ಬಾಡದ ಹೂವುಗಳು- ಹಲವು ಆಸೆಗಳು...
ಪ್ರಪಂಚ ಸುಂದರವಾಗಿ ಸೃಷ್ಚಿಸಿಹನು ಆ ದೇವರು,
ಎಲ್ಲರೂ ಬದುಕುವ ಆಸೆಯನು ಹೊಂದಿಹರು,
ಮೊಳಕೆಯೊಡೆದು ಪುಟ್ಟಹೆಜ್ಜೆ
ಹಾಕುತ್ತಿರುವ ಚಿಗುರು,
ಚಿಗುರಿಗೂ ಆಸೆಯುಂಟು ಹಲವಾರು,
ಚಿಗುರು ಅರಳಲು ನೀರೆರೆದು ಪೋಷಿಸುವವರ್ಯಾರು...
ಬದುಕಿನಲ್ಲಿ ಅರಳಬೇಕಾಗಿರುವ ಮೊಗ್ಗುಗಳಿವರು,
ಅರಳಿದರೂ ಎಂದೂ ಬಾಡದವರು,
ಎಲ್ಲರಂತೆ ಬದುಕಿ ಬಾಳಬೇಕಾಗಿರುವವರು,
ಅರಳಿ ತಮ್ಮ ಘಮವ ಲೋಕಕೆ ಪಸರಿಸುವವರು...
ಏಳು-ಬೀಳಿನ ಕಷ್ಟದ ಬದುಕಿನಲಿ ಬಳಲಿ ಬದುಕುತ್ತಿರುವವರು,
ಹೊತ್ತಿನ ಕೂಳಿಗೂ ಪರದಾಡುವವರು,
ಇವರತ್ತ ಗಮನಕೊಡುವವರ್ಯಾರು,
ತಮ್ಮ ನೋವನು ತಮ್ಮಲ್ಲಿಯೇ ಅರಗಿಸಿಕೊಂಡವರು,
ಬದುಕಿಗೆ ಭರವಸೆಯ ತುಂಬಿಕೊಂಡವರು..
ಕಿರುನಗೆಯ ಹೊರಸೂಸಿ ಮಧುರ ಮಾತುಗಳನಾಡುವವರು,
ಮನವ ಗೆದ್ದು ಹೃದಯದಲ್ಲಿ ನೆಲೆಸಿರುವವರು,
ಭಾವನೆಗಳೊಂದಿಗೆ ಪ್ರೀತಿಯ ಸಂಬಂಧಗಳ ಬೆಸೆಯುವವರು...
ನಂಬಿದವರ ಬದುಕಿಗೆ ಆಸರೆಯಾಗಿರುವವರು,
ಕಂಬನಿಗಳೊರೆಸುತಾ ತುತ್ತು ತಿನ್ನುತ್ತಾ ಸಾಗುತಿಹರು,
ಎಂದೂ ಬಾಡದ ಅರಳಿರುವ ಹೂಗಳಿವರು...
-ಶಾಂತಾರಾಮ ಶಿರಸಿ, ಉತ್ತರ ಕನ್ನಡ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
