ಬಾರು ಮತ್ತು ಗ್ರಂಥಾಲಯ - ನಿಮ್ಮ ಆಯ್ಕೆ ಯಾವುದು?

ಬಾರು ಮತ್ತು ಗ್ರಂಥಾಲಯ - ನಿಮ್ಮ ಆಯ್ಕೆ ಯಾವುದು?

ಮದ್ಯದಂಗಡಿಗಳ ಹೆಚ್ಚಳ ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಮತ್ತು ಅನ್ಯಾಯ. ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆ ಆದಾಯ ಹೆಚ್ಚಿಸಿಕೊಳ್ಳುವ ವಿವಿಧ ಯೋಜನೆಗಳನ್ನು ರೂಪಿಸಿ ಅನೇಕ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿ ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮಖವಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಪಡೆದಿದೆ. ಉಚಿತ ಯೋಜನೆಗಳ ಜಾರಿಯ ಪರಿಣಾಮ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಇದು ಅವಶ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗುತ್ತಿದೆ. ಇದು‌ ಖಂಡಿತ ಸಹನೀಯವಲ್ಲ ಮತ್ತು ಆಕ್ಷೇಪಾರ್ಹ ನಡೆ.

ರಾಜ್ಯದಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯಗಳ ಸಂಖ್ಯೆ ಸುಮಾರು 1000. ರಾಜ್ಯದಲ್ಲಿ ಇರುವ ಮದ್ಯಪಾನ ಅಂಗಡಿಗಳ ಅಧಿಕೃತ ಸಂಖ್ಯೆ ಸುಮಾರು 12500. ಅನಧಿಕೃತವಾಗಿ ಇನ್ನೆಷ್ಟೋ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳ ಸಂಪೂರ್ಣ ವಿರೋಧಿ ನಡೆ. ಮದ್ಯಪಾನದ ಆದಾಯದ ಮೇಲೆಯೇ ಸರ್ಕಾರ ನಡೆಯುತ್ತದೆ ಎಂದಾದರೆ ಅದು ನಡೆಯುವುದು ಬೇಡ ಮಲಗಿಬಿಡಲಿ. ಬೇರೆ ಪರ್ಯಾಯ ಮಾರ್ಗ ಖಂಡಿತ ಇದೆ. ಹತ್ತು ವರ್ಷಗಳಷ್ಟು ದೀರ್ಘ ಅವಧಿಯ ಒಂದು ಕ್ರಿಯಾ ಯೋಜನೆ ಸಿದ್ದಪಡಿಸಿ ನಿಧಾನವಾಗಿ ಪ್ರತಿವರ್ಷ ಶೇಕಡಾ 10% ಮದ್ಯಪಾನದ ನಿಯಂತ್ರಣ ಮಾಡುತ್ತಾ ಬಂದರೆ ಹತ್ತು ವರ್ಷದಲ್ಲಿ ಅದನ್ನು ಸಂಪೂರ್ಣ ನಿಷೇಧ ಮಾಡಬಹುದು ಮತ್ತು ಅದರಿಂದ ದಿಢೀರ್ ಆಗಬಹುದಾದ ಆರ್ಥಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳನ್ನು ಮೆಟ್ಟಿ ನಿಲ್ಲಬಹುದು.

ಸಂಪೂರ್ಣ ಪಾನ ನಿಷೇಧ ಅಥವಾ ಪರ್ಯಾಯ ಮಾರ್ಗಗಳು. ನಮ್ಮ ರಾಜ್ಯದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಸುಮಾರು ಎಷ್ಟಿರಬಹುದು ? ಎಷ್ಟು ಲೀಟರ್ ಮದ್ಯ ಪ್ರತಿ ನಿತ್ಯ ಅಥವಾ ಪ್ರತಿ ವರ್ಷ ಮಾರಾಟವಾಗುತ್ತದೆ ಎಂಬ ಬಗ್ಗೆ ಸರ್ಕಾರದ ಬಳಿ ಒಂದು ಲೆಕ್ಕ ಇರುತ್ತದೆ. ಆದರೆ ನಿರ್ಧಿಷ್ಟವಾಗಿ ಕುಡುಕರ ಸಂಖ್ಯೆ ಸಿಗುವುದಿಲ್ಲ. ಯಾರಿಗೂ ತಿಳಿಯದಂತೆ ಕುಡಿಯುವವರು ಮತ್ತು ಕುಡಿದರೂ‌ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳದವರು ಸಾಕಷ್ಟು ಮಂದಿ ಇದ್ದಾರೆ. 

