ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ

ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದನೆ: ವಾಣಿ ಬಿ.ಆಚಾರ್ಯ, ಗುರುಚರಣ ಆಚಾರ್ಯ ಹಾಗೂ ಪಲ್ಲವಿ ಪಿ.ಭಟ್
ಪ್ರಕಾಶಕರು
ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ- 576118
ಪುಸ್ತಕದ ಬೆಲೆ
ರೂ.200.00. ಮುದ್ರಣ: 2019

ಪತ್ನಿ, ಮಕ್ಕಳು ಸಂಪಾದಿಸಿದ ಸಂಸ್ಮರಣಾ ಗ್ರಂಥ "ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ"

"ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ", ಆಚಾರ್ಯರ ಪತ್ನಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ವಾಣಿ ಬಿ. ಆಚಾರ್ಯ ಹಾಗೂ ಇವರ ಮಕ್ಕಳಾದ ಗುರುಚರಣ ಆಚಾರ್ಯ, ಶ್ರೀಮತಿ ಪಲ್ಲವಿ ಪಿ. ಭಟ್ ಇವರು ಸಂಪಾದಿಸಿ ತಮ್ಮದೇ ಆದ ಉಡುಪಿಯ 'ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ- 576118' ಪ್ರಕಾಶನ ಸಂಸ್ಥೆಯ ಮೂಲಕ ಪ್ರಕಟಿಸಿದ ಹಲವು ಸಿದ್ಧಿಗಳ ಸಾಧಕರಾದ ಕೆ. ಬಾಲಕೃಷ್ಣ ಆಚಾರ್ಯರ ಬದುಕು, ಬರಹಗಳು ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕೃತಿ. 2019ರಲ್ಲಿ ಪ್ರಕಟವಾದ, 26 + 342 ಪುಟಗಳ ಇದರ ಬೆಲೆ 200 ರೂಪಾಯಿ.

ಅರುವತ್ತರಷ್ಟು ಅಮೂಲ್ಯ ಛಾಯಾಚಿತ್ರಗಳಿರುವ ಕೃತಿಯ ಆರಂಭದಲ್ಲಿ ವಾಣಿ ಬಿ. ಆಚಾರ್ಯರ 'ನಿವೇದನೆ' ಮತ್ತು ಕೆಲವು ಮಠಾಧೀಶರುಗಳ ಹಾಗೂ ಧಾರ್ಮಿಕ ಮುಂದಾಳುಗಳ ಶುಭ ಸಂದೇಶಗಳಿವೆ. ಕೊನೆಯಲ್ಲಿ ಬಾಲಕೃಷ್ಣ ಆಚಾರ್ಯರ ವ್ಯಕ್ತಿ - ಮಾಹಿತಿ, ಪ್ರಕಟಿತ ಕೃತಿಗಳು ಮತ್ತು  ಪ್ರಕಟಿತ - ಅಪ್ರಕಟಿತ ಬಿಡಿ ಲೇಖನಗಳು ಹಾಗೂ ಆಚಾರ್ಯರ ಪೂರ್ಣಗೊಳ್ಳದ ಕೆಲವು ಯೋಜನೆಗಳ ಕುರಿತಾದ ವಿವರಗಳಿವೆ.

ಪರ್ಲತ್ತಾಯ ವಂಶದ, ಪಡುಮುನ್ನೂರು ಶಾಖೆಯ ಉಪ್ಪಿನಂಗಡಿ ಬಳಿಯ ಕೊಂದಪ್ಪಡೆ ಮೂಲದ ಬಾಲಕೃಷ್ಣ ಆಚಾರ್ಯರು ಹುಟ್ಟಿದ್ದು ಉಡುಪಿ ಸಮೀಪದ ಕಡಿಯಾಳಿಯಲ್ಲಿ. 1940, ಮಾರ್ಚ್ 26ರಂದು ಹುಟ್ಟಿದ ಬಾಲಕೃಷ್ಣ ಆಚಾರ್ಯರ ಹೆತ್ತವರು ಸಂಸ್ಕೃತ - ಹಿಂದಿ ವಿದ್ವಾಂಸ, ಶಿಕ್ಷಕ, ಸಂಗೀತ ವಿದ್ವಾನ್, ಕವಿ ಕೆ. ಎಸ್. ಪದ್ಮನಾಭ ಆಚಾರ್ಯ ಹಾಗೂ ವೀಣಾ ವಾದಕಿ ರಮಾದೇವಿ ದಂಪತಿಗಳು.

