ಬಾಂಗ್ಲಾ ಗ್ರಾಮೀಣ ಬ್ಯಾಂಕಿನ ಸಣ್ಣ ಸಾಲಗಳ ಚಮತ್ಕಾರ

ಬಾಂಗ್ಲಾ ಗ್ರಾಮೀಣ ಬ್ಯಾಂಕಿನ ಸಣ್ಣ ಸಾಲಗಳ ಚಮತ್ಕಾರ

ಬಡಜನರಿಗೆ ಸಣ್ಣ ಸಾಲಗಳನ್ನು ಕೊಟ್ಟು ಅವರ ಬದುಕನ್ನೇ ಬದಲಾಯಿಸಬಹುದೆಂದು ತೋರಿಸಿ ಕೊಟ್ಟದ್ದು ಬಾಂಗ್ಲಾ ಗ್ರಾಮೀಣ ಬ್ಯಾಂಕ್. ಇದು ಹೇಗೆ ಸಾಧ್ಯವಾಯಿತು?

ಇದಕ್ಕೆ ಕಾರಣವಾದ ಐದು ಮುಖ್ಯ ಸಂಗತಿಗಳನ್ನು ಗುರುತಿಸಬಹುದು. ಮೊದಲನೆಯದು, ಯಾವುದೇ ಭದ್ರತೆಯಿಲ್ಲದೆ ಸಾಲ ನೀಡುವುದು. ವ್ಯಕ್ತಿಗಳಿಗೆ ಒಬ್ಬೊಬ್ಬರಿಗೆ ಪ್ರತ್ಯೇಕ ಸಾಲ ನೀಡುವ ಬದಲಾಗಿ, ಐದೈದು ಸದಸ್ಯರ ತಂಡಗಳಿಗೆ ಬಾಂಗ್ಲಾ ಗ್ರಾಮೀಣ ಬ್ಯಾಂಕ್ ಸಾಲ ನೀಡಿತು. ಈ ತಂಡದ ಪ್ರತಿಯೊಬ್ಬರಿಗೂ ಇತರ ಸದಸ್ಯರು ಚೆನ್ನಾಗಿ ಪರಿಚಯ. ಅಕಸ್ಮಾತ್ ತಂಡದ ಒಬ್ಬಾಕೆ ಅನಾರೋಗ್ಯದಿಂದ ಪೀಡಿತಳಾದರೆ, ಉಳಿದವರಿಂದ ಅವಳ ವ್ಯವಹಾರದ ಮುಂದುವರಿಕೆ.

ಆರಂಭದಿಂದಲೂ ಈ ಬ್ಯಾಂಕಿನ ದೊಡ್ಡ ಸಾಧನೆ ಸಾಲಗಾರರಿಂದ ಶೇಕಡಾ ೯೮ರಷ್ಟು ಸಾಲ ಮರುಪಾವತಿ. ಇದು ದೊಡ್ಡ ಬ್ಯಾಂಕುಗಳು ಕೊಟ್ಟ ಸಾಲಗಳ ಮರುಪಾವತಿ ಪ್ರಮಾಣಕ್ಕಿಂತ ಬಹಳ ಜಾಸ್ತಿ. ಈ ರೀತಿಯಲ್ಲಿ ಬಡ ಸಾಲಗಾರರು ಏನನ್ನು ತೋರಿಸಿ ಕೊಟ್ಟಿದ್ದಾರೆ? ಶ್ರೀಮಂತ ಸಾಲಗಾರರಿಗಿಂತ ತಮ್ಮ ವಿಶ್ವಾಸಾರ್ಹತೆ ಜಾಸ್ತಿ ಎಂಬುದನ್ನು. ಮೊದಲ ಸಾಲ ಪಡೆದು, ನಿಯತ್ತಿನಿಂದ ಮರುಪಾವತಿಸಿದವರು ಕ್ರಮೇಣ ಹೆಚ್ಚಿನ ಸಾಲ ಪಡೆಯುತ್ತ ತಮ್ಮ ವ್ಯವಹಾರ ವಿಸ್ತರಿಸುತ್ತಾರೆ.

