ಬಾನೆತ್ತರಕ್ಕೇರಿದ ಚಾನು!

ಬಾನೆತ್ತರಕ್ಕೇರಿದ ಚಾನು!

ಮೀರಾಬಾಯಿ ಚಾನು ಇಂದು ಎಲ್ಲರ ಬಾಯಲ್ಲಿ ನಲಿದಾಡುತ್ತಿರುವ ಹೆಸರು. ಮಣಿಪುರದ ಒಂದು ಸಣ್ಣ ಊರಿನಿಂದ ಬಂದು ನಮ್ಮ ದೇಶದ ಹೆಸರನ್ನು ಒಲಂಪಿಕ್ ಕ್ರೀಡಾಕೂಟದಲ್ಲಿ ಬೆಳಗಿಸಿದ ಅಪ್ಪಟ ಪ್ರತಿಭೆ. ‘ನಾನು ನನ್ನ ದೇಶಕ್ಕಾಗಿ ಒಂದು ಪದಕವನ್ನು ಖಂಡಿತಾ ಗೆದ್ದು ಬರುತ್ತೇನೆ' ಎಂದು ಅಂದಿನ ಕ್ರೀಡಾ ಸಚಿವರಾಗಿದ್ದ ಕಿರಣ್ ರಿಜೆಜು ಅವರಿಗೆ ಮಾತು ಕೊಟ್ಟಿದ್ದ ಮೀರಾಬಾಯಿ ಚಾನು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ಒಂದು ಗ್ರಾಮೀಣ ಪ್ರತಿಭೆ ಜಪಾನ್ ದೇಶದ ಟೋಕಿಯೋದಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಭಾರತದ ಪಾಲಿಗೆ ರಜತ ಪದಕವನ್ನು ಗಳಿಸಿಕೊಟ್ಟ ಮೀರಾಬಾಯಿ ಚಾನು ಅವರು ಸಾಗಿಬಂದ ಬದುಕನ್ನು ಅವರ ಮಾತಿನಲ್ಲೇ ಕೇಳಿ...

ನನ್ನ ಪೂರ್ತಿ ಹೆಸರು ಸೈಖೋಮ್ ಮೀರಾಬಾಯಿ ಚಾನು. ನಾನು ಹುಟ್ಟಿದ್ದು ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರದ ಇಂಫಾಲಾ ನಗರದಿಂದ ೩೦ ಕಿಮೀ ದೂರವಿರುವ ನೊಂಗ್ ಪೊಕ್ ಕಾಕಚಿಂಗ್ (Nongpok Kakching) ಎಂಬ ಊರಿನಲ್ಲಿ. ನನ್ನ ಹುಟ್ಟಿದ ದಿನ ೮ ಆಗಸ್ಟ್ ೧೯೯೪. ನಮ್ಮದು ಕೆಳ ಮಧ್ಯಮ ವರ್ಗದ ಕುಟುಂಬ. ನನ್ನ ತಂದೆ ಸೈಖೋಮ್ ಕೃತಿ ಮೈಟೈ ಹಾಗೂ ತಾಯಿ ಸೈಖೋಮ್ ಒಂಗ್ಬಿ ತೋಂಬಿ ಲೀಮಾ. ೬ ಮಂದಿ ಮಕ್ಕಳಲ್ಲಿ ನಾನು ಕೊನೆಯವಳು. ನಾವು ಮನೆಯಲ್ಲಿ ಒಲೆ ಉರಿಸಬೇಕಾದರೆ ಹತ್ತಿರದ ಗುಡ್ಡಗಾಡು ಪ್ರದೇಶಕ್ಕೆ ತೆರಳಿ ಕಟ್ಟಿಗೆ (ಸೌದೆ) ಯನ್ನು ಸಂಗ್ರಹಿಸಬೇಕಿತ್ತು. ನಿಮಗೊಂದು ಮಾತು ಹೇಳಲೇ ಬೇಕು. ಮಣಿಪುರ ಎಂದರೆ ನಮ್ಮ ದೇಶದ ಕ್ರೀಡಾ ರಾಜಧಾನಿಯಂತೆ ನನಗೆ ಭಾಸವಾಗುತ್ತದೆ. ಭಾರತದ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದ ಅನೇಕರು ಮಣಿಪುರ ಎಂಬ ಪುಟ್ಟ ರಾಜ್ಯದಿಂದಲೇ ಬಂದವರಾಗಿದ್ದಾರೆ. ಮೇರಿ ಕೋಮ್, ದೇವೇಂದ್ರೋ ಸಿಂಗ್, ಸರಿತಾ ದೇವಿ, ಕಲ್ಪನಾ ದೇವಿ, ಕುಂಜುರಾಣಿ ದೇವಿ, ಟಿಂಗೊನ್ ಲೈಮಾ ಚಾನು, ಸಂಧ್ಯಾರಾಣಿ ದೇವಿ... ಹೀಗೆ ಹತ್ತು ಹಲವಾರು ಹೆಸರುಗಳು ನನ್ನ ಮನದಲ್ಲಿ ಮೂಡುತ್ತಿವೆ.

