ಬಾಯಿಯ ದುರ್ವಾಸನೆಯನ್ನು ದೂರವಾಗಿಸಲು ಸುಲಭೋಪಾಯ

ಬಾಯಿಯ ದುರ್ವಾಸನೆಯನ್ನು ದೂರವಾಗಿಸಲು ಸುಲಭೋಪಾಯ

ನಾವು ದಿನಂಪ್ರತಿ ಹಲವಾರು ವ್ಯಕ್ತಿಗಳನ್ನು ಭೇಟಿಯಾಗುವ ಪ್ರಸಂಗ ಬರುತ್ತದೆ. ಕೆಲವರ ಬಳಿ ಮಾತನಾಡುವುದು ಹಿತಕರ ಎನಿಸಿದರೂ ಕೆಲವರ ಬಳಿ ಮುಖಕ್ಕೆ ಮುಖ ಕೊಟ್ಟು ಮಾತನಾಡುವಾಗ ಅವರ ಬಾಯಿಯಿಂದ ಬರುವ ದುರ್ವಾಸನೆಗೆ ಮೂಗು ಮುಚ್ಚಿಕೊಳ್ಳುವ ಎಂದು ಮನಸ್ಸಾಗುತ್ತದೆ. ಹೀಗೇಕೆ? ಇದಕ್ಕೆ ಕಾರಣಗಳು ಹಲವಾರು ಸರಿಯಾಗಿ ಬ್ರಷ್ ಮಾಡದೇ ಇರುವುದು, ಸೂಕ್ತವಾದ ಮೌತ್ ವಾಶ್ ಬಳಸದಿರುವುದು, ಆಹಾರ ಸೇವನೆಯ ಬಳಿಕ ಸರಿಯಾಗಿ ಬಾಯಿ ತೊಳೆಯದೇ ಇರುವುದು ಹೀಗೆ ಹಲವಾರು ಕಾರಣಗಳು ಇರುತ್ತವೆ. 

ಈ ಬಾಯಿಯ ದುರ್ವಾಸನೆಯ ಸಮಸ್ಯೆಯಿಂದ ಆ ವ್ಯಕ್ತಿಗೆ ಸಾಮಾಜಿಕವಾಗಿ ಹಲವಾರು ತೊಂದರೆಗಳು ಎದುರಾಗುತ್ತವೆ. ಆ ವ್ಯಕ್ತಿಯ ಬಳಿ ಮಾತನಾಡಲೂ ಜನರು ಹಿಂಜರಿಯುತ್ತಾರೆ. ಹೀಗಾಗಿ ಆ ವ್ಯಕ್ತಿಯ ಆತ್ಮ ವಿಶ್ವಾಸ ಕುಸಿದುಹೋಗುವ ಸಾಧ್ಯತೆ ಇದೆ. ಇದು ಆತನ ವೈಯಕ್ತಿಕ ಹಾಗೂ ವ್ಯವಹಾರಿಕ ಜೀವನದಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ಮೌತ್ ವಾಶ್ ಗಳು ಮಾರುಕಟ್ಟೆಯಲ್ಲಿ ನೂರಾರು ಸಿಗುತ್ತವೆ. ಕೆಲವು ಪರಿಣಾಮಕಾರಿಯಾಗಿದ್ದರೂ ದುಬಾರಿಯಾಗಿರುತ್ತವೆ. ಕೆಲವು ತುಂಬಾ ಕಳಪೆಯಾಗಿದ್ದು ನಮ್ಮ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ. ಈ ಬಾಯಿಯ ದುರ್ವಾಸನೆಗೆ ಆಯುರ್ವೇದದಲ್ಲಿ ಉತ್ತಮ ಪರಿಹಾರವಿದೆ. ಮನೆಯಲ್ಲೇ ದೊರಕುವ ವಸ್ತುಗಳಿಂದ ನೀವು ಸುಲಭವಾಗಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು.

ಬೇಕಾಗುವ ವಸ್ತುಗಳು: ಯಷ್ಟಿ ಮಧು ಹುಡಿ (Liquorice, ಅತಿಮಧುರ) ೨೫ ಗ್ರಾಂ, ಹುರಿದ ಜೀರಿಗೆ ಹುಡಿ - ೨೫ ಗ್ರಾಂ, ಬಡೆ ಸೋಂಪು ಹುಡಿ - ೨೫ ಗ್ರಾಂ, ಹುರಿದ ಎಳ್ಳು - ೨೫ ಗ್ರಾಂ, ಜಾಯಿಕಾಯಿ ಹುಡಿ - ೧೦ ಗ್ರಾಂ, ಹರಳೆಣ್ಣೆ - ೨೫ ಗ್ರಾಂ, ಸೈಂಧವ ಲವಣ ಹುಡಿ - ೨೫ ಗ್ರಾಂ 