ಎಂ.ಎ, ಬಿ.ಎಡ್ ಪದವೀಧರರಾದ ಬಾಲಕೃಷ್ಣ ಆಚಾರ್ಯರು 1961ರಲ್ಲಿ ಅದಮಾರು ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ, 1998ರಲ್ಲಿ ಬೆಳ್ಮಣ್ಣುವಿನ ಸೈಂಟ್ ಜೋಸೆಫ್ಸ್ ಹೈಸ್ಕೂಲಿನಿಂದ ನಿವೃತ್ತರಾದರು. ಮೂವತ್ತೇಳು ವರ್ಷಗಳ ಸುಧೀರ್ಘ ಕಾಲದ ವೃತ್ತಿ ಜೀವನದಲ್ಲಿ ಕಟಪಾಡಿ, ಗುರುಪುರ, ಹಳೆಯಂಗಡಿ, ಎಡಪದವು ಹೈಸ್ಕೂಲುಗಳಲ್ಲಿ ಮತ್ತು ಐಕಳದ ಪಾಂಪೈ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರಾಗಿ ಮಾದರಿ ಸೇವೆ ಸಲ್ಲಿಸಿ ಅಪಾರ ಜನಪ್ರೀತಿಗಳಿಸಿದವರು.

ಶಿಕ್ಷಕರಾಗಿ ಸಲ್ಲಿಸಿದ ಅಪಾರ ಮತ್ತು ಅಪೂರ್ವ ಸೇವೆಗಾಗಿ 1992ರಲ್ಲಿ ರಾಜ್ಯ ಪ್ರಶಸ್ತಿ ಮತ್ತು 1994ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಬಾಲಕೃಷ್ಣ ಆಚಾರ್ಯರು ಸಂಗೀತದಲ್ಲಿ ವಿದ್ವತ್ ಪದವಿಯನ್ನು ಪಡೆದವರು. ಆಂಟೆನಾ ತರಂಗ, ಗ್ರಾನೈಟ್ ತರಂಗ, ಕಾಷ್ಠ ತರಂಗ, ಗ್ಲಾಸ್ ತರಂಗ ಎಂಬ ವಿಶಿಷ್ಟ ಸಂಗೀತೋಪಕರಣಗಳನ್ನು ಅನ್ವೇಷಣೆ ಮಾಡಿದ ಅಪರೂಪದಲ್ಲಿ ಅಪರೂಪದ ವ್ಯಕ್ತಿಯಾಗಿದ್ದ ಬಾಲಕೃಷ್ಣ ಆಚಾರ್ಯರು, ಘಟ, ಖಂಜೀರ, ಕೊಳಲು, ಮೋರ್ಸಿಂಗ್, ವೀಣೆ, ಕೀ - ಬೋರ್ಡ್ ಸಹಿತ ಸುಮಾರು ಮೂವತ್ತು ಸಂಗೀತೋಪಕರಣಗಳನ್ನು ನುಡಿಸುತ್ತಿದ್ದ ಅಪ್ರತಿಮ ಕಲಾವಿದರು.

