ಬಾಯಿ ಹುಣ್ಣಿಗೆ ಮನೆ ಮದ್ದುಗಳು

ಬಾಯಿ ಹುಣ್ಣಿಗೆ ಮನೆ ಮದ್ದುಗಳು

ನಮ್ಮ ಬಾಯಿಯ ಒಳಭಾಗದಲ್ಲಿ ಏಳುವ ಗುಳ್ಳೆಗಳು ಒಡೆದು ಕೆಲವೊಮ್ಮೆ ನಮಗೆ ಅತಿಯಾದ ಹಿಂಸೆ ನೀಡುತ್ತದೆ. ಬಾಯಿಯಲ್ಲಾಗುವ ಸಣ್ಣ ಗುಳ್ಳೆ ಅಥವಾ ಹುಣ್ಣು ಕೆಲವೊಮ್ಮೆ ಎಷ್ಟು ನೋವು ಮತ್ತು ಹಿಂಸೆ ನೀಡುತ್ತದೆ ಎಂದರೆ, ಅದರ ನೋವಿಗೆ ಜ್ವರವೇ ಬಂದುಬಿಡುವ ಸಾಧ್ಯತೆ ಇರುತ್ತದೆ. ಊಟ ತಿಂಡಿ ಸೇವಿಸಲಾರದ ಸ್ಥಿತಿಯನ್ನು ತಂದೊಡ್ಡುತ್ತದೆ. ಆಹಾರವನ್ನು ಸೇವಿಸಲು ಕಷ್ಟಪಡಬೇಕಾಗುತ್ತದೆ. ಉಪ್ಪು, ಹುಳಿ, ಖಾರವನ್ನು ಹೊಂದಿದ ಆಹಾರವನ್ನಂತೂ ಸೇವಿಸುವುದೇ ಅಸಾಧ್ಯ ಎನ್ನುವ ಪರಿಸ್ಥಿತಿ ಬರುತ್ತದೆ. ನೀರನ್ನು ಕುಡಿದರೂ ಉರಿಯುತ್ತದೆ. ಹುಣ್ಣುಗಳು ತೀವ್ರವಾದರೆ ಬಾಯಿಯನ್ನು ಅಲುಗಾಡಿಸಲು, ಮಾತಾಡಲೂ ಅಸಾಧ್ಯವಾಗುತ್ತದೆ.

ಬಾಯಿಯ ಒಳಭಾಗದಲ್ಲಿರುವ ಲೋಳೆಪೊರೆಯಲ್ಲಾಗುವ ಗುಳ್ಳೆಗಳನ್ನು ವೈದ್ಯಕೀಯ ಭಾಷೆಯಲ್ಲಿ ಸಿಸ್ಟ್ ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯವಾಗಿ ಆರೋಗ್ಯದ ಮೇಲೆ ಬೇರೆ ಏನೂ ಕೆಟ್ಟ ಪರಿಣಾಮ ಬೀರದೇ ಇದ್ದರೂ ನೋವು ಮಾತ್ರ ವಿಪರೀತ ಕೊಡುತ್ತದೆ. ಗುಳ್ಳೆ ಏಳುವ ಸಮಯದಲ್ಲಿ ಸಾಮಾನ್ಯವಾಗಿ ನೋವಾಗುತ್ತದೆ. ಆಗಲೇ ಎಚ್ಚರಿಕೆ ತೆಗೆದುಕೊಂಡರೆ ಸರಿ. ಇಲ್ಲವಾದಲ್ಲಿ ಗುಳ್ಳೆ ಮತ್ತಷ್ಟು ದೊಡ್ಡದಾಗಿ ಮುಖದ ಇಡೀ ಭಾಗ ನೋವಿಗೀಡಾಗುತ್ತದೆ. ಎಂಜಲಿನ ಗ್ರಂಥಿ ಹಾನಿಗೆ ಒಳಗಾದಾಗ ಅಥವಾ ಕಟ್ಟಿಕೊಂಡಾಗ ಹುಣ್ಣು ಉಂಟಾಗುತ್ತದೆ. ಬಾಯೊಳಗೆ ಸಣ್ಣಪುಟ್ಟ ಗಾಯಗಳಾದಾಗ, ಆಹಾರ ಅಗಿಯುವಾಗ ಆಕಸ್ಮಾತ್ ತುಟಿಗಳು ಕಚ್ಚಿ ಹೋದರೆ ಆಗಲೂ ಗಾಯಗಳಾಗಿ ಅವುಗಳು ಹುಣ್ಣಾಗುವ ಸಾಧ್ಯತೆ ಇವೆ. ಕೆಲವು ತಜ್ಞರ ಪ್ರಕಾರ, ದೇಹದಲ್ಲಿ ಉಷ್ಣವಾದರೆ ಹುಣ್ಣುಗಳು ಆಗುವುದು ಸಾಮಾನ್ಯವಂತೆ, ಹೀಗಾಗಿ ಆ ಸಮಯದ ದೇಹವನ್ನು ತಂಪಾಗಿಸುವ ಆಹಾರ ಸೇವನೆ ಮುಖ್ಯ.

