ಬಾಟಲಿಯಲ್ಲಿ ಪೋಲಾರ್ ಕರಡಿಗೆ ಸಂದೇಶ

ಬಾಟಲಿಯಲ್ಲಿ ಪೋಲಾರ್ ಕರಡಿಗೆ ಸಂದೇಶ

ಪೋಲಾರ್ ಕರಡಿ ಹಿಮವಂತ ತನ್ನ ಮುಂಗೈಯನ್ನು ಹಿಮದ ಬಯಲಿನ ಒಂದು ತೂತಿನಲ್ಲಿ ತೂರಿಸಿ ಅಲ್ಲೇನಿದೆ ಎಂದು ಪರೀಕ್ಷಿಸಿತು. ಅಲ್ಲಿ ನೀರಿನಲ್ಲಿ ಏನೋ ಚಲಿಸಿದಂತೆ ಅದಕ್ಕೆ ಕಂಡಿತ್ತು.

ಆಗಲೇ ಒಂದು ಪೆಂಗ್ವಿನ್ ಆ ತೂತಿನಿಂದ ತಲೆ ಹೊರಗೆ ಹಾಕಿತು. ತನ್ನ ರೆಕ್ಕೆಗಳಲ್ಲಿ ಅದು ಒಂದು ಗಾಜಿನ ಬಾಟಲಿಯನ್ನು ಹಿಡಿದು ಕೊಂಡಿತ್ತು. “ಹಿಮಗಡ್ದೆಗಳ ಆ ಬದಿಯಲ್ಲಿ ನಾನು ಇದನ್ನು ಕಂಡೆ. ಇದು ಅಲ್ಲಿ ನೀರಿನ ಅಲೆಗಳಲ್ಲಿ ತೇಲುತ್ತಿತ್ತು” ಎಂದಿತು ಪೆಂಗ್ವಿನ್.

ಇಬ್ಬರು ಗೆಳೆಯರು ಹಿಮದಲ್ಲಿ ಕುಳಿತು ಆ ಬಾಟಲಿಯನ್ನು ಪರೀಕ್ಷಿಸಿದರು. “ಅದರೊಳಗೆ ಏನೋ ಇದೆ” ಎಂದಿತು ಪೆಂಗ್ವಿನ್. ಬಾಟಲಿಯ ಕಾರ್ಕ್ ತೆಗೆದು, ಪೆಂಗ್ವಿನ್ ತನ್ನ ಕೊಕ್ಕಿನಿಂದ ಅದರೊಳಗಿದ್ದುದನ್ನು ಹೊರ ತೆಗೆಯಿತು. ಅದೊಂದು ಚೀಟಿ. "ಅದರಲ್ಲೇನು ಬರೆದಿದೆ?” ಎಂದು ಕೇಳಿತು ಹಿಮವಂತ.

ಆ ಸಂದೇಶ ಓದಿದ ಪೆಂಗ್ವಿನ್ ಹಿಮವಂತನಿಗೆ ಅದನ್ನು ತಿಳಿಸಿತು: "ಇದರಲ್ಲಿ ಹೀಗೆ ಬರೆದಿದೆ - ಸಹಾಯ ಮಾಡಿ. ನಾನೊಂದು ಒಣ ದ್ವೀಪದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ. ನನ್ನ ದೋಣಿ ಒಡೆದು ಹೋಗಿದೆ. ಇಲ್ಲಿ ಭಾರೀ ಸೆಕೆ. ಪ್ರೀತಿಯಿಂದ, ಕಂದು ಕರಡಿ.” ಚೀಟಿಯ ಹಿಂಬದಿಯಲ್ಲಿ ಒಂದು ನಕ್ಷೆ ಇದೆಯೆಂದೂ ತಿಳಿಸಿದ ಪೆಂಗ್ವಿನ್ ಕೇಳಿತು: “ನಾವೀಗ ಸಹಾಯ ಮಾಡಬೇಕೇ?”

“ಖಂಡಿತವಾಗಿ ಸಹಾಯ ಮಾಡಬೇಕು. ಯಾಕೆಂದರೆ ನನ್ನ ದಾಯಾದಿಯೊಬ್ಬ ತೊಂದರೆಗೆ ಸಿಲುಕಿರುವಂತೆ ಕಾಣಿಸುತ್ತದೆ. ಏನೇ ಆಗಲಿ, ಅಲ್ಲಿಗೆ ನಮ್ಮ ಪ್ರಯಾಣ ಒಂದು ಸಾಹಸವಾಗಲಿದೆ. ನಾನು ಯಾವಾಗಲೂ ಯೋಚಿಸುತ್ತಿದ್ದೆ - ಸೆಕೆ ಹೇಗಿರುತ್ತದೆಂದು ಅನುಭವಿಸಬೇಕೆಂದು. ಇದೊಳ್ಳೆ ಅವಕಾಶ” ಎಂದಿತು ಹಿಮವಂತ.

