ಬಾಂಗ್ಲಾದಿಂದ ಗಡಿ ತಕರಾರು : ಮುಂದುವರಿದ ಮಿತ್ರದ್ರೋಹ
ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ನಿಲುವು ಈಗ ಹೊಸ ಆಯಾಮ ಪಡೆದುಕೊಂಡಿದೆ. ಬಾಂಗ್ಲಾದಲ್ಲಿ ಹಿಂದೂ ಸಮುದಾಯದವರನ್ನು ಗುರಿಯಾಗಿಸಿ ದಾಳಿ, ದೌರ್ಜನ್ಯಗಳು ಇನ್ನೂ ಮುಂದುವರಿದಿದ್ದರೆ, ಈ ಹಿಂದಿನ ಸರಕಾರ ಭಾರತದೊಂದಿಗೆ ಮಾಡಿಕೊಂಡಿದ್ದರ ಹಲವು ದ್ವಿಪಕ್ಷೀಯ ಒಪ್ಪಂದ, ನಿರ್ಣಯಗಳಿಂದ ಹಿಂದೆ ಸರಿಯುವ ನಿರ್ಧಾರವನ್ನು ಅಲ್ಲಿನ ಮಧ್ಯಂತರ ಸರಕಾರ ಕೈಗೊಂಡಿದೆ. ಈಗ ಬಾಂಗ್ಲಾದ ಈ ಭಾರತದ್ವೇಷಿ ನಡೆ ಗಡಿಯತ್ತ ತಿರುಗಿದ್ದು, ವಿನಾಕಾರಣ ತಗಾದೆ ತೆಗೆಯುವ ಮೂಲಕ ಭಾರತ-ಬಾಂಗ್ಲಾ ಗಡಿಯಲ್ಲಿ ಪರಿಸ್ಥಿತಿಯನ್ನು ಹದಗೆಡುವಂತೆ ಮಾಡಿದೆ.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಜನರು ದಂಗೆ ಎದ್ದು ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿದಾಗಿನಿಂದ ಬಾಂಗ್ಲಾದೇಶ, ಭಾರತದ ವಿರುದ್ಧ ಒಂದಲ್ಲ ಒಂದು ತೆರನಾದ ಷಡ್ಯಂತ್ರವನ್ನು ಹೂಡುತ್ತಲೇ ಬಂದಿದೆ. ಬಾಂಗ್ಲಾದ ಈ ಎಲ್ಲ ಷಡ್ಯಂತ್ರ, ಪೂರ್ವಗ್ರಹ ಪೀಡಿತ ಕಾರ್ಯತಂತ್ರಗಳಿಗೆ ಭಾರತ ಸರಕಾರ ಸ್ಪಷ್ಟ ಮಾರುತ್ತರ ನೀಡುವ ಜತೆಯಲ್ಲಿ ಗಲಭೆಗ್ರಸ್ತ ಬಾಂಗ್ಲಾದಿಂದ ನಿರಾಶ್ರಿತರು ಅಕ್ರಮವಾಗಿ ಭಾರತದ ಭೂಪ್ರದೇಶಕ್ಕೆ ನುಸುಳದಂತೆ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದೆ.
ಎರಡು ದಿನಗಳ ಹಿಂದೆಯಷ್ಟೇ ಗಡಿಯಲ್ಲಿ ಭಾರತ ತಂತಿಬೇಲಿ ನಿರ್ಮಿಸುತ್ತಿರುವ ಬಗೆಗೆ ಬಾಂಗ್ಲಾದ ಮಧ್ಯಂತರ ಸರಕಾರ ತಕರಾರು ತೆಗೆದಿತ್ತು. ಉಭಯ ದೇಶಗಳ ನಡುವೆ ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಭಾರತ ಗಡಿ ಪ್ರದೇಶದಲ್ಲಿ ತಂತಿಬೇಲಿಯನ್ನು ನಿರ್ಮಿಸುತ್ತಿದೆಯೇ ಹೊರತು ಯಾವುದೇ ಅಕ್ರಮ ಚಟುವಟಿಕೆಗಳನ್ನು ಗಡಿಭಾಗದಲ್ಲಿ ನಡೆಸುತ್ತಿಲ್ಲ. ಆದರೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದುಕೊಂಡಿರುವ ಏಕೈಕ ಕಾರಣಕ್ಕಾಗಿ ಬಾಂಗ್ಲಾದಲ್ಲಿನ ಮಧ್ಯಂತರ ಸರಕಾರ ವಿನಾಕಾರಣ ಗಡಿಯಲ್ಲಿ ವಿವಾದವನ್ನು ಸೃಷ್ಟಿಸುವ ಯತ್ನಕ್ಕೆ ಮುಂದಾಗಿದೆ. ಶೇಖ್ ಹಸೀನಾ ಅವರು ಗಡಿ ಭಾಗದಲ್ಲಿ ನಿಯೋಜಿಸಲ್ಪಟ್ಟಿರುವ ಬಾಂಗ್ಲಾದ ಭದ್ರತಾ ಪಡೆಗಳು ಮತ್ತು ಸ್ಥಳೀಯರ ಹಿತವನ್ನು ಮರೆತು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವುದಾಗಿ ಬಾಂಗ್ಲಾ ಸರಕಾರ ಸಮಜಾಯಿತಿ ನೀಡುತ್ತಿದೆ. ಆದರೆ ಭಾರತ, ಬಾಂಗ್ಲಾದ ಈ ವಾದವನ್ನು ತಳ್ಳಿ ಹಾಕಿದ್ದು ಅಲ್ಲಿನ ಚುನಾಯಿತ ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಮತ್ತು ಉಭಯ ದೇಶಗಳ ಹಿತದೃಷ್ಟಿಯಿಂದ ಗಡಿ ಭಾಗದಲ್ಲಿ ಬೇಲಿ ನಿರ್ಮಿಸಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದೆ.
ಇವೆಲ್ಲದರ ಹೊರತಾಗಿಯೂ ಬಾಂಗ್ಲಾದ ವಿದೇಶಾಂಗ ಸಚಿವಾಲಯ ಭಾರತದ ರಾಯಭಾರಿಯನ್ನು ತನ್ನ ಕಚೇರಿಗೆ ಕರೆಸಿಕೊಂಡು ಗಡಿಯಲ್ಲಿ ತಂತಿ ಬೇಲಿ ನಿರ್ಮಿಸುತ್ತಿರುವ ಸಂಬಂಧ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಬಾಂಗ್ಲಾದ ಈ ನಡೆ ಸಹಜವಾಗಿಯೇ ಭಾರತದ ಆಕ್ರೋಶಕ್ಕೆ ಕಾರಣವಾಗಿದ್ದು ಭಾರತದ ವಿದೇಶಾಂಗ ಸಚಿವಾಲಯ ಕೂಡಾ ಬಾಂಗ್ಲಾದ ಉಪ ಹೈಕಮೀಷನರ್ ಗೆ ಸಮನ್ಸ್ ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವಣ ಈ ರಾಜತಾಂತ್ರಿಕ ಸಮರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಶೇಖ್ ಹಸೀನಾರನ್ನು ತತ್ ಕ್ಷಣ ಹಸ್ತಾಂತರಿಸಲು ಭಾರತದ ಮೇಲೆ ಒತ್ತಡ ಹೇರಲು ಬಾಂಗ್ಲಾದ ಮಧ್ಯಂತರ ಸರಕಾರ ಈ ತಂತ್ರಗಾರಿಕೆ ಅನುಸರಿಸಿರುವುದು ಸ್ಪಷ್ಟವಾದರೂ ಬಾಂಗ್ಲಾದ ಈ ಅತಿರೇಕದ ವರ್ತನೆ, ಕ್ರಮಗಳಿಂದಾಗಿ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗುವ ಆತಂಕ ತಲೆದೋರಿದೆ.
ಇನ್ನಾದರೂ ಬಾಂಗ್ಲಾದೇಶ ತನ್ನ ಹಠಮಾರಿ ಧೋರಣೆಯನ್ನು ಸಡಿಲಿಸದೇ ಹೋದಲ್ಲಿ ಅದರ ಅಸ್ತಿತ್ವಕ್ಕೇ ಸಂಚಕಾರ ಬಂದೊದಗಲಿದೆ. ಚೀನ ಮತ್ತು ಪಾಕಿಸ್ತಾನದ ಕುಮ್ಮಕ್ಕಿನಿಂದ ಬಾಂಗ್ಲಾದ ಮಧ್ಯಂತರ ಸರಕಾರ ಭಾರತದ ವಿರುದ್ಧ ಕತ್ತಿ ಮಸೆಯುವ ಕಾರ್ಯದಲ್ಲಿ ನಿರತವಾಗಿದ್ದು, ಇದು ಬಾಂಗ್ಲಾದ ಪಾಲಿಗೆ ತಿರುಗುಬಾಣವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೪-೦೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