ಬಾಟಮ್ ಐಟಮ್ 7

ಬಾಟಮ್ ಐಟಮ್ 7

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ : ಆಗಸ್ಟ್ ೨೦೧೫

'ಹಾಯ್ ಬೆಂಗಳೂರು' ಪತ್ರಿಕೆಯ ಸಂಪಾದಕರಾದ ರವಿ ಬೆಳಗೆರೆಯವರು ಬರೆದ ಅಂಕಣ ಬರಹವೇ ‘ಬಾಟಮ್ ಐಟಮ್'. ಈ ಸರಣಿಯ ಏಳನೇಯ ಹೊತ್ತಗೆ ಇದು. ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಜೀವನದ ಮೌಲ್ಯವನ್ನು ಹೆಚ್ಚಿಸುವ ಚೇತೋಹಾರಿ ಬರಹಗಳು ಇಲ್ಲಿವೆ. ರವಿ ಬೆಳಗೆರೆಯವರು ತಮ್ಮ ಬೆನ್ನುಡಿಯಲ್ಲಿ “ಅಂಥದೊಂದು ಡಿಸೈರ್ ನಿಮ್ಮಲ್ಲಿ ಕುದಿಯದೆ ಹೋದರೆ ನೀವು ಏನನ್ನೂ ಸಾಧಿಸಲಾರಿರಿ. ಇದ್ದಕ್ಕಿದ್ದಂತೆ ಕೋಟ್ಯಾಧೀಶರಾದವರ ಮಾತು ಬಿಟ್ಟು ಬಿಡಿ, ಅದು ಯಾರೋ ಕೆಲವರ ವಿಷಯದಲ್ಲಿ ಸತ್ಯವಾಗಿರಬಹುದು. ಅಂಥವರು ದೇವರು-ಅದೃಷ್ಟ ಮುಂತಾದುವುಗಳನ್ನು ನಂಬಿದರೆ ನಂಬಿಕೊಳ್ಳಲಿ. ಆದರೆ ಈ ಜಗತ್ತಿನಲ್ಲಿ ಯಶಸ್ಸಿನ ಬೆಟ್ಟ ಹತ್ತಿ ನಿಂತವರೆಲ್ಲರನ್ನೂ ಒಮ್ಮೆ ನೋಡಿ. ಅವರನ್ನೇ ಕೇಳಿ. ಅವರು ಅಂಥದೊಂದು ‘ಬರ್ನಿಂಗ್ ಡಿಸೈರ್' ಇಟ್ಟುಕೊಂಡೇ ಆ ಬೆಟ್ಟದ ಪ್ರತಿ ಮೆಟ್ಟಲೂ ಹತ್ತಿದ್ದಾರೆ. ಅವರಿಗೆ ಅದೇ ಇಂಧನ, ಅದೇ ಊರುಗೋಲು, ಯಶಸ್ಸು ಅವರನ್ನು ಸುಮ್ಮನೇ ಕರೆಯಲಿಲ್ಲ. ಬಯಕೆಯ ಕಿಚ್ಚು ಹೊತ್ತಿಸಿ, ಅದಕ್ಕಾಗಿ ಚಡಪಡಿಸುವಂತೆ ಮಾಡಿ, ಕೆಲಸಕ್ಕೆ ಹಚ್ಚಿದ ನಂತರವೇ ಬೆಟ್ಟದ ತುದಿಗೆ ಒಯ್ದು ತಲುಪಿಸಿದ್ದು. ಬಯಕೆ ಎಂಬುದು ಎಂಥವನನ್ನೂ ಧೀರನನ್ನಾಗಿ, ಶೂರನನ್ನಾಗಿ, ಶಕ್ತಿವಂತನನ್ನಾಗಿ ಮಾಡಿ ಬಿಡುತ್ತದೆ. ನೆಗೆಟಿವ್ ಆದ ಬಯಕೆಗಳು ಅನೇಕರನ್ನು ಹುಂಬರನ್ನಾಗಿ, ವ್ಯರ್ಥ ಸಾಹಸಿಗಳನ್ನಾಗಿ ಮಾಡಿರುವುದು ನಿಜ. ಆದರೆ ಪಾಸಿಟಿವ್ ಆದುದೊಂದು ಬಯಕೆ ಇಟ್ಟುಕೊಂಡು ಹೊರಟು ನೋಡಿ, ಗೆಲುವು ಕೈಚಾಚಿ ಕರೆದುಕೊಳ್ಳುತ್ತದೆ. ಯಾವ ಬೆಟ್ಟವೂ ಹತ್ತಲಾಗದಷ್ಟು ಅಗಾಧವಲ್ಲ. ಆದರೆ ಪ್ರತಿ ಮೆಟ್ಟಲೂ ನೀವೇ ಹತ್ತಬೇಕು. ಅಂಥದೊಂದು ಬಯಕೆ ನಿಮ್ಮಲ್ಲಿ ಕುದಿಯಬೇಕು.”  ಎಂದು ಉಲ್ಲೇಖಿಸಿದ್ದಾರೆ.