ಅಂಚೇ ಚೀಟಿಗಳು, ನಾಣ್ಯಗಳು, ನೋಟುಗಳು, ಕಡಲ ಚಿಪ್ಪುಗಳು, ಖನಿಜಗಳು, ಬೆಂಕಿ ಪೊಟ್ಟಣಗಳು, ಶುಭಾಶಯ ಪತ್ರಗಳು, ಧ್ವನಿ ಮುದ್ರಿಕೆಗಳು, ಸಿ.ಡಿ., ವಿ.ಸಿ.ಡಿ., ಹಳೆಯ ಗ್ರಾಮೋಫೋನ್ ಗಳು, ಪ್ರವಾಸಿ ತಾಣಗಳ ಛಾಯಾಚಿತ್ರಗಳು, ತಾಡವಾಲೆಗಳು, ನಿಘಂಟುಗಳ ಸಹಿತ ಪುಸ್ತಕಗಳು, ಪತ್ರಿಕೆಗಳು, ಗಣ್ಯರ ಹಸ್ತಾಕ್ಷರಗಳು ಸಹಿತ ಅನೇಕ ಅಮೂಲ್ಯ ವಸ್ತುಗಳ ಸಂಗ್ರಾಹಕರಾಗಿದ್ದ ಬಾಲಕೃಷ್ಣ  ಆಚಾರ್ಯರ ನಿವಾಸ ಒಂದು ಅದ್ಬುತ ವಸ್ತು ಸಂಗ್ರಹಾಲಯವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿರುವ ಈ ವಸ್ತು ಸಂಗ್ರಹಾಲಯವು ಆಚಾರ್ಯರ ಸಾಹಸ ಕಾರ್ಯಗಳಿಗೆ, ಅವರಿಗಿದ್ದ ವೈವಿಧ್ಯಮಯ ಹವ್ಯಾಸಗಳ ಮತ್ತು ಆಸಕ್ತಿಗಳಿಗೆ ಸಾಕ್ಷಿಯಾಗಿದೆ.

ಹಿಂದಿಯಲ್ಲಿ ಮತ್ತು ತುಳುವಿನಲ್ಲಿ ತಲಾ ಒಂದೊಂದು, ಇಂಗ್ಲೀಷ್ ನಲ್ಲಿ ಎರಡು ಸಹಿತ, ಸ್ವಂತ ಮತ್ತು ಸಂಪಾದಿತ ಒಟ್ಟು ಹದಿಮೂರು ಕೃತಿಗಳನ್ನು ಪ್ರಕಟಿಸಿರುವ ಬಾಲಕೃಷ್ಣ ಆಚಾರ್ಯರ ಅಪ್ರಕಟಿತ ಬರಹಗಳು 70ಕ್ಕೂ ಅಧಿಕ. ಇವರ ನೂರಕ್ಕೂ ಅಧಿಕ ಲೇಖನಗಳು, ಪ್ರಬಂಧಗಳು, ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

"ನೋಡಲು ಸರಳ ಸಜ್ಜನಿಕೆಯ ವ್ಯಕ್ತಿತ್ವ. ಎದುರು ಸಿಕ್ಕವರನ್ನು ನಗುಮೊಗದಿಂದ ಸ್ವಾಗತಿಸಿ ಆತ್ಮೀಯತೆಯಿಂದ ಮಾತನಾಡಿಸುವ ಸಜ್ಜನಿಕೆ. ಮನದಲ್ಲಿ ಆತ್ಮ ವಿಶ್ವಾಸ, ಕಣ್ಣಲ್ಲಿ ಕನಸು, ಸಾಧಿಸುವ ಛಲ, ಶ್ರದ್ಧೆ, ಬತ್ತದ ಜೀವನೋತ್ಸಾಹ. ಹಲವು ಸಾಧನೆಗಳ ಸರದಾರ. ಜೀವನದ ಕೊನೆಯವರೆಗೂ ಲವಲವಿಕೆಯಿಂದ ಇದ್ದು ಕನಸು ಕಾಣುತ್ತಾ ಸಾಧನೆಯ ಪಥದಲ್ಲಿ ಮುನ್ನುಗ್ಗುತ್ತಾ ಕಾಯವನ್ನು ತ್ಯಜಿಸಿದವರು" (ಪುಟ 124) ಎಂದು ಬಾಲಕೃಷ್ಣ ಆಚಾರ್ಯರ ವ್ಯಕ್ತಿತ್ವವನ್ನು ಸರಳ ಸುಂದರವಾಗಿ ಚಿತ್ರಿಸಿದ್ದಾರೆ ನಿವೃತ್ತ ಪ್ರಾಚಾರ್ಯರಾದ ಡಾ. ಎಸ್. ಪದ್ಮನಾಭ ಭಟ್ ಯೆಕ್ಕಾರು ಅವರು ತಾವು ಬರೆದ "ತೌಳವ ಜ್ಞಾನದ ಗಣಿ ಕೆ. ಬಾಲಕೃಷ್ಣ ಆಚಾರ್ಯ" ಎಂಬ ಲೇಖನದಲ್ಲಿ.