ಗೆಳೆಯರಿಬ್ಬರೂ ಆ ಚೀಟಿಯಲ್ಲಿದ್ದ ನಕ್ಷೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಅನಂತರ ಅಗಾಧವಾದ ಹಿಮದ ಬಯಲನ್ನು ದಾಟಿ ಸಮುದ್ರ ತೀರಕ್ಕೆ ಬಂದರು. ತಮ್ಮ ಶೀತದ ನೆಲೆಗೆ ವಿದಾಯ ಹೇಳುತ್ತಾ, ಸಮುದ್ರದ ಶೀತ ನೀರಿಗೆ ಧುಮುಕಿದರು. ಒಣ ದ್ವೀಪವಿರುವ ದಕ್ಷಿಣ ದಿಕ್ಕಿನತ್ತ ಈಜ ತೊಡಗಿದರು.

ಹಲವು ಗಂಟೆಗಳು ಈಜಿದ ನಂತರ ಹಿಮವಂತ ಕರಡಿಗೆ ದಣಿವಾಯಿತು. ಅದು ಯಾವತ್ತೂ ತನ್ನ ನೆಲೆಯಿಂದ ಇಷ್ಟು ದೂರ ಈಜುತ್ತಾ ಬಂದಿರಲಿಲ್ಲ. "ನಾವು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯೋಣ” ಎಂದಿತು ಪೆಂಗ್ವಿನ್. ಇಬ್ಬರೂ ನೀರಿನಲ್ಲಿ ಹೊರಳಿ, ತಮ್ಮ ಎದೆ ಮೇಲಾಗಿ ನೀರಿನಲ್ಲಿ ತೇಲತೊಡಗಿದರು.

"ಆ ದ್ವೀಪ ಇನ್ನೂ ಬಹಳ ದೂರವಿದೆಯೇ?" ಎಂದು ಕೇಳಿತು ಹಿಮವಂತ. "ಹೌದು ಬಹಳ ದೂರವಿದೆ. ಬೆಚ್ಚಗಿನ ಸಮುದ್ರದ ನೀರಿನ ಪ್ರದೇಶಕ್ಕೆ ನಾವಿನ್ನೂ ಬಂದಿಲ್ಲ. ನಾವು ಆ ದ್ವೀಪದ ಹತ್ತಿರ ಬಂದಾಗ ಸಮುದ್ರದ ನೀರು ಹೇಗಿರುತ್ತದೆ ಗೊತ್ತಾ? ನೀರು ಬಿಸಿಯಾಗಿದ್ದು, ನಾವು ಬಿಸಿ ನೀರಿನ ಸರೋವರದಲ್ಲಿ ಮುಳುಗಿದಂತಿರುತ್ತದೆ" ಎಂದಿತು ಪೆಂಗ್ವಿನ್.

ಅಂತೂ ಹಿಮವಂತ ಮತ್ತು ಪೆಂಗ್ವಿನ್ ಸೂರ್ಯನಿರುವ ದಿಕ್ಕಿಗೆ ಈಜುತ್ತಾ ಸಮುದ್ರದಲ್ಲಿ ಮುಂದುವರಿದರು. ಅವರು ಮುಂದೆ ಸಾಗಿದಂತೆ ನಿಧಾನವಾಗಿ ಸಮುದ್ರದ ನೀರು ಬಿಸಿಯಾಗಲು ಶುರುವಾಯಿತು. ಹಿಮವಂತನಿಗೆ ಕಚಗುಳಿ ಇಟ್ಟಂತಾಯಿತು. ಇಬ್ಬರೂ ಸಮುದ್ರದಲ್ಲಿ ಮುಂದೆಮುಂದೆ ಸಾಗಿದರು.