ಮಣಿಪುರ ನಿಸರ್ಗ ಸೌಂದರ್ಯದ ತಪ್ಪಲು ಎಂದರೆ ಸುಳ್ಳಾಗಲಾರದು. ಬಾಲ್ಯದಿಂದಲೇ ಸುಂದರ ಪರಿಸರ, ಆಹ್ಲಾದಕರ ಆದರೆ ರೋಚಕ ಮಳೆಗಾಲ, ಅಲ್ಲಲ್ಲಿ ಹುಟ್ಟುವ ಜಲಪಾತ, ಮುಗಿಲು ಮುಟ್ಟುವಂತಿರುವ ಬೆಟ್ಟ ಗುಡ್ದಗಳು ಇವುಗಳನ್ನು ನೋಡುತ್ತಾ ಬೆಳೆದೆ. ಇಲ್ಲಿಯ ಜನರು ಶ್ರಮಜೀವಿಗಳು. ನಾನು ಮೊದಲೇ ಹೇಳಿದಂತೆ ಕಟ್ಟಿಗೆಯನ್ನು ಸಂಗ್ರಹಿಸಿಕೊಂಡು ಬರುವಾಗ ಆ ಕಟ್ಟಿಗೆಯ ದೊಡ್ಡ ಕಟ್ಟನ್ನು ಸುಲಭವಾಗಿಯೇ ಎತ್ತುತ್ತಿದ್ದೆ. ಬಾವಿಯಿಂದ ನೀರನ್ನು ತೆಗೆದು ತರುವಾಗಲೂ ನನಗೆ ಅಂತಹ ತ್ರಾಸೇನೂ ಆಗುತ್ತಿರಲಿಲ್ಲ. ಈ ವಿಷಯ ನನ್ನ ಅಣ್ಣ ಯಾವಾಗಲೂ ನನ್ನ ಬಳಿ ಕೇಳುತ್ತಿದ್ದ. ‘ನೀನು ಹೇಗೆ ಅಷ್ಟೊಂದು ದೊಡ್ಡ ಕಟ್ಟು ಕಟ್ಟಿಗೆಯನ್ನು ಸುಲಭವಾಗಿ ಎತ್ತುತ್ತೀಯಾ? ಎಂದು. ನನಗೆ ಆಗ ನನ್ನಲ್ಲಿ ಅಂತರ್ಗತವಾಗಿದ್ದ ಶಕ್ತಿಯ ಅರಿವು ಇರಲಿಲ್ಲ. ಏಕೆಂದರೆ ನನಗಾಗ ಬರೀ ೧೨ ವರ್ಷ. ಕಟ್ಟಿಗೆ ತಂದರೆ ಒಲೆ ಉರಿಯುತ್ತೆ. ಒಲೆ ಉರಿದರೆ ಹೊಟ್ಟೆ ತುಂಬುತ್ತೆ ಎಂಬ ವಿಷಯದ ಬಗ್ಗೆ ಮಾತ್ರ ನನಗೆ ಗಮನವಿತ್ತು. 

