ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 1)

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 1)

ಈ ಬಾರಿ ಜತೆಗೆ ಯಾರೂ ಇರಲಿಲ್ಲ. ಗಣೇಶ್ ಟ್ರಾವೆಲ್ಸ್ ನಲ್ಲಿ ಪ್ರಯಾಣಿಸಿ ಬಾದಾಮಿ ತಲುಪಿದಾಗ ನನ್ನ ಸಾಹಿತ್ಯದ ಅಭಿಮಾನಿ ಕಿರಿಯ ಸ್ನೇಹಿತ ಶಶಿಕಾಂತ ಗೌಡರ್ ನನಗಾಗಿ ಕಾಯುತ್ತಿದ್ದರು. ಅವರನ್ನು ಮೊದಲೇ ಸಂಪರ್ಕಿಸಿ ಉಳಕೊಳ್ಳುವ ಹೋಟೆಲ್ ಮತ್ತು ಸುತ್ತಾಟಕ್ಕೆ ಕಾರಿನ ವ್ಯವಸ್ಥೆಯನ್ನು ನಾನು ಮೊದಲೇ ಮಾಡಿಕೊಂಡಿದ್ದೆ. ಮೊದಲಿಗೆ ಶಶಿಕಾಂತ್ ಅವರ ಮನೆಗೆ ಹೋಗಿ ಅವರ ತಾಯಿ ಎಲ್ಲಮ್ಮ, ತಮ್ಮಂದಿರಾದ  ಹಣಮಂತ ಮತ್ತು ರವಿ, ಅವರ ಪತ್ನಿಯರಾದ ಸುರೇಖಾ ಮತ್ತು ಸುನೀತಾರನ್ನು ಭೇಟಿಯಾಗಿ , ಅವರ ಆದರಾತಿಥ್ಯವನ್ನು ಸವಿದೆ. ಸ್ಥಳಗಳನ್ನು ನೋಡಲು ಹೋಗುವಾಗ ನನ್ನ ಜತೆಗೆ ಶಶಿಕಾಂತ್, ಅವರ ತಾಯಿ ಮತ್ತು ತಮ್ಮನ ಮಗಳು ಪುಟ್ಟ ಶ್ರೀರಕ್ಷಾ ಕೂಡಾ ಬಂದರು.

ಬಾದಾಮಿಗೆ ಹಿಂದೆ 'ವಾತಾಪಿ' ಅನ್ನುವ ಹೆಸರಿತ್ತು

ಬಾದಾಮಿಗೆ ಹೋಗುವುದಕ್ಕೆ ಮೊದಲೇ ಅಲ್ಲಿನ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅಲ್ಪ- ಸ್ವಲ್ಪ ಓದಿಕೊಂಡಿದ್ದೆ. ಬಾದಾಮಿಗೆ ಹಿಂದೆ 'ವಾತಾಪಿ' ಅನ್ನುವ ಹೆಸರಿತ್ತು. ಇದರ ಹಿಂದೆ ಒಂದು ಕಥೆಯಿದೆ.  ಹಿಂದೆ ವಾತಾಪಿ ಮತ್ತು ಇಲವಲ ಎಂಬ ಇಬ್ಬರು ರಾಕ್ಷಸರಿದ್ದರಂತೆ.  ಇಲವಲ ಅಣ್ಣನಿಗೆ ಮನುಷ್ಯರನ್ನು ಹಿಡಿದು ಅಹಾರವಾಗಿ ತರುತ್ತಿದ್ದನಂತೆ. ವಾತಾಪಿ ಅವರ ಹೊಟ್ಟೆಯೊಳ ಹೊಕ್ಕು     ಹೊಟ್ಟೆಯನ್ನು   ಸೀಳಿ ಹೊರಗೆ   ಬಂದ ನಂತರ  ಅವರನ್ನು ತಿನ್ನುತ್ತಿದ್ದನಂತೆ.     ಒಮ್ಮೆ  ಅಗಸ್ತ್ಯ ಮಹರ್ಷಿಗಳು ಅ ದಾರಿಯಾಗಿ ಬಂದರಂತೆ.  ವಾತಾಪಿಯು  ತಮ್ಮ ಹೊಟ್ಟೆಯೊಳಗೆ ಹೊಕ್ಕ ಕೂಡಲೇ   ಅವರು  ಹೊಟ್ಟೆಯ ಮೇಲೆ ಕೈಯಾಡಿಸುತ್ತ    'ವಾತಾಪಿ ಜೀರ್ಣೋದ್ಭವ' ಅಂದರಂತೆ. ವಾತಾಪಿ ಹೊಟ್ಟೆಯೊಳಗೆಯೇ ಸತ್ತು ಹೋದನಂತೆ. ಮಹರ್ಷಿಗಳು ಅಣ್ಣ-ತಮ್ಮ ಇಬ್ಬರನ್ನೂ ಅಕ್ಕಪಕ್ಕ ಇರುವ ಎರಡು ಪರ್ವತಗಳನ್ನಾಗಿ ಪರಿವರ್ತಿಸಿದರಂತೆ.