ಎರಡನೆಯ ಸಂಗತಿ, ಗ್ರಾಮೀಣ ಮಹಿಳೆಯರಿಗೆ ಸಾಲ ನೀಡುವುದು. ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಜವಾಬ್ದಾರಿ ವಹಿಸುತ್ತಾರೆ. ಕುಟುಂಬದ ಬಗ್ಗೆ ಹಾಗೂ ಕುಟುಂಬದ ಸದಸ್ಯರ ಭವಿಷ್ಯದ ಬಗ್ಗೆ ಮಹಿಳೆಯರಿಗೆ ಕಾಳಜಿ ಜಾಸ್ತಿ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ಸಬಲೀಕರಣವನ್ನು ಬ್ಯಾಂಕ್ ಸಾಧ್ಯವಾಗಿಸಿದೆ. ಮಹಿಳೆಯರಿಗೆ ಸಾಲ ನೀಡಿ, ಅವರು ಆದಾಯ ಗಳಿಸಲು ಒತ್ತಾಸೆಯಾಗಿದೆ. ತಮ್ಮದೇ ದುಡಿಮೆಯ ಗಳಿಕೆಯಿಂದಾಗಿ ಸಾಮಾಜಿಕ ಗೌರವ ಪಡೆದಿರುವ ಮಹಿಳೆಯರಲ್ಲಿ ಈಗ ಆತ್ಮವಿಶ್ವಾಸ ತುಂಬಿದೆ.

ಮೂರನೆಯದಾಗಿ, ಬಾಂಗ್ಲಾ ಗ್ರಾಮೀಣ ಬ್ಯಾಂಕ್ ನೀಡಿದ್ದು ಸಾಲ. ಅದೆಂದೂ ಸಹಾಯಧನ ಅಥವಾ ದಾನ ಕೊಡಲಿಲ್ಲ. ಸಾಲಗಾರರಿಂದ ವಾಣಿಜ್ಯ ಸಾಲಗಳ ಬಡ್ಡಿದರದಲ್ಲೇ ಬಡ್ಡಿ ವಸೂಲಿ ಮಾಡಿ, ಬ್ಯಾಂಕ್ ಲಾಭ ಗಳಿಸಿದೆ.

ನಾಲ್ಕನೆಯದಾಗಿ, ಬ್ಯಾಂಕ್ ಸಾಲವನ್ನಷ್ಟೇ ನೀಡಲಿಲ್ಲ. ಮಹಿಳಾ ಸಾಲಗಾರರಿಗೆ ತರಬೇತಿಯನ್ನೂ ಒದಗಿಸಿತು - ದನ ಸಾಕಣೆ, ಕೋಳಿ ಸಾಕಣೆ, ಬುಟ್ಟಿ ತಯಾರಿ, ತರಕಾರಿ ಮಾರಾಟ ಇತ್ಯಾದಿ ಚಟುವಟಿಕೆಗಳಲ್ಲಿ. ವಾರಕ್ಕೊಮ್ಮೆ ನಡೆಯುವ ಸಭೆಯಲ್ಲಿ ಸಾಲಗಾರರ ಪ್ರಗತಿಯನ್ನು ಬ್ಯಾಂಕಿನ ಸಿಬ್ಬಂದಿಯ ಮೂಲಕ ನಿರಂತರವಾಗಿ ಪರಿಶೀಲಿಸಲಾಯಿತು. ಸಾಲಗಾರರ ತೊಂದರೆಗಳ ಪರಿಹಾರಕ್ಕೆ ಸಭೆಯಲ್ಲೇ ಸಲಹೆಸೂಚನೆ. ಬಾಂಗ್ಲಾ ಗ್ರಾಮೀಣ ಬ್ಯಾಂಕ್ ಸಾಮಾಜಿಕ ಪರಿವರ್ತನೆಯ ಹರಿಕಾರನ ಪಾತ್ರವನ್ನೂ ನಿರ್ವಹಿಸಿತು. ಉದಾಹರಣಿಗೆ, ಸಾಲ ಪಡೆಯುವ ಮುನ್ನ, ಮಹಿಳೆಯರು ಪ್ರತಿಜ್ನೆ ತೆಗೆದುಕೊಳ್ಳಬೇಕು: ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ; ಮದುವೆ ಆಗುವಾಗ ವರದಕ್ಷಿಣೆ ಕೊಡುವುದಿಲ್ಲ ಹಾಗೂ ತೆಗೆದುಕೊಳ್ಳುವುದಿಲ್ಲ ಮತ್ತು ಹೆಚ್ಚು ಮಕ್ಕಳಿರದ ಸಣ್ಣ ಕುಟುಂಬದಲ್ಲಿಯೇ ಜೀವನ ಮಾಡುತ್ತೇನೆ ಎಂಬುದಾಗಿ.