ಸೂರ್ಯ ಅವರಿಬ್ಬರ ತಲೆಯ ಮೇಲೆ ಆಕಾಶದಲ್ಲಿ ಬೆಳಗುತ್ತಿದ್ದ. ಈಗ ಹಿಮವಂತ ಮುಂದೆ ಸಾಗಲು ಒಂದೊಂದು ಸಲ ಕೈಗಳನ್ನು ಬಡಿಯುತ್ತಿದ್ದಂತೆ ಅದಕ್ಕೆ ಏದುಸಿರು ಬರಲು ಶುರುವಿಟ್ಟಿತು. “ನನಗೆ ಸುಸ್ತಾಗಿದೆ. ಇನ್ನು ಹೆಚ್ಚು ದೂರ ಈಜಲು ನನ್ನಿಂದ ಸಾಧ್ಯವಿಲ್ಲ” ಎಂದಿತು ಹಿಮವಂತ. “ಇನ್ನು ಹೆಚ್ಚು ದೂರ ಈಜ ಬೇಕಾಗಿಲ್ಲ. ಒಣದ್ವೀಪ ಅಲ್ಲೇ ಎದುರು ಕಾಣಿಸುತ್ತಿದೆ” ಎಂದಿತು ಪೆಂಗ್ವಿನ್.
ಅಗೋ, ಒಣದ್ವೀಪದ ತೀರದ ಹತ್ತಿರಕ್ಕೆ ಬರುತ್ತಿದ್ದ ಇವರನ್ನು ಕಂಡ ಕಂದುಕರಡಿ ಉತ್ಸಾಹದಿಂದ ಕುಣಿಯುತ್ತಾ ತನ್ನ ಕೈಗಳನ್ನು ಬೀಸತೊಡಗಿತು. ಇವರು ದ್ವೀಪದ ತೀರ ಏರಿ ಬರುತ್ತಿದ್ದಂತೆ ಕಂದು ಕರಡಿ ಉದ್ವೇಗದಿಂದ ಕೂಗಿತು, “ಓಹೋ, ನೀವು ನನ್ನನ್ನು ಪತ್ತೆ ಮಾಡಿದಿರಲ್ಲ! ನಾನು ಸಂದೇಶ ಕಳಿಸಿದ ಸಣ್ಣ ಬಾಟಲಿ ಇಲ್ಲಿಂದ ಉತ್ತರ ಧ್ರುವಕ್ಕೆ ತೇಲಿಕೊಂಡು ಹೋಯಿತೆಂದರೆ ನಂಬಲಾಗುತ್ತಿಲ್ಲ.”

“ಅಬ್ಬಬ್ಬಾ, ನನಗೂ ಉತ್ತರ ಧ್ರುವದಿಂದ ಇಲ್ಲಿಯ ವರೆಗೆ ಈಜಿಕೊಂಡು ಬಂದೆ ಅನ್ನೋದನ್ನು ನಂಬಲಾಗುತ್ತಿಲ್ಲ. ನನಗಂತೂ ಸುಸ್ತಾಗಿ ಕೈಕಾಲು ಬಿದ್ದು ಹೋಗಿದೆ” ಎನ್ನುತ್ತಾ ಹಿಮವಂತ ಆ ದ್ವೀಪದ ನೆಲದಲ್ಲಿ ಅಂಗಾತ ಬಿದ್ದುಕೊಂಡಿತು.

ತನ್ನನ್ನು ರಕ್ಷಿಸಲು ಬಂದ ಹಿಮವಂತ ಮತ್ತು ಪೆಂಗ್ವಿನ್ ಇಬ್ಬರನ್ನೂ ಕಂದುಕರಡಿ ಅಲ್ಲಿನ ಗವಿಯೊಂದಕ್ಕೆ ಕರೆದೊಯ್ದಿತು. ಇಬ್ಬರೂ ಚೇತರಿಸಿಕೊಳ್ಳುವ ವರೆಗೆ ಅಲ್ಲಿ ದಣಿವಾರಿಸಿಕೊಂಡರು. ಆಗ ಕತ್ತಲಾಗ ತೊಡಗಿತು. ಕಂದುಕರಡಿ ಸಮುದ್ರ ತೀರದಲ್ಲಿ ಬೆಂಕಿ ಉರಿಸಿತು. ಮೂವರೂ ಅದರ ಸುತ್ತಲೂ ಕುಳಿತಾಗ ಕಂದುಕರಡಿ ತನ್ನ ಕತೆ ಶುರು ಮಾಡಿತು. ಒಂದು ದೋಣಿಯಲ್ಲಿ  ಹಲವು ದಿನ ಸಮುದ್ರಯಾನ ಮಾಡಿದ ನಂತರ ತನ್ನ ದೋಣಿ ಮುರಿದು ಹೋಯಿತೆಂದು ತಿಳಿಸಿತು.

"ನಾನು ಕೊನೆಯ ವರೆಗೂ ಇಲ್ಲೇ ಇರಬೇಕಾದೀತು ಎಂದು ಹೆದರಿದ್ದೆ. ನನಗೆ ಒಮ್ಮೆ ನನ್ನ ಮನೆಗೆ ಹೋದರೆ ಸಾಕಾಗಿದೆ" ಎಂದಿತು ಕಂದುಕರಡಿ. "ಚಿಂತಿಸ ಬೇಡ. ನಾವು ನಿನ್ನನ್ನು ನಿನ್ನ ಮನೆಗೆ ತಲಪಿಸುತ್ತೇವೆ. ಆದರೆ ಈಗ ರಾತ್ರಿಯಿಡೀ ಚೆನ್ನಾಗಿ ನಿದ್ದೆ ಮಾಡೋಣ" ಎಂದಿತು ಹಿಮವಂತ.