ನನಗೆ ಬಾಲ್ಯದಿಂದಲೂ ಆಸಕ್ತಿ ಇದ್ದುದು ಬಿಲ್ಗಾರಿಕೆ (ಆರ್ಚರಿ) ಯ ಕ್ರೀಡಾಪಟು ಆಗಬೇಕೆಂಬ ಆಸೆ. ಇದಕ್ಕಾಗಿ ತರಭೇತಿ ಪಡೆಯುವ ಆಸೆಯಿಂದ ನಾನು ಆರ್ಚರಿಯ ತರಭೇತಿ ಕೇಂದ್ರಕ್ಕೂ ಹೋಗಿದ್ದೆ. ನಾನು ಅಂದು ಹೋದಾಗ ತಡವಾಗಿದ್ದುದರಿಂದ ಕೇಂದ್ರ ಮುಚ್ಚಿತ್ತು. ನಿರಾಶೆಯಿಂದ ಮನೆಗೆ ಬಂದ ನನಗೆ ಯಾಕೋ ವೇಟ್ ಲಿಫ್ಟಿಂಗ್ (ಭಾರ ಎತ್ತುವಿಕೆ) ನಲ್ಲಿ ಯಾಕೆ ತರಭೇತಿ ಪಡೆಯಬಾರದು ಎಂದು ಅನಿಸಿತು. ಮೊದಲೇ ಅಣ್ಣನಿಗಿಂತ ಹೆಚ್ಚು ಭಾರ ಹೊರುವೆ ಎಂಬ ಹೊಗಳಿಕೆಯೂ ಸಿಕ್ಕಿತ್ತಲ್ಲಾ. ಆ ನನ್ನ ನಿರ್ಧಾರವನ್ನು ಗಟ್ಟಿ ಮಾಡಿ ವೇಟ್ ಲಿಫ್ಟಿಂಗ್ ಕಡೆಗೆ ನನ್ನ ಗಮನವನ್ನು ಕೇಂದ್ರೀಕರಿಸಿದೆ. ನನ್ನ ಈ ತೀರ್ಮಾನಕ್ಕೆ ನನ್ನ ಅಣ್ಣ ನೀಡಿದ ಬೆಂಬಲವನ್ನು ನಾನು ಸ್ಮರಿಸಿಕೊಳ್ಳಲೇಬೇಕು. 

ವೇಟ್ ಲಿಫ್ಟಿಂಗ್ ತರಭೇತಿ ಮತ್ತು ಶಿಕ್ಷಣ ಎರಡಕ್ಕೂ ಸಮಯ ಹೊಂದಿಸಲು ನಾನು ಬಹಳ ಕಷ್ಟ ಪಟ್ಟೆ. ಎರಡೆರಡು ಬಸ್ ಗಳನ್ನು ಬದಲಾಯಿಸಿಕೊಂಡು ಹೋಗಲು ನನಗೆ ಬಹಳ ಕಷ್ಟವಾಗುತ್ತಿತ್ತು. ತರಭೇತಿಯ ಫೀಸ್ ನೀಡಲೂ ನಾನು ಮತ್ತು ನನ್ನ ಕುಟುಂಬದವರು ಬಹಳ ಶ್ರಮ ಪಡಬೇಕಾಯಿತು. ಕೆಲವೊಮ್ಮೆ ನಾನು ಮನೆಯಲ್ಲೇ ಬಿದಿರಿನಿಂದ ಮಾಡಿದ ಭಾರದ ಸಾಧನವನ್ನು ಉಪಯೋಗಿಸಿ ತರಭೇತಿಯನ್ನು ಮಾಡಿಕೊಳ್ಳುತ್ತಿದ್ದೆ. ಹೀಗೆ ಪ್ರಾರಂಭಿಕ ದಿನಗಳಲ್ಲಿ ನಾನು ತುಂಬಾ ಶ್ರಮ ವಹಿಸಿದ್ದೇನೆ. 

ನನಗೆ ದೊಡ್ದ ಬ್ರೇಕ್ ಕೊಟ್ಟದ್ದು ೨೦೧೪ರ ಕಾಮನ್ ವೆಲ್ತ್ ಕ್ರೀಡಾಕೂಟ. ಗ್ಲಾಸ್ಗೋವ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ನಾನು ೪೮ ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡೆ. ಇದು ನನ್ನ ಜೀವನದ ಆಗಿನವರೆಗಿನ ದೊಡ್ದ ಪದಕವಾಗಿತ್ತು. ಆದರೆ ನನ್ನ ಗಮನವಿದ್ದುದು ೨೦೧೬ರ ರಿಯೋ ಒಲಂಪಿಕ್ ಕ್ರೀಡಾಕೂಟ. ನನ್ನ ಅಮ್ಮ ಸೈಖೋಮ್ ಒಂಗ್ಬಿ ತೋಂಬಿ ಲೀಮಾ ಅವರು ಜೀವಮಾನದಲ್ಲಿ ಒಟ್ಟು ಮಾಡಿ ಇಟ್ಟ ಹಣ ಹಾಗೂ ಹಳೆಯ ಒಡವೆಗಳನ್ನೆಲ್ಲಾ ಖರ್ಚು ಮಾಡಿ ನನಗಾಗಿ ಒಲಂಪಿಕ್ ಲಾಂಛನದ ಆಕೃತಿಯ ಬಂಗಾರದ ಕಿವಿಯೋಲೆಗಳನ್ನು ಮಾಡಿಸಿಕೊಟ್ಟಿದ್ದಳು. ಇದು ಖಂಡಿತಾ ರಿಯೋ ಒಲಂಪಿಕ್ಸ್ ನಲ್ಲಿ ಅದೃಷ್ಟ ತರುತ್ತದೆ ಎಂದು ಅವಳ ನಂಬಿಕೆಯಾಗಿತ್ತು.

