ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 4)

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 4)

ನಾವು ಸಂದರ್ಶಿಸಿದ ಕೊನೆಯ ಸ್ಥಳ ಐಹೊಳೆ ಪಟ್ಟದಕಲ್ಲಿನಿಂದ ೧೩.೭ ಕಿ.ಮೀ.ದೂರದಲ್ಲಿದೆ. ಐಹೊಳೆ ಪ್ರಸಿದ್ಧವಾಗಿರುವುದು ಅಲ್ಲಿನ ಬೃಹತ್ ದುರ್ಗದ ದೇವಾಲಯಕ್ಕೆ.  ಈ ದೇವಾಲಯವು ಕೋಟೆಯ ಹತ್ತಿರವೇ ಇರುವುದರಿಂದ ಇದಕ್ಕೆ ಈ ಹೆಸರು ಬಂದಿರಬಹುದು ಅನ್ನುವುದು ಅನೇಕರ ಅಭಿಪ್ರಾಯ. ಇಲ್ಲಿ ಗರ್ಭಗೃಹ, ಅದರ ಸುತ್ತ ಪ್ರದಕ್ಷಿಣಾಪಥ, ಸಭಾಮಂಟಪ, ಮುಖಮಂಟಪ,  ಮತ್ತು ಮುಖಮಂಟಪದ ಸುತ್ತ ಇನ್ನೊಂದು ಪ್ರದಕ್ಷಿಣಾ ಪಥಗಳಿವೆ. ಈ ದೇವಾಲಯವು ಬೌದ್ಧ ಚೈತ್ಯಾಲಯಗಳನ್ನು ಹೋಲುತ್ತದೆ. ಗರ್ಭಗೃಹವು ಗಜಪುಷ್ಪಾಕಾರ ಅಥವಾ ಅರ್ಧವೃತ್ತಾಕಾರವಾಗಿದ್ದು ಇದು ಮಹಾಕೂಟದಲ್ಲೂ ಇದೆ. ಗರ್ಭಗೃಹದ ಮೇಲೆ ರೇಖಾನಾಗರಪ್ರಸಾದ ಪದ್ಧತಿಯ ಶಿಖರವಿದ್ದು ಅದರ ಮೇಲ್ಭಾಗದಲ್ಲಿ ಅಮಲಕ ಮತ್ತು ಕಲಶಗಳಿಲ್ಲ. ಆದರೆ ನಡುವೆ ಚೈತ್ಯದ ಚಿಹ್ನೆಗಳಿವೆ. ಮಹಾದ್ವಾರ ಮಂಟಪದ ಉತ್ತರ ಗೋಡೆಯ ಮೇಲೆ ಎರಡು ಶಾಸನಗಳೂ ಇವೆ. ಅಧಿಷ್ಠಾನದ ದಕ್ಷಿಣ ಭಾಗದಲ್ಲಿ ಶ್ರೀ ಜಿನಾಲಯ ಎಂದು ಉಲ್ಲೇಖವಿರುವ ೮ನೇ ಶತಮಾನದ ಲಕ್ಷಣವುಳ್ಳ ಲಿಪಿಯಿದೆ.  ಅದ್ದರಿಂದ ಇದು ಒಂದು ಕಾಲದಲ್ಲಿ ಜೈನಬಸದಿಯಾಗಿತ್ತೆಂದು ತಿಳಿಯಲಾಗಿದೆ. ಆದರೆ ಅದರ ಒಳಮಂಟಪದ ಹೊರಗೋಡೆಯಲ್ಲಿರುವ ಶಿವ, ವಿಷ್ಣು, ವರಾಹ, ಮಹಿಷಾಸುರ ಮರ್ದಿನಿ ಹರಿಹರಮೂರ್ತಿಗಳು ಅದು ಮೂಲತಃ ವೈದಿಕ ಸಂಪ್ರದಾಯಕ್ಕೆ ಸೇರಿದ್ದೆಂದು ಸ್ಪಷ್ಟವಾಗಿ ಹೇಳುತ್ತದೆ.
