ಬಹು ಉಪಯೋಗಿ ರೋಸ್ ಮೇರಿ ಸಸ್ಯ

ಬಹು ಉಪಯೋಗಿ ರೋಸ್ ಮೇರಿ ಸಸ್ಯ

ರೋಸ್ ಮೇರಿ ಸಸ್ಯದ ಹೆಸರನ್ನು ಬಹಳಷ್ಟು ಮಂದಿ ಕೇಳಿಯೇ ಇರುತ್ತೀರಿ. ಇದನ್ನು ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಬಹಳಷ್ಟು ಮಂದಿ ಇದರ ಎಣ್ಣೆ ಹಾಗೂ ಹುಡಿಯನ್ನು ನೋಡಿರಲೂ ಬಹುದು. ಆದರೆ ಗಿಡವನ್ನು, ಹೂವನ್ನು ನೋಡಿರುವವರು ಕಮ್ಮಿ. ರೋಸ್ ಮೇರಿ ಗಿಡದ ಬಗ್ಗೆ ಹಾಗೂ ಅದರ ಉಪಯೋಗಗಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯೋಣ.

ರೋಸ್ ಮೇರಿ ಗಿಡವನ್ನು ಭಾರತದ ಬಹುತೇಕ ಭಾಷೆಗಳಲ್ಲಿ ರೋಸ್ ಮೇರಿ (Rosemary) ಎಂದೇ ಕರೆಯುತ್ತಾರೆ. ಬ್ರಿಟನ್ ಹಾಗೂ ಇಟಲಿಯ ಜನರಿಗೆ ಈ ಸಸ್ಯ ಬಹಳ ಪ್ರಿಯವಾದದ್ದು. ಇದರ ವೈಜ್ಞಾನಿಕ ಹೆಸರು rosmarinus officinalis ರೋಸ್ ಮೇರಿ ಗಿಡವನ್ನು ಬೀಜಗಳಿಂದ ಸಸ್ಯಾಭಿವೃದ್ಧಿ ಮಾಡುತ್ತಾರೆ. ಇದರ ಬೀಜ ಮೊಳಕೆಯೊಡೆದು ಗಿಡವಾಗಲು ಕನಿಷ್ಟ ಮೂರು ತಿಂಗಳಾದರೂ ಸಮಯ ಬೇಕಾಗುತ್ತದೆ. ಗಿಡವನ್ನು ಬೇರಿಗೆ ಪೆಟ್ಟಾಗದಂತೆ ನಿಧಾನವಾಗಿ ಬೇರೆ ಕಡೆ ನಾಟಿ ಮಾಡಬೇಕು. ಕಾಂಡದ ತುಂಡುಗಳಿಂದಲೂ ಇದನ್ನು ಸಸ್ಯಾಭಿವೃದ್ಧಿ ಮಾಡ ಬಹುದು. ಸರಿಯಾಗಿ ಬೆಳೆದ ಕಾಂಡದ ಎಲೆಗಳನ್ನು ಕತ್ತರಿಸಿ ಅದರ ತಳದ ಭಾಗವನ್ನು ಬೇರು ಪ್ರಚೋದಕದಲ್ಲಿ ಅದ್ದಿ ತೆಂಗಿನ ನಾರು ಅಥವಾ ಮರಳಿನ ಕಾಂಪೋಸ್ಟ್ ನಲ್ಲಿ ನೆಡ ಬೇಕು. ಒಂದು ತಿಂಗಳ ಬಳಿಕ ಬೇರೆ ಕಡೆ ನಾಟಿ ಮಾಡಬಹುದು. ಕಾಂಡದಿಂದ ಪಡೆದ ಗಿಡಗಳೇ ಈಗ ಅಧಿಕಾಂಶವಾಗಿ ಬಳಕೆಯಾಗುತ್ತಿರುವುದು. ಅಂಗಾಂಶ ಕೃಷಿ (Tissue culture) ತಂತ್ರಜ್ಞಾನದ ಮೂಲಕವೂ ಸಸ್ಯಾಭಿವೃದ್ಧಿ ಮಾಡಬಹುದು. 

