ಬಾನಿಗೊಂದು ಕೈಪಿಡಿ
ಡಾ॥ ಬಿ.ಎಸ್.ಶೈಲಜಾ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಆಕಾಶ ವೀಕ್ಷಣೆಗೆ ಮಾರ್ಗದರ್ಶಿ ಪುಸ್ತಕವೇ ‘ಬಾನಿಗೊಂದು ಕೈಪಿಡಿ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂಗಡಿಸಿ 'ಹೊಸತು ವಾಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಈ ವಾಚಿಕೆಗಳ ಪ್ರಕಟಣೆಯ ಹಿಂದಿರುವ ಉದ್ದೇಶ. ಆದರೆ ಈ ಮಾಲಿಕೆಯಲ್ಲಿ ಸೇರ್ಪಡೆಯಾಗಿರುವ ‘ಬಾನಿಗೊಂದು ಕೈಪಿಡಿ' ಒಂದು ಸ್ವತಂತ್ರ ಕೃತಿ.
ಹೊಸತು ಪತ್ರಿಕೆಯ ಪ್ರತಿ ಸಂಚಿಕೆಯಲ್ಲೂ ಪ್ರಕಟವಾಗುತ್ತಿರುವ ‘ನಭಾವಲೋಕನ' ಅಂಕಣ ಬರಹಗಳಿಗೆ ಪೂರಕವಾದ ಲೇಖನಗಳಿರುವ ಈ ಕೃತಿ ಆಕಾಶ ವೀಕ್ಷಣೆಗೆ ಒಂದು ಮಾರ್ಗದರ್ಶಿ.
ಡಾ. ಬಿ ಎಸ್ ಶೈಲಜಾ ಅವರು ‘ಬಾನಿಗೊಂದು ಕೈಪಿಡಿ' ಸಂಪುಟವನ್ನು ಲೇಖಕರಾಗಿ, ಸಂಪಾದಕರಾಗಿ ರಚಿಸಿದ್ದಾರೆ. ‘ಹೊಸತು' ಪ್ರಾರಂಭದ ಸಂಚಿಕೆಯಿಂದಲೂ ‘ನಭಾವಲೋಕನ' ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ. ಬೆಂಗಳೂರು ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ನಿರ್ವಹಣೆ ಮತ್ತು ಬೋಧನೆ ಹಾಗೂ ಸಂಶೋಧನೆಯನ್ನೂ ಮಾಡಿದ ಶೈಲಜಾ ಅವರು, ಅದೇ ಸಂಸ್ಥೆಯ ನಿರ್ದೇಶಕರಾಗಿ ನಿವೃತ್ತರಾದರು. ಅವರು ಖಭೌತ ವಿಜ್ಞಾನದಲ್ಲಿ ಸಂಶೋಧನೆ ಮಾಡಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ನೂರಾರು ಜನಪ್ರಿಯ ವಿಜ್ಞಾನ ಲೇಖನಗಳನ್ನು ಬರೆದಿದ್ದಾರೆ. ಇವರ ಸಫಾರಿ ಎಂಬ ಲಕ್ಷುರಿ, ಶುಕ್ರಗ್ರಹದ ಸಂಕ್ರಮಣ, ಆಗಸದ ಅಲೆಮಾರಿಗಳು, ನನ್ನ ಮಿತ್ರ ಸೋರಣ್ಣ (ಬಿ.ಜಿ.ಎಸ್. ಹಾಲ್ಡೇನ್ ಅವರ ‘ಮೈ ಫ್ರೆಂಡ್ ಮಿ.ಲೀಕೀ’ ಅನುವಾದ) ಏನು? ಗಣಿತ ಅಂದ್ರಾ, ಬಾಲಂಕೃತ ಚುಕ್ಕಿ ಧೂಮಕೇತು, ಮುಂತಾದ ಕೃತಿಗಳನ್ನು ನವಕರ್ನಾಟಕ ಸಂಸ್ಥೆ ಪ್ರಕಟಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಇವರಿಗೆ ಸಂದಿವೆ.” ಎಂದು ಬರೆಯಲಾಗಿದೆ.