ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 2)

ಚೊಳಚಗುಡ್ಡದ ಸಮೀಪ ತಿಲಕಾರಣ್ಯದ ನಡುವೆ ಇದೆ, ಗುಹಾ ದೇವಾಲಯ: ಗುಹಾ ದೇವಾಲಯಗಳನ್ನು ನೋಡಿದ ನಂತರ ನಾವು ಬಾದಾಮಿಯ ಪ್ರಸಿದ್ಧ ಬನಶಂಕರಿ ದೇವಸ್ಥಾನಕ್ಕೆ ಹೋದೆವು. ಅದು ಚೊಳಚಗುಡ್ಡದ ಸಮೀಪ ತಿಲಕಾರಣ್ಯದ ನಡುವೆ ಇದೆ. ಆದ್ದರಿಂದ ಇದಕ್ಕೆ ಶಾಕಾಂಬರಿ ಮತ್ತು ವನಶಂಕರಿ ಎಂಬ ಹೆಸರುಗಳೂ ಇವೆ. ಶಾಕಾಂಬರಿ ಎಂದರೆ ಪಾರ್ವತಿಯ ಅವತಾರ.
ಮೂಲ ದೇವಾಲಯವನ್ನು ೭ನೇ ಶತಮಾನದಲ್ಲಿ ಚಾಲುಕ್ಯ ರಾಜ ಒಂದನೆಯ ಜಗದೇಕಮಲ್ಲನು ಕಟ್ಟಿಸಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಶಾಸನಗಳು ಹೇಳುತ್ತವೆ. ಚಾಲುಕ್ಯರಿಗಿಂತ ಮೊದಲೇ ಈ ದೇವಸ್ಥಾನವು ಅಸ್ತಿತ್ವದಲ್ಲಿತ್ತು ಎಂದೂ ಅಗ ಅಲ್ಲಿ ವೈಷ್ಣವ, ಶೈವ, ಜೈನ ಮತ್ತು ಶಾಕ್ತ ಪಂಥದವರಿಗೆ ಸಮಾನ ಅವಕಾಶವಿತ್ತೆಂದೂ ಪ್ರತೀತಿ ಇದೆ. ಶಾಕಾಂಬರಿ ಅವರ ಕುಲದೇವತೆ. ಇದು ಒಂದು ಶಕ್ತಿಪೀಠವೂ ಹೌದು. ಸ್ಥಳೀಯರು ಶಾಕಾಂಬರಿಯನ್ನು ಬಾಲವ್ವ, ಸುಂಕವ್ವ, ಶಿರವಂತಿ, ಚೌಡಮ್ಮ, ವನದುರ್ಗೆ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಬನಶಂಕರಿ ದುರ್ಗೆಯ ಆರನೇ ಅವತಾರ. ದೇಗುಲದ ಪ್ರವೆಶದ್ವಾರದ ಒಳಗಡೆ ಹೋದರೆ ಎರಡೂ ಬದಿಗಳಲ್ಲಿ ದೀಪಸ್ತಂಭಗಳಿವೆ.