ರೋಸ್ ಮೇರಿ ಗಿಡವನ್ನು ಕುಂಡದಲ್ಲೂ ಬೆಳೆಸಬಹುದು. ಆದರೆ ಗಿಡಗಳು ಹಲವಾರು ವರ್ಷಗಳ ತನಕ ಬೆಳೆಯುವುದರಿಂದ ದೊಡ್ಡ ಕುಂಡಗಳಲ್ಲಿ ಬೆಳೆಸುವುದು ಉತ್ತಮ. ಗಿಡವನ್ನು ಹೆಚ್ಚು ಎತ್ತರಕ್ಕೆ ಬೆಳೆಯಲು ಬಿಡದೇ ಗುಂಪಾಗಿ ಬೆಳೆಯುವಂತೆ ಕತ್ತರಿಸುತ್ತಿರಬೇಕು. ರೋಸ್ ಮೇರಿ ಗಿಡದ ಕಾಂಡವು ಬೂದು ಬಣ್ಣದಾಗಿದ್ದು, ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ. ಗಿಡವು ಸುಮಾರು ಎರಡುವರೆ ಅಡಿಯಿಂದ ಮೂರು ಅಡಿಗಳವರೆಗೆ ಬೆಳೆಯುತ್ತದೆ. ಎಲೆಗಳು ಬಹಳ ಪರಿಮಳ ಭರಿತವಾಗಿರುವುದೇ ಈ ಗಿಡದ ವಿಶೇಷತೆ. ಕರ್ಪೂರದ ರೀತಿಯ ಪರಿಮಳವಿದ್ದರೂ ಸ್ವಲ್ಪ ಘಾಟು ಜಾಸ್ತಿ. 

ರೋಸ್ ಮೇರಿ ಸಸ್ಯವು ಎರಡು ಪ್ರಕಾರದಲ್ಲಿರುತ್ತವೆ. ಇಟಾಲಿಯನ್ ಹಾಗೂ ಫ್ರೆಂಚ್ ಎಂಬ ವಿಧಗಳಲ್ಲಿ ಇರುವ ಈ ಸಸ್ಯದಲ್ಲಿ ಸುಂದರವಾದ ಹೂವುಗಳು ಅರಳುತ್ತವೆ. ಇಟಾಲಿಯನ್ ಸಸ್ಯದಲ್ಲಿ ನೇರಳೆ ನೀಲಿ ಬಣ್ಣದ ಹೂವುಗಳು ಕಂಡು ಬಂದರೆ ಫ್ರೆಂಚ್ ಸಸ್ಯದಲ್ಲಿ ಬಿಳಿ ಬಣ್ಣದ ಹೂವುಗಳು ಅರಳುತ್ತವೆ. 