ತಯಾರಿಕಾ ವಿಧಾನ: ಮೊದಲು ಯಷ್ಟಿ ಮಧು ಅಥವಾ ಅತಿಮಧುರ ಹುಡಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ. ನಂತರ ಹುರಿದ ಜೀರಿಗೆ ಹುಡಿ ಮತ್ತು ಬಡೆ ಸೋಂಪು ಹುಡಿ ಸೇರಿಸಿ. ಅದರ ನಂತರ ಹುರಿದ ಎಳ್ಳು, ಜಾಯಿಕಾಯಿ, ಹರಳೆಣ್ಣೆ ಮತ್ತು ಸೈಂಧವ ಲವಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಚೂರ್ಣವನ್ನು ತಯಾರಿಸಿ. ಬಾಯಿಯ ದುರ್ವಾಸನೆಯ ಸಮಸ್ಯೆ ಇರುವವರು ಅರ್ಧ ಚಮಚ ಈ ಚೂರ್ಣವನ್ನು ಬಾಯಿಯಲ್ಲಿಟ್ಟು ಚೆನ್ನಾಗಿ ಜಗಿಯಬೇಕು. ಇದನ್ನು ಬೆಳಿಗ್ಗೆ ಹಾಗೂ ಸಂಜೆ ಎರಡು ಹೊತ್ತು ಮಾಡಬೇಕು. ಇದರಿಂದ ಬಾಯಿಯ ದುರ್ವಾಸನೆ ದೂರವಾಗುವುದಲ್ಲದೇ ವಸಡಿನ ಉರಿಯೂತ ಮತ್ತು ಸೋಂಕು ಇದ್ದರೆ, ಅದರಿಂದಲೂ ನಿಧಾನವಾಗಿ ಪರಿಹಾರ ಸಿಗುತ್ತದೆ.

ಇದಕ್ಕೆ ಬಳಸುವ ವಸ್ತುಗಳ ಪ್ರಯೋಜನ: ಯಷ್ಟಿ ಮಧು: ಇದು ಬಾಯಿ ಹುಣ್ಣು ನಿವಾರಣೆ , ಹುಣ್ಣು ನಿವಾರಣೆ, ಹೊಟ್ಟೆಯಲ್ಲಿ ನಡೆಯುವ ಜೀರ್ಣಕ್ರಿಯೆಗೆ ಸಹಕಾರಿ. 

ಜೀರಿಗೆ: ಜೀರಿಗೆ ಬಾಯಿಯಲ್ಲಿ ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಲಾಲಾ ರಸದ ಪ್ರಮಾಣ ಅಧಿಕವಾಗಿರುವ ಕಾರಣ ದುರ್ವಾಸನೆ ಹುಟ್ಟಿಸುವ ಕೆಲವು ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಜೀರ್ಣ ಕ್ರಿಯೆಗೂ ಜೀರಿಗೆ ಸಹಕಾರಿ.

ಬಡೆ ಸೋಂಪು: ಹೋಟೇಲುಗಳಲ್ಲಿ ಊಟವಾದ ಬಳಿಕ ಬಡೆ ಸೋಂಪು ನೀಡುವ ಕ್ರಮ ಇದೆ. ಇದಕ್ಕೆ ಕಾರಣ ಸೋಂಪು ಬಾಯಿಯಲ್ಲಿ ಜೊಲ್ಲು ರಸವನ್ನು ಉತ್ತೇಜಿಸುತ್ತದೆ. ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ಬಾಯಿಯ ದುರ್ವಾಸನೆಯನ್ನು ದೂರಮಾಡುತ್ತದೆ.

ಜಾಯಿ ಕಾಯಿ: ಬಾಯಿಯ ದುರ್ವಾಸನೆಯನ್ನು ನಿಯಂತ್ರಿಸಲು ಜಾಯಿಕಾಯಿ ಬಹಳ ಉಪಯುಕ್ತ. ಇದರ ಸೇವನೆಯಿಂದ ಬಾಯಿಯಲ್ಲಿ ಜೊಲ್ಲುರಸದ ಉತ್ಪಾದನೆಯೂ ಹೆಚ್ಚುತ್ತದೆ. 

ಸೈಂಧವ ಲವಣ: ಲಾಲಾ ರಸವನ್ನು ಪ್ರಚೋದಿಸಲು ಮತ್ತು ಬಾಯಿಯಲ್ಲಿನ ಕೆಲವು ಬ್ಯಾಕ್ಟೀರಿಯಾಗಳನ್ನು ನಿರ್ಮೂಲನ ಮಾಡಲು ಸೈಂಧವ ಲವಣ ಸಹಕಾರಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