ಬಾಬಾ ತೆರೆದದ್ದು ಒಂದೇ ಕಣ್ಣೇ?!

ಬಾಬಾ ತೆರೆದದ್ದು ಒಂದೇ ಕಣ್ಣೇ?!

ಬರಹ

(ನಗೆ ನಗಾರಿ ಆಧ್ಯಾತ್ಮ ಬ್ಯೂರೋ)

ಬೆಂಗಳೂರಿನ ಬಸವನಗುಡಿಯ ಸಮೀಪದ ಗವಿಗಂಗಾಧರೇಶ್ವರ ನಗರದ ಮನೆಯೊಂದರಲ್ಲಿ ವಿಸ್ಮಯ ನಡೆದಿರುವುದು ವರದಿಯಾಗಿದೆ. ಶಿರಡಿ ಸಾಯಿ ಬಾಬಾರ ಮಣ್ಣಿನ ಮೂರ್ತಿಯೊಂದು ಸರಿಯಾಗಿ ಗುರುವಾರದ ಗುರು ಪೌರ್ಣಮಿಯಂದು ಎಡಗಳನ್ನು ತೆರೆದಿದೆ! ಅದನ್ನು ಸಾಯಿಬಾಬಾ ಕೃಪಾಕಟಾಕ್ಷ ಎಂದುಕೊಂಡು ಭಕ್ತರು ದಾಂಗುಡಿ ಇಡುತ್ತಿದ್ದಾರೆ, ನಾಸ್ತಿಕರು ಉಡಾಫೆಯಿಂದಲಾದರೂ ಒಮ್ಮೆ ನೋಡಿಕೊಂಡು ಬರಲು ಸಾಲು ನಿಂತಿದ್ದಾರೆ. ಟಿವಿ ಚಾನಲ್‌ಗಳು ಸಿಕ್ಕಿತೆಮಗಿಂದು ರಸಗವಳ ಎಂದುಕೊಂಡು ನಾಲ್ಕು-ಐದು ತಾಸು ತಮ್ಮನ್ನು ಹರಾಜು ಹಾಕಿಕೊಂಡಿವೆ. ಪತ್ರಿಕೆಗಳು ಜನಮರುಳೋ, ಜಾತ್ರೆ ಮರುಳೋ ಸಂಪಾದಕರಿಗೆ ಮರುಳೋ ತಿಳಿಯದೆ ಕಂಗಾಲಾಗಿವೆ. ಈ ಮಧ್ಯೆ ಸುದ್ದಿಯ ಆಜುಬಾಜುಗಳನ್ನು ತಡಕಿ ವರದಿ ಮಾಡುವ ನಗೆ ಸಾಮ್ರಾಟರು ಸಾಯಿ ಬಾಬಾ ತೆರೆದದ್ದು ಒಂದೇ ಕಣ್ಣನ್ನೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸಾಯಿಬಾಬಾ ಒಂದೇ ಕಣ್ಣು ತೆರೆದದ್ದು ಏಕೆ ಎಂದು ತಮ್ಮೆರಡು ಕಣ್ಣುಗಳ ಮೇಲೆ ಚಾಳೀಸು ಏರಿಸಿಕೊಂಡು ತನಿಖೆಗೆ ಇಳಿದಿದ್ದಾರೆ.