ಹಿರಿಯ ಸಾಹಿತಿಗಳೂ, "ಸಂಪ್ರಭಾ" ಮಾಸಿಕದ ಸಂಪಾದಕರೂ ಆದ ನಿವೃತ್ತ ಶಿಕ್ಷಕ ಸುಮುಖಾನಂದ ಜಲವಳ್ಳಿಯವರು ಬಾಲಕೃಷ್ಣ ಆಚಾರ್ಯರ ಸಮಗ್ರ ಸಿದ್ಧಿ ಸಾಧನೆಗಳನ್ನು ಸಂಕ್ಷಿಪ್ತವಾಗಿ, ಸರಳ ಸುಂದರವಾಗಿ ಮತ್ತು ಅಷ್ಟೇ ಸಮರ್ಥವಾಗಿ "ಸಾಹಿತ್ಯದ ತಂಪು ನೆರಳಲ್ಲಿ..." ಲೇಖನದಲ್ಲಿ ಕಟ್ಟಿಕೊಟ್ಟಿದ್ದಾರೆ (ಪುಟ 288 - 301).

"ಸಾಹಿತ್ಯವೊಂದನ್ನೇ ಮುಖ್ಯ ಪ್ರವೃತ್ತಿಯಾಗಿಟ್ಟುಕೊಂಡಿದ್ದಿದ್ದರೆ ಅವರಿಂದ ಇನ್ನೂ ಬೆಲೆಯುಳ್ಳ ಕೃತಿಗಳು ಕನ್ನಡ ಅಥವಾ ತುಳುವಿಗೆ ಸಲ್ಲುತ್ತಿದ್ದವೋ ಏನೋ. ಆದರೆ ಬಹುಮುಖ ಪ್ರತಿಭೆಯುಳ್ಳ ಅವರು ಸಂಗೀತಾದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡುದರಿಂದ ಸಾಹಿತ್ಯ ರಚನೆ ಅವರಿಗೆ ಒಂದು ಅಂಶವಾಯಿತೆ ಹೊರತು ಪೂರ್ಣ ಪ್ರಮಾಣದ್ದಾಗಲಿಲ್ಲ. ಹಾಗಿದ್ದರೂ ಸಾಕಷ್ಟು ಬರೆಹಗಳನ್ನು ಅವರು ಇತ್ತಿದ್ದಾರೆ. ಆಚಾರ್ಯರ ಬರೆಹ ಆರಂಭವಾದದ್ದು ಪತ್ರಿಕೆಗಳ ಮೂಲಕ ಎಂಬುದಾಗಿ ಗೊತ್ತಾಗುತ್ತದೆ. ತಾವು ಅಧ್ಯಾಪಕ ವೃತ್ತಿಗೆ ಪಾದರ್ಪಣ ಮಾಡುವ ಮೊದಲು 1961ರಲ್ಲಿ ಮಂಗಳೂರಿನಿಂದ ಹೊರಡುತ್ತಿದ್ದ ದೈನಿಕ " ನವಭಾರತ" ಪತ್ರಿಕೆಯ ಉಪಸಂಪಾದಕ ಮಂಡಳಿಯಲ್ಲಿದ್ದು ಕೆಲಸ ಮಾಡಿದ್ದರು. ಸಮಕಾಲೀನ ವಿಷಯದ ಮೇಲೆ ಲೇಖನ ಬರೆಯುತ್ತಿದ್ದರು. ಅವರ ಹೆಚ್ಚು ಲೇಖನಗಳು ಪ್ರಕಟವಾದ ಪತ್ರಿಕೆ "ಯುಗಪುರುಷ". ಹಾಗೆಯೆ 'ಪ್ರಕಾಶ'  'ಪ್ರಪಂಚ' ಇತ್ಯಾದಿ ಪತ್ರಿಕೆಗಳಲ್ಲೂ ಪ್ರಕಟವಾದದ್ದಿವೆ. ಆದರೆ ಈ ಲೇಖನಗಳೆಲ್ಲ ಅಷ್ಟು ಹೊತ್ತಿಗೆ ಲೇಖನಗಳಾಗಿ ಉಳಿದವೇ ಹೊರತು ಇವು ಸಂಗ್ರಹಗೊಂಡು ಕೃತಿರೂಪದಲ್ಲಿ ಬರಲಿಲ್ಲ. ಶಿಕ್ಷಣ, ರಾಜನೀತಿ, ಸಾಮಾಜಿಕ ಅರಿವನ್ನು ಮೂಡಿಸುವ ವಿಚಾರಪ್ರದ ವಿಷಯ, ಸಾಹಿತ್ಯ, ಸಂಸ್ಕೃತಿ ಚಿಂತನ, ಚರಿತ್ರೆ - ಹೀಗೆ ವಿಷಯ ವೈವಿಧ್ಯಗಳು ಇಲ್ಲಿ ಕಂಡು ಬರುತ್ತವೆ. ವಿಷಯದ ಖಚಿತತೆ ಮತ್ತು ನಿರೂಪಣೆಯ ನಿರ್ಗಳತೆಯಿಂದ ಜೀವ ತುಂಬಿಕೊಂಡು ಈ ಬರೆಹಗಳು ಓದುಗರಿಗೆ ಹಿತವಾದ ಸಂವಹನ ಕೊಡುವಂತಿವೆ. ಆಚಾರ್ಯರು ಚಿಂತನಶೀಲ ಬರಹಗಾರರು ಎಂಬುದು ಇಲ್ಲಿ ಕಂಡು ಬರುತ್ತವೆ."

"ಭಾವಗೀತೆಗಳು" ಬಾಲಕೃಷ್ಣ ಆಚಾರ್ಯರ ಪ್ರಕಟಿತ ಕೃತಿಗಳಲ್ಲೊಂದು. ಈ ಕೃತಿಯ ಕುರಿತು ಸುಮುಖಾನಂದ ಜಲವಳ್ಳಿಯವರು ಹೇಳುವುದು ಹೀಗೆ: "ಸಂಗೀತ ವಿಶಿಷ್ಟವಾದ ಸಂಕಲನ; ಹಾಗಂತ ಈ ಗೀತೆಗಳು ಸ್ವಂತ ರಚನೆಗಳಲ್ಲ. ಬೇರೆ ಬೇರೆ ಕವಿಗಳು ರಚಿಸಿದ ಪದ್ಯಗಳು. ಸಂಗೀತ ಸ್ವರ ಪ್ರಸ್ತಾರಕ್ಕಾಗಿಯೇ ಇಲ್ಲಿ ಗೀತೆಗಳನ್ನು ಆಯ್ದುಕೊಳ್ಳಲಾಗಿದೆ. ಸಂಗೀತದ ಒಂದೊಂದು ರಾಗವನ್ನು ಇಟ್ಟುಕೊಂಡು ಪ್ರತಿಯೊಂದು ಪದ್ಯದ ಚರಣಗಳ ಸಾಲು ಸಾಲಿಗೂ ಸ್ವರ ಪ್ರಸ್ತಾರವನ್ನು ಇತ್ತಿದ್ದಾರೆ. ಸ್ವತಃ ಸಂಗೀತ ವಿದ್ವಾಂಸರಾದ ಆಚಾರ್ಯರ ಸಂಗೀತ ಪಾಂಡಿತ್ಯವನ್ನು ಇಲ್ಲಿ ಕಾಣಬಹುದು. ಸ್ವರ ಜ್ಞಾನದ ನಿರರ್ಗಳತೆಗೆ ಇವು ನಿದರ್ಶನ. ಗೇಯತೆಯ ವೈವಿಧ್ಯವುಳ್ಳ ಪದ್ಯಗಳು ಒಂದೆಡೆ ಕಲೆ ಹಾಕಿರುವುದು ಕನ್ನಡದಲ್ಲಿ ಅಪರೂಪದ ಕಾರ್ಯವೆ. ಭಾವಗೀತೆ ಹಾಡುವವರಿಗೆ ಇದು ಅನುಕೂಲ. ಕಾವ್ಯದೊಂದಿಗೆ ಸಂಗೀತ ಅಂತರ್ಗತವಾಗಿರುತ್ತದೆ ಎಂಬ ಸತ್ಯವನ್ನು ಈ ಮೂಲಕ ಆಚಾರ್ಯರು ಅನಾವರಣ ಮಾಡಿದ್ದಾರೆ. ಸಂಗೀತ ಜೊತೆಗಿದ್ದರೆ ಕಾವ್ಯ ಜನರಿಗೆ ಹತ್ತಿರವಾಗುವುದು ಎಂಬ ನಿಜದರಿವಿಗೆ ಆಚಾರ್ಯರು ಇಲ್ಲಿ ಆಕಾರವಿತ್ತಿದ್ದಾರೆ. ಸುಮಾರು ಐವತ್ತರಷ್ಟು ಭಾವಗೀತೆಗಳು ಇಲ್ಲಿ ಸಂಗೀತಗಾರರಿಗೆ ಸಿಗುತ್ತವೆ. ಸಾಹಿತ್ಯ, ಸಂಗೀತ ದೃಷ್ಟಿಯಿಂದ ಇದೊಂದು ಸ್ಮರಣೀಯ ಕಾರ್ಯ ಎನ್ನಬಹುದು. ಆಚಾರ್ಯರ ಸಂಗೀತ - ಸಾಹಿತ್ಯದ ಕಳಕಳಿಗೆ ಇದು ಪುರಾವೆಯಾಗುವ ಕೃತಿ."

