ಬಾಣಂತಿ, ಮಕ್ಕಳ ಜೀವಕ್ಕೆ ಸರ್ಕಾರ ಆಸರೆಯಾಗಲಿ
ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸತತ ಸಾವಿನ ಪ್ರಕರಣ ರಾಜ್ಯದ ಆರೋಗ್ಯ ವ್ಯವಸ್ಥೆಯ ಲೋಪಗಳನ್ನು ಮತ್ತೆ ಬೆಳಕಿಗೆ ತಂದಿದೆ. ಕಳೆದ ೨೫ ದಿನಗಳಲ್ಲಿ ಈ ಆಸ್ಪತ್ರೆಯೊಂದರಲ್ಲೇ ೫ ಬಾಣಂತಿಯರು ಸಾವನ್ನಪ್ಪಿದ್ದಾರೆ. ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಯರಿಗೆ ನೀಡಿದ್ದ ರಿಂಗರ್ ಲ್ಯಾಕ್ಟೇಟ್ ದ್ರಾವಣದಿಂದ ನಾನಾ ಆರೋಗ್ಯ ಸಮಸ್ಯೆ ಕಂಡುಬಂದು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ. ಹಾಗೆಂದು ಈ ಪ್ರಕರಣ ಬಳ್ಳಾರಿಗೆ ಸೀಮಿತವಲ್ಲ. ಈ ವರ್ಷ ರಾಜ್ಯವ್ಯಾಪಿ ಸರ್ಕಾರಿ ಆಸ್ಪತ್ರೆಗಳಲ್ಲಿ ೩೨೮ ಬಾಣಂತಿಯರು, ೧೧೧ ನವಜಾತ ಶಿಶುಗಳ ಸಾವು ಸಂಭವಿಸಿದೆ ಎಂದು ಸರ್ಕಾರವೇ ಹೇಳಿದೆ. ಈ ಅಂಕಿ ಅಂಶಗಳು ಜನಸಾಮಾನ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಖಚಿತಪಡಿಸುವ ಸರ್ಕಾರದ ಉದ್ದೇಶವನ್ನೇ ಅಣಕಿಸುವಂತಿದೆ.
ಬಳ್ಳಾರಿ ಘಟನೆಯ ಹಿಂದೆ ಕೋಲ್ಕತ್ತಾ ಕಂಪೆನಿ ಪೂರೈಸಿದ ಕಳಪೆ ಔಷಧ ಕೈವಾಡ ಕಂಡು ಬರುತ್ತಿದೆ. ಈ ಕಂಪೆನಿ ಪೂರೈಸಿದ ೭೨ ಸ್ಯಾಂಪಲ್ ಗಳ ಪೈಕಿ ೩೨ ಕಳಪೆ ಎಂಬುದು ಕಂಡು ಬಂದಿದೆ. ಈ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದರೂ ಅದರಿಂದ ಔಷಧ ಖರೀದಿ ಮುಂದುವರೆದಿತ್ತು ಎಂಬ ಆರೋಪವಿದೆ. ಇದು ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಉದಾಹರಣೆ. ಈ ಪ್ರಕರಣ ಸಂಬಂಧ ಓರ್ವ ಔಷಧ ನಿಯಂತ್ರಕರ ಅಮಾನತು ಮಾಡಿರುವ ಸರ್ಕಾರ, ತನಿಖೆಗೆ ಸಮಿತಿ ರಚಿಸಿದೆ.
ಆಸ್ಪತ್ರೆಗಳಿಗೆ ಔಷಧ ಪೂರೈಕೆ ಮಾಡುವ ನಿಗಮದ ಹೊಣೆಗಾರಿಕೆ ಅತ್ಯಂತ ಹೆಚ್ಚಿರುತ್ತದೆ. ಈ ಔಷಧ ಸರಬರಾಜು ನಿಗಮಕ್ಕೂ ಕಾಯಕಲ್ಪ ನೀಡುವ ಅಗತ್ಯ ಇದೆ. ಇನ್ನಷ್ಟು ಪರಿಣಾಮಕಾರಿಯಾಗಿ ಔಷಧ ಗುಣಮಟ್ಟ ಹಾಗೂ ಉತ್ಪಾದನೆ ಕುರಿತಂತೆ ಪರಿಶೀಲನೆ ಆಗಬೇಕಿದೆ. ಅಲ್ಲದೆ ಔಷಧ ಪೂರೈಕೆ ಟೆಂಡರ್ ಗಳಲ್ಲಿ ಪ್ರತಿಷ್ಟಿತ, ನಂಬಿಕೆಗೆ ಅರ್ಹವಾದ ಕಂಪೆನಿಗಳು ಹೆಚ್ಚು ಭಾಗವಹಿಸುವಂತೆ ನಿಯಮಗಳಲ್ಲಿ ತಿದ್ದುಪಡಿ ತರಬೇಕಿದೆ. ಆಗ ಮಾತ್ರ ಜೀವ ಉಳಿಸಬೇಕಾದ ಔಷಧಗಳಿಂದಲೇ ರೋಗಿಗಳು ಸಾವನ್ನಪ್ಪುವ ಪ್ರಕರಣಗಳು ತಪ್ಪುತ್ತವೆ.
ಪ್ರತಿ ದುರ್ಘಟನೆ ನಡೆದಾಗಲೂ ವ್ಯವಸ್ಥೆಯ ಲೋಪ ಸರಿಪಡಿಸುವ ಬದಲು ತಕ್ಷಣದ ಪರಿಹಾರ, ಮುಖ ಉಳಿಸುವ ಕೆಲಸಕ್ಕೆ ಸರ್ಕಾರಗಳು ಮುಂದಾಗುತ್ತಿರುವುದೇ ಇಂಥ ಘಟನೆಗಳು ಮರುಕಳಿಸಲು ಕಾರಣ. ಔಷಧ ವಲಯದ ಲಾಬಿಯ ಕುರಿತು ಯಾರಿಗೂ ಹೇಳಬೇಕಾದಿಲ್ಲ. ಆದರೆ ಜೀವ ರಕ್ಷಣೆಯ ವಿಷಯದಲ್ಲೂ ಇಂಥ ನಿರ್ಲಕ್ಷ್ಯ, ಭ್ರಷ್ಟಾಚಾರ ಹೇಗೆ ಒಪ್ಪಲು ಸಾಧ್ಯ? ಹೀಗಾಗಿ ಸರ್ಕಾರ ಸಮಸ್ಯೆಯ ಮೂಲ ಪತ್ತೆ ಹಚ್ಚಿ ಸರ್ಕಾರಿ ಆಸ್ಪತ್ರೆಗಳು ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಜೀವದಾನದ ಕೇಂದ್ರವಾಗುವಂತೆ ಮಾಡುವಲ್ಲಿ ಗಮನ ಹರಿಸಬೇಕು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೭-೧೨-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