ಬಾಲಕನ ಮಾತಿಗೆ ತಲೆಬಾಗಿದ ತತ್ವಜ್ಞಾನಿ

ಬಾಲಕನ ಮಾತಿಗೆ ತಲೆಬಾಗಿದ ತತ್ವಜ್ಞಾನಿ

ಕನ್ಫ್ಯೂಷಿಯಸ್ ಚೀನಾ ದೇಶದ ದೊಡ್ದ ತತ್ವಜ್ಞಾನಿ. ಈತ ಕ್ರಿಸ್ತ ಪೂರ್ವ ೫೫೧ರಿಂದ ಕ್ರಿಸ್ತ ಪೂರ್ವ ೪೪೯ರ ತನಕ ಜೀವಿಸಿದ್ದ ಎಂದು ಹೇಳಲಾಗಿದೆ. ಇವರ ಬೋಧನೆಗಳನ್ನು ‘ಕನ್ಫ್ಯೂಷಿಯಂ’ ಎಂದು ಕರೆಯಲಾಗುತ್ತದೆ. ಇವರು ಓರ್ವ ಬುದ್ಧಿವಂತ ಶಿಕ್ಷಕರೂ ಆಗಿದ್ದರು. ಇವರ ಮಾತುಗಳಿಗೆ ಚೀನಾ ದೇಶದಲ್ಲಿ ಬಹಳ ಮನ್ನಣೆ ದೊರೆಯುತ್ತಿತ್ತು. ಇಂತಹ ಬುದ್ಧಿವಂತ ವ್ಯಕ್ತಿಯನ್ನೇ ತನ್ನ ಚುರುಕು ಮಾತುಗಳಿಂದ ಮಣಿಸಿದ ಓರ್ವ ಅನಾಮಿಕ ಬಾಲಕನ ಕಥೆ ಇಲ್ಲಿದೆ. ಬಾಲಕನ ಮೇಧಾವಿತನವನ್ನು ಕಂಡು ಕನ್ಫ್ಯೂಷಿಯಸ್ ಕೂಡಾ ತಲೆಬಾಗಿದರಂತೆ. ಬನ್ನಿ ಆ ಕಥೆಯನ್ನು ಓದುವ...

ಮಹಾಗುರುಗಳಾದ ಕನ್ಫ್ಯೂಷಿಯಸ್ ಒಮ್ಮೆ ರಥದಲ್ಲಿ ಎಲ್ಲಿಗೋ ಪ್ರಯಾಣ ಹೊರಟಿದ್ದ. ಹಾದಿ ಬದಿಯಲ್ಲಿ ಹಲವಾರು ಮಕ್ಕಳು ಆಟವಾಡುತ್ತಿದ್ದರು. ಎಲ್ಲಾ ಮಕ್ಕಳು ಆಟವಾಡುತ್ತಿದ್ದರೂ ಓರ್ವ ಬಾಲಕ ಮಾತ್ರ ಅವರ ಜೊತೆ ಸೇರದೆ ಪ್ರತ್ಯೇಕವಾಗಿ ನಿಂತು ಆಟವನ್ನು ಗಮನಿಸುತ್ತಿದ್ದ. ಕನ್ಫ್ಯೂಷಿಯಸ್ ಅವನನ್ನು ಮಾತನಾಡಿಸಲಾಗಿ, ಆತನ ಮಾತುಗಳಿಂದ ಬಹಳ ಪ್ರಭಾವಿತನಾದ. ಇನ್ನಷ್ಟು ಆತನ ಬುದ್ಧಿವಂತಿಕೆಯನ್ನು ಪರೀಕ್ಷಿಸಬೇಕೆಂದು ಆತನಲ್ಲಿ ಹೇಳಿದ “ಮಗೂ ನಾನು ನಿನ್ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲೇ? ಉತ್ತರಿಸುವಿಯಾ? “ ಹುಡುಗ ಒಪ್ಪಿಕೊಂಡ.