ಒಟ್ಟು ಜನಸಂಖ್ಯೆ ಸುಮಾರು 7 ಕೋಟಿ ಎಂದು ಭಾವಿಸಿ ಅದರಲ್ಲಿ ಕನಿಷ್ಠ ಶೇಕಡಾ 30% ಕುಡಿಯುತ್ತಾರೆ ಎಂದು ಭಾವಿಸಿದರೂ ಸುಮಾರು 2.1 ಕೋಟಿ ಜನ ಆಗುತ್ತಾರೆ. ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನೇರವಾಗಿ ಮದ್ಯಪಾನವನ್ನು ಇಡೀ ದೇಶಾದ್ಯಂತ ನಿಷೇಧಿಸಬೇಕು ಎಂಬ ಒಂದು ಹೋರಾಟ ನಡೆಯುತ್ತಿದೆ. ಮದ್ಯದಿಂದ ಸರ್ಕಾರಕ್ಕೆ ಬರುವ ಆದಾಯಕ್ಕಿಂತ ಅದರಿಂದ ಆಗುವ ತೊಂದರೆಯೇ ಹೆಚ್ಚು. ಅಪರಾಧ, ಅಪಘಾತ, ಅನಾರೋಗ್ಯ, ಕೌಟುಂಬಿಕ ಕಲಹ ಎಲ್ಲವನ್ನೂ ಲೆಕ್ಕ ಹಾಕಿದಾಗ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆಗುವ ಅನಾಹುತ ಅದರ ಎಲ್ಲಾ ಆದಾಯಗಳಿಗಿಂತಲೂ ನಷ್ಟವೇ ಹೆಚ್ಚು  ಎಂದು ಹೇಳಲಾಗುತ್ತದೆ. 

ಸ್ವಾತಂತ್ರ್ಯ ಪೂರ್ವದಲ್ಲೇ ಮಹಾತ್ಮ ಗಾಂಧಿಯವರು " ನನಗೆ ಈ ದೇಶದ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಲು ಅಧಿಕಾರ ಸಿಕ್ಕರೆ ನಾನು ಮಾಡುವ ಮೊದಲ ಕೆಲಸ ಮದ್ಯಪಾನ ನಿಷೇಧ " ಎಂದು ಹೇಳಿದ್ದರು ಎಂದರೆ ಅದರ ದುಷ್ಪರಿಣಾಮಗಳನ್ನು ಊಹಿಸಬಹುದು. ಇದರ ಇನ್ನೊಂದು ಮುಖವೂ ಇದೆ. ಕುಡಿತ ಎಂಬುದು ಶತಶತಮಾನಗಳಿಂದ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹಿತಮಿತದಲ್ಲಿದ್ದಾಗ ಅದೊಂದು ಆರೋಗ್ಯಕರ ಪೇಯ. ಅನೇಕ ಬಾರಿ ಔಷಧಿಯಂತೆ ಸಹ ಕೆಲಸ ಮಾಡುತ್ತದೆ. ಜೀವನೋತ್ಸಾಹ ಹೆಚ್ಚಿಸುವ ಕೆಲವೇ ಅಂಶಗಳಲ್ಲಿ ಮದ್ಯಪಾನ ಸಹ ಒಂದು. ಆಧುನಿಕ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಇದನ್ನು ಜನರ ಸ್ವತಂತ್ರ ಆಯ್ಕೆಯಾಗಿ ಬಿಡಬೇಕು. ಹೇಗಿದ್ದರೂ ಕಾನೂನಿನ ನೀತಿ ನಿಯಮಗಳು ಕುಡಿತಕ್ಕೂ ಅನ್ವಯಿಸುತ್ತದೆ. ತಪ್ಪು ಮಾಡಿದಾಗ ಶಿಕ್ಷೆ ಎಲ್ಲರಿಗೂ ಒಂದೇ. ಜೊತೆಗೆ ಕೌಟುಂಬಿಕ ಹಿಂಸೆ, ಅಪಘಾತ, ಅನಾರೋಗ್ಯ ಎಲ್ಲವೂ ಕುಡಿಯದ ಜನರಲ್ಲೂ ಇದ್ದೇ ಇರುತ್ತದೆ. ವಿಶ್ವದ ಬಹುತೇಕ ದೇಶಗಳಲ್ಲಿ ಕುಡಿತವನ್ನು  ಮಾನ್ಯ ಮಾಡಲಾಗಿದೆ. ಸಿಗರೇಟಿನಂತೆ  ಕುಡಿತ ಇನ್ನೊಬ್ಬರಿಗೆ ಹಾನಿ ಮಾಡುವುದಿಲ್ಲ ಜೊತೆಗೆ ಕುಡಿಯದಿರುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಯಾವುದೇ ಬಲವಂತವಿಲ್ಲ. ಕುಡಿತವಿಲ್ಲದ ಬದುಕು ಒಂದು ನಿಸ್ಸಾರ. ಅದರ ಆಕರ್ಷಣೆ ಇಲ್ಲದಿದ್ದರೆ ಉದ್ಯೋಗಿಗಳ ಶ್ರಮದ ಗುಣಮಟ್ಟವೇ ಕುಸಿಯುತ್ತದೆ. ಎಷ್ಟೋ ‌ಸಾಹಿತ್ಯ ಸಂಗೀತ ಸಿನಿಮಾ ಲಲಿತಕಲೆಗಳು ಕುಡಿತದ ನೆರಳಲ್ಲಿ ತನ್ನ  ಅತ್ಯುತ್ಕೃಷ್ಟ  ಸ್ಥಿತಿ ತಲುಪಿವೆ‌. ಕುಡಿತಕ್ಕಿಂತ ಅಪಾಯಕಾರಿಯಾದ ಇತರೆ ಅಂಶಗಳು ಈಗಲೂ ಈ ಸಮಾಜದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿವೆ ಎಂಬುದು ಇನ್ನೊಂದು ವಾದ.