ಹೀಗೆ ಬಾದಾಮಿಯು  ಪ್ರಾಕೃತಿಕ ರಕ್ಷಣೆಗಳನ್ನೊದಗಿಸುವ   ಎರಡು ಬೃಹತ್ ಕೆಂಪು ಮರಳುಕಲ್ಲಿನ ಬೆಟ್ಟಗಳ  ನಡುವೆ ಮಲಪ್ರಭಾ ಕಣಿವೆಯಲ್ಲಿ ನದಿಗಿಂತ ತುಸು ದೂರದಲ್ಲಿದೆ.   ಅಲ್ಲಿ  ಪೂರ್ವ ಶಿಲಾಯುಗದಿಂದ ಹಿಡಿದು ಬೃಹತ್ ಶಿಲಾಯುಗದ ತನಕದ ಒಂದಷ್ಟು ಇತಿಹಾಸ ಪೂರ್ವದ ಪ್ರದೇಶಗಳಿವೆ. ಇತಿಹಾಸದ ಆರಂಭ ಕಾಲದಲ್ಲಿ ಈ ಪ್ರದೇಶವು ಮಯೂರ ಅರಸರ ವಶದಲ್ಲೂ ನಂತರ ಶಾತವಾಹನರ ವಶದಲ್ಲೂ  ಇದ್ದು ಕೊನೆಗೆ ಕದಂಬರ ವಶಕ್ಕೂ ಬಂದಿತೆಂದು ಹೇಳಲಾಗಿದೆ.

ಪ್ರಾಕೃತಿಕ ಸೌಂದರ್ಯ, ಹೆಮ್ಮೆಯಿಂದ ತಲೆಯೆತ್ತಿ ನಿಂತಿರುವ ಎತ್ತರದ ಬೆಟ್ಟ ಸಾಲುಗಳು, ಪಶ್ಚಿಮದ ಚಾಲುಕ್ಯರ ವಂಶವನ್ನು ಸ್ಥಾಪಿಸಿದವನು ಒಂದನೆಯ ಪುಲಿಕೇಶಿ. ಅಲ್ಲಿನ ಪ್ರಾಕೃತಿಕ ಸೌಂದರ್ಯ, ಹೆಮ್ಮೆಯಿಂದ ತಲೆಯೆತ್ತಿ ನಿಂತಿರುವ ಎತ್ತರದ ಬೆಟ್ಟ ಸಾಲುಗಳು, ಸಮೃದ್ಧ ನೀರಿನ ಮೂಲಗಳಿಂದ ಆಕರ್ಷಿತನಾಗಿ   ಆತ ಅದರ ಸುತ್ತ ಭದ್ರವಾದ ಕೋಟೆ ಕಟ್ಟಿ ಕ್ರಿ.ಶ.೫೪೩ರಲ್ಲಿ  ಅದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ. ಈ ಶಕ್ತಿಯುತ ರಾಜವಂಶವು ಬಾದಾಮಿಯನ್ನು ಕ್ರಿ.ಶ.೫೪೩-೭೫೭ರ ತನಕ ಎರಡು ಶತಮಾನಗಳ ತನಕ ಆಳಿತು. ಆರಂಭದ ರಾಜರಲ್ಲಿ ಯಶಸ್ವಿಯಾಗಿ ರಾಜ್ಯಭಾರ ಮಾಡಿದವರು ಒಂದನೇ ಕೀರ್ತಿವರ್ಮ ಮತ್ತು ಎರಡನೇ ಪುಲಿಕೇಶಿ. ಅವರ ಕಾಲದಲ್ಲಿ ರಾಜ್ಯವು ಹೆಚ್ಚುಕಡಿಮೆ ಇಡೀ ದಕ್ಷಿಣಭಾರತದಾದ್ಯಂತ ವಿಸ್ತರಿಸಿಕೊಂಡಿತು. ನಡುವೆ ಪಲ್ಲವರಿಂದ ಆಕ್ರಮಿತವಾಗಿ ಸುಮಾರು ೧೨ ವರ್ಷಗಳ ಕಾಲ ಹಿಂದೆ ಸರಿದರೂ ಒಂದನೆಯ ವಿಕ್ರಮಾದಿತ್ಯನಿಂದ ಮರುಸ್ಥಾಪನೆಗೊಂಡು ತನ್ನ ವೈಭವವನ್ನು ಮತ್ತೆ ಮರಳಿ ಪಡೆಯಿತು. ಎರಡನೇ ಕೀರ್ತಿವರ್ಮನ ಕಾಲದಲ್ಲಿ ಅಭಿವೃದ್ಧಿಯ ಶಿಖರವೇರಿ ಕೊನೆಗೆ  ರಾಷ್ಟ್ರಕೂಟ ವಂಶದ ರಾಜರಿಂದ ಸೋಲಿಸಲ್ಪಟ್ಟು ಪತನ ಹೊಂದಿತು. ರಾಷ್ಟ್ರಕೂಟರ ನಂತರ ಬಾದಾಮಿಯು ಕಲ್ಯಾಣದ ಚಾಲುಕ್ಯರು, ಸೇವುಣರು, ಯಾದವರು , ವಿಜಯನಗರದ ಅರಸರು, ಮತ್ತು ಮರಾಠರಿಂದ  ಆಳಲ್ಪಟ್ಟು ಕೊನೆಗೆ ಬ್ರಿಟಿಷರ ವಶವಾಯಿತು. ರಾಜಕೀಯ ಸುಸ್ಥಿರತೆ,  ಭೌತಿಕ ಸಂಪತ್ತು,ಪ್ರಶಾಂತ ವಾತಾವರಣ  ಹಾಗೂ ಧಾರ್ಮಿಕ ಸಹಿಷ್ಣುತೆಗಳಿಂದಾಗಿ ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಆಡಳಿತ ಮೊದಲಾದ ಹಲವು ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಸಾಧಿಸಲು  ಅವರಿಗೆ ಸಾಧ್ಯವಾಯಿತು. ಬಾದಾಮಿ-ಪಟ್ಟದಕಲ್ಲು-ಐಹೊಳೆಗಳು ಇಡಿಯ ದಕ್ಷಿಣ ಭಾರತದ ಸಂದರ್ಭದಲ್ಲೇ ವಾಸ್ತುಶಿಲ್ಪದ ಕೇಂದ್ರಗಳಾದವು. ಬೃಹತ್ ಮರಳುಗಲ್ಲುಗಳಿಂದ ಮೂರ್ತಿಗಳನ್ನೂ ಪ್ರತಿಮೆಗಳನ್ನೂ ಕೆತ್ತಿ   ಅಲ್ಲಲ್ಲಿ ಮಂದಿರಗಳನ್ನು  ಅವರು ನಿರ್ಮಿಸಿದರು.  ಸಾವಿರಾರು ಮೂರ್ತಿಗಳು  ಸುಲ್ತಾನರ ಅಕ್ರಮಣದ ಕಾಲದಲ್ಲಿ ಸೈನಿಕರಿಂದ  ವಿನಾಶಕ್ಕೊಳಗಾದರೂ ಇನ್ನೂ ಆ ಸ್ಮಾರಕಗಳ ವೈಭವಕ್ಕೆ ಏನೂ ಕಮ್ಮಿಯಾಗಿಲ್ಲ ಅನ್ನುವುದೇ ಅವುಗಳ  ಗಟ್ಟಿತನವನ್ನು ಸಾರಿ ಹೇಳುತ್ತದೆ.