ಪುಸ್ತಕದಲ್ಲಿ ೬೦ ಪುಟ್ಟ ಪುಟ್ಟ ಅಧ್ಯಾಯಗಳಿವೆ. ‘ಪ್ರತಿ ಸಂಬಂಧವೂ ಒಂದಷ್ಟು ಶ್ರದ್ಧೆಯನ್ನು ಬೇಡುತ್ತದೆ !’ ಎಂಬ ಅಧ್ಯಾಯದಲ್ಲಿ ಅವರು ಬರೆದ ಸಾಲುಗಳನ್ನು ಗಮನಿಸಿ.
“ಮೊದಲೆಲ್ಲಾ ಹೊಸ ವರ್ಷ, ದೀಪಾವಳಿ, ದಸರೆ -ಮುಂತಾದುವು ಬಂದರೆ ಗ್ರೀಟಿಂಗ್ ಕಾರ್ಡ್ ಗಳಿಗಾಗಿ ಕಾಯುತ್ತಿದ್ದೆವು. ಬರುವ ಕಾರ್ಡುಗಳೇ ಅವುಗಳನ್ನು ಕಳಿಸುವವರ ವ್ಯಕ್ತಿತ್ವ ವಿವರಿಸುತ್ತಿದ್ದವು. ಪ್ರತಿ ಸಂಬಂಧವೂ ಒಂದು ಶ್ರದ್ಧೆಯನ್ನು ಬೇಡುತ್ತದೆ ಎಂಬುದು ನನ್ನ ನಂಬಿಕೆ. ಅಂಗಡಿಗೆ ಹೋಗಿ ಗ್ರೀಟಿಂಗ್ ಕಾರ್ಡು ಆರಿಸುವುದರಲ್ಲೇ ಒಂದು ಶ್ರದ್ಧೆ, ಸಡಗರ ಇರುತ್ತಿತ್ತು. ಈಗ ಜಸ್ಟ್ ಒಂದು ಎಸ್ಸೆಮ್ಮೆಸ್ಸು. ಹತ್ತೇ ಪೈಸೆ. ಹಬ್ಬ ಬಂತೆಂದರೆ, ರಾಶಿ ರಾಶಿ ಮೆಸೇಜು. ಅದೊಂದು ಪೀಡೆ ಅನ್ನಿಸಿಬಿಡುತ್ತದೆ. ಕಡೆ ಕಡೆಗೆ ಮದುವೆ ಪತ್ರಗಳೂ ಮೊಬೈಲಿಗೆ ಬಂದು ಬೀಳತೊಡಗಿವೆ. ಪ್ರೀತಿಯಂಥ ಅತಿ ಸೂಕ್ಷ್ಮ ಭಾವನೆ ವ್ಯಕ್ತಪಡಿಸಲಿಕ್ಕೂ ಎಸ್ಸೆಮ್ಮೆಸ್ಸು. ‘ಬ್ಯಾಡ ಹೋಗು!’ ಅಂತ ಸಂಬಂಧ ಮುರಿದುಕೊಳ್ಳುವುದಕ್ಕೂ ಅದೇ ಎಸ್ಸೆಮ್ಮೆಸ್ಸು.

‘ನಮ್ಮ ಸ್ನೇಹವನ್ನು ಮತ್ತೆ ಆರಂಭಿಸಲಿಕ್ಕೆ, ಮುಂದುವರೆಸುವುದಕ್ಕೆ ನನಗೆ ಒಂದೇ ಒಂದು ಕಾರಣ ಕಾಣಿಸುತ್ತಿಲ್ಲ' ಎಂಬ ಮೆಸೇಜೊಂದು ನನಗೆ ಬಂದಾಗ ವಿಚಲಿತನಾದೆ. ಅನೇಕ ವರ್ಷಗಳ ಒಂದು ಸಂಬಂಧವನ್ನು terminate ಮಾಡುವುದು ಈ ವ್ಯಕ್ತಿಗೆ ಇಷ್ಟು ಸುಲಭವಾಗಿ ಹೋಯಿತಾ? ತರ್ಕವೆಂಬುದು ಪ್ರಾಪಂಚಿಕವಾದ ಸಂಗತಿಗಳಲ್ಲಿ ಎದ್ದು ಕಾಣುತ್ತದೆ. ಆದರೆ ಸ್ನೇಹ, ಗೆಳೆತನ, ಪ್ರೀತಿ ಮುಂತಾದುವೆಲ್ಲ ನಮ್ಮ ಭಾವನೆಗೆ ಸಂಬಂಧಿಸಿದಂಥವು. ಅಲ್ಲಿ ತರ್ಕವನ್ನು ಮೀರಿದಂಥ ಒಂದು ತಂತು ಬೆಳೆದಿರುತ್ತದೆ. ಈ ಮೆಸೇಜು ಕಳಿಸಿದ ವ್ಯಕ್ತಿಗೆ, ಸ್ನೇಹವನ್ನು ಮುಂದುವರೆಸಲು ಯಾವ ಕಾರಣವಿದೆಯೆಂದು ಹೇಳಲಿ?