ಬಾಲಕೃಷ್ಣ ಆಚಾರ್ಯರ ಕೃತಿಗಳಲ್ಲಿನ ವಿಶಿಷ್ಟತೆಯನ್ನು, ವ್ಯಕ್ತಿತ್ವದಲ್ಲಿನ ವಿಶಾಲ ಮನೋಭಾವದ ಗುಣಗಳನ್ನು ಗುರುತಿಸಿರುವ ಸುಮುಖಾನಂದರು, "ಈ ಸಾಹಿತ್ಯದಲ್ಲಿ ಪ್ರಗತಿಪರ ಆಶಯಗಳಿವೆ. ಬದುಕಿನ ಬಗ್ಗೆ ಕಳಕಳಿ ಇದೆ. ಜೀವನ ಮೌಲ್ಯಗಳ ತಿಳಿವು ಇದೆ; ಸದ್ಭಾವನೆಗಳಿಗೆ ಪ್ರೇರಣೆ ಇದೆ. ಒಟ್ಟು ಮಾನವ ಜನಾಂಗದೊಳಿತಿನ ಬಗ್ಗೆ ತುಡಿತವಿದೆ" ಎಂಬುದನ್ನು ಕಂಡು ಕೊಂಡಾಡಿದ್ದಾರೆ.