ಪ್ರಾರಂಭದಲ್ಲಿ ದೇವಸ್ಥಾನದ ವಾಸ್ತು ದ್ರಾವಿಡ ಶೈಲಿಯಲ್ಲಿತ್ತಂತೆ. ಪುನರ್ನಿರ್ಮಾಣ ಮಾಡಿದಾಗ ವಿಜಯನಗರ ಶೈಲಿಯನ್ನು ಅನುಸರಿಸಲಾಯಿತು.ಈಗ ದೇವಾಲಯದ ನಾಲ್ಕೂ ಬದಿಗಳಲ್ಲಿ ಎತ್ತರವಾದ ಗೋಡೆಗಳಿವೆ. ಎದುರು ಮುಖ್ಯಭಾಗದಲ್ಲಿ ಒಂದು ಮುಖಮಂಟಪ, ಗರ್ಭಗುಡಿಯ ಮುಂದೆ ಒಂದು ಅರ್ಧಮಂಟಪ, ಮತ್ತು ಗರ್ಭಗುಡಿಯ ಮೇಲ್ಭಾಗದಲ್ಲಿ ಒಂದು ವಿಮಾನವಿದೆ. ಗರ್ಭಗೃಹದ ಒಳಗೆ ಬನಶಂಕರಿಯು ಸಿಂಹವಾಹಿನಿಯಾಗಿ ಕಾಲಕೆಳಗೆ ರಾಕ್ಷಸನನ್ನು ತುಳಿಯುತ್ತಿರುವ ಭಂಗಿಯ ಕಪ್ಪು ಶಿಲೆಯ ಮೂರ್ತಿಯಿದೆ. ದೇವಿಗೆ ಎಂಟು ಕೈಗಳಿವೆ.ಆ ಕೈಗಳಲ್ಲಿ ತ್ರಿಶೂಲ, ಡಮರು, ಕಪಾಲಪಾತ್ರ, ಘಂಟೆ, ವೇದಗ್ರಂಥ, ಖಡ್ಗ, ಖೇಟ, ಮತ್ತು ಕಪಾಲಗಳಿವೆ. ಬನಶಂಕರಿ ಚಾಲುಕ್ಯರ ಕುಲದೇವತೆ ಮಾತ್ರವಲ್ಲದೆ ದೇವಾಂಗ ಸಮುದಾಯ ಮತ್ತು ದೇಶಸ್ಥ ಬ್ರಾಹ್ಮಣರ ಕುಲದೇವತೆಯೂ ಹೌದು.
ದೇವಸ್ಥಾನದ ಪ್ರವೇಶ ದ್ವಾರದ ಹೊರಗಡೆ ಮುಂಭಾಗದಲ್ಲಿ ೩೬೦ ಅಡಿ ಚೌಕದ ಒಂದು ಪುಷ್ಕರಣಿ ಇದೆ. ಅದನ್ನು ಸ್ಥಳೀಯರು ಹರಿದ್ರಾತೀರ್ಥ ಅನ್ನುತ್ತಾರೆ. ನಿಜವಾಗಿಯೂ ಅದು ಹರಿಶ್ಚಂದ್ರ ತೀರ್ಥದ ಅಪಭ್ರಂಶ. ಪುಷ್ಕರಣಿಯ ಮೂರು ಬದಿಗಳಲ್ಲಿ ಕಲ್ಲುಮಂಟಪಗಳಿವೆ. ಸುತ್ತಲೂ ಪ್ರದಕ್ಷಿಣಾ ಪಥವೂ ಇದೆ. ಪಶ್ಚಿಮ ದಡದಲ್ಲಿ ದೀಪಸ್ತಂಭಗಳಿವೆ. ಇದೊಂದು ರೀತಿಯ ರಕ್ಷಣಾ ಗೋಪುರವೂ ಹೌದು. ಇದು ವಿಜಯನಗರದ ಕಾಲದಲ್ಲಿ ಮಾಡಿದ ಹಿಂದೂ- ಇಸ್ಲಾಮಿಕ್ ವಾಸ್ತುಶೈಲಿಯ ಸಮ್ಮಿಶ್ರಣವೂ ಆಗಿದೆ.
ದೇವಾಲಯದ ಪರಿಸರವು ಗಿಡಮರಗಳಿಂದ ತುಂಬಿ ಹಸುರಾಗಿದೆ. ತೆಂಗಿನಮರಗಳು, ಬಾಳೆ, ವೀಳ್ಯದೆಲೆ ಬಳ್ಳಿಗಳು ಮತ್ತು ಇತರ ಹಲವು ಮರಗಳಿವೆ. ಒಂದು ಭೀಕರ ಬರಗಾಲ ಬಂದಾಗ ದೇವಿಯು ಜನರಿಗೆ ಹಣ್ಣು ಹಂಪಲು ತರಕಾರಿಗಳನ್ನು ಒದಗಿಸಿ ಅವರ ಹಸಿವೆಯನ್ನು ಹಿಂಗಿಸಿದಳೆಂಬ ಕಾರಣದಿಂದ ಅವಳು ಶಾಕಾಂಬರಿಯಾದಳು ಎಂಬುದು ಒಂದು ಕಥೆ. ಅನೇಕ ಋಷಿಮುನಿಗಳು ತಪಸ್ಸು ಮಾಡಿದ ಪವಿತ್ರಕ್ಷೇತ್ರ ಶಿವಯೋಗಿಮಠ. ಮುಂದೆ ನಾವು ಹೋಗಿದ್ದು ಶಿವಯೋಗಿಮಠಕ್ಕೆ . ಇಲ್ಲಿ ಲಿಂಗಾಯತರ ಗುರುಗಳಾದ ಕುಮಾರೇಶ್ವರ ಸ್ವಾಮೀಜಿ ಮತ್ತು ಸದಾಶಿವ ಗುರುಗಳ ಗದ್ದುಗೆ ಗಳಿದ್ದು ಅನೇಕ ಋಷಿಮುನಿಗಳು ತಪಸ್ಸು ಮಾಡಿದ ಪವಿತ್ರಕ್ಷೇತ್ರವಿದು. ಸದಾಶಿವಗುರುಗಳ ಸಮಾಧಿಯ ಮೇಲಿನ ಗೋಪುರ ವರ್ಣಮಯವಾಗಿದ್ದು ಬಹಳ ಸುಂದರವಾಗಿದೆ. ಇಲ್ಲಿ ಜಂಗಮ ವಟುಗಳಿಗೆ ಸಂಸ್ಕೃತದ ಸಂಪೂರ್ಣ ಶಿಕ್ಷಣ ಕೊಡುವ ಸಂಸ್ಕೃತ ಪಾಠಶಾಲೆಯಿದೆ. ಇಲ್ಲಿ ಹಸುವಿನ ಸೆಗಣಿಯನ್ನು ಸುಟ್ಟು ತಯಾರಿಸಿದ ಪರಿಶುದ್ಧ ವಿಭೂತಿಯ ನಿರ್ಮಾಣ ಕೇಂದ್ರವಿದೆ .
ಅಲ್ಲಿಂದ ಮುಂದೆ ನಾವು ಅಲ್ಲೇ ಸಮೀಪವಿರುವ ಮಹಾಕೂಟೇಶ್ವರನ ಪ್ರಾಚೀನ ದೇವಾಲಯಕ್ಕೆ ಹೋದೆವು. ಒಂದು ಕಥೆಯ ಪ್ರಕಾರ ಆಗಸ್ತ್ಯ ಮಹಾಮುನಿಗಳು ತಮ್ಮ ಜೀವಿತಾವಧಿಯಲ್ಲಿ ಒಂದು ಕೋಟಿ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಬೇಕೆಂದು ನಿಶ್ಚಯಿಸಿ ತಾವು ಹೋದ ಕಡೆಗಳಲ್ಲೆಲ್ಲಾ ಶಿವಲಿಂಗ ಪ್ರತಿಷ್ಠಾಪನೆ ಮಾಡುತ್ತಿದ್ದರಂತೆ. ಹಾಗೆ ಅವರು ಮಹಾಕೂಟಕ್ಕೆ ಬಂದಾಗ ಆ ಜಾಗವು ಅರಣ್ಯಮಯವಾಗಿತ್ತಂತೆ. ಅಲ್ಲಿ ಕೆಲವು ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದ ನಂತರ ಕೋಟಿ ಲಿಂಗಕ್ಕೆ ಒಂದು ಲಿಂಗ ಮಾತ್ರ ಬಾಕಿಯಿತ್ತಂತೆ. ಆದ್ದರಿಂದ ಅವರು ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡು ಲಿಂಗೋದ್ಭವವಾಗುವಂತೆ ಮಾಡಿದರಂತೆ.
ದಕ್ಷಿಣ ಕಾಶಿ ಎಂದು ಪ್ರಸಿದ್ದವಾದ ಮಹಾಕೂಟವು ಒಂದು ದೇವಾಲಯ ಸಮುಚ್ಛಯ. ಇದು ಶೈವ ಪಂಥದವರ ಬಹಳ ಮುಖ್ಯ ಯಾತ್ರಾಸ್ಥಳ. ಕ್ರಿ.ಶ.೬-೭ನೇ ಶತಮಾನದಲ್ಲಿ ಚಾಲುಕ್ಯ ವಂಶದ ಅರಸರು ಇದನ್ನು ಕಟ್ಟಿಸಿದರು. ಇಲ್ಲಿರುವ ಮಹಾಕೂಟ ಸ್ತಂಭದ ಮೇಲಿನ ಶಾಸನಗಳು ಇದನ್ನು ಕ್ರಿ. ಶ.೫೯೫-೬೯೨ ಕಾಲದಲ್ಲಿ ವಿನಯಾದಿತ್ಯನ ಪ್ರೇಯಸಿ ವಿನಾಪೋತಿಯು ಕಟ್ಟಿಸಿದಳು ಅನ್ನುತ್ತವೆ. ೭ನೇ ಶತಮಾನದಲ್ಲಿ ಕರ್ನಾಟಕದ ಎಲ್ಲೆಡೆಯ ಶಿಲ್ಪಿಗಳು ಬಂದು ದಕ್ಷಿಣ ಭಾರತದ ದ್ರಾವಿಡ ಶೈಲಿಯ ಜತೆಜತೆಗೇ ಉತ್ತರದ ರೇಖಾನಾಗರ ಶೈಲಿಯ ದೇವಸ್ಥಾನಗಳನ್ನೂ ಕಟ್ಟಿದರು. ಅಲ್ಲದೆ ಈ ಎರಡೂ ಶೈಲಿಗಳೊಂದಿಗೆ ಸ್ಥಳೀಯ ಶೈಲಿಯೂ ಬೆರೆತುಕೊಂಡಿದೆ. ಗರ್ಭಗುಡಿಯ ಮೇಲೆ ದ್ರಾವಿಡ ಶೈಲಿಯ ಗೋಪುರವಿದೆ. ಒಂದು ಪ್ರಾಕೃತಿಕ ಬೆಟ್ಟದ ನೀರಿನ ಒರತೆಯು ದೇವಾಲಯದ ಆವರಣದೊಳಗಿನ ಪುಷ್ಕರಣಿಯನ್ನು ಸದಾಕಾಲ ತುಂಬಿರುವಂತೆ ಮಾಡುವುದು ಇದರ ವೈಶಿಷ್ಟ್ಯ. ವಿಷ್ಣು ಪುಷ್ಕರಣಿ ಎಂದು ಕರೆಯಲ್ಪಡುವ ಇದು ಪಾಪನಾಶಿನಿ ತೀರ್ಥವೂ ಹೌದು. ದೇವಾಲಯಗಳಲ್ಲಿ ದ್ರಾವಿಡ ಶೈಲಿಯಲ್ಲಿ ಇರುವ ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಸ್ಥಾನಗಳು ಮುಖ್ಯವಾದವು. ವಿಷ್ಣು ಪುಷ್ಕರಣಿಯ ಮಧ್ಯೆ ಒಂದು ಸಣ್ಣ ಶಿವನ ಗುಡಿಯಿದೆ. ಅಲ್ಲಿ ಐದು ಬೇರೆ ಬೇರೆ ದಿಕ್ಕುಗಳಿಗೆ ಮುಖ ಮಾಡಿದ ಒಂದು ಪಂಚಮುಖಿ ಲಿಂಗವಿದೆ.