‘ಮುಚ್ಚಿದ ಬಾಗಿಲ ಮುಂದೆ ನಿಂತು ಭಿಕ್ಷೆ ಬೇಡುವುದು ನನ್ನಿಂದಲೂ ಆಗದು' ಎಂಬ ಸಾಲು ಟೈಪ್ ಮಾಡಿ ಕಳಿಸಿಬಿಟ್ಟೆ. ಅಲ್ಲಿಗದು ಮುಗಿದು ಹೋಯಿತು. ಹತ್ತೇ ಪೈಸೆ! ಮನುಷ್ಯ ಸಂಬಂಧಗಳನ್ನು ಈ ಮೊಬೈಲು, ಕಂಪ್ಯೂಟರ್, ಇ-ಮೇಯ್ಲು, ಫೇಸ್ ಬುಕ್ಕು ಮುಂತಾದವೆಲ್ಲ ಗಟ್ಟಿಗೊಳಿಸಬೇಕಿತ್ತು. ಜಗತ್ತು ಚಿಕ್ಕದಾಗುತ್ತ ಬಂದು ನಾವೆಲ್ಲ ಹತ್ತಿರ ಹತ್ತಿರವಾಗಬೇಕಿತ್ತು. ನಮ್ಮ ನಡುವೆ ಮಾತು ಆಪ್ತವಾಗಬೇಕಿತ್ತು. ಆದರೆ ಇದೇನಾಗಿ ಹೋಯಿತು? ಯೋಚಿಸುತ್ತೇನೆ.

ಮೊದಲೆಲ್ಲಾ ನಮಗೆ ಸಂಬಂಧಗಳೆಡೆಗೆ ಕಾಳಜಿಯಿತ್ತು. ಶ್ರದ್ಧೆಯಿತ್ತು. ತೀರ ಹಗ್ಗ ಹರಿದು ಕೊಳ್ಳುವಾಗಲೂ ಒಂದು ಗೌರವ, ಮಾಧುರ್ಯ ಉಳಿಸಿಕೊಂಡಿರುತ್ತಿದ್ದೆವು. ಎಲ್ಲಿಂದಾದರೂ ಸರಿ, ಎಷ್ಟು ವರ್ಷಗಳ ನಂತರವಾದರೂ ಸರಿ ; ಮತ್ತೆ ಗೆಳೆತನದ ಹಗ್ಗ ಹೊಸೆಯಬಹುದು ಎಂಬ ಭಾವ ಉಳಿದಿರುತ್ತಿತ್ತು. ಬೇಸರಗಳೇನೇ ಇರಲಿ, ಗೆಳೆತನದ ತಂತು ತಪ್ಪಿ ಹೋದವನ ‘ಮಣ್ಣಿಗೆ ಹೋಗಿ ಬಂದಂತೆ'ಯಾದರೂ ಹೋಗಿ, ಕೊನೆಯ ಮಾತು ಆಡಿ ಬರುತ್ತಿದ್ದೆವು. ವಿದಾಯದ ಚಿತ್ರವಾದರೂ ಕಣ್ಣಲ್ಲಿ ಉಳಿದಿರುತ್ತಿತ್ತು. ಈಗೇನಿದೆ? ಹತ್ತೇ ಪೈಸೆ.”

ಮೇಲಿನ ಸಾಲುಗಳನ್ನು ಓದುವಾಗ ಈಗ ನಮ್ಮ ಸಂಬಂಧಗಳ ಪರಿಸ್ಥಿತಿ ಹೇಗಾಗಿದೆ? ಎನ್ನುವುದನ್ನು ತಿಳಿದುಕೊಳ್ಳಬಹುದು. ೨೦೦ ಪುಟಗಳ ಈ ಪುಸ್ತಕವನ್ನು ಎಲ್ಲಿಂದ ಬೇಕಾದರೂ ಓದಲು ಪ್ರಾರಂಭ ಮಾಡಬಹುದು. ಏಕೆಂದರೆ ಪುಟ್ಟ ಪುಟ್ಟ ಅಧ್ಯಾಯಗಳನ್ನು ಯಾವಾಗ, ಎಲ್ಲಿ ಬೇಕಾದರೂ ಓದಿಕೊಳ್ಳಬಹುದು. ರವಿ ಬೆಳಗೆರೆಯವರು ತಮ್ಮ ಈ ಪುಸ್ತಕವನ್ನು ಪದ್ಮಪಾಣಿ ಹಾಗೂ ಅವರ ಪತ್ನಿ ಬಿ.ಆರ್.ಛಾಯಾ ಅವರಿಗೆ ಪ್ರೀತಿಯಿಂದ ಅರ್ಪಣೆ ಮಾಡಿದ್ದಾರೆ.