ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 3)

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 3)

ಮಹಾಕೂಟೇಶ್ವರ ದೇವಸ್ಥಾನದ ಪ್ರವೇಶದ್ವಾರದಲ್ಲಿ ಶೈವ ದ್ವಾರಪಾಲಕರು ನಿಂತಿದ್ದಾರೆ. ಗರ್ಭಗೃಹಕ್ಕೆ ಹೋಗುವ ದ್ವಾರವು ಕಲಾತ್ಮಕವಾಗಿದೆ. ಅದರೆ ಇತ್ತೀಚೆಗೆ ಕಡೆಗಣನೆಗೆ ಒಳಗಾದ್ದರಿಂದ ಕಪ್ಪಾಗಿ ಬಿಟ್ಟಿದೆ.  ಒಳಗೆ ನೆಲದ ಮೇಲೆ ಯೋನಿಪೀಠದ ಮೇಲೆ ಶಿವಲಿಂಗವಿದೆ. ಭೋಲೇನಾಥನಿಗೆ ತಲೆಬಾಗಿ ನಮಸ್ಕರಿಸುವಾಗ ಪೂಜಾರಿಯು ಆಶೀರ್ವದಿಸುತ್ತಾನೆ. ಹೊರಗೆ ಲಾಕುಲೀಶ, ವರಾಹ, ತ್ರಿಮೂರ್ತಿಗಳು ಹಾಗೂ ಇನ್ನೂ ಅನೇಕ ಪೌರಾಣಿಕ ಪಾತ್ರಗಳ ಗುಲಾಬಿ ಬಣ್ಣದ ಗ್ರಾನೈಟ್ ಶಿಲೆಯಲ್ಲಿ ಮಾಡಿದ  ಶಿಲ್ಪಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮುಖ್ಯ ದೆವಾಲಯದ ಹಿಂದೆ ಪುಟ್ಟದೊಂದು ಅನ್ನಪೂರ್ಣಾದೇವಿಯ ಗುಡಿಯಿದೆ.
ಚಾಲುಕ್ಯ ಶೈಲಿಯಲ್ಲಿ ಕಟ್ಟಿದ ಸುಂದರ ದೇವಾಲಯವಿದು. ನಾವು ಹೋದ ದಿವಸ ಶ್ರಾವಣದ ಕೊನೆಯ ಸೋಮವಾರವಾದ್ದರಿಂದ ತುಂಬಾ ಜನಸಂದಣಿಯಿತ್ತು. ಪುಷ್ಕರಿಣಿಗೆ  ಮೇಲಿಂದ ಜಿಗಿದು ಕೇಕೆ ಹಾಕುತ್ತ ಅನೇಕ ಮಂದಿ ಯುವಕರು ಸ್ನಾನ ಮಾಡುತ್ತಿದ್ದರು.  ಎಲ್ಲಿ ನೋಡಿದರೂ ಕೋತಿಗಳು. ಭಕ್ತರ ಕೈಯಿಂದ ಬಾಳೆಹಣ್ಣು-ತೆಂಗಿನಕಾಯಿಗಳನ್ನು ಬೇಡಿ ತಿನ್ನುವುದನ್ನು ನೋಡುವುದೇ ಒಂದು ಖುಷಿ. ‌ ( ಬಾದಾಮಿ-ಐಹೊಳೆ-ಪಟ್ಟದಕಲ್ಲು ಎಲ್ಲಾ ಕಡೆಗಳಲ್ಲೂ ಕೋತಿಗಳು ಕಾಣಸಿಗುವುದು ಸರ್ವೇ ಸಾಮಾನ್ಯವಾಗಿತ್ತು.,) ದೇವರ ದರ್ಶನ ಪಡೆದು   ತೀರ್ಥ ಪ್ರಸಾದ ತೆಗೆದುಕೊಂಡು ಅಲ್ಲಿಂದ ಹೊರಟು ಪಟ್ಟದಕಲ್ಲಿಗೆ ಬಂದೆವು. 

