ಬಹು ಉಪಯೋಗಿ ಅಂಕೋಲೆ ಸಸ್ಯ
ಅಂಕೋಲೆಯು ಒಂದು ಪೊದೆ ಸಸ್ಯ ಆಗಿದ್ದು ಅವಕಾಶ ಸಿಕ್ಕಿದರೆ ಕೆಲವು ಬಾರಿ ಸಣ್ಣ ಮರದ ಹಾಗೆಯೂ ಬೆಳೆಯುತ್ತದೆ. ಈ ಸಸ್ಯವು ಔಷಧೀಯ ಗುಣಗಳನ್ನು ಹೊಂದಿರುವ ವನಸ್ಪತಿ. ಇದರಿಂದ ಮಾಡಿದ ಮೊಳೆಗಳನ್ನು ಮುಖ್ಯ ಬಾಗಿಲಿಗೆ ಉಪಯೋಗಿಸಿದರೆ ಮನೆಯ ವಾಸ್ತು ದೋಷವು ನಿವಾರಣೆಯಾಗುವುದು ಎಂಬ ಪ್ರತೀತಿ ಇದೆ. ಇದರ ಎಲೆಗಳ ಮೇಲ್ಭಾಗ ಹಸಿರು ತಳಭಾಗ ಬೂದು ಬಣ್ಣದ್ದಾಗಿರುತ್ತದೆ. ಹೂವು ಹಳದಿ ಮಿಶ್ರಿತ ಹಸಿರು. ಹೂ ಬಿಡುವ ಸಮಯದಲ್ಲಿ ಸುತ್ತಲಿನ ಪರಿಸರ ಸುವಾಸನಾಭರಿತವಾಗಿರುತ್ತದೆ.
ಕಾಯಿ ಎಳೆಯದಿರುವಾಗ ಹಸಿರು, ಬಲಿತಂತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಮನುಷ್ಯನ ಅನೇಕ ಕಾಯಿಲೆಗಳಿಗೆ ಅಂಕೋಲೆ ಸಸ್ಯದ ಬೇರನ್ನು ಹಾಗೂ ಬೀಜವನ್ನು ಉಪಯೋಗಿಸುತ್ತಾರೆ. ಪಶುರೋಗಗಳಿಗೆ ಸೋಪ್ಪು, ಬೀಜ, ಬೇರು, ತೊಗಟೆಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.
* ಬೇರನ್ನು ಎರಡನೇ ಬಾರಿ ಅಕ್ಕಿ ತೊಳೆದ ನೀರಿನಲ್ಲಿ ಅಥವಾ ಅನ್ನದ ಗಂಜಿಯಲ್ಲಾಗಲಿ ಅರೆದು ಜೇನುತುಪ್ಪ ಸೇರಿಸಿ ಕುಡಿದರೆ ಭೇದಿ ನಿಲ್ಲುತ್ತದೆ.
* ಬೇರಿನ ಕಷಾಯ ಅಥವಾ ಗಂಧವನ್ನು ತುಪ್ಪದೊಡನೆ ತಿಂದರೆ ನಾಯಿ ಕಡಿತದ ವಿಷ ಇಳಿಯುತ್ತದೆ. (ಈಗ ಇದಕ್ಕಾಗಿ ಹೊಕ್ಕಳಿನ ಸುತ್ತ ಇಂಜಕ್ಷನ್ ಇರುವುದರಿಂದ ಈ ವಿಧಾನ ಅಷ್ಟಾಗಿ ಪ್ರಚಲಿತದಲ್ಲಿ ಇಲ್ಲ)
* ಬೇರಿನ ತೊಗಟೆ ಮತ್ತು ಇತರೆ ಮೂಲಿಕೆಯಿಂದ ಎಣ್ಣೆ ಕೀಲು ನೋವು ನಿವಾರಕ.
* ಬೇರಿನ ತೊಗಟೆ ಗಂಧವನ್ನು ಅರ್ಧದಿಂದ ಒಂದು ಚಮಚದಷ್ಟು ಸೇವಿಸಿದರೆ ಜ್ವರ ನಿವಾರಣೆ ಆಗುತ್ತದೆ.
* ಅಂಕೊಲೆ ಹಣ್ಣುಗಳನ್ನು ಒಣಗಿಸಿ ಬೀಜ ಪುಡಿ ಮಾಡಿ ಸೂಕ್ತ ಮೂಲಿಕೆ ಸೇರಿಸಿ ತಯಾರಿಸಿದ ಲೇಹ್ಯ ವೀರ್ಯದ ಪ್ರಮಾಣವನ್ನು ವೃದ್ಧಿಸುತ್ತದೆ.
* ಬೀಜವನ್ನು ಪುಡಿ ಮಾಡಿ ಜೇನುತುಪ್ಪ ಸೇರಿಸಿ ಸೇವಿಸಿದರೆ ಹಾವಿನ ವಿಷ ಗುಣವಾಗುತ್ತದೆ.
* ಥೈರಾಯ್ಡ್ ನ್ನು ಶಮನಗೊಳಿಸಲು ಬಳಕೆಯಾಗುವ ಗಿಡಮೂಲಿಕೆಗಳಲ್ಲಿ ಇದೂ ಒಂದು.
* ಎಮ್ಮೆ ಮಜ್ಜಿಗೆಯನ್ನು ಸಿಹಿಯಾಗುವಂತೆ ಕಬ್ಬಿನ ಬೆಲ್ಲ ಹಾಕಿ ಬೇರನ್ನು ತೇದು ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಕಫ ರಹಿತ ಕೆಮ್ಮಿಗೆ ಒಳ್ಳೆಯ ಮದ್ದು.
* ಇದರ ಎಣ್ಣೆಯನ್ನು ಅಂಜನ ನೋಡಲು ಉಪಯೋಗಿಸುತ್ತಾರೆ.
-ಸುಮನಾ ಮಳಲಗದ್ದೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