ಇವುಗಳ ಎಲೆಗಳನ್ನು ಒಣಗಿಸಿ ಅದರಿಂದ ಸುಗಂಧಭರಿತ ತೈಲವನ್ನು ತೆಗೆಯುತ್ತಾರೆ. ತೈಲವನ್ನು ಸುಗಂಧ ದ್ರವ್ಯ ಹಾಗೂ ಔಷಧಿಗಳಲ್ಲಿ ಬಳಕೆ ಮಾಡುತ್ತಾರೆ. ರೋಸ್ ಮೇರಿ ಎಣ್ಣೆಯನ್ನು ಶ್ಯಾಂಪೂ, ಸಾಬೂನು, ಬೆವರಿನ ದುರ್ಗಂಧ ಓಡಿಸುವ ಡಿಯೋಡ್ರೆಂಟ್ ಗಳಲ್ಲೆಲ್ಲಾ ಉಪಯೋಗಿಸುತ್ತಾರೆ. ಕ್ರಿಮಿ ಕೀಟಗಳನ್ನು ದೂರ ಓಡಿಸಲೂ ಇದರ ತೈಲವು ಸಹಕಾರಿ. ಈ ತೈಲಕ್ಕೆ ನೀಲಗಿರಿ ತೈಲವನ್ನು ಮಿಶ್ರ ಮಾಡಿ ಕಲಬೆರಕೆ ತೈಲವಾಗಿ ಮಾರಾಟ ಮಾಡುತ್ತಾರೆ. ಆ ಕಾರಣದಿಂದ ಇದರ ತೈಲ ಖರೀದಿಸುವಾಗ ಅಧಿಕೃತ ಮಾರಾಟಗಾರರಿಂದಲೇ ಖರೀದಿಸುವುದು ಉತ್ತಮ. ಎಳೆಯ ಎಲೆಗಳನ್ನು ಉಪ್ಪಿನಕಾಯಿ, ಪಾನೀಯಗಳು, ಸೂಪುಗಳು ಮತ್ತಿತರ ಆಹಾರ ಪದಾರ್ಥಗಳಿಗೆ ರುಚಿ ಹಾಗೂ ಪರಿಮಳ ಬರಿಸಲು ಬಳಸುತ್ತಾರೆ. ಎಲೆಯನ್ನು ಒಣಗಿಸಿ ಹುಡಿ ಮಾಡಿಟ್ಟು ಮಾಂಸ, ಮೀನು, ಸಾಂಬಾರುಗಳಿಗೆ ರುಚಿ ತರಿಸಲು ಬಳಸುತ್ತಾರೆ. ಇದನ್ನು ನಮ್ಮ ಆಹಾರದಲ್ಲಿ ಬಳಸಿದರೆ ಆಹಾರವು ಅಧಿಕ ಸಮಯದವರೆಗೆ ತಾಜಾ ಹಾಗೂ ಸ್ವಾದಿಷ್ಟವಾಗಿ ಉಳಿಯುತ್ತದೆ. 

ನಿಮ್ಮ ಉದ್ಯಾನವನದಲ್ಲಿ ರೋಸ್ ಮೇರಿಯ ಗಿಡವೊಂದಿದ್ದರೆ ಅದರಿಂದ ನಿಮಗೆ ಬಹಳವಾದ ಪ್ರಯೋಜನವಿದೆ. ಈ ಗಿಡದ ಎಲೆಗಳು ಆಕರ್ಷಕವಾಗಿರುವುದರಿಂದ ನಿಮ್ಮ ಉದ್ಯಾನವನದ ಸೌಂದರ್ಯವೂ ವೃದ್ಧಿಸುತ್ತದೆ. ಅಡುಗೆಯಲ್ಲೂ ಪರಿಮಳಕ್ಕಾಗಿ ಉಪಯೋಗಿಸಬಹುದು. ರೋಸ್ ಮೇರಿ ಸಸ್ಯದ ಬಳಕೆಯಿಂದ ನೆನಪು ಶಕ್ತಿಯೂ ಅಧಿಕವಾಗುತ್ತದೆ ಎಂದು ಸಂಶೋಧಕರ ಅಭಿಮತ.

ಆರೋಗ್ಯದಾಯಕವಾದ ರೋಸ್ ಮೇರಿಯ ಔಷಧೀಯ ಗುಣಗಳು ಹಲವಾರು. 

* ದಿನಾಲೂ ರೋಸ್ ಮೇರಿ ತೈಲವನ್ನು ಒಂದೆರಡು ಹನಿ ಸೇವನೆಯಿಂದ ನಮ್ಮ ಹೃದಯವು ಸುಸ್ಥಿತಿಯಲ್ಲಿರುತ್ತದೆ. ಈ ತೈಲವನ್ನು ಗಂಟಲಿನಲ್ಲಿ ಹುಣ್ಣಾದಾಗ ಬಾಯಿ ಮುಕ್ಕಳಿಸಲೂ ಬಳಸಬಹುದು. ಈ ತೈಲದಿಂದ ಬಾಯಿ ಮುಕ್ಕಳಿಸಿದರೆ ಬಾಯಿಯಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ. ತಲೆ ನೋವು ಮುಂತಾದ ಸಮಸ್ಯೆಗಳಿಗೆ ಇದರ ತೈಲವು ಪ್ರಯೋಜನಕಾರಿ. 