ಕನ್ಫ್ಯೂಷಿಯಸ್ ಕೇಳಿದ “ಮಗೂ, ಹೊಗೆಯಿಲ್ಲದ ಬೆಂಕಿ ಯಾವುದು? ಯಾವ ಮರಕ್ಕೆ ರೆಂಬೆಗಳಿಲ್ಲ? ಉತ್ತಮ ಹಾಗೂ ಅಧಮನು ಯಾರು?” ಎಂದನು.

ಅದಕ್ಕೆ ಬಾಲಕ ತಕ್ಷಣ ಉತ್ತರ ನೀಡಿದ “ ಮಿಣುಕು ಹುಳದ ಬೆಂಕಿಯಲ್ಲಿ ಹೊಗೆಯಿಲ್ಲ, ಕಡಿದು ಬಿದ್ದ ಮರಗಳಿಗೆ ರೆಂಬೆಗಳಿಲ್ಲ, ಬುದ್ದಿಯಿದ್ದವನು ಉತ್ತಮ, ಅದಿಲ್ಲದವನು ಅಧಮ" ಎಂದ.

ಈ ಉತ್ತರಗಳಿಂದ ಗುರುಗಳಿಗೆ ಬಹಳ ಖುಷಿಯಾಯಿತು. “ಹಾಗಾದರೆ ತಂದೆ ತಾಯಿಯಂದಿರ ಸಂಬಂಧ ಗಾಢವಾದದ್ದೋ ಅಥವಾ ಗಂಡ ಹೆಂಡಿರ ಸಂಬಂಧ ಹೆಚ್ಚು ಗಾಢವಾದದ್ದೋ?” ಎಂದು ಮತ್ತೆ ಪ್ರಶ್ನೆಗಳನ್ನು ಕೇಳಿದ. 

“ತಂದೆ ತಾಯಿಯರ ಸಂಬಂಧವೇ ಅಧಿಕ ಗಾಢವಾದದ್ದು. ಗಂಡ ಹೆಂಡತಿಯರದ್ದಲ್ಲ” ಎಂದು ಹುಡುಗ ಉತ್ತರಿಸಿದ. ನಿಜಕ್ಕೂ ಈ ಪ್ರಶ್ನೆ ಜಟಿಲವಾಗಿಯೇ ಇತ್ತು. ಏಕೆಂದರೆ ಗಂಡ ಹೆಂಡತಿ ತಂದೆ ತಾಯಿಯರೂ ಆಗಿರಬಹುದಲ್ವಾ? 

“ಅದು ಹೇಗಯ್ಯಾ ಸಾಧ್ಯ ? ಗಂಡ ಹೆಂಡತಿ ಬದುಕಿರುವಾಗ ಒಂದೇ ಹಾಸಿಗೆಯಲ್ಲಿ ಮಲಗುತ್ತಾರೆ, ಒಟ್ಟಿಗೆ ತಿನ್ನುತ್ತಾರೆ, ಅವರು ಸತ್ತ ಮೇಲೆ ಅಕ್ಕಪಕ್ಕದಲ್ಲಿ ಸಮಾಧಿ ಮಾಡುತ್ತಾರೆ. ಅಂದ ಮೇಲೆ ಗಂಡ ಹೆಂಡತಿಯ ಸಂಬಂಧವೇ ಹೆಚ್ಚು ಗಾಢವಾಗಿದೆಯಲ್ಲಾ?”

