ಬಾಂಗ್ಲಾ ಹಿಂದುಗಳನ್ನು ರಕ್ಷಿಸಿ

ಬಾಂಗ್ಲಾ ಹಿಂದುಗಳನ್ನು ರಕ್ಷಿಸಿ

ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದುಗಳು ಶನಿವಾರ ಲಕ್ಷಾಂತರ ಸಂಖ್ಯೆಯಲ್ಲಿ ಜಮಾವಣೆಯಾಗಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ೮ ಬೇಡಿಕೆಗಳನ್ನು ಈಡೇರಿಸುವಂತೆ ಅಲ್ಲಿನ ಸರಕಾರವನ್ನು ಆಗ್ರಹಿಸಿದ್ದಾರೆ. ಹಿಂದುಗಳ ಮೇಲಿನ ದೌರ್ಜನ್ಯ ಕೇಸ್ ಗಳ ವಿಚಾರಣೆಗೆ ವಿಶೇಷ ನ್ಯಾಯಾಧಿಕರಣ ಸ್ಥಾಪಿಸಬೇಕು, ಗಲಭೆ ಸಂತ್ರಸ್ತ ಹಿಂದುಗಳಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು, ಅಲ್ಪಸಂಖ್ಯಾತರ ಹಿತ ಕಾಯಲು ಪ್ರತ್ಯೇಕ ಸಚಿವಾಲಯವೊಂದನ್ನು ರಚಿಸಬೇಕು - ಮುಂತಾದ ಬೇಡಿಕೆಗಳು ಇದರಲ್ಲಿ ಸೇರಿವೆ. ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ, ಹಲ್ಲೆ ಘಟನೆಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಇವೆಲ್ಲವೂ ನ್ಯಾಯಯುತ ಬೇಡಿಕೆಗಳಾಗಿವೆ. ಭಾರತ ಸರ್ಕಾರ ಮತ್ತು ಭಾರತೀಯರು ಕೂಡ ಇದನ್ನು ಸಾಧ್ಯವಿರುವ ಎಲ್ಲ ವೇದಿಕೆಗಳಲ್ಲಿ ಬೆಂಬಲಿಸುವ ಅಗತ್ಯ ಇದೆ. ಬಾಂಗ್ಲಾದೇಶಿ ಹಿಂದುಗಳ ಹಿತರಕ್ಷಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಬೇಕಾಗಿದೆ.

ಹಿಂದುಗಳು ಬಾಂಗ್ಲಾದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಲು ಬಲವಾದ ಕಾರಣವಿದೆ. ಸುಮಾರು ೨೦ ವರ್ಷಗಳ ಕಾಲ ಬಾಂಗ್ಲಾದೇಶವನ್ನು ಆಳಿದ ಶೇಖ್ ಹಸೀನಾ ಈಗ್ಗೆ ಕೆಲವು ತಿಂಗಳುಗಳ ಹಿಂದೆ ಅಲ್ಲಿನ ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆಗೆ ಮಣಿದು ಪದಚ್ಯುತರಾದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಸ್ಥಳೀಯರ ದೌರ್ಜನ್ಯ ಹೆಚ್ಚಾಗಿದೆ. ಹಿಂದುಗಳ ಮನೆಗಳು, ದೇವಸ್ಥಾನಗಳು, ದುರ್ಗಾಪೂಜೆ ಪೆಂಡಾಲ್ ಗಳು ಮುಂತಾದುವುಗಳ ಮೇಲೆ ದಾಳಿ ನಿರಂತರವಾಗಿ ನಡೆದಿದೆ. ಬಾಂಗ್ಲಾದೇಶದಲ್ಲಿ ಈಗ ಅಸ್ತಿತ್ವದಲ್ಲಿರುವ ನೊಬೆಲ್ ಪುರಸ್ಕೃತ ಮುಹಮದ್ ಯೂನಸ್ ನೇತೃತ್ವದ ಹಂಗಾಮಿ ಸರಕಾರ, ಸೇನೆ, ಪೋಲೀಸರು ಈ ದಾಳಿಗಳನ್ನು ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳ ಹಿನ್ನಲೆಯಲ್ಲಿ ಅಲ್ಲಿಗೆ ವಿಶ್ವಸಂಸ್ಥೆ ನೇತೃತ್ವದ ತನಿಖಾ ತಂಡ ಭೇಟಿ ನೀಡಬೇಕೆಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಆಗ್ರಹಿಸಿರುವುದು ಗಮನಾರ್ಹವಾಗಿದೆ. ಕಳೆದ ಕೆಲವು ದಶಕಗಳಿಂದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತ ಸಾಗಿರುವುದು ಅಂಕಿ ಅಂಶಗಳಿಂದ ಧೃಢ ಪಡುತ್ತದೆ. ೧೯೭೧ರಲ್ಲಿ ಶೇ. ೧೯.೮ ರಷ್ಟಿದ್ದ ಅಲ್ಪಸಂಖ್ಯಾತರ ಸಂಖ್ಯೆ ೨೦೨೨ರ ಹೊತ್ತಿಗೆ ಶೇ. ೮ ಕ್ಕೆ ಇಳಿದಿದೆ. ದಾಳಿ, ಹಿಂಸಾಚಾರವನ್ನು ತಡೆಯದೇ ಹೋದರೆ ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗುತ್ತದೆ. ಹಿಂದುಗಳು ಭಾರತವೂ ಸೇರಿದಂತೆ ತಮಗೆ ಸುರಕ್ಷಿತ ಎನಿಸುವ ಯಾವುದೇ ದೇಶಕ್ಕೆ ಹೋಗುವುದು ಅನಿವಾರ್ಯವಾಗುತ್ತದೆ. ಬಹುಷಃ ದಾಳಿಕೋರರಿಗೆ ಇದೇ ಬೇಕಾಗಿರುವುದು. ಮೂಲಭೂತವಾದಿ ಮನೋಭಾವ ಹೊಂದಿರುವವರು ಅದೇ ರೀತಿ ಆಲೋಚಿಸುತ್ತಾರೆ. ಆದರೆ ಒಂದು ದೇಶದ ಸರ್ಕಾರ ಹಾಗೆ ಯೋಚಿಸಲಾರದು ಮತ್ತು ಯೋಚಿಸಬಾರದು. ತಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆ ಆಡಳಿತದಲ್ಲಿರುವವರ ಆದ್ಯ ಕರ್ತವ್ಯ. ಭಾರತ ಸರ್ಕಾರ ಕೂಡಲೇ ಬಾಂಗ್ಲಾದೇಶದಲ್ಲಿರುವ ಹಂಗಾಮಿ ಸರ್ಕಾರದ ಜೊತೆ ಮಾತನಾಡಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಹನ ನಡೆಸಿ, ಹಿಂದುಗಳ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕಾಗಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೮-೧೦-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