ಈಗ ಯೋಚಿಸಬೇಕಾದ ಸರದಿ ನಮ್ಮದು. ಕುಡಿತವನ್ನು ಸಂಪೂರ್ಣ ನಿಷೇಧಿಸುವುದು ಒಟ್ಟು ವ್ಯವಸ್ಥೆಯ ದೃಷ್ಟಿಯಿಂದ ಕಷ್ಟವಾಗಬಹುದು. ಸರ್ವಾಧಿಕಾರ ಎನಿಸಬಹುದು. ಅದರ ದುಷ್ಪರಿಣಾಮಗಳನ್ನು ತಡೆಯಲು ಪ್ರಯತ್ನಿಸುವುದು ಉತ್ತಮ ಮಾರ್ಗವಾಗಬಹುದೆ ? ಕುಡಿತದಲ್ಲಿರುವ ಅಪಾಯಕಾರಿ ಆಲ್ಕೊಹಾಲ್ ಪ್ರಮಾಣವನ್ನು ‌30-40-50% ನಿಂದ 14% ಒಳಗಡೆ ನಿಯಂತ್ರಿಸುವುದು. ಆಗ ಅದು ಹೆಚ್ಚು ದುಷ್ಪರಿಣಾಮ ಬೀರುವುದಿಲ್ಲ. ಕುಡಿತಕ್ಕೆ ಪರ್ಯಾಯವಾಗಿ ಅಷ್ಟೇ ಪರಿಣಾಮಕಾರಿ ಮತ್ತು ಆರೋಗ್ಯಯುತ ಮದ್ಯಪಾನ ‌ಸಂಶೋಧಿಸುವುದು. ( ಮೈಸೂರಿನ ಆಹಾರ ಸಂಶೋಧನಾ ಸಂಸ್ಥೆಗೆ ಇದರ ಜವಾಬ್ದಾರಿ ವಹಿಸುವುದು ).

ಎಲ್ಲಾ ಖಾಸಗಿ ಮದ್ಯಪಾನ ಉತ್ಪಾದನಾ ಘಟಕಗಳನ್ನು ನಿಷೇಧಿಸಿ ಸರ್ಕಾರದ ನಿಯಂತ್ರಣದಲ್ಲಿ ತಂದು ಪಡಿತರ ವ್ಯವಸ್ಥೆ ಮುಖಾಂತರ ಹಿತಮಿತವಾಗಿ ಹಂಚುವುದು. ಬಾರ್ ವೈನ್ ಶಾಪ್ ಗಳ ಬೇಕಾಬಿಟ್ಟಿ ಅನುಮತಿ ನೀಡುವುದು ನಿಲ್ಲಿಸಿ ತುಂಬಾ ಕಡಿಮೆ ಪ್ರಮಾಣದಲ್ಲಿ ನೀಡುವುದು. ಅದನ್ನು ಹುಡುಕಿ ಹೋಗುವುದೇ ಒಂದು ಶ್ರಮದಾಯಕ ಕೆಲಸವಾಗಿ ನಿರಾಸಕ್ತಿ ಮೂಡುವಂತಿರಬೇಕು. ಮಿಲಿಟರಿ ಹೊರತುಪಡಿಸಿ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಮಾಧ್ಯಮಗಳವರಿಗೆ ಇದನ್ನು ಸಂಪೂರ್ಣ ಎಲ್ಲಾ ಸಮಯದಲ್ಲೂ ನಿಷೇಧಿಸಬೇಕು. 

