ಬಹುಮುಖ ಪ್ರತಿಭೆಯ ಸಾಧಕ - ಟೈಲರ್ ಅಣ್ಣು ನಾಯ್ಕ
ಟೈಲರ್ ಅಣ್ಣು ನಾಯ್ಕ ಎಂದೆ ಚಿರಪರಿಚಿತರಾದ ಈಶ್ವರ ನಾಯ್ಕ ಬೊಂಳ್ಚಡ್ಕರವರು ಬಾವಿಗೆ ನೀರು ತೋರಿಸುವುದರಲ್ಲಿ ತುಂಬಾ ಹೆಸರುವಾಸಿ. ಪೊಸಡಿಗುಂಪೆ ಪರಿಸರದಲ್ಲಿ ಇವರು ಟೈಲರ್ ಅಣ್ಣು ನಾಯ್ಕ ಎಂದು ಎಲ್ಲರಿಗೂ ಗೊತ್ತಿದ್ದರೂ ಇವರಲ್ಲಿ ಅಡಗಿದ್ದ ಸುಪ್ತ ತಂತ್ರಜ್ಞಾನ ಮಾತ್ರ ಯಾರಿಗೂ ಗೊತ್ತಿಲ್ಲ! ಇವರು ಚೆನ್ನಾಗಿ ಓದಿ ಇಂಜಿನಿಯರಿಂಗ್ ಮಾಡಿದ್ದರೆ ಆಧುನಿಕ ಕಾಲದ ವಿಶ್ವೇಶ್ವರಯ್ಯ ಆಗುತ್ತಿದ್ದರೋ ಏನೋ. ಆದರೆ ಇವರು ಓದಿದ್ದು ಕೇವಲ ಐದನೇ ಕ್ಲಾಸು. ಶಾಲೆಗೆ ಹೋದದ್ದು ಕೇವಲ ಮೂರು ವರ್ಷ ಮಾತ್ರ. ಅದು ಭಾರತದ ಸ್ವಾತಂತ್ರ್ಯ ಪೂರ್ವ ಕಾಲ. ಆಗ ಸಾಮಾನ್ಯ ಜನರಿಗೆ ಶಿಕ್ಷಣದ ಮಹತ್ವ ಏನೆಂದೇ ಗೊತ್ತಿರಲ್ಲದ ಪರ್ವ. ೭೦,೮೦ ದಶಕಗಳ ಹಿಂದೆ ಮೇಲ್ವರ್ಗದವರು ಮಾತ್ರ ಶಿಕ್ಷಣ ಪಡೆಯುವ ಆ ಕಾಲದಲ್ಲಿ ಇವರು ಐದನೇ ಕ್ಲಾಸು ಓದಿದ್ದಾರೆಂದರೆ ಅದು ಇವರ ಹೆತ್ತವರ ಕಾಳಜಿಯಿಂದ ಅಲ್ಲ, ಶಾಲೆಯ ಮುಖ್ಯಾಪಾಧ್ಯಾಯರ ಆಸಕ್ತಿಯಿಂದ.
ಕೃಷ್ಣ ನಾಯ್ಕ್, ಲಕ್ಷ್ಮಿ ನಾಯ್ಕರ ಸುಪುತ್ರನಾಗಿ ಜನಿಸಿದ್ದು ೮ ಆಗಸ್ಟ್ ೧೯೪೨ನೇ ಇಸವಿಯಲ್ಲಿ, ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲು. ೧೯೪೭ ಆಗಸ್ಟ್ ೧೫ ಅವರಿಗೆ ಚೆನ್ನಾಗಿ ನೆನಪಿದೆ. ಸ್ವಾತಂತ್ರ್ಯ ಸಿಕ್ಕಿದ ದಿನ ಪೈವಳಿಕೆಯಿಂದ ಕಾಯರ್ಕಟ್ಟೆಯವರೆಗೆ ಮೆರವಣಿಗೆ ಹೋಗಿ ಸಿಹಿತಿಂಡಿ ಹಂಚಿರುವ ವಿಷಯ ಈಗಲೂ ಹೇಳುತ್ತಾರೆ. ಹುಟ್ಟಿದ ಊರು ಪೈವಳಿಕೆ ಅಂಬಿಕಾನ ಸಮೀಪದ ಕುಂಡೇರಿಯಲ್ಲಿ. ಜಾಲು ಪರಮೇಶ್ವರ ಭಟ್ಟರ ಒಕ್ಕಲಿನಲ್ಲಿ ಇವರ ಕುಟುಂಬದ ವಾಸವಿತ್ತು. ಜಾಲು ಪರಮೇಶ್ವರ ಭಟ್ಟರ ಮಕ್ಕಳನ್ನು ಇವರು ಪೈವಳಿಕೆ ಶಾಲೆಗೆ ಬೆಳಿಗ್ಗೆ ಕರೆದುಕೊಂಡು ಹೋಗಿ ಸಂಜೆ ವಾಪಸ್ ಮನೆಗೆ ಕರೆದುಕೊಂಡು ಬರುವ ಕೆಲಸ ಈ ಹುಡುಗನದ್ದಾಗಿತ್ತು. ಹಾಗೆ ಭಟ್ಟರ ಮಕ್ಕಳನ್ನು ಶಾಲೆಗೆ ಬಿಟ್ಟು ಶಾಲೆಯ ಹಿಂದುಗಡೆ ಈ ಹುಡುಗ ಕುಳಿತುಕೊಳ್ಳುತ್ತಿದ್ದ. ಹೀಗೆ ಒಂದು ದಿನ ಮುಖ್ಯೋಪಾಧ್ಯಾಯರ ಗಮನ ಈ ಹುಡುಗನ ಮೇಲೆ ಬಿತ್ತು. ಅವರು ಹೋಗಿ ಹುಡುಗನನ್ನು ವಿಚಾರಿಸಿದರು. ನಿನಗೆ ಓದಲು ಆಸಕ್ತಿ ಇದ್ದರೆ ನಾಳೆ ನಿನ್ನ ಅಪ್ಪನನ್ನು ಕರೆದುಕೊಂಡು ಬಾ. ನಿನ್ನನ್ನು ಶಾಲೆಗೆ ಸೇರಿಸುತ್ತೇನೆ ಎಂದ ಹೇಳಿ ಕಳುಹಿಸಿದರು. ಹುಡುಗ ತುಂಬಾ ಖುಷಿಯಿಂದ ಮನೆಗೆ ಹೋಗಿ ಅಪ್ಪನಿಗೆ ವಿಷಯ ತಿಳಿಸಿದ. ಆಗ ಅಪ್ಪ ಹೇಳಿದರು, ಓದು ಬರಹ ಅದು ನಮ್ಮಂಥವರಿಗೆ ಅಲ್ಲ, ಅದು ನಮಗೆ ಬೇಡ ಎಂದ ಹುಡುಗನ ಆಸೆಗೆ ತಣ್ಣೀರೆರಚಿದರು. ವಿಷಯ ಹುಡುಗನ ಅಮ್ಮನಿಗೆ ತಿಳಿಯಿತು. ಶಾಲೆಯ ಮುಖ್ಯೋಪಾಧ್ಯಾಯರೇ ಹೇಳಿ ಕಳುಹಿಸಿದ ನಂತರ ನಂತರ ನಾವು ಯಾಕೆ ನಿರಾಸಕ್ತಿ ತೋರಿಸಬೇಕು, ನಾನು ಬರುತ್ತೇನೆ ಎಂದು ಹೇಳಿ, ಮರುದಿನ ತಾಯಿ ಈ ಹುಡುಗನನ್ನು ಕರೆದುಕೊಂಡು ಹೋಗಿ ಶಾಲೆಗೆ ದಾಖಲಿಸಿದರು. ಆಗ ಕಾಡೂರು ಕೃಷ್ಣ ಭಟ್ ಮುಖ್ಯೋಪಾಧ್ಯಾಯರಾಗಿದ್ದರು. ಆ ಕಾಲದಲ್ಲಿ ಶಾಲೆಯಲ್ಲಿ ಆರನೇ ಕ್ಲಾಸಿನಲ್ಲಿ ಇಂಗ್ಲೀಷ್ ಕಲಿಸುತ್ತಿದ್ದರು. ಇವರಿಗೆ ಇಂಗ್ಲೀಷ್ ಜ್ಞಾನ ಇಲ್ಲದೆ ಹೋಯಿತು. ಆದರೆ ಶಾಲೆಗೆ ಹೋಗುವಾಗಲೇ ಅಂದಚಂದದ ಚಿತ್ರ ಬಿಡಿಸುವುದರಲ್ಲಿ ತುಂಬಾ ನಿಪುಣರಾಗಿದ್ದರು.