ತನಿಖೆಗೆ ಹೊರಟಿದ್ದ ನಗೆ ಸಾಮ್ರಾಟರು ತಮ್ಮ ಎಂದಿನ ಚಾಕಚಕ್ಯತೆಯಿಂದ ತನಿಖೆಗೆ ತಯಾರಿ ಮಾಡಿಕೊಂಡರು. ಉದ್ಗ್ರಂಥಗಳನ್ನು ಓದಿ, ದೊಡ್ಡವರನ್ನು ಮಾತನಾಡಿಸಿ ವಿಷಯ ಸಂಗ್ರಹಿಸುವುದು ಅವರ ವಾಡಿಕೆ. ಹಿಂದೊಮ್ಮೆ ಯಾರೋ ಬುದ್ಧಿವಂತರು ಲಂಕೇಶರ ಬಗ್ಗೆ ಹೇಳಿದ್ದು ಗಮನಕ್ಕೆ ಬಿತ್ತು. ಅಡಿಗರ ಕಾವ್ಯವನ್ನು ಮೆಚ್ಚಿ ಲಂಕೇಶರು ಅಡಿಗರು ನನ್ನ ಕಣ್ಣ ತೆರೆಸಿದರು ಎಂದು ಹೇಳಿಕೊಂಡಿದ್ದರು. ಅದಕ್ಕೆ ಟಾಂಗು ಕೊಟ್ಟ ಮಹಾಶಯರಾರೋ ಅಡಿಗರು ತೆರೆಸಿದ್ದು ಲಂಕೇಶರ ಒಂದೇ ಕಣ್ಣನ್ನೇ ಎಂದು ಗೇಲಿ ಮಾಡಿದ್ದರು, ಡಯಾಬಿಟಿಸ್ ಅವರಿಗೆ ಕರುಣಿಸಿದ ಒಂಟಿ ಕಣ್ಣನ್ನು ಹೀಯಾಳಿಸಿ. ಬಹುಶಃ ಈ ಸಂಗತಿ ತನಿಖೆಯಲ್ಲಿ ಸಹಾಯವಾಗಬಹುದು ಎಂದು ಸಾಮ್ರಾಟರು ನೋಟ್ ಮಾಡಿಟ್ಟುಕೊಂಡರು.

ಸಾಮ್ರಾಟರು ಬ್ಲ್ಯಾಕ್ ಟಿಕೆಟ್ಟು ತೆಗೆದುಕೊಂಡು ಪೊಲೀಸರಿಗೆ ಬೆಚ್ಚಗೆ ಮಾಡಿ ಸಾಲಿನಲ್ಲಿ ಮುಂದಕ್ಕೆ ಹಾರಿ ಬಸವನಗುಡಿಯ ಆ ಮನೆಗೆ ಹೋಗಿ ಶಿರಡಿ ಬಾಬಾರ ವಿಗ್ರಹವನ್ನು ತದೇಕ ಚಿತ್ತದಿಂದ ನೋಡುತ್ತಾ ಕುಳಿತರು. ಒಮ್ಮೆಗೆ ಸಾಯಿ ಬಾಬಾ ಕಣ್ಣು ಮಿಟುಕಿಸಿದಂತೆ ಭಾಸವಾಗಿ ಸಾಮ್ರಾಟರಿಗೆ ಕಣ್ಣು ಕತ್ತಲೆ ಬಂದಂತಾಯ್ತು. ಸಾವರಿಸಿಕೊಂಡು ವಿಗ್ರಹದ ಆಜುಬಾಜು ಪರೀಕ್ಷಿಸಲು ಮುಂದಾದರು. ಏನೂ ಕಾಣಲಿಲ್ಲ. ಇನ್ನೂ ಹೆಚ್ಚು ಪ್ರಯತ್ನ ಪಟ್ಟರೆ ಅಲ್ಲಿನ ಭಕ್ತರು-ಆದಿಗಳು ತಮ್ಮನ್ನು ಚಚ್ಚಿ ಬದನೇಕಾಯಿ ಮಾಡುತ್ತಾರೆಂಬ ಎಚ್ಚರದಿಂದ ತಣ್ಣಗೆ ಕುಳಿತು ಯೋಚಿಸಲು ಶುರು ಮಾಡಿದರು. ಥಟ್ಟನೆ ಸಾಮ್ರಾಟರಿಗೆ ಒಕ್ಕಣ್ಣು ಶುಕ್ಲಾಚಾರ್ಯರ ನೆನಪಾಯಿತು. ಕೃಷ್ಣನ ಕೈಲಿ ದರ್ಭೆಯಿಂದ ಚುಚ್ಚಿಸಿಕೊಂಡು ಒಂದು ಕಣ್ಣು ಕುರುಡಾಗಿಸಿಕೊಂಡ ಆ ಆಚಾರ್ಯರನ್ನು ಒಕ್ಕಣ್ಣು ಶುಕ್ಲಾಚಾರ್ಯರು ಎಂದು ಕರೆಯಲು ಶುರುವಾಯಿತು. ಬಹುಶಃ ಈ ಬಾಬಾರಿಗೂ ಎರಡು ಕಣ್ಣುಗಳಿದ್ದು ಒಂದು ಕಣ್ಣನ್ನು ಭಕ್ತರ ಭಕ್ತಿ ಏನಾದರೂ ಮುಚ್ಚಿಸಿಬಿಟ್ಟಿದೆಯಾ ಎಂದು ಸಾಮ್ರಾಟರಿಗೆ ಸಂಶಯ ಬಂತು. ಹತ್ತಿರದಲ್ಲಿ ಅಂಥ ಭಕ್ತರು ಯಾರಾದರೂ ಇದ್ದಾರೆಯಾ ಎಂದು ಹುಡುಕಿಸಿದರು. ಪ್ರಯೋಜನವಾಗಲಿಲ್ಲ. ಆ ಆಯಾಮವನ್ನು ಕೊಂಚ ಬದಿಗಿಟ್ಟು ಯೋಚಿಸಲು ಶುರು ಮಾಡಿದರು.

ಹಿಂದೊಮ್ಮೆ ಗಣೇಶ ಹಾಲು ಕುಡಿದ ಪವಾಡ ಕಾಳ್ಗಿಚ್ಚಿನಂತೆ ವ್ಯಾಪಿಸಿದ್ದಾಗ ನಗೆ ಸಾಮ್ರಾಟರು ತನಿಖೆ ಕೈಗೊಂಡು ಸತ್ಯಾಂಶವನ್ನು ಬಯಲು ಮಾಡಿದ್ದರು. ಗಣೇಶ ಬರೀ ಹಾಲು ಕುಡಿಯುತ್ತಾನೆ ಎಂಬುದು ಭಕ್ತ ಜನರು ಹಬ್ಬಿಸಿರುವ ವದಂತಿ. ಆತ ನೀರನ್ನೂ ಕುಡಿಯುತ್ತಾನೆ, ಪೆಪ್ಸಿ ಕೋಲಗಳನ್ನೂ ಕುಡಿಯುತ್ತಾನೆ, ಒಟ್ಟಿನಲ್ಲಿ ದ್ರವವಾದ ಏನನ್ನಾದರೂ ಕುಡಿಯುತ್ತಾನೆ ಎಂದು ಸಾಮ್ರಾಟರು ತಮ್ಮ ತನಿಖೆಯಿಂದ ಸಾಬೀತು ಮಾಡಿದ್ದರು.(ಆದರೆ ಆ ವರದಿಯ ಲಿಂಕನ್ನು ಕೊಡೋಣವೆಂದರೆ ಭಕ್ತಾದಿಗಳನ್ನು ಅದನ್ನು ಎಗರಿಸಿ ಬಿಟ್ಟಿದ್ದಾರೆ!) ಈಗ ಬಾಬಾ ಪವಾಡದ ಹಿಂದಿನೆ ರಹಸ್ಯವನ್ನು ಬೇಧಿಸಲು ತಿಣುಕಿ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಕರೆಸಿಕೊಂಡರು.

ಕುಚೇಲ ಸಹ ‘ನವಗ್ರಹ’ ಟಿವಿಗಳ ಕಾಟದಿಂದ ಮೂರ್ತಿಯನ್ನು ತಪ್ಪಿಸಿ ಮೂಲೆಗೆ ತೆಗೆದುಕೊಂಡು ಹೋಗಿ ಪರೀಕ್ಷಿಸಿದ. ಅನಂತರ ಏನೋ ಗೂಢವಾದದ್ದನ್ನು ಕಂಡು ಹಿಡಿದವನ ಹಾಗೆ ಮುಖವನ್ನು ಕೆಳಗೆ ಹಾಕಿಕೊಂಡ. ಏನೆಂದು ಕೇಳಿದರು ಸಾಮ್ರಾಟ್. ‘ಬಾಬಾ ಅಳುತ್ತಿದ್ದಾರೆ, ಅದೂ ಒಂದೇ ಕಣ್ಣಲ್ಲಿ’ ಎಂದ ಚೇಲ. ‘ಯಾಕಂತೆ ಕೇಳು’ ಪುಸಲಾಯಿಸಿದರು ಸಾಮ್ರಾಟ್. ‘ತಾನು ಭಕ್ತರ ಪ್ರೀತಿಗೆ ಮೆಚ್ಚಿ ಕೃಪಾಕಟಾಕ್ಷ ಬೀರೋಣ ಅಂದುಕೊಂಡು ಎರಡೂ ಕಣ್ಣು ತೆರೆಯುವವನಿದ್ದೆ. ಒಂದು ಕಣ್ಣು ತೆರೆಯುತ್ತಿದ್ದ ಹಾಗೆಯೇ ಭಕ್ತರು ನನಗೆ ನಮಿಸುವುದನ್ನು ಮರೆತು ಟಿವಿಯವರಿಗೆ ಫೋನ್ ಮಾಡಲು ನುಗ್ಗಿದರು. ನನಗೆ ಗಾಬರಿಯಾಗಿ ಇನ್ನೊಂದು ಕಣ್ಣು ತೆರೆಯದೆ ಹಾಗೇ ಇಟ್ಟುಕೊಂಡಿರುವೆ. ಮೇಲಾಗಿ ಬೆಂಗಳೂರಿನ ಈ ಮಾಲಿನ್ಯಗೊಂಡ ಹವೆಯಲ್ಲಿ ಎರಡೂ ಕಣ್ಣು ತೆರೆದಿಡುವುದು ರಿಸ್ಕು ಅಲ್ಲವಾ?’ ಎಂದರಂತೆ ಬಾಬಾ. ಸಾಮ್ರಾಟರು ಕುತೂಹಲದಿಂದ ಕೇಳಿದ್ದನ್ನೆಲ್ಲಾ ನೋಟ್ ಮಾಡಿಟ್ಟುಕೊಂಡರು.