ಬಾಯಿಯ ಹುಣ್ಣಿಗೆ ಮನೆಯಲ್ಲೇ ಸುಲಭವಾಗಿ ಕೆಲವು ಪರಿಹಾರಗಳನ್ನು ಕಂಡುಕೊಳ್ಳಬಹುದು. ಗುಳ್ಳೆ ಸಣ್ಣದಾಗಿದ್ದರೆ ತನ್ನಿಂತಾನೇ ಹೊರಟು ಹೋಗುತ್ತದೆ. ಕೆಲವು ಬಾರಿ ನೋವು ತೀವ್ರವಾಗಿದ್ದರೆ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಆದರೆ, ಅದಕ್ಕೂ ಮುನ್ನ ಆರಂಭದಲ್ಲಿ ಮನೆಯಲ್ಲೇ ಸರಳ ಚಿಕಿತ್ಸೆ ಮಾಡಿಕೊಳ್ಳುವುದರಿಂದ ನೆರವಾಗುತ್ತದೆ. 

ಉಪ್ಪು ನೀರು: ಇದು ನಿಮ್ಮ ಮೊದಲ ಆಯ್ಕೆ ಹಿತವಾದ ಬಿಸಿ ನೀರಿಗೆ ಒಂದು ಚಮಚ ಉಪ್ಪನ್ನು ಬೆರೆಸಿ ೧೫ ನಿಮಿಷಗಳ ಕಾಲ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಲೋಳೆಪೊರೆಯ ಒಳಗೆ ಸಿಲುಕಿರುವ ಯಾವುದೇ ರೀತಿಯ ದ್ರವ ಆಚೆ ಬರುತ್ತದೆ. ಬಾಯಿ ಚರ್ಮದೊಳಗಿರುವ ದ್ರವಾಂಶ ಆಚೆ ತರೆತರಲು ಇದು ಅತ್ಯಂತ ಸುಲಭದ ಮಾರ್ಗ. ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ನೋವು ಶಮನವಾಗುತ್ತದೆ.

ಗ್ಲಿಸರಿನ್: ಆಂಟಿ ಬಯಾಟಿಕ್ ಅಂಶ ಹೊಂದಿರುವ ಗ್ಲಿಸರಿನ್ ನಿಂದ ಬಾಯಿಯ ಲೋಳೆಪೊರೆಯ ಹುಣ್ಣುಗಳಿಗೆ ಪರಿಹಾರ ಸಾಧ್ಯ. ಸಣ್ಣ ಹತ್ತಿಯ ತುಂಡಿಗೆ ಗ್ಲಿಸರಿನ್ ಹನಿಗಳನ್ನು ಹಾಕಿ ಅದನ್ನು ಗಾಯದ ಮೇಲೆ ಇಟ್ಟುಕೊಳ್ಳಬೇಕು. ಅರ್ಧ ಗಂಟೆ ಕಾಲ ಇಟ್ಟುಕೊಂಡ ಬಳಿಕ ಸಾಮಾನ್ಯ ನೀರಿನಿಂದ ಬಾಯಿಯನ್ನು ತೊಳೆದುಕೊಳ್ಳಬೇಕು.

