ಬಾರೋ ಕನ್ನಡ ನಾಡಿಗೆ

ಬಾರೋ ಕನ್ನಡ ನಾಡಿಗೆ

ಕವನ

ಬಾರೋ ಕನ್ನಡ ನಾಡಿಗೆ ಇಂಚರದ ಧ್ವನಿ ಗೂಡಿಗೆ

ಹರಸುವುದು ಬಯಸಿ ಏಳಿಗೆ ನೆಲಸಿದವರ ಪಾಲಿಗೆ

 

ಕನ್ನಡದ ಭೂಮಿಯಿದು ನಿತ್ಯ ನೂತನ ವಧುವದು

ಕನ್ನಡದ ಭಾಷೆಯಿದು ತಾಯಿ ಸರಸತಿಯ ವರವದು

ಕನ್ನಡದ ಮುಗಿಲಿದು ಆ ದೇವಲೋಕಕು ಮಿಗಿಲದು

ಕನ್ನಡದ ನದಿಯಿದು ಗಂಗೆ ಗೋದಾವರಿಯ ಸಮವದು

 

ಬಾರೋ ಕನ್ನಡ ನಾಡಿಗೆ ಇಂಚರದ ಧ್ವನಿ ಗೂಡಿಗೆ

ಹರಸುವುದು ಬಯಸಿ ಏಳಿಗೆ ನೆಲಸಿದವರ ಪಾಲಿಗೆ

 

ಹೆಗಲಿಗೆ ಹೆಗಲನು ಕೊಟ್ಟು ಕಾಯಕಕೆ ಮುತ್ತಿಟ್ಟು ದುಡಿಯೆ ಬಾ

ನೇಗಿಲನು ಒತ್ತಿ ಬೀಜವನು ಬಿತ್ತಿ ಗೊಬ್ಬರವನಿತ್ತಿ ಫಲ ಪಡೆಯೆ ಬಾ

ಕನ್ನಡ ಪದಸಂಪದವ ಬಳಸಿ ಮಲ್ಲಿಗೆಯ ಘಮ ಬೆರೆಸಿ ಬರೆಯೆ ಬಾ

ಜ್ಞಾನಿಗಳ ಒಡನಾಟ ವಿಜ್ಞಾನಿಗಳ ಒಳನೋಟ ನೋಡಿ ಮೆರೆಯೆ ಬಾ

 

ಬಾರೋ ಕನ್ನಡ ನಾಡಿಗೆ ಇಂಚರದ ಧ್ವನಿ ಗೂಡಿಗೆ

ಹರಸುವುದು ಬಯಸಿ ಏಳಿಗೆ ನೆಲಸಿದವರ ಪಾಲಿಗೆ

 

ಗುಂಡುಗಳ ಸದ್ದಿಲ್ಲ ಪುಂಡರೆನಿತಿಲ್ಲ ಚಂಡ ಮುಂಡರಿಲ್ಲಿಲ್ಲ

ಸುವಿಚಾರ ಸಂಸ್ಕೃತಿಯನುಂಡ ಗಂಡುಬೇರುಂಡರಿವರೆಲ್ಲ

ಚರಕದಲಿ ನೇಯ್ದ ಶ್ರೀಗಂಧದಲಿ ತೊಯ್ದ ಇಳೆಯ ಸಜ್ಜನರೆಲ್ಲ

ಇವರಾತ್ಮ ಆಧ್ಯಾತ್ಮ ಇವರ ಗೀಳು ಸವಿಬಾಳು ಇವರಂತಿನ್ನಿಲ್ಲ

 

ಬಾರೋ ಕನ್ನಡ ನಾಡಿಗೆ ಇಂಚರದ ಧ್ವನಿ ಗೂಡಿಗೆ

ಹರಸುವುದು ಬಯಸಿ ಏಳಿಗೆ ನೆಲಸಿದವರ ಪಾಲಿಗೆ

 

ಶುದ್ಧ ಹವೆಗೆ ತವರಿದು ಮೈಯಿ ಕೊಂಚವೂ ಬೆವರದು

ಪ್ರಬುದ್ಧ ಜನರ ನಾಡಿದು ಯುದ್ಧ ಮಾಡಲೂ ಹೆದರದು

ತಂಗಾಳಿಯಲಿ ಹೂವಿನಾಟ ಕೆಸರ ಜೂಜಿನಲಿ ಗೂಳಿಯಾಟ

ದಕ್ಷಿಣದಲಿ ಯಕ್ಷರಾಟ ಉತ್ತರದಲಿ ಸಾಹಿತಿಗಳ ಸವಿಯೂಟ

 

ಬಾರೋ ಕನ್ನಡ ನಾಡಿಗೆ ಇಂಚರದ ಧ್ವನಿ ಗೂಡಿಗೆ

ಹರಸುವುದು ಬಯಸಿ ಏಳಿಗೆ ನೆಲಸಿದವರ ಪಾಲಿಗೆ

ಡಾ. ಪ್ರಭಾಕರ್ ಬೆಳವಾಡಿ

 

ಚಿತ್ರ್