ಈ ಮಧ್ಯೆ ಬಾಬಾ ಒಂಟಿ ಕಣ್ಣನ್ನು ತೆರೆದಿರುವುದು ಸಂತೋಷಕ್ಕೋ ದುಃಖಕ್ಕೋ ಎಂದು ಭಕ್ತಾದಿಗಳು ತಲೆ ಕೆಡಿಸಿಕೊಳ್ಳುತ್ತಿದ್ದರು. ಕೆಲವು ಲೌಕಿಕರು ಬಾಬಾ ಮೂರ್ತಿ ನೋಡುವುದಕ್ಕೆ ಫೀಸು ಜಾಸ್ತಿಯಾಯ್ತಲ್ಲವಾ ಎಂದು ಗೊಣಗುತ್ತಿದ್ದರು. ಇನ್ನೂ ಕೆಲವು ಉಗ್ರ ವ್ಯಗ್ರ ಭಕ್ತಾದಿಗಳು ಪತ್ರಕರ್ತರು, ಬುದ್ಧಿ ಜೀವಿಗಳು, ನಾಸ್ತಿಕರು, ವಿಚಾರವಾದಿಗಳು ಹಾಗೂ ವಿಜ್ಞಾನಿಗಳಿಗೆ ಪ್ರವೇಶವಿಲ್ಲ ಎಂದು ಒಂದು ಬೋರ್ಡನ್ನು ಬರೆಸುತ್ತಿದ್ದರು. ಕೆಲವೆಡೆ ಮುಗ್ಧ ಭಕ್ತರು ತಮ್ಮ ಮನೆಯ ಮೂರ್ತಿಗಳ ಮುಂದೆ ಕುಳಿತುಕೊಂಡು ‘ಒಂದು ಕಣ್ಣಾದರೂ ತೆರೆದು ಸೇವೆಯನು ಕೊಡು ಪ್ರಭುವೆ...’ ಎಂದು ಭಕ್ತಿರಸವನ್ನು ಹರಿಸಿ ಹಾಡುತ್ತಿದ್ದದ್ದು ಕಂಡು ಬಂದಿತು. ಕೆಲವು ತತ್ವಜ್ಞಾನಿಗಳು ಬಾಬಾ ಒಂದು ಕಣ್ಣು ತೆರೆದರೋ ಅಥವಾ ತೆರೆದಿದ್ದ ಎರಡು ಕಣ್ಣುಗಳಲ್ಲಿ ಒಂದನ್ನು ಮುಚ್ಚಿದರೋ ಎಂದು ಗಾಢವಾಗಿ ಸಮಾಲೋಚಿಸುತ್ತಿದ್ದರು. ಕೆಲವು ತುಂಟ ಪಡ್ಡೆಗಳು ಬಾಬಾ ಯಾರಿಗೆ ಕಣ್ಣು ಹೊಡೆಯುತ್ತಿದ್ದಾರೆ ಅಂತ ತನಿಖೆಗೆ ಇಳಿದುಬಿಟ್ಟಿದ್ದವು. ಇನ್ನೂ ಕೆಲವು ತರ್ಕ ಬುದ್ಧಿಗಳು ‘ಬಾಬಾ ಎರಡು ಕಣ್ಣು ತೆರೆದಿಲ್ಲ. ಇಲ್ಲೇ ಇರೋದು ಲಾಜಿಕ್! ಎರಡೂ ಕಣ್ಣು ತೆರೆದಿರುವ ವಿಗ್ರಹಗಳು ಸಾವಿರಾರು ಸಿಕ್ಕುತ್ತವೆ. ಜನರ್ಯಾರೂ ಅವುಗಳ ಹಿಂದೆ ಬೀಳುವುದಿಲ್ಲ. ಆದರೆ ಒಂದೇ ಕಣ್ಣು ತೆರೆದರೆ ಅಲ್ಲವೇ ಜನರನ್ನು ಸೆಳೆಯುವುದಕ್ಕೆ ಆಗುವುದು?’ ಎಂದು ಮೆಲ್ಲಗೆ ಪಕ್ಕದವನಲ್ಲಿ ಪಿಸುಗುಟ್ಟುತ್ತಿದ್ದ. ದೂರದಲ್ಲಿ ಕುಳಿತಿದ್ದ ವೇದಾಂತಿ, ‘ಪ್ರತಿ ಬೆಳಗು, ಪ್ರತಿ ಇರುಳು, ಸುಯ್ವ ತಂಗಾಳಿ ಎಲ್ಲವೂ ದೇವರ ಪವಾಡ ಅದನ್ನು ನೋಡಿ ಪರವಶವಾಗುವ ಬದಲು ಜನ ಇಲ್ಲಿ ಸಾಲುಗಟ್ಟಿ ತೂಕಡಿಸುತ್ತಿದ್ದಾರೆ’ ಎಂದು ತನ್ನಷ್ಟಕ್ಕೆ ಗೊಣಗಿಕೊಳ್ಳುತ್ತಿದ್ದ.