ಆದರೆ ರಿಯೋ ಒಲಂಪಿಕ್ಸ್ ನನ್ನ ಪಾಲಿಗೆ ಆಶಾದಾಯಕವಾಗಿರಲಿಲ್ಲ. ೪೮ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ನಾನು ಆ ಸ್ಪರ್ಧೆಯನ್ನು ಮುಗಿಸಲಾರದೇ ಹೊರಬಂದೆ. ನನಗೆ ಯಾಕೋ ಆ ದಿನ ನನ್ನದಾಗಿರಲಿಲ್ಲ ಎಂದು ಈಗಲೂ ಅನಿಸಿತು. ಸೋತು ಹೊರಬಂದಾಗ ನಾನು ತುಂಬಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಆದರೆ ಈ ಖಿನ್ನತೆಯಿಂದ ಹೊರ ಬರಲು ನನ್ನ ಮನೆಯವರು, ಕೋಚ್ ಹಾಗೂ ನನ್ನ ಹಿತೈಷಿಗಳು ಬಹಳ ಸಹಾಯ ಮಾಡಿದರು. ಅವರೆಲ್ಲರ ಪ್ರೇರಣೆಯಿಂದ ನಾನು ಅಂದಿನ ಕರಾಳದಿನದ ಛಾಯೆಯಿಂದ ಹೊರಬಂದೆ. ಮತ್ತೆ ತರಭೇತಿಯನ್ನು ಪ್ರಾರಂಭಿಸಿದೆ. 

೨೦೧೭ರ ವರ್ಲ್ಡ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಅಮೇರಿಕಾದ ಅನ್ ಹೈಮ್ ನಲ್ಲಿ ನಡೆಯಿತು. ನಾನು ಆ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಂಗಾರದ ಪದಕಕ್ಕೆ ಕೊರಳೊಡ್ಡಿದೆ. ಈ ಬಂಗಾರದ ಪದಕ ನನಗೆ ನನ್ನ ಹಿಂದಿನ ಸೋಲಿನ ದುಃಖವನ್ನು ಮರೆಯಲು ಬಹಳ ಸಹಾಯ ಮಾಡಿತು. ನಂತರ ೨೦೧೮ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆದ್ದೆ. ಆ ಸಂಭ್ರಮವನ್ನು ನನಗೆ ಪದಗಳಲ್ಲಿ ವ್ಯಕ್ತ ಪಡಿಸಲು ಸಾಧ್ಯವಾಗುತ್ತಿಲ್ಲ. ಅಂದು ಒಟ್ಟಾರೆ ೧೯೬ ಕೆಜಿ (ಸ್ನಾಚ್ ಮತ್ತು ಕ್ಲೀನ್ ಆಂಡ್ ಜರ್ಕ್) ಭಾರವನ್ನು ಎತ್ತಿದ್ದೆ ನಾನು. ಆದರೆ ೨೦೧೯ರ ವರ್ಲ್ಡ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಒಟ್ಟಾರೆ ೨೦೧ ಕೆಜಿ ಭಾರವನ್ನು ಎತ್ತಿದರೂ ನಾಲ್ಕನೇಯವಳಾಗಿ ಆಟವನ್ನು ಮುಗಿಸಬೇಕಾಗಿ ಬಂತು. ಇದು ನನಗೆ ತುಂಬಾ ನೋವು ತಂದಿತು. ಆದರೆ ನನಗೆ ೨೦೨೦ರ ಟೋಕಿಯೋ ಒಲಂಪಿಕ್ಸ್ ಗೆ ತಯಾರಿ ಮಾಡುವುದು ಅಗತ್ಯವಿತ್ತು.

