ಬಾಗಿಲು ತೆರೆಯಿತು
ತೆರೆಯಿತು ತೆರೆಯಿತು
ಬಾಗಿಲು ತೆರೆಯಿತು
ನಮ್ಮೆದೆಯೊಳಗೊಂದು!
ಸರಿಯಿತು ಸರಿಯಿತು
ಕತ್ತಲು ಸರಿಯಿತು
ಬಾಳಿನ ಬೆಳಗಿಂದು!
ಹಿಗ್ಗುತ ಕುಣಿಯುತ
ಹಾಡುತ ನಲಿಯುವ
ಹೊಸ ಬದುಕಿನ ಹಾಡು!
ನೋಡುತ ಕ್ಷಣ ಕ್ಷಣ
ತೆರೆ ತೆರೆಯುವ ಹೊಸ
ಹೊಂಬೆಳಕಿನ ಬೀಡು!
ಹೊಮ್ಮಿತು ಜುಮ್ಮೆನೆ
ಹಕ್ಕಿಗಳಿನಿ ದನಿ
ಸುರ ಗಾನದ ಲಹರಿ!
ಹರಸಿತು ಜಗದೆದೆ
ಬೆಳಕೇ ಬದುಕೆ-
ಲ್ಲಕ್ಕರೆಯಲಿ ಸವರಿ!
ಎಲರಲೆ ಅಲೆಯಲಿ
ಪರಿ ಪರಿ ಪರಿಮಳ
ಘಮಘಮಿಸಿತು ಉಸಿರು
ತುಳುಕಿತು ತಿಳಿ ನಗೆ
ಆಗಸ ಮೊಗದಲಿ
ಪ್ರೀತಿ ಪುಳಕದೊಸರು!
ದಿವದೊಲುಮೆಯ ಝರಿ
ಬೆಳಕಿದು ಹರಸಲು
ಜಗಕೇ ಹೂ ಹಸಿರು
ಅರಳಿತು ಪ್ರೀತಿ
ಪ್ರಸಾದಕೆ ಪುಳಕಿತ
ನಮ್ಮೆದೆ ಸಿರಿ ಮಲರು!
ಅರಸುತಲಿದ್ದೆವು
ಏನೆಂದರಿಯದೆ
ಕನಸಿನ ಕುಹರದಲಿ!
ಇದ್ದರು ಬಳಿಯಲೆ
ಬೆಳಕಿನ ಬಯಲೇ
ನಾವೊಳ ಮಬ್ಬಿನಲಿ!
ಎಲ್ಲೆಲ್ಲಲೆದೆವೊ
ಏನೇನಾದೆವೊ
ಅರಿಯದೆ ಬಾಳ ನೆಲೆ
ಚಿತ್ತವೆ ಸುತ್ತಲು
ಹುತ್ತವ ಮೆತ್ತಿರೆ
ಎತ್ತಣ ಬೆಳಕಿನೆಳೆ?
ತೆರೆಯಿತು ತೆರೆಯಿತು
ಹೆಬ್ಬೆಳಕಿನ ಸೆಲೆ
ನಮ್ಮೆದೆಯೊಳಗೊಂದು!
ಹರಿಯುತಲಿದೆ ಹೊಸ
ಹೊಂಬೆಳಕಿನ ಹೊಳೆ
ಬಾಳಿನ ಬೆಳಗಿಂದು!
ಮಿಂದೀ ಮಂಗಳ
ಭವಕೃಪೆ ಸುರ ಭಾ-
ಗೀರಥಿ ತೀರ್ಥದಲಿ
ಯುಗ ಸಂಚಿತ ತಮ
ಕರ್ದಮ ಕರಗಿತು
ಕ್ಷಣ ಕ್ಷಣದಮೃತದಲಿ!
ಕಂಗೊಳಿಸಿದೆ ಬದುಕಿದು
ಸಾಸಿರ ದಳ
ಹೆದ್ದಾವರೆ ಅರಳಿ
ಜಗದಗಲಕು ಹೊಂ-
ಬೆಳಕಿನ ಕೊಳದಲಿ
ಆಗಸ ಹೃದಯದಲಿ!
ಆಲಿಸುತೆದೆಯೊಳು
ಮೌನದೊಳರಳುವ
ಹೊಂಬೆಳಕಿನ ಹಾಡು
ಸರಿಯುವ ಕ್ಷಣ ಕ್ಷಣ
ತೆರೆಯುವ ಬದುಕೊಳು
ಬಿಡದೊಲುಮೆಯ ಜಾಡು!
ಬದುಕೆಂತಿದ್ದರು
ಬೆಳಕೇ ತೆರೆದದು
ನಮಗೊಲುಮೆಯ ಬೀಡು!
ಮೌನದಿ ಗಾನದಿ
ನಲಿಯಲು ನಾವೇ
ಹೆಬ್ಬೆಳಕಿನ ಹಾಡು!
ಹೊಸ ಬದುಕಿನ ಹೊಸ
ಹಾಡಿಗೆ ರಿಂಗಣ
ಹಾಕುತ ಸರಿಯೋಣ!
ಚಿರ ತಮಸೋಮಮಾ
ಜ್ಯೋತಿರ್ಗಮಯವೇ
ಮಿಡಿದೆದೆಯಲಿ ತನನ!