ಶಾಲೆ ಬಿಟ್ಟ ನಂತರ ಯಾರೋ ಪರಿಚಿತರೊಬ್ಬರು ಮಂಗಳೂರಿನಲ್ಲಿರುವ ಡಾಕ್ಟರರ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿಸಿದರು. ಅವರಿಗೆ ಅಲ್ಲಿ ನಿಲ್ಲಲು ಸರಿಯಾಗದಿದ್ದರೂ ಊರಿಗೆ ಮರಳುವ ದಾರಿ ಗೊತ್ತಿಲ್ಲದೆ ಅಲ್ಲಿಯೇ ಉಳಿದುಕೊಂಡಿದ್ದರು. ಒಂದು ದಿನ ಇವರ ಚಿಕ್ಕಪ್ಪ ಕೆಲಸದ ನಿಮಿತ್ತ ಮಂಗಳೂರಿಗೆ ಹೋದವರು, ಇವರು ಕೆಲಸ ಮಾಡಿಕೊಂಡಿದ್ದ ಮನೆಯ ಪಕ್ಕದಲ್ಲಿ ಹಾದು ಹೋಗುವಾಗ ಇವರು ನೋಡಿದರು ಹಾಗೂ ಅವರ ಜೊತೆ ಊರಿಗೆ ಮರಳಿದರು. ಇವರು ಶಾಲೆಗೆ ಹೋಗುವಾಗ ಒಂದು ಟೈಲರ್ ಅಂಗಡಿಯ ಮುಂದೆ ಹಾದು ಹೋಗಬೇಕಾಗಿತ್ತು. ಟೈಲರ್ ಬಟ್ಟೆ ಹೊಲಿಯುವುದನ್ನು ನೋಡಿ, ಇವರಿಗೂ ಟೈಲರ್ ಆಗುವ ಆಶೆ ಚಿಗುರಿತು. ಮುಂದೆ ಇವರ ವಾಸ್ತವ್ಯ ಕುಂಡೇರಿಯಿಂದ ಪಾವಲ್ಕೋಡಿ ನಲ್ಪಡ್ಕಕ್ಕೆ ಬದಲಾಯಿತು. ಅಲ್ಲಿ ಅವರು ಮೂರು ವರ್ಷ ವಾಸ್ತವ್ಯವಿದ್ದು, ನಂತರ ಕನಿಯಾಲ ಸಮೀಪದ ಬೊಂಳ್ಚಡ್ಕಕ್ಕೆ ಇವರು ಬಂದು ದರ್ಖಾಸು ಮಾಡಿ ಮನೆ ಕಟ್ಟಿದರು. ಚೇವಾರಿನ ಗಂಗಾಧರ ಟೈಲರ್ರ ಶಿಷ್ಯನಾಗಿ ಇವರು ಹೊಲಿಗೆ ತರಬೇತಿಯನ್ನು ಪಡೆದು, ಧರ್ಮತ್ತಡ್ಕ ಕಕ್ವೆ ಕೃಷ್ಣಭಟ್ಟರ ಜವಳಿ ಅಂಗಡಿಯಲ್ಲಿಯೇ ಟೈಲರಿಂಗ್ ಕೆಲಸ ಪ್ರಾರಂಭಿಸಿದರು. ಹೊಲಿಯಲು ಬಂದ ಬಟ್ಟೆಯನ್ನು ಸಂಜೆ ಮನೆಗೆ ಹೋಗುವಾಗ ಕೊಂಡುಹೋಗಿ, ರಾತ್ರೆ ಕಟ್ಟಿಂಗ್ ಮಾಡಿ ಬೆಳಿಗ್ಗೆ ಅಂಗಡಿಗೆ ತಂದು ಹೊಲಿದು ಕೊಡುತ್ತಿದ್ದರು. ಮನೆಯಲ್ಲಿ ಸ್ವಲ್ಪ ಅಡಿಕೆ ಕೃಷಿಯೂ ಇದ್ದು, ಬೆಳಿಗ್ಗೆ ಎದ್ದು ದಂಬೆಯಿಂದ ನೀರು ಹಾಯಿಸಿ, ಮತ್ತೆ ಕೆಲಸಕ್ಕೆ ಹೋಗಬೇಕಿತ್ತು. ಇವರ ಮನೆಯಿಂದ ಹೆಚ್ಚು ಕಡಿಮೆ ೫ ಕಿಲೋಮೀಟರ್ ನಡೆದು ಧರ್ಮತ್ತಡ್ಕ ಜವಳಿ ಅಂಗಡಿಗೆ ಬರಬೇಕಿತ್ತು. ದಾರಿ ಮಧ್ಯೆ ನದಿಯೊಂದು ಹಾದು ಹೋಗುತ್ತಿತ್ತು. ಮಳೆಗಾಲದಲ್ಲಿ ಉಟ್ಟ ಬಟ್ಟೆಯನ್ನು ಬಿಚ್ಚಿ, ಮುಂಡಾಸು ಕಟ್ಟಿ ನದಿಯನ್ನು ಈಜಿ ದಾಟಿ ದಡ ಸೇರಬೇಕಿತ್ತು. ಅವರು ಕೆಲಸಕ್ಕೆ ಹೋಗುವಾಗ ಅವರ ಹೆಗಲಲಿ ಯಾವಾಗಲೂ ಒಂದು ಚೀಲ ನೇತಾಡುತ್ತಿತ್ತು. ಅದರಲ್ಲಿ ಕಟ್ಟಿಂಗ್ ಮಾಡಲು ಮನೆಗೆ ತಂದ ಬಟ್ಟೆ, ಮಧ್ಯಾಹ್ನದ ಬುತ್ತಿ ಮತ್ತು ಎಲೆ ಅಡಿಕೆ ಇರುತ್ತಿತ್ತು.
೧೯೬೯ರಲ್ಲಿ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪೆರ್ಲ ಸಮೀಪದ ಕುದುಕೋಳಿ ವೆಂಕಪ್ಪ ನಾಯ್ಕ - ಲಕ್ಷ್ಮಿ ದಂಪತಿಯ ಹಿರಿಯ ಪುತ್ರಿ ಪಾರ್ವತಿಯನ್ನು ವರಿಸಿದ ಇವರಿಗೆ ಇಬ್ಬರು ಗಂಡು, ಓರ್ವ ಹೆಣ್ಣು ಹೀಗೆ ನಾಲ್ಕು ಮಕ್ಕಳು. ಆ ಕಾಲದಲ್ಲಿ ಅವರಿಗೆ ಮದುವೆಗೆ ಖರ್ಚಾದ ದುಡ್ಡು ಎರಡೂವರೆ ಸಾವಿರ ರೂಪಾಯಿಗಳು, ೯೫ ರೂಪಾಯಿ ಧಾರೆ ಸೀರೆ, ೫೦ ರೂ. ಮುಖಬೆಲೆಯ ಫ್ರಾನ್ಸಿನ ಕರೆನ್ಸಿ (ಪಾವಲಿ)ಯಿಂದ ತಯಾರಿಸಿದ ತಾಳಿ, ರವಿಕೆ ಹೊಲಿದದ್ದಕ್ಕೆ ೨೫ ಪೈಸೆ, ಶರ್ಟ್ ಹೊಲಿಸಿದ್ದಕ್ಕೆ ೧೦, ಆಣೆ ಅಂದರೆ ೬೦ ಪೈಸೆ, ಆಗಿನ ಕೂಲಿ. ಇವರ ಕಿವಿಯಲ್ಲಿ ಎರಡು ಚಿನ್ನದ ಟಿಕ್ಕಿಗಳಿದ್ದು ಆಗ ಅದಕ್ಕೆ ಖರ್ಚಾದದ್ದು ೩೦ ರೂಪಾಯಿಗಳು. ಇವರ ಪತ್ನಿ ಪಾರ್ವತಿಯವರು ಓಟೆಪಡ್ಪು ಅಂಗನವಾಡಿಯಲ್ಲಿ ಇಪ್ಪತ್ತು ವರ್ಷ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪಾರ್ವತಿಯರ ಸಹೋದರ ಕುದ್ಕೋಳಿ ನಾರಾಯಣ ನಾಯ್ಕ ಇವರು ಕೇರಳ ಗ್ರಾಮೀಣ ಬ್ಯಾಂಕ್ನ ನಿವೃತ್ತ ಮ್ಯಾನೇಜರ್. ಇವರು ಒಂದು ಕಾಲದಲ್ಲಿ ಅಣ್ಣು ನಾಯ್ಕರ ಟೈಲರಿಂಗ್ ಶಿಷ್ಯ. ಈಶ್ವರ ನಾಯ್ಕರು ರೇಖಿಯನ್ನೂ ಕಲಿತಿದ್ದಾರೆ. ರೇಖಿ ಎಂದರೆ ಎಲ್ಲವನ್ನೂ ಗುಣಪಡಿಸುವ ದೇವರಿಂದ ಬಂದಿರುವ ವಿಶ್ವಶಕ್ತಿ. (ರೇಖಿ ಎಂಬುದು ಜಪಾನಿ ಶಬ್ದ) ಈಗಲೂ ಇವರು ರೇಖಿಯನ್ನು ಅನುಸರಿಸುತ್ತಾ ಇದ್ದಾರೆ. ಅವರಿಗೆ ಬಂದ ಕಿಡ್ನಿ ಸ್ಟೋನನ್ನು ರೇಖಿಯಿಂದಲೇ ಅವರು ತೆಗೆದಿದ್ದಾರೆ. ರೇಖಿ ಸರ್ಟಿಫಿಕೇಟ್ ಕೂಡಾ ಅವರಲ್ಲಿದೆ. ಇವರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟಿದ್ದಾರೆ. ಒಬ್ಬ ಮಗ ಮಾನಸಿಕ ಆಪ್ತ ಸಮಾಲೋಚನೆಯಲ್ಲಿ ಸ್ನಾತಕೋತ್ತರ ಪದವಿ, ತರಬೇತಿ ಮತ್ತು ಅಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇನ್ನೋರ್ವ ಮಗ ಪ್ಲಾಸ್ಟಿಕ್ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಒಬ್ಬಳು ಮಗಳು ಪ್ರೇಮ ಮಂಗಳೂರಿನಲ್ಲಿ ವಾಸ್ತವ್ಯವಿದ್ದಾಳೆ. ಇನ್ನೊಬ್ಬಳು ಮಗಳು ಈಗ ಉಪ್ಪಿನಂಗಡಿಯಲ್ಲಿ ಕೃಷಿಕಳಾಗಿ ಜೀವನ ನಿರ್ವಹಿಸುತ್ತಾ ಇದ್ದಾಳೆ. ಹಿರಿಯ ಮಗ ಸೂರ್ಯನಾರಾಯಣ ಒಬ್ಬ ಕವಿಯೂ ಹೌದು. ಇವರ ಹೊಸ ಚಿಗುರು ಮತ್ತು ಸ್ವರ್ಣ ಹನಿ ಎಂಬ ಎರಡು ಪುಸ್ತಕಗಳು ಬಿಡುಗಡೆಗೊಂಡಿವೆ.
ಸದಾ ಹಸನ್ಮುಖಿಯಾಗಿರುವ ಈಶ್ವರ ನಾಯ್ಕರು ಸರಳ ಜೀವಿ. ಅವರನ್ನು ನೋಡುವಾಗ ಇಷ್ಟೊಂದು ಜ್ಞಾನಭಂಡಾರ ಅವರಲ್ಲಿದೆ ಎಂದು ಗೊತ್ತಾಗುವುದೇ ಇಲ್ಲ. ಬಡ ಕುಟುಂಬದಲ್ಲಿ ಹುಟ್ಟಿ ಟೈಲರ್ ವೃತ್ತಿಯನ್ನು ಜೀವನೋಪಾಯಕ್ಕಾಗಿ ಕಂಡುಕೊಂಡ ಟೈಲರ್ ಈಶ್ವರ ನಾಯ್ಕರ ೫೫ ವರ್ಷ ಹಿಂದಿನ, ೬೫೫ ರೂಪಾಯಿ ಕೊಟ್ಟು ಖರೀದಿಸಿದ `ಸಿಂಗರ್ ಮೆರಿಟ್ ಹೊಲಿಗೆ ಯಂತ್ರ ಈಗಲೂ ಇವರ ಮನೆಯಲ್ಲಿ ವಿರಾಜಮಾನವಾಗಿದೆ.