ಎಪ್ರಿಲ್ ೨೦೨೧ರಲ್ಲಿ ತಾಷ್ಕೆಂಟ್ ನಲ್ಲಿ ನಡೆದ ಏಷ್ಯನ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ೨೦೫ ಕೆಜಿ ಭಾರ ಎತ್ತಿ ಕಂಚಿನ ಪದಕವನ್ನು ಗಳಿಸಿದೆ. ಒಲಂಪಿಕ್ ಪಂದ್ಯಾವಳಿಯಲ್ಲಿ ಖಂಡಿತವಾಗಿಯೂ ದೇಶಕ್ಕೆ ಪದಕವನ್ನು ಗಳಿಸಿಕೊಡುತ್ತೇನೆ ಎಂದು ಅಂದಿನ ಕೇಂದ್ರ ಕ್ರೀಡಾ ಸಚಿವರಾಗಿದ್ದ ಕಿರಣ ರಿಜೆಜು ಅವರಿಗೆ ಮಾತು ಕೊಟ್ಟಿದ್ದೆ. ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ನೂತನ ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್ ಅವರು ಪಂದ್ಯಾವಳಿಗೆ ತೆರಳುವ ಮುನ್ನ ಶುಭ ಹಾರೈಸಿದ್ದನ್ನು ನಾನು ಮರೆಯಲಾರೆ.

ಜಪಾನ್ ದೇಶದ ಟೋಕಿಯೋದಲ್ಲಿ ಜುಲೈ ೨೩ರಂದು ಪ್ರಾರಂಭವಾದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆ ಪ್ರಾರಂಭವಾಗುವ ಮೊದಲು ಅಮ್ಮ ರಿಯೋ ಒಲಂಪಿಕ್ಸ್ ಸಮಯದಲ್ಲಿ ನನಗೆ ಅದೃಷ್ಟ ತರುತ್ತದೆ ಎಂದು ಮಾಡಿಸಿಕೊಟ್ಟಿದ್ದ ಅದೇ ಹಳೆಯ ಕಿವಿಯೋಲೆಯನ್ನು ಧರಿಸಿದೆ. ಈ ಸಲ ಇದು ನನಗೆ ಖಂಡಿತವಾಗಿಯೂ ಶುಭಕಾರಿಯಾಗಲಿದೆ ಎಂದು ನನ್ನ ಒಳಮನಸ್ಸು ಹೇಳುತಲಿತ್ತು. ನನ್ನ ಮನೆಯವರ ಹಾಗೂ ದೇಶದ ಪ್ರತಿಯೊಬ್ಬ ನಾಗರಿಕರ ಹಾರೈಕೆಯ ಫಲವಾಗಿ ನಾನು ೪೯ ಕೆಜಿ ವಿಭಾಗದಲ್ಲಿ ಒಟ್ಟು ೨೦೨ ಕೆ.ಜಿ.ಭಾರ ಎತ್ತಿ ರಜತ ಪದಕ ಗೆದ್ದೆ. ದೇಶಕ್ಕಾಗಿ ಗೆದ್ದ ಪದಕವನ್ನು ಕತ್ತಿಗೆ ಹಾಕಿಕೊಳ್ಳುವಾಗ (ಕೋವಿಡ್ ಕಾರಣದಿಂದ ವಿಜೇತರೇ ತಮ್ಮ ಪದಕಗಳನ್ನು ಕತ್ತಿಗೆ ಹಾಕಿಕೊಳ್ಳಬೇಕಾಗಿದೆ) ನನ್ನ ಕಣ್ಣಲ್ಲಿ ನೀರಿತ್ತು. ಅಮ್ಮನ ತ್ಯಾಗದ ನೆನಪೂ ಆಯಿತು. ನನ್ನ ಕೋಚ್ ವಿಜಯ್ ಶರ್ಮಾ ಅವರಿಗೆ ನಾನು ಈ ಸಂದರ್ಭದಲ್ಲಿ ಎಷ್ಟು ಧನ್ಯವಾದ ಹೇಳಿದರೂ ಸಾಕಾಗುವುದಿಲ್ಲ. ಅವರು ನನ್ನ ವಿಜಯದ ಪ್ರತೀ ಹಂತದಲ್ಲೂ ನನಗೆ ಬೆಂಬಲ ನೀಡಿದರು. 