ದುರ್ಗದ ದೇವಾಲಯದ ಹಿಂದುಗಡೆ  ಆವರಣದ ಒಳಗೆಯೇ    ಒಂದು ಮ್ಯೂಸಿಯಂ ಇದೆ.  ಇಲ್ಲಿ ಸುಮಾರು ೩೮೧ ಪ್ರಾಚ್ಯವಸ್ತುಗಳಿವೆ. ಬ್ರಾಹ್ಮಣ, ಜೈನ ಮತ್ತು ಬೌದ್ಧ,ರಿಗೆ  ಸಂಬಂಧಿಸಿದ ಶಿಲ್ಪಗಳು ಮತ್ತು ಕೆತ್ತನೆಗಳು ಇಲ್ಲಿವೆ.  ಆರಂಭದಲ್ಲಿ ಅಂದರೆ ೧೯೭೦ರಲ್ಲಿ  ಇದನ್ನು  ಉತ್ಖನನದಲ್ಲಿ ಸಿಕ್ಕಿದ  ಕೆತ್ತನೆಗಳು ಮತ್ತು ಶಿಲ್ಪಗಳನ್ನು ಪ್ರದರ್ಶನಕ್ಕಿಡುವ ಒಂದು ಚಿಕ್ಕ ಸರಳ  ಕಟ್ಟಡವನ್ನಾಗಿ ಮಾಡಲಾಗಿತ್ತು.  ೧೯೮೭ರಲ್ಲಿ ಒಂದು  ಪೂರ್ಣ ಪ್ರಮಾಣದ  ವಸ್ತು ಸಂಗ್ರಹಾಲಯವನ್ನಾಗಿ ಮಾಡಿ  ೨೦೦೦ದಲ್ಲಿ  ಅದನ್ನು   ಇನ್ನಷ್ಟು ವಿಸ್ತರಿಸಲಾಯಿತು. ಇಲ್ಲಿ ೬ನೆಯ ಶತಮಾನದಿಂದ ಹಿಡಿದು ೧೫ನೆಯ ಶತಮಾನದ ವರೆಗಿನ  ಎಲ್ಲ ಕಲಾಕೃತಿಗಳನ್ನು ಜೋಡಿಸಿಡಲಾಗಿದೆ. ಇಲ್ಲಿ ಒಟ್ಟು ಆರು ಗ್ಯಾಲರಿಗಳು ಮತ್ತು ಒಂದು ತೆರೆದ ಗ್ಯಾಲರಿಯಿದೆ.   ಗಣೇಶ, ಸಪ್ತಮಾತೃಕೆಯರು,  ಚೈತ್ಯದ ಕಮಾನುಗಳಲ್ಲಿ ಕುಳಿತ ಆಕೃತಿಗಳು, ಜೈನಶಿಲ್ಪಗಳು, ನಾಗ-ನಾಗಿಣಿಯರ ಆಕೃತಿಗಳಿವೆ.  ಒಳಗೆ ಪ್ರವೇಶಿಸಿದ ಕೂಡಲೇ ಅಲ್ಲಿ ಸುಂದರವಾದ ಒಂದು ಅಂಬಿಕೆಯ ಪ್ರತಿಮೆಯಿದೆ. . ಮೊದಲ ಗ್ಯಾಲರಿಯಲ್ಲಿ ಬೌದ್ಧ, ಜೈನ, ಲಾಕುಲೀಸ, ಸಪ್ತಮಾತೃಕೆಯರು, ಗಣೇಶರ ಪ್ರತಿಮೆಗಳಿವೆ. ಬಲಬದಿಗೆ ಹೋದರೆ  ಎರಡನೇ ಗ್ಯಾಲರಿಯಲ್ಲಿ   ಶಿವ, ಅರ್ಧನಾರೀಶ್ವರ, ನಿಂತಿರುವ ವಿಷ್ಣು, ಮಾತೃಕೆಯರು, ದ್ವಾರಪಾಲಕರು ಇದ್ದಾರೆ.  ಮೂರನೇ ಗ್ಯಾಲರಿಯಲ್ಲಿ ಕಾಲಭೈರವನ ಬೃಹತ್ ಪ್ರತಿಮೆಯಿದೆ. ನಾಲ್ಕನೇ ಗ್ಯಾಲರಿಯಲ್ಲಿ ಐಹೊಳೆಯ ಗ್ರಾಮದ ಒಂದು ಮಾದರಿಯಿದೆ.  ತೆರೆದ ಗ್ಯಾಲರಿಯಲ್ಲಿ ಉತ್ಖನನದಲ್ಲಿ ದೊರೆತ ಇನ್ನಷ್ಟು ಶಿಲ್ಪಗಳಿವೆ. ಎಲ್ಲವನ್ನೂ ನೋಡಿ ಮುಗಿಸಿದಾಗ   ಸಂಜೆ ನಾಲ್ಕು ಗಂಟೆಯಾಗಿತ್ತು. ಊಟ ಮುಗಿಸಿ ವಾಪಸ್ ಹೋಟೆಲಿಗೆ ಬಂದು ವಿಶ್ರಾಂತಿ ತೆಗೆದುಕೊಂಡು  ಅವಿಸ್ಮರಣೀಯ ನೆನಪುಗಳನ್ನು ಹೊತ್ತುಕೊಂಡು  ರಾತ್ರಿ ಎಂಟು ಗಂಟೆಯ ಗಣೇಶ್ ಟ್ರಾವೆಲ್ಸ್ ಹಿಡಿದು ನಾನು    ಊರಿಗೆ  ಹಿಂತಿರುಗಿ ಬಂದೆ. 

(ಮುಗಿಯಿತು)

ಚಿತ್ರ - ಬರಹ : ಪಾರ್ವತಿ ಜಿ ಐತಾಳ್, ಬೆಂಗಳೂರು