* ರೋಸ್ ಮೇರಿ ಗಿಡದ ತೈಲವು ನರ ದೌರ್ಬಲ್ಯಕ್ಕೆ ಉತ್ತಮ ಪರಿಣಾಮ ಬೀರುತ್ತದೆ. ಹಸಿವಾಗುವಂತೆ ಪ್ರಚೋದಿಸುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. 

* ರೋಸ್ ಮೇರಿ ಗಿಡದ ಹೂವಿನ ಬಳಕೆಯಿಂದ ಮಲಬದ್ಧತೆ ಕಮ್ಮಿಯಾಗುತ್ತದೆ. ಮೂತ್ರ ಹಾಗೂ ಬೆವರಿನ ಪ್ರಮಾಣ ಅಧಿಕವಾಗುತ್ತದೆ. ಹಬೆಯ ಸ್ನಾನ ಮಾಡುವ ಸಂದರ್ಭದಲ್ಲೂ ಈ ಸಸ್ಯದ ತೈಲವನ್ನು ಬಳಕೆ ಮಾಡಬಹುದು.

* ಉಸಿರಾಟದ ತೊಂದರೆ ಇರುವವರು ಇದರ ಒಣಗಿಸಿದ ಎಲೆಯ ಹೊಗೆಯ ಘಾಟನ್ನು ಆಸ್ವಾದಿಸಿದರೆ ತೊಂದರೆ ಕಮ್ಮಿಯಾಗುತ್ತದೆ. ರೋಸ್ ಮೇರಿ ಹೂವುಗಳಿಂದ ಜೇನು ನೊಣಗಳು ಸೊಗಸಾದ ಜೇನು ತುಪ್ಪವನ್ನು ತಯಾರಿಸುತ್ತವೆ. ಇವುಗಳಿಗೆ ವಿಶಿಷ್ಟವಾದ ರುಚಿಯೂ, ಪರಿಮಳವೂ ಹಾಗೂ ಆರೋಗ್ಯದಾಯಕ ಗುಣವೂ ಇರುತ್ತದೆ.

* ರೋಸ್ ಮೇರಿ ಗಿಡದ ತಾಜಾ ಎಲೆಯನ್ನು ಮನೆಯ ಯಾವುದಾದರೂ ಒಂದು ಮೂಲೆಯಲ್ಲಿಟ್ಟರೆ ಅದರಿಂದ ಹೊಮ್ಮುವ ಸುಗಂಧವು ಮನಸ್ಸನ್ನು ಪ್ರಫುಲ್ಲವಾಗಿಡುತ್ತದೆ. ಮನಸ್ಸಿನ ಆತಂಕವನ್ನು ಬಹಳಷ್ಟು ನಿವಾರಣೆ ಮಾಡುತ್ತದೆ. 

ದಕ್ಷಿಣ ಯುರೋಪ್ ರೋಸ್ ಮೇರಿ ಸಸ್ಯದ ತವರೂರು. ೨೦೦೧ರಲ್ಲಿ ಅಂತರಾಷ್ಟ್ರೀಯ ಹರ್ಬ್ (ಮೂಲಿಕೆ) ಸಂಸ್ಥೆಯು ರೋಸ್ ಮೇರಿ ಸಸ್ಯವನ್ನು ವರ್ಷದ ಗಿಡ ಎಂದು ಆಯ್ಕೆ ಮಾಡಲಾಗಿತ್ತು. ಈ ಬಹುಪಯೋಗಿ ಸಸ್ಯವನ್ನು ಬೆಳೆಸುವುದು ಅಷ್ಟೊಂದು ಕಷ್ಟದಾಯಕವೇನಲ್ಲ. ಆದುದರಿಂದ ನಿಮ್ಮ ಉದ್ಯಾನವನದಲ್ಲೂ ಈ ಸಸ್ಯ ಬೆಳೆಯಲಿ. ಅಲಂಕಾರಿಕವಾಗಿಯೂ ಆಗುತ್ತದೆ, ಅಡುಗೆಗೂ, ಔಷಧಿಗೂ ಬಳಕೆಯಾಗುತ್ತದೆ. 

ಚಿತ್ರ ಕೃಪೆ: ಅಂತರ್ಜಾಲ ತಾಣ