ಯಾದಿ ಸಾಗಾಟ - ಹೀಗೆ ಹಲವು ಕೆಲಸಗಳಿಗೆ ಅವರು ತಮ್ಮ ಜೀಪ್ ಮತ್ತು ಟ್ರೈಲರ್ ಬಳಸುವುದನ್ನು ಕಣ್ಣಾರೆ ನೋಡಿಯೇ ತಿಳಿಯಬೇಕು.
“ನಿಮ್ಮ ತೋಟದಲ್ಲಿ ಮರಕಾಫಿ ಕಾಣಿಸುತ್ತಿಲ್ಲವಲ್ಲ" ರಾಮಚಂದ್ರರಾವ್ ಅವರಿಗೆ ನನ್ನ ಪ್ರಶ್ನೆ. ಅವರ ಉತ್ತರ ಕಾಫಿ ಬೆಳೆಗಾರರಿಗೊಂದು ಪಾಠ: “ನಾವೂ ಬೆಳೆಸಿದ್ದೆವು ಮರಕಾಫಿ. ಎರಡು ವರುಷ ಮುಂಚೆ ಎಲ್ಲ ಕಡಿದು ಹಾಕಿದೆವು. ಯಾಕೆಂದರೆ ಬೆರಿಬೋರರಿಗೆ ಅದೇ ಕಾರಣ. ರೋಬಸ್ಟ ಮತ್ತು ಅರಾಬಿಕದ ಕೊಯ್ಲು ಜನವರಿ - ಫೆಬ್ರವರಿಯಲ್ಲಿ ಮುಗೀತದೆ ನೋಡಿ. ಆಗ ಈ ಬೆರಿಬೋರರ್ ಮರಕಾಫಿಯ ಹಣ್ಣುಗಳಲ್ಲಿ ಮೊಟ್ಟೆ ಇಡ್ತದೆ. ಮರಕಾಫಿಯ ಕೊಯ್ಲು ನಿಧಾನ. ಅದರ ಹಣ್ಣು ಕೊಯ್ಯುವ ಹೊತ್ತಿಗೆ ಪುನಃ ರೋಬಸ್ಟ ಮತ್ತು ಅರಾಬಿಕಾ ಗಿಡಗಳಲ್ಲಿ ಮೊಟ್ಟೆ ಇಡಲು ಶುರು ಮಾಡ್ತದೆ. ಮರಕಾಫಿ ಇದ್ದರೆ, ಅದಕ್ಕೆ ಇಡೀ ವರುಷ ಬದುಕಲು ನೆಲೆ ಸಿಗ್ತದೆ. ಮರಕಾಫಿ ಇಲ್ಲದಿದ್ರೆ ಅದರ ಸಂತಾನ ಮುಂದುವರಿಯೋದಿಲ್ಲ. ನಾವು ಮರಕಾಫಿ ಗಿಡಗಳನ್ನು ಕಡಿದು ಹಾಕಿದ ನಂತರ ನಮ್ಮ ತೋಟದಲ್ಲಿ ಬೆರಿಬೋರರ್ ಕಾಟ ಬಹಳ ಕಡಿಮೆ.”
ನಾರಾಯಣ ರಾವ್ ಮತ್ತು ರಾಮಚಂದ್ರ ರಾವ್ - ಇವರಿಂದ ಕಲಿಯಬಹುದಾದ ಪಾಠಗಳು ಇನ್ನಷ್ಟಿವೆ. ಕಾಫಿ ಬೆಲೆ ಗಗನಕ್ಕೆ ಏರಿದಾಗ ಇವರು ಮಡಿಕೇರಿ ಪೇಟೆಯಲ್ಲಿ ಅಥವಾ ಎಸ್ಟೇಟಿನಲ್ಲಿ ಬಂಗಲೆ ಕಟ್ಟಲು ಹೊರಡಲಿಲ್ಲ. ಜ್ಯೋಟಿ ಎಸ್ಟೇಟಿನಲ್ಲಿರೋದು ಅದೇ ಹಳೆಯ ಮಣ್ಣಿನ ಗೋಡೆಯ ಮನೆ. ದುಬಾರಿ ಕಾರುಗಳ ಖರೀದಿಗೂ ಈ ತಂದೆ-ಮಗ ಕೈಹಾಕಲಿಲ್ಲ. “ವೆಚ್ಚದಲ್ಲಿ ಇಂತಹ ಎಚ್ಚರವೇ ನಮ್ಮ ತೋಟ ಉಳಿಸಿಕೊಳ್ಳಲು ಕಾರಣ” ಎಂಬುದು ತಂದೆ ಹಾಗೂ ಮಗನ ಅಭಿಪ್ರಾಯ. ಅವರ ಅನುಭವದ ಮಾತಿಗೆ ನಾವು ತಲೆದೂಗಲೇ ಬೇಕಾಗುತ್ತದೆ, ಅಲ್ಲವೇ?
ಜ್ಯೋತಿ ಎಸ್ಟೇಟಿನ ಫೋಟೋಗಳು: ಹಲ್ಲರ್, ಕರಿಮೆಣಸು ಬಳ್ಳಿಗಳು, ಭತ್ತ ಒಣಗಿಸುವ ಅಂಗಳ ಮತ್ತು ಏಲಕ್ಕಿ ಗಿಡಗಳು