ಬಾಗಿನಾ: ನದಿಗಳಿಗೆ ಧನ್ಯವಾದ ಅರ್ಪಿಸುವ ಒಂದು ಸಂಪ್ರದಾಯ!
ಭಾರತದಲ್ಲಿ ಎಲ್ಲ ನದಿಗಳನ್ನು ಪಾವನವೆಂದು ಪೂಜಿಸಲಾಗುತ್ತದೆ; ಎಲ್ಲ ನದಿಗಳನ್ನು ಪವಿತ್ರ ಗಂಗೆಯಂತೆಯೇ ಆರಾಧಿಸಲಾಗುತ್ತದೆ. ಹಾಗೆಯೇ, ಕನ್ನಡ ನಾಡಿನಲ್ಲಿ ನದಿಗಳನ್ನು 'ಬಾಗಿನ' ಸಂಪ್ರದಾಯದಂತೆ ಪೂಜಿಸಲಾಗುತ್ತದೆ. ಸಾಮಾನ್ಯವಾಗಿ, ನದಿ ಉಕ್ಕಿ ಹರಿಯುತ್ತಿರುವಾಗ ಅಥವಾ ಅಣೆಕಟ್ಟಿನಲ್ಲಿ ನೀರು ತುಂಬಿ ತುಳುಕಿದಾಗ - ವಿಶೇಷವಾಗಿ ಒಳ್ಳೆಯ ಮಳೆಯ ಬಳಿಕ - ಈ ಕೃತಜ್ಞ ಕ್ರಿಯೆಯನ್ನು ನೆರವೇರಿಸುತ್ತಾರೆ. ಜನಸಾಮಾನ್ಯರ ಪರವಾಗಿ ನಾಡಿನ ಮುಖ್ಯಮಂತ್ರಿಯವರು ಪ್ರತಿವರ್ಷ ನಮ್ಮ ನದಿಗಳಿಗೆ ಸಾಂಪ್ರದಾಯಿಕವಾಗಿ ಕೃತಜ್ಞತೆಯನ್ನು ಅರ್ಪಿಸುತ್ತಾರೆ.
ಬಾಗಿನದ ಕ್ರಿಯೆಯಲ್ಲಿ ಬಿದಿರಿನಿಂದ ತಯಾರಿಸಲ್ಪಟ್ಟ ಒಂದು ಹಾಳೆ ಉಪಯೋಗಿಸಲಾಗುತ್ತದೆ. ಅದರಲ್ಲಿ, ಅಕ್ಕಿ, ತೆಂಗು, ವೇಳ್ಯದ ಎಲೆ, ಕುಂಕುಮ, ಅರಿಶಿನಪುಡಿ ಇತ್ಯಾದಿ ಒಳಗೊಂಡಿರುತ್ತದೆ. ಗಣೇಶ್ ಚತುರ್ಥಿಯ ಹಿಂದಿನ ದಿನ ಗೌರಿ ಹಬ್ಬದ ಸಂದರ್ಭದಲ್ಲಿ ಬಾಗಿನವು ಪತಿವೃತ ಸ್ತ್ರೀಯರಿಗೆ ನೀಡಲಾಗುತ್ತದೆ. ಆ ಪವಿತ್ರ ಹಬ್ಬದ ಸಂದರ್ಭದಲ್ಲಿ ಮನೆಯ ಹೆಂಗಸರು ಪಾರ್ವತಿಯ ಪತಿಯಾದ ಶಿವ ಅವರ ಪೂಜೆ ಸಲ್ಲಿಸುತ್ತಾರೆ. ಹಾಗೆಯೆ, ನದಿಗಳಿಗೆ ಅರ್ಪಿಸುವ "ಮೊರ"ಗಳಲ್ಲೂ ಅದೇ ಅಂಶಗಳಿರುತ್ತದೆ.