ಹೇಗಿದ್ದರೂ ಜಿಎಸ್ಟಿ ಜಾರಿಯಾಗಿರುವುದರಿಂದ ಇದನ್ನು ರಾಷ್ಟ್ರೀಕರಣ ಮಾಡಿ ಕೇಂದ್ರ ನಿಯಂತ್ರಣಕ್ಕೆ ಒಳಪಡಿಸಿ ಆದಾಯ ಹಂಚಿಕೆಯಾಗಬೇಕು. ಎಂದಿನಂತೆ ಇದರ ಬೆಲೆ ಹೆಚ್ಚಾಗಬೇಕು ಮತ್ತು ಬಿಪಿಎಲ್ ಕಾರ್ಡು ದಾರರಿಗೆ ಮಾತ್ರ ಸಬ್ಸಿಡಿ ಬೆಲೆಯಲ್ಲಿ ಕೊಡಬೇಕು. ಇದು ಸೂಕ್ತವಲ್ಲದಿದ್ದರೂ ನಮ್ಮ ಸಮಾಜದ ಸದ್ಯದ ಪರಿಸ್ಥಿತಿಯಲ್ಲಿ ಇದು ಅವಶ್ಯಕ. ಸಿನಿಮಾ ನಟರು ಧಾರ್ಮಿಕ ಮುಖಂಡರ ಮುಖಾಂತರ ನಿರಂತರವಾಗಿ ಕುಡಿತದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು.

ಈಗ ಇರುವ ನಿಯಮಗಳನ್ನು ಮತ್ತಷ್ಟು ವಿಸ್ತರಿಸಿ ಯಾವುದೇ ಸಾರ್ವಜನಿಕ ಖಾಸಗಿ ಸಮಾರಂಭಗಳು, ಸರ್ಕಾರಿ ಕಚೇರಿಗಳು, ಸಿನಿಮಾ ನಾಟಕ ಮಂದಿರಗಳು, ಸಾರಿಗೆ ವಾಹನಗಳು ಮುಂತಾದ ಎಲ್ಲಾ ಕಡೆ ಕುಡಿದವರ ಪ್ರವೇಶ ನಿಷೇಧಿಸಬೇಕು. ಅದಕ್ಕಾಗಿ ಅಲ್ಕೋಹಾಲ್ ಪತ್ತೆ ಹಚ್ಚುವ ಯಂತ್ರ ಸ್ಥಾಪಿಸಬೇಕು. ಇಡೀ ಸಮಾಜದಲ್ಲಿ ಹಿಂದಿನ ಕಾಲದಲ್ಲಿ ಇದ್ದಂತೆ ಕುಡಿತ ಎಂಬುದು ಅತ್ಯಂತ ಕೆಟ್ಟ ಅಭ್ಯಾಸಗಳಲ್ಲಿ ಒಂದು ಎಂದು ಮತ್ತೆ ಭಾವಿಸುವ ಸಾಮೂಹಿಕ ವಾತಾವರಣ ನಿರ್ಮಾಣವಾಗಬೇಕು. ಕುಡಿತ ಇಲ್ಲದ ಹುಡುಗ ಹುಡುಗಿಯರ ಮದುವೆ ಪ್ರಸ್ತಾಪ ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಹೀಗೆ ಇನ್ನೂ ಹಲವಾರು ಕ್ರಮಗಳ ಮೂಲಕ ಸಂಪೂರ್ಣ ಪಾನ ನಿಷೇಧ ಇಲ್ಲದಿದ್ದರೂ ತನ್ನಿಂದ ತಾನೇ ಕುಡಿತ ಜನರಿಂದ ದೂರ ಸರಿಯುವಂತೆ ಮಾಡಬೇಕು. ಸರ್ಕಾರದ ಆದಾಯಕ್ಕೆ ನಿಧಾನವಾಗಿ ಪರ್ಯಾಯ ಮೂಲಗಳನ್ನು ಹುಡುಕಬೇಕು. ಬಡವರು ಮತ್ತು ಶ್ರಮಿಕರು ಕುಡಿತದಿಂದ ತೊಂದರೆ ಅನುಭವಿಸುವುದು ಹೆಚ್ಚು. ಇಡೀ ಆಡಳಿತ ಯಂತ್ರ ಮತ್ತು ಮಂದಿರ ಮಸೀದಿ ಚರ್ಚುಗಳು ಈ ನಿಟ್ಟಿನಲ್ಲಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕು.  ಶ್ರಮಿಕರ ಜೀವನಮಟ್ಟ ಸುಧಾರಣೆಯೂ ಇದರಲ್ಲಿ ‌ಸೇರಿರಬೇಕು. ಆಗ ಅವರ ಕುಡಿತದ ಚಟ ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ಕುಡುಕನಲ್ಲದ ಒಬ್ಬ ವ್ಯಕ್ತಿಯ ಒಂದು ಸಣ್ಣ ಸಲಹೆ. ಇದಕ್ಕಿಂತ ಉತ್ತಮ ಸಲಹೆಗಳನ್ನು ಸಹ ಸ್ವಾಗತಿಸುತ್ತ....

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