ಜೇನುತುಪ್ಪ: ಅತ್ಯುತ್ತಮ ಆಂಟಿ ಬ್ಯಾಕ್ಟೀರಿಯಲ್ ಆಗಿರುವ ಜೇನುತುಪ್ಪವನ್ನು ಈ ಸಮಯದಲ್ಲಿ ಬಳಕೆ ಮಾಡುವುದು ಉತ್ತಮ. ಇದರಿಂದ ಬಾಯಿಯಲ್ಲಿ ಹೆಚ್ಚಿನ ಸೋಂಕು ಆಗದಂತೆ ತಡೆಯಲು ಸಾಧ್ಯ. ಹುಣ್ಣುಗಳುಂಟಾದ ಜಾಗಕ್ಕೆ ಮುಕ್ಕಾಲು ಚಮಚ ಶುದ್ಧ ತುಪ್ಪವನ್ನು ಲೇಪಿಸಬೇಕು. ಇದಕ್ಕೆ ಟೀ ತೈಲದ ಹನಿಗಳನ್ನು ಸಹ ಸೇರಿಸಿಕೊಳ್ಳಬಹುದು.

ಟೀ ಬ್ಯಾಗ್: ಟೀ ಬ್ಯಾಗ್ ಅನ್ನು ಬಿಸಿನೀರಿನಲ್ಲಿ ಅದ್ದಿ ಅದನ್ನು ಫ್ರಿಡ್ಜ್ ನಲ್ಲಿಟ್ಟುಕೊಳ್ಳಬೇಕು. ಅದು ತಣ್ಣಗಾದ ಬಳಿಕ, ೧೦-೧೫ ನಿಮಿಷಗಳ ಕಾಲ ಗುಳ್ಳೆಯ ಮೇಲೆ ಇರಿಸಿಕೊಳ್ಳಬೇಕು.

ತುಂಬೆ ಸಸ್ಯ: ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ತುಂಬೆ ಗಿಡದ ಎಲೆಗಳಲ್ಲಿ ಉರಿಯೂತ ತಡೆಯುವ ಅಂಶಗಳಿವೆ. ತುಂಬೆ ಎಲೆಗಳನ್ನು ಚಹಾದೊಂದಿಗೆ ಸೇರಿಸಿಕೊಂಡು ಹಾಲು ಬೆರೆಸದೇ ಹಾಗೆಯೇ ಕುಡಿಯಬಹುದು. ಅಥವಾ ಎಲೆಗಳನ್ನು ಹಾಗೆಯೇ ಜಗಿಯಬಹುದು. ಗಾಯಕ್ಕೆ ತುಂಬೆಯ ರಸವನ್ನು ಹಚ್ಚುವಾಗ ಹೆಚ್ಚಿನ ಪ್ರಮಾಣದಲ್ಲಿ ಹಚ್ಚ ಬಾರದು.

ಲೋಳೆಸರ: ಲೋಳೆಸರ ಅಥವಾ ಅಲೆವೋರಾ ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್ ಅಂಶಗಳನ್ನು ಹೊಂದಿದ್ದು, ಉರಿಯೂತವನ್ನು ತಡೆಯುತ್ತದೆ. ನೋವನ್ನು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಗೊಳಿಸುವ ಶಕ್ತಿ ಇದಕ್ಕಿದೆ. ಬಾಯಿಯ ಹುಣ್ಣಿಗೆ ಲೋಳೆಸರದ ಜೆಲ್ ಅನ್ನು ನೇರವಾಗಿ ಹಚ್ಚಿಕೊಂಡು ೨೦ ನಿಮಿಷಗಳ ಕಾಲ ಇಟ್ಟುಕೊಳ್ಳಬೇಕು. 

ಗುಳ್ಳೆ ಏಳುವ ಸಮಯದಲ್ಲಿ ಮೇಲೆ ಹೇಳಿರುವ ಮನೆಮದ್ದುಗಳು ಬಹಳ ಪ್ರಯೋಜನಕಾರಿಯಾಗಬಲ್ಲವು. ಆದರೂ ಮನೆಮದ್ದುಗಳನ್ನು ಬಳಸುವ ಮೊದಲು ಅದರ ಬಳಕೆಯಿಂದ ಅಲರ್ಜಿಯಾಗುವುದಿಲ್ಲವೆಂಬುದನ್ನು  ಖಾತ್ರಿ ಪಡಿಸಿಕೊಳ್ಳಿರಿ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