ಮರುದಿನ ಬೆಳಗ್ಗೆ ಮೂವರು ಗೆಳೆಯರೂ ಆ ದ್ವೀಪದ ತೀರದಲ್ಲಿ ಸಂತೋಷದಿಂದ ಆಟವಾಡಿದರು. “ಇಲ್ಲಿ ಸೆಕೆ ಜೋರಾಗಿದೆ. ಅದರಿಂದಾಗಿ ನನಗೆ ಬೇಗನೇ ದಣಿವಾಗುತ್ತಿದೆ. ಇಲ್ಲಿಯ ಹೊಯಿಗೆ (ಮರಳು)ಯಂತೂ ನನ್ನ ರೋಮಗಳ ಎಡೆಯಲ್ಲಿ ಸೇರಿಕೊಂಡು ಕಿರಿಕಿರಿಯಾಗುತ್ತಿದೆ” ಎಂದಿತು ಹಿಮವಂತ.

"ಸರಿ ಹಾಗಾದರೆ, ನಾವಿನ್ನು ಇಲ್ಲಿಂದ ಹೊರಡೋಣ” ಎಂದಿತು ಪೆಂಗ್ವಿನ್. ಮೂವರೂ ಸೇರಿ ಕಂದುಕರಡಿ ತಯಾರಾಗಿ ಇಟ್ಟಿದ್ದ ತೆಪ್ಪವನ್ನು ಸಮುದ್ರದ ನೀರಿಗೆ ಇಳಿಸಿದರು. ಕಂದುಕರಡಿ ತೆಪ್ಪ ಏರಿತು. ಯಾಕೆಂದರೆ ಅದಕ್ಕೆ ಉಳಿದ ಇಬ್ಬರಂತೆ ಸಮುದ್ರದಲ್ಲಿ ಈಜಲು ಸಾಧ್ಯವಿರಲಿಲ್ಲ. ಅಂತೂ ಅವರ ಸಮುದ್ರಯಾನ ಶುರುವಾಯಿತು - ಮರಳಿ ಮನೆಗೆ ಹೋಗಲಿಕ್ಕಾಗಿ. ಹಿಮವಂತ ತೆಪ್ಪ ಎಳೆಯುತ್ತಾ, ಪೆಂಗ್ವಿನ್ ಅದರ ಪಕ್ಕದಲ್ಲಿ ಈಜುತ್ತಾ ಅವರು ಸಾಗಿದರು.

ಅದೊಂದು ದೀರ್ಘ ಸಮುದ್ರಯಾನ. ಅಂತಿಮವಾಗಿ ಅವರೆಲ್ಲರೂ ಕಂದುಕರಡಿಯ ಮನೆ ತಲಪಿದಾಗ, ಅದರ ಆನಂದಕ್ಕೆ ಪಾರವೇ ಇರಲಿಲ್ಲ. ಅದನ್ನು ಕಂಡಾಗ ಆ ಕಷ್ಟದ ಮರುಯಾನದ ಆಯಾಸವೆಲ್ಲ ಮರೆಯಾಯಿತು.

ಅನಂತರ ಹಿಮವಂತ ಮತ್ತು ಪೆಂಗ್ವಿನ್ ತಮ್ಮ ಹಿಮಖಂಡಕ್ಕೆ ಹಿಂತಿರುಗಲು ತಯಾರಾದರು. ಅವರು ವಿದಾಯ ಹೇಳುತ್ತಾ ಸಮುದ್ರದ ನೀರಿಗೆ ಇಳಿಯುತ್ತಿದ್ದಂತೆ, ಕಂದುಕರಡಿ ಕೂಗಿ ಹೇಳಿತು, “ಇನ್ನೊಮ್ಮೆ ಇಲ್ಲಿಗೆ ಖಂಡಿತ ಬನ್ನಿ.”

"ಬಂದೇ ಬರುತ್ತೇವೆ. ಆದರೆ ನೀನು ಯಾವುದೋ ಬಿಸಿಕಡಲಿಗೆ ಹೋಗಿ ಸಿಕ್ಕಿ ಹಾಕಿಕೊಂಡರೆ ನಾವು ಅಲ್ಲಿಗೆ ಬರುವುದು ಕಷ್ಟವಾದೀತು” ಎಂದು ಕೂಗುತ್ತಾ ಹಿಮವಂತ ಪೋಲಾರ್ ಕರಡಿ ಗೆಳೆಯ ಪೆಂಗ್ವಿನ್ ಜೊತೆ ಉತ್ತರ ಧ್ರುವದತ್ತ ಜೋರಾಗಿ ಈಜತೊಡಗಿತು.

ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