“ಗುರುಗಳೇ, ಹೆಂಡತಿಯಿಲ್ಲದ ಗಂಡ ಚಕ್ರವಿಲ್ಲದ ರಥದಂತೆ. ಒಂದು ಚಕ್ರವಿಲ್ಲದೇ ರಥ ಚಲಿಸಲಾರದು. ಹಾಗೆಯೇ ಹೆಂಡತಿ ಸತ್ತು ಹೋದರೆ ಗಂಡ ಇನ್ನೊಂದು ಮದುವೆಯಾಗಬಹುದು. ಗಂಡ ಸತ್ತರೆ ಹೆಂಡತಿಯೂ ಮದುವೆಯಾಗಬಹುದು. ಆದರೆ ತಂದೆ ತಾಯಂದಿರ ವಾತ್ಸಲ್ಯಕ್ಕೆ ಸರಿ ಸಾಟಿಯಿಲ್ಲ. ಒಬ್ಬನ ತಂದೆ ಸತ್ತು ಹೋದರೆ ಅವನಿಗೆ ಇನ್ನೊಬ್ಬ ತಂದೆ ಸಿಗಲಾರ. ಗೋಡೆಯಲ್ಲಿ ಮೂರು ಕಿಟಕಿಗಳನ್ನು ಇರಿಸಿದರೂ ಒಂದು ಬಾಗಿಲಿನಿಂದ ಬರುವಷ್ಟು ಬೆಳಕನ್ನು ಆ ಕಿಟಕಿಗಳು ನೀಡುವುದಿಲ್ಲ. ಅಸಂಖ್ಯಾತ ನಕ್ಷತ್ರಗಳು ಬಾನಿನಲ್ಲಿ ಮಿನುಗುತ್ತಿದ್ದರೂ, ಒಂದು ಚಂದ್ರನ ಬೆಳಕಿಗೆ ಅದು ಸರಿಸಾಟಿಯಾಗುವುದಿಲ್ಲ. ಆದುದರಿಂದ ಪ್ರಪಂಚದಲ್ಲಿ ಅದ್ವಿತೀಯವೆಂದರೆ ಅದು ತಂದೆ ತಾಯಿಯ ವಾತ್ಸಲ್ಯ ಮಾತ್ರ"

ಬಾಲಕನ ಉತ್ತರದಿಂದ ಅತ್ಯಂತ ಪ್ರಸನ್ನನಾದ ಕನ್ಫ್ಯೂಷಿಯಸ್ ಆತನಿಗೆ ಬಹುಮಾನವನ್ನು ನೀಡುತ್ತಾನೆ. “ನೀವು ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಮಾತ್ರ ನಾನು ನಿಮ್ಮಿಂದ ಬಹುಮಾನ ಸ್ವೀಕರಿಸುವೆ" ಎನ್ನುತ್ತಾನೆ ಬಾಲಕ. ಈ ಬಾಲಕ ಏನು ದೊಡ್ದ ಪ್ರಶ್ನೆ ಕೇಳುತ್ತಾನೆ ಎಂದು ಮನದಲ್ಲೇ ಅಂದು ಕೊಂಡು ‘ಸರಿ , ಮಗೂ ನಿನ್ನ ಪ್ರಶ್ನೆಗಳನ್ನು ಕೇಳು' ಎನ್ನುತ್ತಾನೆ.

ಹುಡುಗ ಕೇಳುತ್ತಾನೆ “ ಬಾತುಕೋಳಿಗಳಿಗೆ ನೀರಿನಲ್ಲಿ ಈಜುವ ಸಾಮರ್ಥ್ಯ ಎಲ್ಲಿಂದ ಬಂತು? ಕೊಕ್ಕರೆಗಳಿಗೆ ಹಾಡುವುದು ಹೇಗೆ ಸಾಧ್ಯವಾಯಿತು? ಫರ್ ಮತ್ತು ಪೈನ್ ವೃಕ್ಷಗಳು ಚಳಿಗಾಲದಲ್ಲಿಯೂ ಹಸಿರಾಗಿಯೇ ಇರುತ್ತವೆಯಲ್ಲಾ? ಇದಕ್ಕೆಲ್ಲಾ ಏನು ಕಾರಣ?” 

“ಬಾತುಗಳಿಗೆ ಜಾಲಪಾದಗಳಿವೆ. ಇದರಿಂದ ಅವುಗಳು ಈಜುತ್ತವೆ. ಕೊಕ್ಕರೆಗಳಿಗೆ ಕತ್ತು ಉದ್ದವಾಗಿದೆ. ಆದುದರಿಂದ ಅವುಗಳು ಹಾಡುತ್ತವೆ. ಫರ್ ಮತ್ತು ಪೈನ್ ವೃಕ್ಷಗಳು ಒಳಗೆ ಗಟ್ಟಿಯಾಗಿವೆ. ಆದುದರಿಂದ ಅವು ಚಳಿಗಾಲದಲ್ಲೂ ಹಸಿರಾಗಿರುತ್ತವೆ.” ಎಂದು ಉತ್ತರ ನೀಡಿದ ಕನ್ಫ್ಯೂಷಿಯಸ್.