ಐದನೆಯ ಸಂಗತಿ, ಸಾಲ ನೀಡಿಕೆಗೆ ಹೊಸ ಅವಕಾಶಗಳನ್ನು ಬಾಂಗ್ಲಾ ಗ್ರಾಮೀಣ ಬ್ಯಾಂಕ್ ಸಮರ್ಥವಾಗಿ ಬಳಸಿಕೊಂಡಿತು. ಉದಾಹರಣೆಗೆ, ಮೊಬೈಲ್ ಫೋನ್ ಸೇವೆ ಆರಂಭವಾದಾಗ, ಪ್ರತಿಯೊಂದು ಹಳ್ಳಿಯಲ್ಲಿ ಒಂದು ಬಡಕುಟುಂಬಕ್ಕೆ ಮೊಬೈಲ್ ಫೋನನ್ನು ಬ್ಯಾಂಕ್ ನೀಡಿತು. ಆ ಫೋನಿನಿಂದ “ಪಬ್ಲಿಕ್ ಕಾಲ್ ಆಫೀಸ್" (ಪಿಸಿಓ) ಸೇವೆ ಒದಗಿಸುತ್ತಾ ಬಡಕುಟುಂಬಗಳು ಆದಾಯ ಗಳಿಸತೊಡಗಿದವು. ಮೊಬೈಲ್ ಫೋನುಗಳನ್ನು ರೀಚಾರ್ಜ್ ಮಾಡಲಿಕ್ಕೆ ವಿದ್ಯುತ್ ಬೇಕು ತಾನೇ? ಅದಕ್ಕಾಗಿ ಸೌರಶಕ್ತಿಯ ಚಾರ್ಜರುಗಳನ್ನೂ ಬ್ಯಾಂಕ್ ಒದಗಿಸಿತು. ಹಳ್ಳಿಯ ಹಲವು ಕುಟುಂಬಗಳು ಮೊಬೈಲ್ ಫೋನ್ ಖರೀದಿಸಲು ಮುಂದಾದಾಗ, ಹೊಸ ಫೋನ್ ಸಂಪರ್ಕ ಒದಗಿಸುವ ಹಾಗೂ ಮಾಸಿಕ ಬಿಲ್ ಮೊತ್ತ ಸಂಗ್ರಹಿಸುವ ಜವಾಬ್ದಾರಿಯನ್ನೂ ಪಿಸಿಓ ಮಹಿಳೆಯರಿಗೆ ವಹಿಸಲಾಯಿತು.

ಬಾಂಗ್ಲಾ ದೇಶದ ಲಕ್ಷಗಟ್ಟಲೆ ಗ್ರಾಮೀಣ ಕುಟುಂಬಗಳು ಬಡತನದ ಬಂಧನ ಕಳಚಿ, ಗೌರವಾರ್ಹ ಜೀವನ ನಡೆಸಲು ಬಾಂಗ್ಲಾ ಗ್ರಾಮೀಣ ಬ್ಯಾಂಕ್ ಸಹಾಯ ಮಾಡಿದೆ. ಆದರೆ ಈ ಬ್ಯಾಂಕಿನ ಕಾರ್ಯವಿಧಾನದ ಬಗ್ಗೆ ಟೀಕೆಗಳೂ ಇವೆ.
ಸಾಲಗಳಿಗೆ ವಾರ್ಷಿಕ ಶೇ.೨೦ ಬಡ್ಡಿ ವಸೂಲಿ ಮಾಡುತ್ತಿದೆ, ಇದು ದುಬಾರಿ ಎಂಬುದು ಬ್ಯಾಂಕ್ ವಿರುದ್ಧ ಪ್ರಮುಖ ಟೀಕೆ. ಬ್ಯಾಂಕಿನ ಕಾರ್ಯವಿಧಾನವನ್ನು ಸಮಗ್ರವಾಗಿ ಪರಿಶೀಲಿಸಿದಾಗ ಇದು ದುಬಾರಿ ಎನಿಸದು. ತರಬೇತಿ ವೆಚ್ಚ, ಪ್ರಗತಿ ಪರಿಶೀಲನಾ ಸಭೆಗಳ ವೆಚ್ಚ, ವಾರವಾರವೂ ಬಡ್ಡಿ ಸಂಗ್ರಹಿಸುವ ವೆಚ್ಚ, ಸೂಕ್ತ ಪ್ರಯಾಣ ಸೌಕರ್ಯವಿಲ್ಲದ ದೂರದೂದರ ಸ್ಥಳಗಳಲ್ಲಿ ನೆಲೆಸಿರುವ ಸಾವಿರಾರು ಗ್ರಾಮೀಣ ಕುಟುಂಬಗಳಿಂದ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಕಂತು ಪಡೆಯುವ ವೆಚ್ಚ, ೪೫ ಸಾವಿರ ಬ್ರ್ಯಾಂಚುಗಳ ಮೂಲಕ ೨೫ ಲಕ್ಷ ಸಾಲಗಾರರಿಗೆ ಸಣ್ಣ ಮೊತ್ತದ ಸಾಲಗಳನ್ನು ಒದಗಿಸುವ ವೆಚ್ಚ - ಇವೆಲ್ಲವನ್ನೂ ಪರಿಗಣಿಸಿದಾಗ ವಾರ್ಷಿಕ ಶೇ.೨೦ ಬಡ್ಡಿ ದರ ದುಬಾರಿ ಅಲ್ಲ. ವಾರಕ್ಕೆ ಶೇ.೧೦ ಬಡ್ಡಿ ಸುಲಿಯುವ ಸ್ಥಳೀಯ ಲೇವಾದೇವಿದಾರರ ಬಡ್ಡಿದರಕ್ಕೆ ಹೋಲಿಸಿದಾಗ, ಇದು ಕಡಿಮೆ ಬಡ್ಡಿ ದರ.

ಈ ಬ್ಯಾಂಕ್ ಒದಗಿಸುವ ಸಾಲಗಳು ತೀರಾ ಸಣ್ಣವು; ಈ ಸಾಲಗಳಿಂದ ಯಾವುದೇ ಗ್ರಾಮೀಣ ಬಡಕುಟುಂಬವು ಬಡತನದಿಂದ ಮುಕ್ತವಾಗಲು ಸಾಧ್ಯವಿಲ್ಲ ಎಂಬುದು ಇನ್ನೊಂದು ಟೀಕೆ. ಅತ್ಯಧಿಕ ಸಂಖ್ಯೆಯ ಬಡಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶವನ್ನು ಸಣ್ಣ ಸಾಲಗಳ ವಿತರಣೆಯ ಮೂಲಕವೇ ಸಾಧಿಸಬೇಕಾಗುತ್ತದೆ, ಅಲ್ಲವೇ? ಅದಲ್ಲದೆ, ಬಡಕುಟುಂಬವು ಜಾಗ ಖರೀದಿಸಿ ಅಥವಾ ಕುಟುಂಬದ ಸದಸ್ಯರು ಶಿಕ್ಷಣ ಪಡೆದು ಆರ್ಥಿಕವಾಗಿ ಸುಧಾರಿಸಿದಾಗ, ಆ ಕುಟುಂಬವು ವಾಣಿಜ್ಯ ಬ್ಯಾಂಕಿನಿಂದಲೇ ದೊಡ್ಡ ಮೊತ್ತದ ಸಾಲ ಪಡೆದು ಪ್ರಗತಿ ಹೊಂದಲು ಸಾಧ್ಯ.

ಟೀಕಾಕಾರರು ಏನೇ ಹೇಳಿದರೂ, ಬಾಂಗ್ಲಾ ದೇಶದ ಲಕ್ಷಗಟ್ಟಲೆ ಬಡಕುಟುಂಬಗಳನ್ನು ಬಾಂಗ್ಲಾ ಗ್ರಾಮೀಣ ಬ್ಯಾಂಕ್ ಆರ್ಥಿಕ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದ್ದು ನಿಜ. ಆ ಮೂಲಕ ಬಡಕುಟುಂಬಗಳು ಗೌರವಾರ್ಹ ಸಾಮಾಜಿಕ ಸ್ಥಾನಮಾನ ಗಳಿಸಲು ಅನುವು ಮಾಡಿಕೊಟ್ಟದ್ದೂ ನಿಜ. ಅದರಿಂದಾಗಿಯೇ ಬ್ಯಾಂಕಿನ ಸ್ಥಾಪಕರಾದ ಮಹಮ್ಮದ್ ಯೂನಸ್ ಅವರಿಗೆ ೨೦೦೬ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು.

ಬಾಂಗ್ಲಾ ಗ್ರಾಮೀಣ ಬ್ಯಾಂಕಿನ ಸಣ್ಣ ಸಾಲಗಳ ಯಶೋಗಾಥೆ, ಭಾರತಕ್ಕೆ ಮಾತ್ರವಲ್ಲ, ಜಗತ್ತಿನ ಬಡದೇಶಗಳಿಗೆಲ್ಲ ಗ್ರಾಮೀಣ ಅಭಿವೃದ್ಧಿಯ ದೊಡ್ಡ ಪಾಠ.

ಫೋಟೋ: ಮಹಮ್ಮದ್ ಯೂನಸ್, ಬಾಂಗ್ಲಾ ಗ್ರಾಮೀಣ ಬ್ಯಾಂಕಿನ ಸ್ಥಾಪಕ