ಸಾಮ್ರಾಟರು ತಿಣುಕಿ, ಚಡಪಡಿಸಿ ಕೊನೆಗೂ ರಹಸ್ಯವನ್ನು ಬಯಲು ಮಾಡಿದರು. ಅದನ್ನು ಜಗಜ್ಜಾಹೀರುಗೊಳಿಸಲು ತೀರ್ಮಾನಿಸಿದ್ದಾರೆ. ಭಗವಂತನ ಸಂದೇಶವನ್ನು ಮಾನವ ಕುಲಕ್ಕೆ ತಿಳಿಸಲು ಬಯಸಿದ್ದಾರೆ. ಅವರ ವರದಿ ಹೀಗಿದೆ: ‘ವಿಜ್ಞಾನ ಹಾಗೂ ಆಧ್ಯಾತ್ಮ ಇವೆರಡು ನಿಸರ್ಗದ ಎರಡು ಕಣ್ಣುಗಳು. ಒಂದು ಕಣ್ಣು ಹೊರಗಿನದನ್ನು ನೋಡಲು. ವಿಜ್ಞಾನ ನಮಗೆ ಹೊರಗಿನ ಜಗತ್ತಿನ ಸಂಗತಿಗಳನ್ನು, ವಿಸ್ಮಯಗಳನ್ನು ನೋಡಲು ಸಹಾಯ ಮಾಡುತ್ತದೆ. ಇದರಿಂದ ಲೌಕಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಇನ್ನೊಂದು ಕಣ್ಣು ಒಳಗಣ್ಣು. ಇದು ಆಧ್ಯಾತ್ಮದ ಕಣ್ಣು. ಇದು ನಮ್ಮೊಳಗನ್ನು ನಮಗೆ ದರ್ಶಿಸುವ ಕಣ್ಣು. ಇದರಿಂದ ಮನುಷ್ಯ ಮನೋಲೋಕದ ವಿಸ್ಮಯಗಳನ್ನು, ಮನಸ್ಸಿನ ಆಳ ಅಗಲಗಳನ್ನು, ತನ್ನ ಪ್ರಜ್ಞೆಯ ಮಹತ್ತನ್ನು ಕಾಣಬಹುದು. ಬಾಬಾ ಈ ಸಂದೇಶವನ್ನು ಸಾರುವುದಕ್ಕಾಗಿಯೇ ಒಂದು ಕಣ್ಣನ್ನು ತೆರೆದು ಮತ್ತೊಂದು ಕಣ್ಣನ್ನು ಮುಚ್ಚಿಕೊಂಡು ಕುಳಿತಿದ್ದಾರೆ.’