ಬಾಂಗ್ಲಾ : ಹಸೀನಾ ಮರು ಆಯ್ಕೆ

ಬಾಂಗ್ಲಾ : ಹಸೀನಾ ಮರು ಆಯ್ಕೆ

ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯಲ್ಲಿ ಆಳುವ ಆವಾಮಿ ಲೀಗ್ ಪಕ್ಷವು ಬಹುಮತ ಸಾಧಿಸಿದೆ ಹಾಗೂ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರು ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದು ಪ್ರಧಾನಿಯಾಗಿ ಅವರ ನಾಲ್ಕನೇ ಅವಧಿ. ಅವರ ಪಕ್ಷವು ೩೦೦ ಸಂಸತ್ ಸ್ಥಾನಗಳಲ್ಲಿ ೨೨೨ ಸ್ಥಾನಗಳನ್ನು ಗೆದ್ದಿದೆ.

ವಿಶೇಷವೆಂದರೆ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪ್ರತಿಪಕ್ಷಗಳು ಭಾಗವಹಿಸಿರಲೇ ಇಲ್ಲ. ಪ್ರಮುಖ ವಿರೋಧ ಪಕ್ಷವಾದ ಖಲೀದಾ ಜಿಯಾ ಅವರ ಬಾಂಗ್ಲಾ ದೇಶ ನ್ಯಾಷಲಿಸ್ಟ್ ಪಾರ್ಟಿ (ಬಿ ಎನ್ ಪಿ) ಮತ್ತು ಅದರ ಮಿತ್ರಪಕ್ಷವಾದ ಜಾತೀಯ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ಚುನಾವಣೆಗೆ ಮೊದಲೇ ಅವುಗಳು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುವುದರ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದವು. ಆದರೆ ಬಿ ಎನ್ ಪಿ ಯ ಕೆಲವು ಅಭ್ಯರ್ಥಿಗಳು ಪಕ್ಷೇತರಾಗಿ ಸ್ಪರ್ಧಿಸಿದ್ದು ೬೩ ಸ್ಥಾನ ಗೆದ್ದಿದ್ದಾರೆ. ಅದೇ ರೀತಿ ಜಾತೀಯ ಪಕ್ಷದ ೧೧ ಮಂದಿ ಪಕ್ಷೇತರರಾಗಿ ಗೆದ್ದಿದ್ದಾರೆ. ಈ ಚುನಾವಣೆಯು ಪ್ರಜಾತಂತ್ರ ವಿರೋಧಿ ಹಾಗೂ ಪ್ರಜಾತಂತ್ರದ ಕಗ್ಗೊಲೆಯಾಗಿದೆ ಎಂಬುದಾಗಿ ವಿಪಕ್ಷಗಳು ರೋಧಿಸುತ್ತಿವೆ, ಇದರ ಜತೆಗೇ ಅಮೇರಿಕದಂಥ ಕೆಲವು ದೇಶಗಳೂ ಬಾಂಗ್ಲಾದಲ್ಲಿ ನಡೆದ ಚುನಾವಣೆ ನ್ಯಾಯಸಮ್ಮತವಾಗಿಲ್ಲ ಎಂದು ಅಪಸ್ವರವೆಬ್ಬಿಸುತ್ತಿದೆ.

ಭಾರತಕ್ಕೆ ಸಂಬಂಧಿಸಿ ಹೇಳುವುದಾದರೆ ಶೇಖ್ ಹಸೀನಾ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಒಳಿತೇ ಆಗಿದೆ. ಶೇಖ್ ಹಸೀನಾ ಅವರು ಭಾರತದ ಕುರಿತಂತೆ ಸ್ನೇಹಯುತ ಸಂಬಂಧ ಹೊಂದಿದ್ದಾರೆ. ಇದಕ್ಕೆ ವಿರೋಧವಾಗಿ ಬಿ ಎನ್ ಪಿ ಮತ್ತು ಜಾತೀಯ ಪಕ್ಷಗಳು ಮೂಲಭೂತವಾದಿ ಪಕ್ಷಗಳಾಗಿದ್ದು, ಭಾರತ ವಿರೋಧಿ ಧೋರಣೆ ಹೊಂದಿವೆ. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ದಾಳಿ ನಡೆಯುವಲ್ಲೂ ಈ ಎರಡು ಪಕ್ಷಗಳ ಕುಮ್ಮಕ್ಕಿದೆ. ದೇಶದಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೊಳಿಸಬೇಕೆಂದೂ ಅವು ಒತ್ತಾಯಿಸುತ್ತಿವೆ. ವಿಪರ್ಯಾಸವೆಂದರೆ ಅಮೆರಿಕ ಕೂಡ ಈ ಬಾರಿ ಬಾಂಗ್ಲಾದ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಯತ್ನಿಸಿತ್ತು. ಶೇಖ್ ಹಸೀನಾ ಬದಲಾಗಿ ಬಿ ಎನ್ ಪಿ ಅಧಿಕಾರಕ್ಕೇರಲಿ ಎಂದು ಆಶಿಸಿತ್ತು. ಚುನಾವಣೆಗೆ ಸಂಬಂಧಿಸಿ ಅಮೇರಿಕದ ಪ್ರತಿನಿಧಿಗಳು ಮೂಲಭೂತವಾದಿ ಇಸ್ಲಾಮಿಕ್ ಪಕ್ಷದೊಂದಿಗೆ ನೇಪಥ್ಯದಲ್ಲಿ ಮಾತುಕತೆಯನ್ನೂ ನಡೆಸಿದ್ದರು. ಅದೃಷ್ಟವಶಾತ್ ಅಮೇರಿಕದ ಯತ್ನ ಫಲಿಸಲಿಲ್ಲ ಹಾಗೂ ಭಾರತ ವಿರೋಧಿ ಪಕ್ಷಗಳು ಅಧಿಕಾರಕ್ಕೇರಲಿಲ್ಲ. ನೆರೆಯಲ್ಲಿ ಮತ್ತೊಂದು ‘ಭಾರತ ವಿರೋಧಿ' ಸರಕಾರ ರೂಪುಗೊಳ್ಳದ್ದಕ್ಕಾಗಿ ಭಾರತ ಸಮಾಧಾನ ಪಡೆದುಕೊಳ್ಳಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೧-೦೧-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