ಬ್ರಹ್ಮಪುತ್ರ ನದಿಯ ಹೊರತು, ಭಾರತದಲ್ಲಿ ಇತರೆಲ್ಲಾ ನದಿಗಳನ್ನು ಒಂದು ಸ್ತ್ರೀಯ ರೂಪದಲ್ಲಿ ನೋಡಲಾಗುತ್ತದೆ; ಹಾಗಾಗಿ, ತುಂಬು ತುಳುಕುವ ನದಿಗಳನ್ನು ನವ ಯೌವನ ಕನ್ಯೆಗಳಿಗೆ ತುಲನೆ ಮಾಡಲಾಗುತ್ತದೆ. ತುಂಬಿ ತುಳುಕುವ ನದಿಗಳಿಗೆ ಕನ್ಯೆಗಳಾಗಿ ವ್ಯಕ್ತಿಕರಣಗೊಳಿಸಿ ಬಾಗಿನವನ್ನು ಅರ್ಪಿಸಲಾಗುತ್ತದೆ. ಮೈಸೂರಿನ ಒಡೆಯರ ಕಾಲದಿಂದ ಈ ಸಂಪ್ರದಾಯವನ್ನು ಪಾಲಿಸುತ್ತ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ. "ಮೈಸೂರಿನ ಕಥೆಗಳು" ಖ್ಯಾತಿಯ 'ಧರ್ಮೇಂದ್ರ ಕುಮಾರ್' ಅವರು ಈ ಸಂಪ್ರದಾಯವು ಸರಿಸುಮಾರು 1920ಯ ಆಸುಪಾಸಿನಲ್ಲಿ ಪ್ರಾರಂಭಗೊಂಡಿರಬಹುದು ಎಂದು ಕಲ್ಪಿಸಿದ್ದಾರೆ. ಅಲ್ಲಿವರೆಗೆ, ನಾಡಿನ ಜನಸಾಮಾನ್ಯರು ಬಾವಿ ಮತ್ತು ಕೆರೆಗಳಿಂದ ನೀರು ಪಡೆಯುತ್ತಿದ್ದರು; ಅವರಿಗೆ ಅಣೆಕಟ್ಟನ್ನು ನಿರ್ಮಿಸುವ ಯೋಜನೆಗಳಿರಲಿಲ್ಲ. ಹಾಗಾಗಿ, ನಾವು ಈ ಆಚರಣೆಯು ಕೇವಲ ನೂರು ವರ್ಷಗಳ ಹಳೆಯದು ಎಂದು ಹೇಳಬಹುದು.
ಕರ್ನಾಟಕದಲ್ಲಿ ಎರಡು ಮುಖ್ಯ ನದಿಗಳಿವೆ: ಒಂದು ಕೃಷ್ಣಾ ನದಿ, ಇನ್ನೊಂದು ನದಿ ಕಾವೇರಿಯಾಗಿದೆ. ಕೃಷ್ಣಾ ನದಿಯ ಅಂಗನದಿಗಳಾದ ಘಟಪ್ರಭಾ, ಮಲಪ್ರಭಾ, ಮತ್ತು ತುಂಗಭದ್ರಾ - ಉತ್ತರ ಕರ್ನಾಟಕದಲ್ಲಿ ಹರಿಯುತ್ತಿವೆ. ನದಿ ಕೃಷ್ಣಾ ನಮ್ಮ ದೇಶದ ಮೂರನೇ ದೊಡ್ಡ ನದಿಯಾಗಿದೆ. ನದಿ ಕೃಷ್ಣಾ ಮಳೆಯ ಮೇಲೆ ಅವಲಂಬಿಸಿದೆ. ಹಾಗಾಗಿ, ಬೇಸಿಗೆಯಲ್ಲಿ ಉತ್ತರ ಕರ್ನಾಟಕವು ಬರದಿಂದ ನರಳುತ್ತದೆ. ಕೃಷ್ಣಾ ನದಿಯು ಮುಖ್ಯವಾಗಿ ಕರ್ನಾಟಕದಲ್ಲಿ ಹರಿದರೂ, ಮಹಾರಾಷ್ಟ್ರ, ತೆಲಂಗಾಣ, ಮತ್ತು ಆಂಧ್ರ ಪ್ರದೇಶ ಕೃಷ್ಣಾ ನದಿಯ ನೀರನ್ನು ಉಪಯೋಗಿಸುತ್ತಾರೆ. ಈ ವರ್ಷ ಮಹಾರಾಷ್ಟ್ರದ ಮಳೆಯೂ ಕೃಷ್ಣಾ ನದಿಗೆ ವರದಾನವಾಗಿ ಮೂಡಿ ಬಂತು.
ಕರ್ನಾಟಕದ ಇನ್ನೊಂದು ಮುಖ್ಯ ನದಿಯಾದ ಕಾವೇರಿಯ ಅಂಗನದಿಗಳಾದ ಕಾಬಿನಿ, ಹೇಮಾವತಿ, ಮತ್ತು ಷಿಂಶ ನದಿಗಳು ನಾಡಿನ ದಕ್ಷಿಣದಲ್ಲಿ ಹರಿಯುತ್ತಿವೆ. ನದಿ ಕಾವೇರಿ ಕನ್ನಡಿಗರೊಂದಿಗೆ ತಮಿಳ್ ನಾಡು ಮತ್ತು ಕೇರಳಿಗರಿಗೂ ಜೇವನದಿಯಾಗಿ ನೀರನ್ನು ಒದಗಿಸುತ್ತಿದೆ. ಕರ್ನಾಟಕದ ನದಿಗಳು ತುಂಬಿ ತುಳುಕುವಾಗ ನಾಡಿನ ಮುಖ್ಯಮಂತ್ರಿಗಳು ಉತ್ಸಾಹದ ಪುಟಿಚೆಂಡಾಗುತ್ತಾರೆ. ಕೇವಲ ನಾಡಿನ ಮುಖ್ಯ ಮಂತ್ರಿಗಳಲ್ಲ... ಬದಲಿಗೆ, ಇತರ ಮಂತ್ರಿ ಮಂಡಲದವರೂ ಈ ಸಾಂಪ್ರದಾಯಿಕ ಪೂಜೆಯಲ್ಲಿ ಭಾಗವಹಿಸುತ್ತಾರೆ.
-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು