ಬಾಘ ಎಂಬ ಸ್ವಾಮಿ ವಿವೇಕಾನಂದರ ನಾಯಿ
ಸ್ವಾಮಿ ವಿವೇಕಾನಂದರ ಬಗ್ಗೆ ಯಾರಿಗೆ ಗೊತ್ತಿಲ್ಲ. ಭಾರತ ದೇಶದ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಪಸರಿಸುವಂತೆ ಮಾಡಿದ ಧೀಮಂತ ಹೆಮ್ಮೆಯ ಸಂತ ಇವರು. ಇವರಿಗೆ ಪ್ರಾಣಿ, ಪಕ್ಷಿಗಳಲ್ಲಿ ಅಪಾರವಾದ ಪ್ರೀತಿ ಇತ್ತು. ಸ್ವಾಮಿ ವಿವೇಕಾನಂದರು ಕೊಲ್ಕತ್ತಾದ ಬೇಲೂರು ಮಠದಲ್ಲಿ ವಾಸವಾಗಿರುವಾಗ ಅವರ ಬಳಿ ಆಡುಗಳು, ಜಿಂಕೆ, ನಾಯಿಗಳು, ಬಾತುಕೋಳಿಗಳು ಮತ್ತು ಹಲವಾರು ಪಕ್ಷಿಗಳು ಇದ್ದುವು. ಹಂಶಿ ಮತ್ತು ಮೋಟ್ರು ಎಂದು ಆಡುಗಳಿಗೆ ಅವರು ಪ್ರೀತಿಯಿಂದ ಹೆಸರನ್ನೂ ಇಟ್ಟಿದ್ದರು.
ಬಾಘ ಎಂಬುದು ಇವರ ಅತ್ಯಂತ ಪ್ರೀತಿ ಪಾತ್ರವಾದ ನಾಯಿಯ ಹೆಸರು. ಬಾಘ ಜೊತೆ ಲಿಲಿ ಮತ್ತು ಮೇರಿ ಎಂಬ ಇನ್ನೆರಡು ನಾಯಿಗಳೂ ಇದ್ದುವು. ಆದರೆ ಸ್ವಾಮಿ ವಿವೇಕಾನಂದರಿಗೆ ಯಾಕೋ ಈ ಬಾಘನ ಮೇಲೆ ವಿಶೇಷ ಮಮಕಾರ. ಆ ನಾಯಿಮರಿಯನ್ನು ಬೇಲೂರು ಮಠದ ಅಡುಗೆಯವನಾಗಿದ್ದ ಹರು ಠಾಕೂರ್ ಎಂಬಾತನು ಬೀದಿ ಬದಿಯಿಂದ ಎತ್ತಿಕೊಂಡು ಬಂದು ಅಕ್ಕರೆಯಿಂದ ಸಾಕಿದ್ದ. ಮಠದ ಸನ್ಯಾಸಿಗಳಿಗೆಲ್ಲಾ ಬಾಘ ಬಹುಬೇಗನೇ ಆತ್ಮೀಯವಾಯಿತು. ಸ್ವಾಮಿ ವಿವೇಕಾನಂದರೂ ಅದರ ಮೇಲೆ ಅಕ್ಕರೆ ತೋರಿಸತೊಡಗಿದ ಬಳಿಕ ಎಲ್ಲರೂ ವಿವೇಕಾನಂದರ ನಾಯಿ ಎಂದೇ ಬಾಘನನ್ನು ಕರೆಯತೊಡಗಿದರು. ಬಾಘ ಎಂದರೆ ಪ್ರೀತಿ ಎಂದರ್ಥ. ಹೆಸರಿಗೆ ಸರಿಯಾಗಿ ಅದು ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿತ್ತು.