“ನೀವು ಹೇಳಿದನ್ನು ಪೂರ್ಣವಾಗಿ ಒಪ್ಪಿಕೊಳ್ಳಲಾಗದು, ಏಕೆಂದರೆ ಮೀನುಗಳು ಮತ್ತು ಆಮೆಗಳೂ ಈಜುತ್ತವೆ. ಅವುಗಳಿಗೆ ಜಾಲಪಾದಗಳು ಇಲ್ಲ. ಕಪ್ಪೆಗಳೂ ಹಾಡುತ್ತವೆ. ಅವುಗಳಿಗೆ ಉದ್ದನೆಯ ಕತ್ತು ಇಲ್ಲ, ಬಿದಿರಿನ ಮರದ ಒಳಭಾಗ ಟೊಳ್ಳಾಗಿದ್ದರೂ ಚಳಿಗಾಲದಲ್ಲಿ ಹಸಿರಾಗಿಯೇ ಇರುತ್ತದೆ. ಎಂದ ಹುಡುಗ. ಕನ್ಫ್ಯೂಷಿಯಸ್ ನಿರುತ್ತರನಾದ.

“ಆಕಾಶದಲ್ಲಿ ಒಟ್ಟು ಎಷ್ಟು ನಕ್ಷತ್ರಗಳಿರಬಹುದು?” ಎಂದು ಹುಡುಗ ಪ್ರಶ್ನೆ ಕೇಳಿದ.

“ಆಕಾಶವನ್ನು ಕುರಿತು ಮಾತನಾಡುವುದು ಹೇಗೆ ಸಾಧ್ಯ, ಭೂಮಿಗೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಮಾತ್ರ ಕೇಳಬೇಕು" ಎಂದ ಗುರು. “ಹಾಗಾದರೆ, ಭೂಮಿ ಮೇಲೆ ಎಷ್ಟು ಮನೆಗಳಿವೆ? ಹೇಳಬಹುದಾ?” ಎಂದ ಬಾಲಕ.

“ಏನಯ್ಯಾ ನಿನ್ನ ವಿಚಿತ್ರ ತಲೆಬುಡವಿಲ್ಲದ ಪ್ರಶ್ನೆಗಳು? ಆಕಾಶ-ಭೂಮಿ ಎಂದರೆ ಹೇಗೆ ಉತ್ತರ ಕೊಡುವುದು? ಕಣ್ಣ ಮುಂದಿರುವ ಯಾವುದಾದರೂ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರ ಹೇಳುತ್ತೇನೆ” ಎಂದ ಕನ್ಫ್ಯೂಷಿಯಸ್.

“ಹಾಗಾದರೆ ನಮ್ಮಿಬ್ಬರ ಕಣ್ಣುಗಳ ಮುಂದೆಯೇ ಇರುವುದನ್ನು ಕೇಳುತ್ತೇನೆ. ಈಗ ಹೇಳಿ, ನಿಮ್ಮ ಕಣ್ಣಿನ ಹುಬ್ಬಿನಲ್ಲಿ ಎಷ್ಟು ಕೂದಲುಗಳಿವೆ? “ ಎಂದು ಕೇಳಿದ ಬಾಲಕ. 

ಇದಕ್ಕೆ ಏನೆಂದು ಉತ್ತರ ಕೊಡಬಲ್ಲ ಕನ್ಫ್ಯೂಷಿಯಸ್. ಬಾಲಕನ ಬುದ್ಧಿಮತ್ತೆಗೆ ಮೆಚ್ಚಿ, ಆತನ ಬುದ್ಧಿವಂತಿಕೆಗೆ ತಲೆಬಾಗಿ ಬಹುಮಾನ ನೀಡಿ ಮೌನವಾಗಿಯೇ ರಥವನ್ನೇರಿ ಮುಂದಕ್ಕೆ ಹೋದರು. 

(ಚೀನಾ ಕಥೆಯೊಂದರ ಅನುವಾದ)

ಚಿತ್ರ ಕೃಪೆ: ಅಂತರ್ಜಾಲ ತಾಣ