ಮಹಾಕೂಟ ಸ್ತಂಭವನ್ನು ಒಂದನೆಯ ಪುಲಿಕೇಶಿಯ ರಾಣಿ ದುರ್ಲಭದೇವಿ ಅನುದಾನ ಕೊಟ್ಟು ಕಟ್ಟಿಸಿದಳು ಅನ್ನುತ್ತಾರೆ. ಮೊದಲೇ ಕೊಟ್ಟ ಅನುದಾನಕ್ಕೆ ಅವಳು ಪಟ್ಟದಕಲ್ಲು ಮತ್ತು ಐಹೊಳೆಗಳ ಹತ್ತು ಗ್ರಾಮಗಳನ್ನು ಸೇರಿಸಿ ಮಹಾಕೂಟೇಶ್ವರನಿಗೆ ದತ್ತಿಯಾಗಿ ಕೊಟ್ಟಳು. ಇಲ್ಲಿನ ಶಾಸನವು ಚಾಲುಕ್ಯರ ಬಗ್ಗೆ, ಅವರ ಸೇನಾ ಸಾಹಸಗಳ ಬಗ್ಗೆ, ಅವರ ವಿಜಯಗಳ ಬಗ್ಗೆ, ಆರಂಭದ ಸ್ಮಾರಕಗಳ ಬಗ್ಗೆ ಮಾಹಿತಿ ನೀಡುತ್ತದೆ. ವಿನಾಪೋತಿಯ ಶಾಸನವು ದೇವಸ್ಥಾನದ ಪ್ರವೇಶದ್ವಾರದಳ್ಲಿದೆ. ಅದರಲ್ಲಿ ಅವಳು ದೇವರಿಗೆ ಹವಳ ಹಾಗೂ ಬೆಳ್ಳಿಯ ಕೊಡೆಯನ್ನು ಅರ್ಪಿಸಿದ ವಿವರಗಳಿವೆ. ಮಹಾಕೂಟದಲ್ಲಿ ಕದಂಬ ಶೈಲಿಯ ಮತ್ತು ನಾಗರ ಮೇಲ್ಮೈ ರಚನೆಗಳಿರುವ ವಿಷ್ಣು ದೇಗುಲ, ಬಿಳಿಯ ಬಣ್ಣದ ದ್ರಾವಿಡ ಶೈಲಿಯ ಮಹಾಕೂಟೇಶ್ವರ ಮತ್ತು ನಾಗರ ಶೈಲಿಯ ಸಂಗಮೇಶ್ವರ ದೇವಸ್ಥಾನಗಳಿವೆ. ವಾತಾಪಿ ಮತ್ತು ಇಲವಿಲ ಎಂಬ ರಾಕ್ಷಸರನ್ನು ಅಗಸ್ತ್ಯ ಮಹರ್ಷಿಗಳು ಕೊಂದು ಎರಡು ಪರ್ವತಗಳನ್ನಾಗಿ ಪರಿವರ್ತಿಸಿದ್ದು ಇದೇ ದೇವಸ್ಥಾನದ ಹಿಂದುಗಡೆ ಎಂಬ ನಂಬಿಕೆಯಿದೆ. ೧೮೮೦ರಲ್ಲಿ ನಡೆದ ಉತ್ಖನನದಲ್ಲಿ ದೊರೆತ ಶಾಸನವು ಈ ದೇವಸ್ಥಾನವನ್ನು ಮಂಗಳೇಶನು ದಕ್ಷಿಣ ಮತ್ತು ಮಧ್ಯಭಾರತದ ಎಲ್ಲಾ ಶಿಲ್ಪಿಗಳನ್ನು ಕರೆಸಿ ಕಟ್ಟಿಸಿದ್ದು ಅನ್ನುತ್ತದೆ.
(ಇನ್ನೂ ಇದೆ)
ಚಿತ್ರ - ಬರಹ : ಪಾರ್ವತಿ ಜಿ ಐತಾಳ್, ಬೆಂಗಳೂರು