ಆದರೆ ಒಂದು ದಿನ ಮಠದಲ್ಲಿನ ದೇವಸ್ಥಾನದ ಎದುರುಗಡೆಯೇ ಬಾಘ ಮಲವಿಸರ್ಜನೆ ಮಾಡಿ ಬಿಟ್ಟಿತು. ಪವಿತ್ರ ಕ್ಷೇತ್ರವನ್ನು ಅಪವಿತ್ರ ಮಾಡಿತು ನಾಯಿ ಎಂದು ಕೆರಳಿದ ಇತರ ಸ್ವಾಮಿಗಳು ಬಾಘನನ್ನು ಎಲ್ಲಿಗಾದರೂ ದೂರ ಕೊಂಡು ಹೋಗಿ ಬಿಡಬೇಕೆಂದು ತೀರ್ಮಾನಿಸಿದರು. ಬೇಲೂರು ಮಠದ ಪಕ್ಕದಲ್ಲೇ ಹೂಗ್ಲಿ ನದಿ ಹರಿಯುತ್ತಿತ್ತು. ಆ ನದಿಯ ಇನ್ನೊಂದು ತಟಕ್ಕೆ ತೆಗೆದುಕೊಂಡು ಹೋಗಿ ಬಿಟ್ಟು ಬರುವುದೆಂದು ತೀರ್ಮಾನಿಸಿ ಒಬ್ಬರಿಗೆ ಆ ಜವಾಬ್ದಾರಿಯನ್ನು ಒಪ್ಪಿಸಿದರು. ಅದರಂತೆ ಅವರು ಬಾಘನನ್ನು ದೋಣಿಯಲ್ಲಿ ಕರೆದುಕೊಂಡು ಹೋಗಿ ಅದನ್ನು ನದಿಯ ಇನ್ನೊಂದು ಕಡೆ ಬಿಟ್ಟರು. ಅವರು ಅದನ್ನು ಬಿಟ್ಟು ದೋಣಿ ಹತ್ತುವಷ್ಟರಲ್ಲಿ ಅದು ಮತ್ತೆ ದೋಣಿ ಹತ್ತಿ ಕುಳಿತುಕೊಳ್ಳುತ್ತಿತ್ತು. ಇದು ಹಲವಾರು ಬಾರಿ ಪುನರಾವರ್ತನೆಯಾದ ಬಳಿಕ ಆ ವ್ಯಕ್ತಿ ಅದನ್ನು ಮರಳಿ ಬೇಲೂರು ಮಠಕ್ಕೆ ತೆಗೆದುಕೊಂಡು ಬಂದ. ಮರಳಿ ಬಂದ ಬಾಘ ತನ್ನ ತಪ್ಪು ಅರಿವಾದಂತೆ ಆ ದಿನ ಯಾರ ಕಣ್ಣಿಗೂ ಬೀಳಲಿಲ್ಲ.
ಆದರೆ ಬಾಘ ವಿವೇಕಾನಂದರ ಕೊಠಡಿಯ ಪಕ್ಕವೇ ಅಡಗಿಕೊಂಡಿತ್ತು. ಮರುದಿನ ಬೆಳಗಿನ ಜಾವ ಇನ್ನೂ ಸರಿಯಾಗಿ ಬೆಳಕು ಹರಿಯದ ಸಮಯದಲ್ಲಿ ವಿವೇಕಾನಂದರು ತಮ್ಮ ಕೋಣೆಯಿಂದ ಹೊರಗೆ ಬಂದಾಗ ಅದು ಮೆಟ್ಟಲುಗಳ ಹತ್ತಿರವೇ ಕುಳಿತುಕೊಂಡಿತ್ತು. ಕತ್ತಲಿನಲ್ಲಿ ವಿವೇಕಾನಂದರು ಅದನ್ನು ಇನ್ನೇನು ತುಳಿಯಬೇಕು ಅನ್ನುವಷ್ಟರಲ್ಲಿ ಅದು ಶಬ್ದ ಮಾಡಿತು. ತನ್ನಿಂದ ತಪ್ಪಾಯಿತು ಎನ್ನುವ ರೀತಿಯಲ್ಲಿ ಅದು ವಿವೇಕಾನಂದರ ಕಾಲಿನ ಮೇಲೆ ಮುಖವಿರಿಸಿ ಕಾಲನ್ನು ನೆಕ್ಕತೊಡಗಿತು. ವಿಚಿತ್ರವೆಂದರೆ ವಿವೇಕಾನಂದರ ಆ ಕೊಠಡಿ ಮಹಡಿಯ ಮೇಲ್ಗಡೆ ಇತ್ತು. ಬಾಘ ಅಷ್ಟರವರೆಗೆ ಅಲ್ಲಿ ಹೋಗಿಯೇ ಇರಲಿಲ್ಲ. ಅಂದರೆ ತನ್ನ ಒಡೆಯನ ಕ್ಷಮೆ ಕೇಳಬೇಕೆಂದೇ ಭಾಘ ಅಲ್ಲಿಗೆ ಹೋಯಿತೇ?
ನಂತರ ವಿವೇಕಾನಂದರು ಇತರ ಸನ್ಯಾಸಿಗಳ ಜೊತೆ ಮಾತನಾಡುವಾಗ ಬಾಘನ ವಿಷಯವನ್ನು ಪ್ರಸ್ತಾಪಿಸಿದರು. ‘ಬಾಘ ನನ್ನನ್ನು ಅದರ ಯಜಮಾನನೆಂದೇ ಭಾವಿಸಿದೆ. ಅದು ಯಾರ ಮೇಲೋ ದೂರು ಹೇಳಬೇಕು ಅಂದುಕೊಂಡು ನನ್ನ ಬಳಿಗೆ ಬಂದ ಹಾಗಿತ್ತು. ಅದು ನನ್ನ ಕಾಲಿನ ಮೇಲೆ ಮಲಗಿ ಕ್ಷಮೆಯನ್ನೂ ಕೋರಿದಂತೆ ನನಗೆ ಭಾಸವಾಯಿತು. ದೇವಸ್ಥಾನದ ಎದುರು ಅದು ಮಾಡಿದ ಕಾರ್ಯಕ್ಕೆ ಅದಕ್ಕೆ ಶಿಕ್ಷೆ ನೀಡುವುದೇನೂ ಬೇಕಾಗಿಲ್ಲ' ಎಂದು ಆಜ್ಞಾಪಿಸಿದರು.
ಬೇಲೂರು ಮಠದಲ್ಲಿ ಲಿಲಿ ಮತ್ತು ಮೇರಿ ಎಂಬ ಉಳಿದೆರಡು ನಾಯಿಗಳ ಜೊತೆಯೂ ಬಾಘ ಅನ್ಯೋನ್ಯವಾಗಿತ್ತು. ಸಾಮಾನ್ಯವಾಗಿ ನಾಯಿಗಳಲ್ಲಿ ದೊಡ್ಡ ಅಥವಾ ಮುಂದಾಳುವಾಗಿದ್ದ ನಾಯಿಗಳು ಆಹಾರವನ್ನು ಮೊದಲು ತಿನ್ನುತ್ತವೆ. ಆದರೆ ಬಾಘ ಉಳಿದ ಎರಡು ನಾಯಿಗಳಿಗೇ ಮೊದಲು ಆಹಾರ ತಿನ್ನಲು ಬಿಡುತ್ತಿತ್ತು. ನಂತರ ತಾನು ಆಹಾರ ಸೇವಿಸುತ್ತಿತ್ತು. ಈ ಸ್ವಭಾವ ನಾಯಿಗಳ ಸಹಜ ಸ್ವಭಾವಕ್ಕೆ ತದ್ವಿರುದ್ಧವಾಗಿದ್ದು, ಸನ್ಯಾಸಿಗಳಿಗೆಲ್ಲಾ ಅಚ್ಚರಿ ಮೂಡಿಸುತ್ತಿತ್ತು.
ಬೇಲೂರು ಮಠದ ಒಳಗಡೆ ಇರುವ ವಸತಿ ಕೋಣೆಗಳಿಗೆ ಶೌಚಾಲಯ ಮಠದಿಂದ ಸ್ವಲ್ಪ ದೂರ ಇತ್ತು. ಅಲ್ಲಿಗೆ ಹೋಗುವ ದಾರಿಯಲ್ಲಿ ತುಂಬಾ ಪೊದೆಗಳು ಬೆಳೆದು ನಿಂತಿದ್ದವು. ಶೌಚಾಲಯಕ್ಕೆ ಹೋಗುವುದೆಂದರೆ ಎಲ್ಲರಿಗೂ ಹೆದರಿಕೆ. ಎಲ್ಲಿ ಹಾವುಗಳನ್ನು ತುಳಿದು ಬಿಡುತ್ತೇವೋ, ಅವುಗಳು ಕಚ್ಚಿ ಬಿಡುತ್ತಾವೋ ಎಂದು. ರಾತ್ರಿಯಂತೂ ಸೀಮೆ ಎಣ್ಣೆಯ ದೀಪವನ್ನು ಹಿಡಿದುಕೊಂಡು ಹೋಗುವುದು ಸಾಹಸದ ಕೆಲಸವೇ ಆಗಿತ್ತು. ಆದರೆ ಬಾಘ ಶೌಚಾಲಯಕ್ಕೆ ಹೋಗುವ ಸನ್ಯಾಸಿಗಳ ಜೊತೆಯಲ್ಲೇ ಹೋಗುತ್ತಿತ್ತು. ಅವರ ರಕ್ಷಣೆಯನ್ನು ನೋಡಿಕೊಳ್ಳುತ್ತಿತ್ತು. ಏನಾದರೂ ವಿಷ ಜಂತುಗಳಿದ್ದರೆ ಬೊಗಳಿ ಅವರನ್ನು ಎಚ್ಚರಿಸುತ್ತಿತ್ತು.
