ಬಾಕ್ಸಿಂಗ್ ಒಂದು ಕ್ರೀಡೆಯೇ ?

ಬಾಕ್ಸಿಂಗ್ ಒಂದು ಕ್ರೀಡೆಯೇ ?

ಇತ್ತೀಚೆಗೆ ಮೈಸೂರಿನಲ್ಲಿ ಬೆಂಗಳೂರಿನ ಸುಮಾರು 23 ವರ್ಷದ ಯುವಕ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಸ್ಪರ್ಧಿಯ ಒಂದೇ ಹೊಡೆತಕ್ಕೆ ಕೋಮಾ ತಲುಪಿ ಎರಡೇ ದಿನದಲ್ಲಿ ಮತ್ತೆ ಮರಳಿ ಬಾರದ ಲೋಕಕ್ಕೆ ತೆರಳಿದ. ಆಗ ಮನದಲ್ಲಿ ಮೂಡಿದ ಪ್ರಶ್ನೆ... ಬಾಕ್ಸಿಂಗ್ ಒಂದು ಕ್ರೀಡೆಯೇ ?

ಒಲಂಪಿಕ್ಸ್ ಕೂಟದಲ್ಲಿ ಇರುವ ಎಲ್ಲಾ ಆಟಗಳ ರೀತಿ ನೀತಿಗಳು ಒಂದು ರೀತಿಯಾದರೆ ಬಾಕ್ಸಿಂಗ್ ಆಟ ಮಾತ್ರ ತುಂಬಾ ಭಿನ್ನ, ಅಪಾಯಕಾರಿ, ಅಮಾನವೀಯ ಮತ್ತು ಅನಾಗರಿಕ ಕ್ರೀಡೆ. ನೀವು ಬಾಕ್ಸಿಂಗ್ ಹೊರತುಪಡಿಸಿ ಯಾವುದೇ ಆಟವನ್ನು ತೆಗೆದುಕೊಳ್ಳಿ. ಅಲ್ಲಿ ಇಬ್ಬರು ಪ್ರತಿಸ್ಪರ್ಧಿಗಳು ಅಥವಾ ಗುಂಪು ಸ್ಪರ್ಧೆಗಳು ಯಾವುದೇ ಇರಲಿ ಗೆಳೆತನ, ಪ್ರೀತಿ, ಹಿಂಸೆ ಇಲ್ಲದೆ ಜೊತೆಯಾಗಿ ಸ್ಪರ್ಧಿಸಬಹುದು ಮತ್ತು ಫಲಿತಾಂಶ ಏನೇ‌ ಆಗಿದ್ದರೂ ಒಬ್ಬರಿಗೊಬ್ಬರು ಮುಂದೆಯೂ ಹಳೆಯ ಸಂಬಂಧವನ್ನೇ ಮುಂದುವರಿಸಬಹುದು.

ಒಬ್ಬ ಕ್ರೀಡಾ ಪಟುವಿನಿಂದ ಇನ್ನೊಬ್ಬರಿಗೆ ಯಾವುದೇ ವೈಯಕ್ತಿಕ ತೊಂದರೆ ಇರುವುದಿಲ್ಲ. ಎಲ್ಲಾ ಕ್ರೀಡೆಗಳಲ್ಲಿಯೂ ಆಕಸ್ಮಿಕವಾಗಿ ಕೆಲವು ‌ಅಚಾತುರ್ಯ ಘಟನೆಗಳು ನಡೆದು ಗಾಯ ಅಥವಾ ಸಾವು ಸಂಭವಿಸಬಹುದು. ಇದು ಆಕಸ್ಮಿಕ ಮತ್ತು ಅಪರೂಪ. ಆದರೆ ಬಾಕ್ಸಿಂಗ್ ಹಾಗಲ್ಲ. ಪ್ರತಿಸ್ಪರ್ಧಿ ಹೊರಗಿನವರೇ ಆಗಿರಲಿ ಅಥವಾ ನಿಮ್ಮ ಆತ್ಮೀಯನೇ ಆಗಿರಲಿ ನೀವು ಅವನನ್ನು ಆತನಿಗೆ ನೋವಾಗಿ ಸೋಲುವಷ್ಟು ಹೊಡೆಯಬೇಕು. ಇಬ್ಬರಿಗೂ ರಕ್ತ ಸುರಿಯುತ್ತಿದ್ದರೂ ಹೋರಾಡಲೇ ಬೇಕು ಯಾರಾದರೂ ಒಬ್ಬರು ಸೋಲುವ ತನಕ. ಇದನ್ನು ನೋಡಿ ನಾವು ಆನಂದಿಸಬೇಕು.

ಹೌದು, ಕೆಲವು ನಿಯಮಗಳು, ಸುರಕ್ಷಿತ ವ್ಯವಸ್ಥೆ ಇರುತ್ತದೆ. ಅಂಕಗಳ ‌ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ. ಆದರೂ ಬಹುತೇಕ ವ್ಯಕ್ತಿಯೊಬ್ಬ ಇನ್ನು ತಾಳಲಾರದೆ ಕುಸಿದು ಬೀಳುವಷ್ಟು ಅಂತಿಮ ಘಟ್ಟ ತಲುಪುತ್ತದೆ. ಮುಕ್ತ ಬಾಕ್ಸಿಂಗ್ ನಲ್ಲಿ ಇದು ಇನ್ನೂ ಹೆಚ್ಚು.