‌‌ನಾವು ಬೆಳಗ್ಗೆ ಎಂಟು ಗಂಟೆಗೆ ನಮ್ಮ ಸುತ್ತಾಟವನ್ನು ಆರಂಭಿಸಿದೆವು. ಕಾರಿನ ಚಾಲಕ ಮಂಜುನಾಥ್ ನಮ್ಮನ್ನು ಮೊದಲು ಕರೆದುಕೊಂಡು ಹೋಗಿದ್ದು ಬಾದಾಮಿ ಗುಹಾಂತರ್ದೇವಾಲಯ ಸಮುಚ್ಛಯಕ್ಕೆ.  ಇವುಗಳನ್ನು ಮೇ(ಗ)ಣ ಬಸದಿಗಳೆಂದು ಕರೆಯುತ್ತಾರೆ.  ಆಗಿನ ಕಾಲದಲ್ಲಿ ಜೈನ ಹಾಗೂ ಬೌದ್ಧ ಸಂಚಾರಿ ಸನ್ಯಾಸಿಗಳು ಅಲ್ಲಿಗೆ ಬಂದರೆ ಪರಧರ್ಮ ಸಹಿಷ್ಣುಗಳಾದ ಚಾಲುಕ್ಯ ದೊರೆಗಳು ಅವರ ವಾಸ್ತವ್ಯಕ್ಕಾಗಿ ಜಪ ತಪ ಸ್ನಾನಾದಿಗಳಿಗೆ ಅನುಕೂಲಕರವಾದ  ನಿಸರ್ಗದ ಮಡಿಲಲ್ಲಿರುವ ಈ ಗುಹಾಂತರ ದೇವಾಲಯಗಳಲ್ಲೇ ವ್ಯವಸ್ಥೆ ಮಾಡಿ ಕೊಡುತ್ತಿದ್ದರಂತೆ.

ಅಖಂಡವಾದ ಬೆಟ್ಟವನ್ನು ಕೊರೆದು ಮಾಡಿ  ದೇವಾಲಯ ಗುಹಾ ದೇವಾಲಯ: ಇಲ್ಲಿರುವ ಕೋಟೆಯ ಬುಡದಲ್ಲಿರುವ ಈ ನಾಲ್ಕು ಗುಹಾ ದೇವಾಲಯಗಳು ಅಖಂಡವಾದ ಬೆಟ್ಟವನ್ನು ಕೊರೆದು ಮಾಡಿದಂಥವು. ಇವು ನಾಲ್ಕು ಹಂತಗಳಲ್ಲಿ ಎತ್ತರೆತ್ತರಕ್ಕೆ ಹೋಗುತ್ತವೆ. ಒಂದನೇ ಗುಹಾದೇವಾಲಯಕ್ಕೆ ಐವತ್ತಕ್ಕೂ ಹೆಚ್ಚು ಮೆಟ್ಟಲುಗಳನ್ನು ಹತ್ತಿ ಹೋಗಬೇಕು.  ಇದರ ಪಶ್ಚಿಮ ಗೋಡೆಯ ಮೇಲೆ ೧೮ ಕೈಗಳನ್ನು ಹೊಂದಿದ ಶಿವನು ಮೇಲಿನ ಎರಡು ಕೈಗಳಲ್ಲಿ ಸರ್ಪವನ್ನೂ ಉಳಿದ ಕೈಗಳಲ್ಲಿ ಡಮರು, ಜಪಮಣಿ, ಪಾಶ, ತ್ರಿಶೂಲ ಇತ್ಯಾದಿಗಳನ್ನು  ಹಿಡಿದು ನೃತ್ಯ ಮಾಡುವ, ಸುಂದರ ಕೇಶ ವಿನ್ಯಾಸ ಹೊಂದಿರುವ ನಗುಮುಖದ ಶಿವ. ಈ ದೇವಾಲಯದ ಗೋಡೆಗಳಲ್ಲಿ ಹದಿನೆಂಟು ಕೈಗಳಿರುವ ಮಹಿಷ ಮರ್ದಿನಿ,  ಅರ್ಧ ನಾರೀಶ್ವರ ಮತ್ತು ಹರಿಹರರ ಮೂರ್ತಿಗಳೂ ಇವೆ. ನಡು ಮಧ್ಯೆ ಹಿಂಭಾಗದಲ್ಲಿರುವ ಗರ್ಭಗುಡಿಯಲ್ಲಿ ಶಿವಲಿಂಗವೂ ಇದೆ. ಎರಡನೇ ಗುಹಾಲಯಕ್ಕೆ ಹೋಗಬೇಕಾದರೆ ಪುನಃ ಮೆಟ್ಟಲುಗಳನ್ನು ಹತ್ತಬೇಕು. ಇಲ್ಲಿರುವುದು ವೈಷ್ಣವ ದೇವಾಲಯ . ಇಲ್ಲಿ ವಿಷ್ಣುವಿನ ಅವತಾರಗಳಾದ ತ್ರಿವಿಕ್ರಮ, ಭೂವರಾಹ, ಮತ್ಸ್ಯ ಯಂತ್ರ ಮತ್ತು ಸ್ವಸ್ತಿಕಗಳ ಶಿಲ್ಪಗಳಿವೆ.  ಗರ್ಭಗೃಹದಲ್ಲಿ ಯಾವುದೇ ಮೂರ್ತಿಯಿಲ್ಲ. ಮೂರನೆಯ ಗುಹಾಲಯವನ್ನು ಕ್ರಿ.ಶ.೫೭೮ರಲ್ಲಿ ವಾಸ್ತುಶಿಲ್ಪದ ಪಿತಾಮಹನೆನಿಸಿದ ಮಂಗಳೇಶನು  ಕೊರೆದು ಅದನ್ನು ತನ್ನ ಅಣ್ಣನಾದ ಒಂದನೆಯ ಕೀರ್ತಿವರ್ಮನಿಗೆ ಕೊಡುಗೆಯಾಗಿ ನೀಡಿದನಂತೆ. ಇಲ್ಲಿ ಹಿರಣ್ಯಕಶಿಪುವನ್ನು ಸಂಹಾರ ಮಾಡಿ ಅಟ್ಟಹಾಸಗೈದ ನರಸಿಂಹನು ಅಲಂಕೃತನಾಗಿ ಕುಳಿತಿದ್ದಾನೆ. ಅವನ ಪಕ್ಕದಲ್ಲಿ ಪ್ರಹ್ಲಾದ ಮತ್ತು ಮಾನವ ರೂಪಿ ಗರುಡನೂ ಇದ್ದಾರೆ. ಇನ್ನೊಂದು ಬದಿಯಲ್ಲಿ ಆದಿಶೇಷನ ಮೇಲೆ ವಿರಾಜಮಾನನಾಗಿರುವ ಮಹಾವಿಷ್ಣು , ಲಕ್ಷ್ಮಿ ದೇವಿ ಮತ್ತು ಗರುಡರಿದ್ದಾರೆ. ಇಲ್ಲಿ ಮೊಗಸಾಲೆಯಲ್ಲಿ ಶಿಲ್ಪ ಸೌಂದರ್ಯದಿಂದ ತುಂಬಿರುವ ಆರು ದಪ್ಪನೆಯ ಕಂಬಗಳಿವೆ‌. ನಡುವಿನ ಅಂಕಣದಲ್ಲಿ ವಿಷ್ಣುವಿನ ಮೂರ್ತಿಯೂ ಇದೆ.  ನಾಲ್ಕನೆಯ ಗುಹೆಗೆ ಹೋಗಲು ಹೆಚ್ಚು ಮೆಟ್ಟಲುಗಳಿಲ್ಲ. ನಾಲ್ಕನೇಯದು ಜೈನ ಗುಹಾಲಯ.  ಇಲ್ಲಿ ಪಾರ್ಶ್ವ ನಾಥ, ಬಾಹುಬಲಿಗಳ ಮೂರ್ತಿಗಳಲ್ಲದೆ ಗರ್ಭಗೃಹದಲ್ಲಿ ೨೪ನೆಯ ತೀರ್ಥಂಕರನಾದ ಮಹಾವೀರನಿದ್ದಾನೆ.  ಮೂರನೆಯ ಮತ್ತು ನಾಲ್ಕನೆಯ ಗುಹೆಗಳ ಮಧ್ಯೆ ಒಂದು ಬೌದ್ಧ ಶಿಲ್ಪವಿದೆ. ಅಲ್ಲೇ ಪಕ್ಕದಲ್ಲಿ ಮೇಲೆ ನುಸುಳಿ ಹೋಗಬಹುದಾದ ಚಿಕ್ಕ ಬಾಗಿಲಿದೆ. ಕೋಟೆಯ ಮೇಲ್ಭಾಗದಲ್ಲಿರುವ ತೋಫುಖಾನೆಗೆ ಹೋಗುವ ದಾರಿ ಇದು.