ಭಾರತ ಸರಕಾರ ನನ್ನ ಸಾಧನೆಯನ್ನು ಗಮನಿಸಿ ೨೦೧೮ರಲ್ಲೇ ಪದ್ಮಶ್ರೀ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದೆ. ನನಗೀಗ ೨೬ ವರ್ಷ ವಯಸ್ಸು. ಇನ್ನೂ ಭಾರತ ದೇಶಕ್ಕಾಗಿ ಪದಕಗಳನ್ನು ಗೆಲ್ಲುವ ಹುಮ್ಮಸ್ಸಿದೆ. ಪದಕ ಗೆದ್ದು ದೇಶಕ್ಕೆ ಮರಳಿದಾಗ ನೀವೆಲ್ಲಾ ತೋರಿದ ಪ್ರೀತಿ ನಾನೆಂದೂ ಮರೆಯಲಾರೆ. ವಿಮಾನ ನಿಲ್ದಾಣದಲ್ಲಿ ಅಮ್ಮನನ್ನು ನೋಡಿ ತುಂಬಾನೇ ಭಾವುಕಳಾದೆ. ತರಭೇತಿಯ ಕಾರಣದಿಂದ ನಾನು ಅವಳಿಂದ ಬಹು ಸಮಯದ ತನಕ ದೂರವಿದ್ದೆ. ನನ್ನ ಇಷ್ಟದ ಪಿಜ್ಜಾ ಸಹ ತಿನ್ನದೇ ತುಂಬಾ ದಿನ ಆಯಿತು ಎಂದು ನಾನು ಗೆದ್ದ ಬಳಿಕ ಒಂದು ಮಾತುಕತೆಯಲ್ಲಿ ಹೇಳಿದ್ದೆ. ಈಗ ಎಲ್ಲಿ ಹೋದರೂ ನನಗೆ ತಿನ್ನಲು ಪಿಜ್ಜಾ ತರಿಸಿಕೊಡುತ್ತಾರೆ. ಮೊನ್ನೆ ಸಚಿವರಾದ ಕಿರಣ್ ರಿಜೆಜು ಅವರನ್ನು ಭೇಟಿಯಾಗಲು ಹೋದಾಗ ‘ನೀನು ನನಗೆ ಹಿಂದೆ ಕೊಟ್ಟ ಮಾತು ಉಳಿಸಿಕೊಂಡೆ, ಅಭಿನಂದನೆಗಳು' ಎಂದು ಖುಷಿ ಪಟ್ಟರು. ಅವರ ಹಾಗೂ ದೇಶದ ಕೋಟ್ಯಾಂತರ ಜನರ ಹಾರೈಕೆಯೇ ನನ್ನಿಂದ ಈ ಸಾಧನೆಯನ್ನು ಮಾಡಿಸಿದೆ ಎಂದು ನನ್ನ ನಂಬಿಕೆ. ಈ ಕಾರಣದಿಂದಲೇ ನಾನು ಗೆದ್ದ ರಜತ ಪದಕವನ್ನು ಭಾರತದ ಕೋಟ್ಯಾಂತರ ಜನರಿಗೆ ಅರ್ಪಿಸಿದ್ದೇನೆ. ನನ್ನ ಈ ಸಾಧನೆಯನ್ನು ನೋಡಿ ಇನ್ನಷ್ಟು ಕ್ರೀಡಾಳುಗಳು ಭವಿಷ್ಯದಲ್ಲಿ ಭಾರತಕ್ಕೆ ಕೀರ್ತಿ ತರಲಿ ಎಂದು ಹಾರೈಸಿ, ನನ್ನ ಮಾತುಗಳಿಗೆ ವಿರಾಮ ಹೇಳುವೆ.

***

ಇದು ಟೋಕಿಯೋ ಒಲಂಪಿಕ್ಸ್ ನಲ್ಲಿ ರಜತ ಪದಕ ಗೆದ್ದ ಮೀರಾಬಾಯಿ ಚಾನು ಅವರ ಮನದಾಳದ ಮಾತುಗಳು. ಅವರ ಬದುಕು, ಸಾಧನೆ ಉದಯೋನ್ಮುಖ ಕ್ರೀಡಾಳುಗಳಿಗೆ ಪ್ರೇರಣೆಯಾಗಲಿ. ಭಾರತಕ್ಕೆ ಭವಿಷ್ಯದಲ್ಲಿ ಇನ್ನಷ್ಟು ಪದಕಗಳು ಬರಲಿ ಎಂಬ ಹಾರೈಕೆಯೊಂದಿಗೆ, ಮೀರಾಬಾಯಿ ಚಾನು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ.

ಚಿತ್ರ ಕೃಪೆ: ಅಂತರ್ಜಾಲ ತಾಣ