ಪಟ್ಟದಕಲ್ಲು ಬಾದಾಮಿಯಿಂದ ೨೨.೪ ಕಿ.ಮೀ.ದೂರದಲ್ಲಿದೆ.‌  ಇಕ್ಕೆಲಗಳಲ್ಲೂ ಗದ್ದೆ ಬಯಲುಗಳು. ಅಲ್ಲಿ ಹೆಚ್ಚಾಗಿ ಬೆಳೆಯುವುದು  ಮುಸುಕಿನ    ಜೋಳ, ಶೇಂಗಾ ಇತ್ಯಾದಿ.‌ ತೆಂಗಿನ ತೋಟಗಳಿಲ್ಲ.‌ ಹೊಲದ ಅಂಚುಗಳಲ್ಲಷ್ಟೇ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ತೆಂಗಿನ ಮರಗಳು.‌ ರಸ್ತೆಯುದ್ದಕ್ಕೂ ಎದುರು ಬದಿಯಿಂದ ಗಂಟೆಗಳನ್ನಾಡಿಸುತ್ತ ತಲೆಯಾಡಿಸುತ್ತ ನಗುನಗುತ್ತ ಗಾಡಿಯ ಭಾರವನ್ನೆಳೆದುಕೊಂಡು ಬರುವ   ದಷ್ಟಪುಷ್ಟ ಎತ್ತುಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಪಟ್ಟದಕಲ್ಲು ತಲುಪಿದಾಗ ಅಲ್ಲಿ ಪ್ರವಾಸಿಗರಿಂದ ಜಾಗ ತುಂಬಿ ಹೋಗಿತ್ತು. ಒಬ್ಬರಿಗೆ ರೂ.೪೦ ಟಿಕೆಟ್ ದರ. ಒಳಗೆ ಹೋಗುವ ದಾರಿಯಲ್ಲಿ ಸುತ್ತಮುತ್ತೆಲ್ಲ ಶಿಸ್ತಿನಿಂದ ಬೆಳೆಸಿ ಕಾಪಿಟ್ಟ ಉದ್ಯಾನ ಸುಂದರವಾಗಿತ್ತು. ದೂರದಿಂದ ಕಾಣುತ್ತಿದ್ದ  ದೇವಸ್ಥಾನಗಳ ಸಮುಚ್ಛಯ ನೋಡಿ ಎದೆ ಸಂತಸದಿಂದ ಜಿಗಿಯಿತು.
ಪಟ್ಟದಕಲ್ಲಿನ ದೇವಾಲಯಗಳನ್ನು ದ್ರಾವಿಡ-ವಿಮಾನ ದೇವಾಲಯಗಳು  ಮತ್ತು ಉತ್ತರ ಭಾರತದ  ರೇಖಾ ನಾಗರ ಪ್ರಸಾದ ದೇವಾಲಯಗಳು ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ,  ,ಕಾಡಸಿದ್ಧೇಶ್ವರ, ಜಂಬುಲಿಂಗ, ಗಳಗನಾಥ, ಪಾಪನಾಥ ಮತ್ತು ಕಾಶಿ ವಿಶ್ವೇಶ್ವರ ಮೊದಲಾದ ದೇವಾಲಯಗಳು ಇಲ್ಲಿವೆ. ಒಂದು ಜಯನಬಸದಿಯೂ ಇದೆ.
ಸಂಗಮೇಶ್ವರ ದೇವಾಲಯವು ಮಕರ, ವ್ಯಾಲ, ಮುಂತಾದ ಚಿತ್ರಗಳಿರುವ ಎತ್ತರವಾದ ಅಧಿಷ್ಠಾನದ ಮೇಲೆ ನಿರ್ಮಿತವಾದ ಗೋಡೆಗಳನ್ನು ಹೊಂದಿದೆ. ಅವುಗಳಿಗೆ ಸಮಾನಾಂತರದಲ್ಲಿ ಜಾಲಂಧ್ರ ದೇವಕೋಷ್ಟಗಳಿವೆ. ಈ ದೇವಾಲಯವನ್ನು ಚಾಲುಕ್ಯ ವಿಜಯಾದಿತ್ಯ ದೊರೆ  ೭ನೇ ಶತಮಾನದಲ್ಕಿ    ಕಟ್ಟಲಾರಂಭಿಸಿ ಮುಂದೆ ಅನೇಕ ದೊರೆಗಳ ಮೂಲಕ ಕೆಲಸ ಮುಂದುವರೆದರೂ ಅದು ಇನ್ನೂ ಅಪೂರ್ಣವಾಗಿದೆ. ವಿರೂಪಾಕ್ಷ ದೇವಾಲಯವನ್ನು ಚಾಲುಕ್ಯ ದೊರೆ ಎರಡನೆಯ ವಿಕ್ರಮಾದಿತ್ಯನ ಪಟ್ಟದ ರಾಣಿ ಲೋಕಮಹಾದೇವಿಯು ಪಲ್ಲವರ ಮೇಲೆ ವಿಕ್ರಮಾದಿತ್ಯನು ಸಾಧಿಸಿದ ವಿಜಯದ ನೆನಪಿಗಾಗಿ ಕಟ್ಟಿಸಿದಳು ಅನ್ನುತ್ತಾರೆ.  ಕಂಚಿಯ ಕೈಲಾಸನಾಥ ದೇವಾಲಯವನ್ನು ಕಟ್ಟಿದ ಪ್ರಸಿದ್ಧ ಶಿಲ್ಪಿಗಳೇ ವಿರೂಪಾಕ್ಷ ದೇವಾಲಯವನ್ನೂ ಅದೇ ಮಾದರಿಯಲ್ಲಿ ಕಟ್ಟಿದರಂತೆ. ಇದು ತಳವಿನ್ಯಾಸದಲ್ಲಿ ಪ್ರದಕ್ಷಿಣಾ ಪಥದಿಂದ  ಆವೃತ್ತವಾದ ಗರ್ಭಗೃಹವನ್ನು ಒಳಗೊಂಡಿದೆ. ವಾಸ್ತುಶಿಲ್ಪದ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡಿರುವ ಈ ದೇವಾಲಯವು ದ್ರಾವಿಡ ಶೈಲಿಯ ಒಂದು ವಿಶಿಷ್ಟ ಕಲಾಕೃತಿಯಾಗಿದೆ.    ಮುಂದೆ ರಾಷ್ಟ್ರಕೂಟರು ಎಲ್ಲೋರಾದಲ್ಲಿ ಕಟ್ಟಿಸಿದ ಕೈಲಾಸನಾಥ ದೇವಾಲಯಕ್ಕೆ ಇದುವೇ ಮೂಲ ಮಾದರಿಯಾಯಿತಂತೆ. ಮಲ್ಲಿಕಾರ್ಜುನ ದೇವಾಲಯವನ್ನು  ವಿರೂಪಾಕ್ಷ ದೇವಾಲಯದ ಮಾದರಿಯಲ್ಲಿ   ಇಮ್ಮಡಿ ವಿಕ್ರಮಾದಿತ್ಯನ ಇನ್ನೋರ್ವ ರಾಣಿಯಾದ ತ್ರೈಲೋಕ್ಯ ಮಹಾದೇವಿಯು  ಪತಿಯು ಪಲ್ಲವರನ್ನು ಗೆದ್ದ ವಿಜಯದ ಸಂಕೇತವಾಗಿ ಕಟ್ಟಿಸಿದಳು ಎಂಬ ಪ್ರತೀತಿ ಇದೆ.
ಕಾಡಸಿದ್ಧೇಶ್ವರ ದೇವಾಲಯವು ಸುಮಾರು ೭ನೇ ಶತಮಾನದಲ್ಲಿ ನಿರ್ಮಾಣವಾದ ಒಂದು ಸರಳ ಶೈಲಿಯ ದೇವಾಲಯ.  ತಳವಿನ್ಯಾಸವನ್ನು ವಿಸ್ತರಿಸುವ ವಾಸ್ತು ಶೈಲಿಯ ಒಂದು ಪ್ರಾಯೋಗಿಕ ಹಂತಕ್ಕೆ ಇದು ನಿದರ್ಶನವಾಗಿ ನಿಲ್ಲುತ್ತದೆ. ಇಲ್ಲಿ ಗರ್ಭಗೃಹದ ಮೇಲೆ  ಮೂರು ಬೋದಿಗೆಗಳಿರುವ ರೇಖಾ ನಾಗರ ಶೈಲಿಯ ಶಿಖರವಿದೆ. ಜಂಬುಲಿಂಗ ದೇವಾಲಯವು ಶಿಖರದ ಮುಂಭಾಗದಲ್ಲಿ ಪ್ರಮುಖವಾಗಿ ಕಾಣುವ ಶಂಖನಾಶ ಮತ್ತು ದೇವಾಲಯದ ಮುಂದೆ ನಂದಿಮಂಟಪವನ್ನು ಅಳವಡಿಸುವ ವಾಸ್ತು ಶೈಲಿಯಲ್ಲಿನ ಪ್ರಯೋಗದ ಒಂದು ಹಂತವನ್ನು ಪ್ರತಿನಿಧಿಸುತ್ತದೆ. ಇದರ ಶಿಖರವು ರೇಖಾನಾಗರ ಶೈಲಿಯಲ್ಲಿದ್ದು  ಮೇಲಿನ ಅಮಲಕ ಮತ್ತು ಕಲಶಗಳು ಭವ್ಯವಾಗಿವೆ. ಈ ಶಿಖರದ ಮುಂದೆ ಪಾರ್ವತಿ ಹಾಗೂ ನಂದಿಯರ ಜತೆಗೆ ಸುಂದರವಾದ ನಟರಾಜನ ಉಬ್ಬುಶಿಲ್ಪವಿದೆ. ಗಳಗನಾಥ ದೇವಾಲಯವು  ಒಂದು ವಿಶಾಲವಾದ ದೇವಾಲಯ. ಗಳಗನಾಥ ಅಂದರೆ ಶಿವ. ಈ ದೇವಾಲಯದ ಮೇಲಿರುವ ಶಿಖರವು ಉತ್ತರಭಾರತದ ರೇಖಾನಾಗರ ಶೈಲಿಯಲ್ಲಿದೆ. ಈ ರೀತಿಯ ಶಿಖರವನ್ನು ಪುರಿಯ ಜಗನ್ನಾಥ ಮತ್ತು ಕೋನಾರ್ಕದ ಸೂರ್ಯ ದೇವಾಲಯಗಳಲ್ಲಿ ಕಾಣಬಹುದು.  ಕಾಶಿವಿಶ್ವನಾಥ ದೇವಾಲಯವೂ ರೇಖಾ ನಾಗರ ಶಿಖರವನ್ನು ಹೊಂದಿದ್ದು ಇದು ಕ್ರಿ.ಶ.೮ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಮಂಟಪದ ಮಧ್ಯದ ಛಾವಣಿಯಲ್ಲಿ ಶಿವಪಾರ್ವತಿಯರ ಸುಂದರ ಕೆತ್ತನೆಗಳಿವೆ. ಪಾರ್ವತಿಯ ತೋಳಲ್ಲಿ ಕಾರ್ತಿಕೇಯನಿದ್ದಾನೆ. ಮಂಟಪದ ನಾಲ್ಕು ಕಂಬಗಳ ಮೇಲೆ ಪೌರಾಣಿಕ ಚಿತ್ರಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ಪಾಪನಾಥ ದೇವಾಲಯವು ಶಿವನ ದೇವಾಲಯವಾಗಿದ್ದು ಶಾಸನದಲ್ಲಿ ಇದನ್ನು ಮುಕ್ತೇಶ್ವರ ದೇವಾಲಯ ಎಂದು ಕರೆಯಲಾಗಿದೆ. ಇಲ್ಲಿ ರಾಮಾಯಣದ ಕಥೆಗಳ ವಿವಿಧ ಸನ್ನಿವೇಶಗಳನ್ನು ಬಿಂಬಿಸುವ ಕೆತ್ತನೆಗಳಿವೆ. ಇಲ್ಲಿಯೂ ರೇಖಾನಾಗರ ಶೈಲಿಯನ್ನು ಕಾಣಬಹುದಾಗಿದೆ.
ಪಟ್ಟದ ಕಲ್ಲಿನಲ್ಲಿ ನಮಗೆ ಸ್ಪೆಯಿನ್ ನಿಂದ ಬಂದ ಸುಸಾನ್ ಮತ್ತು ಅವರ ಸ್ನೇಹಿತರ ತಂಡದ ಪರಿಚಯವಾಯಿತು. ಅವರು ಇದು ಅರನೇ ಬಾರಿ ಇಂಡಿಯಾ ಪ್ರವಾಸ ಮಾಡುತ್ತಿರುವುದಂತೆ. ಅವರ ಅಸಕ್ತಿಯ ಬಗ್ಗೆ ತಿಳಿದು ನಮಗೆ ತುಂಬಾ ಸಂತೋಷವಾಯಿತು. 

(ಇನ್ನೂ ಇದೆ)

ಚಿತ್ರ - ಬರಹ : ಪಾರ್ವತಿ ಜಿ ಐತಾಳ್, ಬೆಂಗಳೂರು