ಈಶ್ವರ ನಾಯ್ಕರವರು ಓರ್ವ ಬಹುಮುಖ ಪ್ರತಿಭೆ ಎಂದರೆ ತಪ್ಪಾಗಲಾರದು. ಇವರು ಬಾವಿ ತೋಡಲು ನೀರು ತೋರಿಸುವುದರಲ್ಲಿ ಎತ್ತಿದ ಕೈ. ಅವರು ಹೆಚ್ಚು ಕಡಿಮೆ ೧೦ ಸಾವಿರ ಬಾವಿಗಳಿಗೆ ನೀರು ತೋರಿಸಿರಬಹುದು. ಇದು ಕೂಡಾ ಅವರು ಬೇರೆಯವರು ನೀರು ತೋರಿಸುವುದನ್ನು ನೋಡಿ, ನನಗೂ ಕಲಿಯಬೇಕೆಂದು ಕಲಿತುಕೊಂಡಿದ್ದು. ಇವರ ನೀರು ತೋರಿಸುವ ಕಲೆಯ ಗುರು ಕಲಾಯಿ ಮೌರಿಸ್ ಡಿಸೋಜಾ (ಸಿಮಾಮ್)ರವರು. ಇನ್ನೊಂದು ಆಶ್ಚರ್ಯಕರ ವಿಷಯ. ಎಂದರೆ, ಇವರು ಕಾಮಟೆ ಮರದ ತೊಗಡೆಯ ಮುಳ್ಳಿನಿಂದ ರಬ್ಬರ್ ಸ್ಟಾಂಪ್ ತಯಾರಿಸಿದ್ದು, ಈಗ ಅಂಗಡಿಗೆ ಹೋಗಿ ಆರ್ಡರ್ ಮಾಡಿದರೆ ರಬ್ಬರ್ ಸ್ಟಾಂಪ್ ತಯಾರಿಸಿ ಕೊಡುತ್ತಾರೆ. ಇವರಿಗೆ ೫ನೇ ಕ್ಲಾಸು ಕಲಿತರೂ, ಇಂಗ್ಲೀಷ್ ಜ್ಞಾನ ಇರಲಿಲ್ಲ. ಇವರಿಗೆ ಇಂಗ್ಲೀಷ್ನಲ್ಲಿ ಸ್ಪೆಲ್ಲಿಂಗ್ ಅಳವಡಿಸಿ ಕೊಟ್ಟದ್ದು ಬೊಂಳ್ಚಡ್ಕ ನಾರಾಯಣ ಭಟ್ಟರು. ಅವರು ರೇಡಿಯೋ, ವಾಚ್, ರಿಪೇರಿಯನ್ನು ಯಾವುದೇ ಕೋರ್ಸ್ ಮಾಡದೆ ಸ್ವ ಇಚ್ಚೆಯಿಂದಲೇ ಮಾಡುತ್ತಿದ್ದರು. ಬಡಗಿ ಕೆಲಸವೂ ಅವರಿಗೆ ಗೊತ್ತು. ಮನೆಯಲ್ಲಿ ಕೃಷಿ ಕೂಡಾ ಮಾಡುತ್ತಾರೆ. ಗಿಡಗಳನ್ನು ಕಸಿ ಮಾಡುವ ವಿದ್ಯೆಯೂ ಗೊತ್ತು, ನರ್ಸರಿಯನ್ನೂ ಮಾಡುತ್ತಾರೆ.
ಚಿತ್ರ, ಬರಹ - ಜಾನ್ ಕಯ್ಯಾರ್, ಮಂಜೇಶ್ವರ