ಮತ್ತೂ ದುರಂತವೆಂದರೆ ಆಗ ದೇಹಕ್ಕೆ ಬೀಳುವ ಹೊಡೆತದ ಪರಿಣಾಮವನ್ನು ಆತ ಅಥವಾ ಆಕೆ ದೀರ್ಘಕಾಲ ಕೆಲವೊಮ್ಮೆ ಜೀವನ ಪೂರ್ತಿ ಅನುಭವಿಸಬೇಕು. ಎಷ್ಟೋ ಸ್ಪರ್ಧಿಗಳು ಕೋಮಾ ಹಂತಕ್ಕೆ ತಲುಪಿದರೆ, ಕೆಲವರು ಬುದ್ದಿ ಭ್ರಮಣೆಗೆ ಒಳಗಾಗುವರು, ಕೆಲವು ನತದೃಷ್ಟರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.  ಹಿಂದೆ ಯಾವಾಗಲೋ ರಾಜ ಮಹಾರಾಜರ ದೌಲತ್ತಿನ ಕಾಲದಲ್ಲಿ ನಡೆಯುತ್ತಿದ್ದ ಈ ಆಟವನ್ನು ಈಗಲೂ ಮುಂದುವರಿಸಬೇಕೆ ?

ಕುಸ್ತಿ, ಕಬಡ್ಡಿ, ಹಾಕಿ, ಕ್ರಿಕೆಟ್, ಪುಟ್ ಬಾಲ್, ಈಜು, ಫೆನ್ಸಿಂಗ್, ಟೆನ್ನಿಸ್, ಓಟ, ನೆಗೆತ, ಜಿಗಿತ, ಭಾರ ಎತ್ತುವುದು, ಎಸೆಯುವುದು, ಚೆಸ್, ಕೇರಂ, ಗಾಲ್ಫ್, ಬಿಲಿಯರ್ಡ್ಸ್, ಟ್ರಕಿಂಗ್, ಸಾಹಸ ಕ್ರೀಡೆ ಮುಂತಾದ ಯಾವುದೇ ಕ್ರೀಡೆಗಳಲ್ಲಿ ತಮ್ಮ ವೈಯಕ್ತಿಕ ಪ್ರತಿಭೆ ಮತ್ತು ಸಾಮರ್ಥ್ಯದ ಮೇಲೆ ಆಡಲಾಗುತ್ತದೆ. ಗೆಳೆತನದ ಸೌಹಾರ್ದತೆಯೂ ಉಳಿಯುತ್ತದೆ. ಆದರೆ ಬಾಕ್ಸಿಂಗ್ ನಲ್ಲಿ ನೀವು ಇನ್ನೊಬ್ಬರಿಗೆ ಬಲವಾಗಿ ಹೊಡೆದು ನೋವು ಉಂಟುಮಾಡಿ ಗೆಲ್ಲುವುದು ಎಷ್ಟು ಸರಿ. ಒಂದು ವೇಳೆ ನಮ್ಮದೇ ದೇಶದ ನಮ್ಮದೇ ರಾಜ್ಯದ ನಮ್ಮ ‌ಗೆಳೆಯ ಸ್ಪರ್ಧೆಯಲ್ಲಿ ಮುಖಾಮುಖಿಯಾದರೆ, ಅವನನ್ನು ಸ್ಪರ್ಧೆಯ ಹೆಸರಿನಲ್ಲಿ ಬಲವಾಗಿ ಹೇಗೆ ಹೊಡೆಯುವುದು. ಬೇರೆ ಕ್ರೀಡೆಯಾದರೆ ನಮ್ಮ ಪಾಡಿಗೆ ನಾವು ಆಡಿ ಗೆಲ್ಲಬಹುದು.

ಇತ್ತೀಚಿನ ಮಾಹಿತಿಯಂತೆ 2024 ರ ಒಲಂಪಿಕ್ಸ್ ನಲ್ಲಿ ಬಾಕ್ಸಿಂಗ್ ಸ್ಪರ್ಧೆಯನ್ನು ಹೊರಗಿಡಲಾಗಿದೆಯಂತೆ. ಜೊತೆಗೆ ಬಾಕ್ಸಿಂಗ್ ಕ್ರೀಡೆಯಲ್ಲಿ ಡ್ರಗ್ಸ್ ಡೋಪಿಂಗ್ ಹೆಚ್ಚು. ತಂದೆ ತಾಯಿಗಳು ಸಹ ಮಕ್ಕಳನ್ನು ಬಾಕ್ಸಿಂಗ್ ಆಟಕ್ಕೆ ಕಳಿಸಲು ಭಯ ಪಡುತ್ತಾರೆ. 

ಮೇರಿ ಕೋಮ್, ವಿಜೇಂದ್ರ ಸಿಂಗ್ ಮುಂತಾದ ಭಾರತೀಯರು ಇತ್ತೀಚಿನ ದಿನಗಳಲ್ಲಿ ಬಾಕ್ಸಿಂಗ್ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಆದರೂ ಈ ಅಪಾಯಕಾರಿ ಆಟ ಆದಷ್ಟು ಬೇಗ ನಿಷೇಧಿಸಲ್ಪಟ್ಟರೆ ಒಳ್ಳೆಯದು.

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