ಮೂರನೇ ಮತ್ತು ನಾಲ್ಕನೆಯ ಗುಹಾದೇವಾಲಯಗಳ ಮುಂಭಾಗದಲ್ಲಿ ಕೆಳಗೆ ವಿಶಾಲವಾದ ಅಗಸ್ತ್ಯ ಸರೋವರವಿದೆ.  ಅದರ ಸುತ್ತ ದಂಡೆಯನ್ನು ಕಟ್ಟಲಾಗಿದೆ.  ಸರೋವರದ ಉತ್ತರ ಭಾಗದಲ್ಲಿ ಗುಹಾದೇವಾಲಯಗಳ ಎದುರು ಭಾಗದಲ್ಲಿ ಅನತಿ ದೂರದಲ್ಲಿ ಮೆಟ್ಟಲುಗಳನ್ನು ಹತ್ತಿ  ಹೋದರೆ    ಭೂತ ನಾಥ ಗುಡಿ ಮತ್ತು  ಪ್ರಾಚ್ಯ    ವಸ್ತು ಸಂಗ್ರಹಾಲಯಗಳಿವೆ. ಇಲ್ಲಿ ಸುಮಾರು ೧೮೧ ಪ್ರಾಚ್ಯ ವಸ್ತುಗಳು   ಶಿಲ್ಪಗಳು, ಕೆತ್ತನೆಗಳು ಮತ್ತು ಶಾಸನಗಳಿವೆ. ಇದನ್ನು ೧೯೮೨ರಲ್ಲಿ ಸ್ಥಾಪಿಸಲಾಯಿತಂತೆ.  ಬಾದಾಮಿಯ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯ ಒಳನೋಟವು ನಮಗೆ ಇಲ್ಲಿ ಸಿಗುತ್ತದೆ. ವಸ್ತು ಸಂಗ್ರಹಾಲಯದಲ್ಲಿ ನಾಲ್ಕು  ಗ್ಯಾಲರಿಗಳಿವೆ. ಮತ್ತು ಅವುಗಳ ಸುತ್ತಲೂ ಒಂದು ತೆರೆದ ಗ್ಯಾಲರಿ ಇದೆ. ಗ್ಯಾಲರಿಗಳಲ್ಲಿ ಚಾಲುಕ್ಯ ಕಲಾಕೃತಿಗಳು ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿವೆ.  ಇನ್ನೊಂದು ಬದಿಯಲ್ಲಿ ಹೊಂಕದಕಟ್ಟೆ ಆಂಜನೇಯ ಮತ್ತು  ಮಲ್ಲಿಕಾರ್ಜುನ ಗುಡಿಗಳಿವೆ.

(ಇನ್ನೂ ಇದೆ)

ಚಿತ್ರ - ಬರಹ : ಪಾರ್ವತಿ ಜಿ ಐತಾಳ್, ಬೆಂಗಳೂರು