ಸ್ವಾಮಿ ವಿವೇಕಾನಂದರ ನಿಧನದ ನಂತರ ಅವರ ದೇಹವನ್ನು ಬೇಲೂರು ಮಠದ ಆವರಣದಲ್ಲೇ ದಹಿಸಲಾಯಿತು. ಆ ದಹನ ಕ್ರಿಯೆ ಪ್ರಾರಂಭದಿಂದ ಅಂತ್ಯದವರೆಗೆ ಬಾಘ ಅಲ್ಲೇ ಕುಳಿತು ತನ್ನ ಸ್ವಾಮಿಗೆ ಅಂತಿಮ ನಮನ ಸಲ್ಲಿಸಿತು. ಆ ಇಡೀ ದಿನ ಅದು ಏನನ್ನೂ ತಿನ್ನಲಿಲ್ಲ.
ನಂತರದ ದಿನಗಳಲ್ಲೂ ಮಠಕ್ಕೆ ಬರುವ ಭಕ್ತಾದಿಗಳನ್ನು ಬಾಘ ಕಾಯುತ್ತಿತ್ತು. ಒಮ್ಮೆ ಯುರೋಪ್ ದಿಂದ ಇಬ್ಬರು ಸ್ತ್ರೀಯರು ಮಠಕ್ಕೆ ಬಂದರು, ಸ್ತ್ರೀಯರಿಗೆ ಮಠದಲ್ಲಿ ಉಳಿದುಕೊಳ್ಳುವ ಅವಕಾಶವಿರಲಿಲ್ಲವಾದುದರಿಂದ ಅವರು ಅಲ್ಲಿಯೇ ಮಠದ ಎದುರಿನ ಹುಲ್ಲುಹಾಸಿನ ಮೇಲೆ ಡೇರೆ ಹಾಕಿ ವಿಶ್ರಾಮ ತೆಗೆದುಕೊಳ್ಳುತ್ತಿದ್ದರು. ಆ ಸಮಯದಲ್ಲೂ ಬಾಘ ಅಲ್ಲೇ ಇದ್ದು ಅವರ ಡೇರೆಯ ಒಳಗೆ ಹಾವು, ಕಪ್ಪೆಗಳು ಹೋಗದಂತೆ ತಡೆಯುತ್ತಿತ್ತು.
ಕಾಲಕ್ರಮೇಣ ಬಾಘನಿಗೆ ವಯಸ್ಸಾಗಿ ಅದು ಮರಣಹೊಂದಿತು. ಅದರ ದೇಹವನ್ನು ಹತ್ತಿರ ಹೂಗ್ಲಿ ನದಿಯಲ್ಲಿ ವಿಸರ್ಜಿಸಲಾದರೂ, ಆದರೆ ನದಿ ಸಮುದ್ರಕ್ಕೆ ಸೇರುವ ಸಮಯದಲ್ಲಿ ಉಬ್ಬರ ಇಳಿತಗಳಾದಾಗ ಅದರ ದೇಹ ಮತ್ತೆ ಮಠದ ಎದುರು ಬಂದು ಬಿತ್ತು. ತನ್ನ ಸ್ವಾಮಿ ನಿಷ್ಟೆಯನ್ನು ಅದು ಮರಣದ ನಂತರವೂ ತೋರಿಸಿತು ಎಂದು ನಂಬಿದ ಮಠದ ಸನ್ಯಾಸಿಗಳು ಅದರ ದೇಹವನ್ನು ಅದೇ ವಠಾರದಲ್ಲಿದ್ದ ಗಂಧದ ಮರದ ಸಮೀಪ ಹೂತು ಹಾಕಿದರು. ಸ್ವಾಮಿ ನಿಷ್ಟೆಗೆ ಇನ್ನೊಂದು ಹೆಸರೇ ನಾಯಿ ಎನ್ನುವುದನ್ನು ಬಾಘ ಈ ಮೂಲಕ ಮತ್ತೆ ಮತ್ತೆ ನಿರೂಪಿಸಿತು.
(ಆಧಾರ: ಸ್ವಾಮಿ ಭಾಸ್ಕರಾನಂದರ ಪುಸ್ತಕ ‘ಭಾರತದ ಸನ್ಯಾಸಿ ಮಠಗಳಲ್ಲಿನ ಜೀವನ')
ಚಿತ್ರ: ಸ್ವಾಮಿ ವಿವೇಕಾನಂದರು ವಾಸ್ತವ್ಯವಿದ್ದ ಬೇಲೂರು ಮಠ (ಅಂತರ್ಜಾಲ ತಾಣ ವೀಕೀಪೀಡಿಯಾದಿಂದ)