"ಮುಂದೆ ಕೈಕಂಬದ ವಿಶಾಲವಾದ ಮನೆಗೆ ಸ್ಥಳಾಂತರಗೊಂಡಾಗ ತಂದೆಯವರ ಪುಸ್ತಕ ಸಂಗ್ರಹದ ಅಭ್ಯಾಸವನ್ನು ಅಣ್ಣ ಮುಂದುವರಿಸಲು ಪ್ರಾರಂಭಿಸಿದ. ಜತೆಗೆ ಬೇರೆ ಬೇರೆ ವಸ್ತುಗಳ ಸಂಗ್ರಹವೂ ಪ್ರಾರಂಭವಾಯಿತು. ಮುಂದೆ ಬಜ್ಪೆಯ ಮನೆಗೆ ಸ್ಥಳಾಂತರಗೊಂಡಾಗ ಅಲ್ಲಿ ಅವನ ಸಂಗ್ರಹಕ್ಕೆ ಹೆಚ್ಚು ಒತ್ತು ಸಿಕ್ಕಿತ್ತು. ತಂದೆಯವರ ಪತ್ರ ವ್ಯವಹಾರದಿಂದ ದೊರೆತ ಅಂಚೆ ಚೀಟಿಗಳು ಅವನ ಅಂಚೆ ಚೀಟಿ ಸಂಗ್ರಹಕ್ಕೆ ನಾಂದಿಯಾಯ್ತು. ನಾಣ್ಯ ಸಂಗ್ರಹ, ಅದಿರುಗಳ ಸಂಗ್ರಹ ಹೀಗೆ ಇನ್ನೂ ಎಷ್ಟೆಷ್ಟೋ ಸಂಗ್ರಹ ಪ್ರಾರಂಭವಾದದ್ದು ಬಜ್ಪೆಯ ಮನೆಯಿಂದಲೇ. ಸಂಗ್ರಹವಾದದ್ದನ್ನು ವ್ಯವಸ್ಥಿತವಾಗಿ ಇಡಲು ಪ್ಲಾಸ್ಟಿಕ್ ಕವರ್ ಗಳನ್ನು ಕೊಂಡು ಅದಕ್ಕೆ ಉದ್ದನೆಯ ಮತ್ತು ಅಡ್ಡನೆಯ ಹೊಲಿಗೆ ಹಾಕಿ ನಾಣ್ಯ ಅಂಚೆ ಚೀಟಿ, ಚಿಪ್ಪು, ಅದಿರುಗಳನ್ನು ಒಟ್ಟಿಗೆ ಜೋಡಿಸಿ ಫೈಲ್ ಗಳನ್ನು ತಯಾರಿಸಲಾಯಿತು. ತಂದೆಯವರ ಹಳೆಯ ಪುಸ್ತಕಗಳಿಗೆಲ್ಲಾ ಬೈಂಡ್ ಹಾಕಿ ಹೆಸರು ಬರೆದು ಕಪಾಟುಗಳಲ್ಲಿ ಜೋಡಿಸಲಾಯಿತು" ಎಂದು ಬಾಲಕೃಷ್ಣ ಆಚಾರ್ಯರ ಒಡಹುಟ್ಟಿದ ಸಹೋದರಿ ನಿವೃತ್ತ ಬ್ಯಾಂಕ್ ಉದ್ಯೋಗಿ ಶೋಭಾ ಆರ್. ಹೊಳ್ಳ ಉಡುಪಿ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದರೆ; "ಅವರ ಸಂಗ್ರಹಾಲಯವನ್ನು ನಿಭಾಯಿಸಿಕೊಂಡು ಹೋಗಬಲ್ಲೆನೇ ಎನ್ನುವ ಭಯ, ಕಾತುರ, ಉತ್ಸುಕತೆ ನನ್ನಲ್ಲಿ. ಇಂದಿಗೂ ಸೌರಭ ಸಂಗ್ರಹಾಲಯವನ್ನು ನನ್ನ ತಾಯಿ ಮತ್ತು ನಾವೆಲ್ಲರೂ ಇಟ್ಟುಕೊಂಡಿದ್ದೇವೆ ಎನ್ನುವುದೇ ಸಮಾಧಾನದ ಅಂಶ. ಅವರ ಸಂಗ್ರಹಾಲಯದ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ ಒಂದು ಅಂತರ್ಜಾಲ ತಾಣವನ್ನು ನಿರ್ಮಿಸಿ ಆಸಕ್ತರಿಗೆ, ಸಂಶೋಧಕರಿಗೆ ಅನುಕೂಲವಾಗುವಂತೆ ನಾಡಬೇಕೆನ್ನುವುದು ನಮ್ಮ ಮುಂದಿನ ಯೋಜನೆ" ಎನ್ನುತ್ತಾರೆ, ಬಾಲಕೃಷ್ಣ ಆಚಾರ್ಯರ ಪುತ್ರರಾದ ಬೆಂಗಳೂರು ಹರಳೂರಿನ ಗುರುಚರಣ ಆಚಾರ್ಯರು. 

ರಮಾದೇವಿಯವರಂಥ ಪತ್ನಿ ಹಾಗೂ ಬಿ. ಬಾಲಕೃಷ್ಣ ಆಚಾರ್ಯ, ಶೋಭಾರಂಥ ಮಕ್ಕಳನ್ನು ಪಡೆದ ಕೆ. ಎಸ್. ಪದ್ಮನಾಭ ಆಚಾರ್ಯರು ಹೇಗೆ ಧನ್ಯರೋ, ಹಾಗೆಯೇ ವಾಣಿಯವರಂಥ ಪತ್ನಿ ಹಾಗೂ ಗುರುಚರಣ, ಪಲ್ಲವಿಯವರಂಥ  ಮಕ್ಕಳನ್ನು ಪಡೆದ ಬಾಲಕೃಷ್ಣ ಆಚಾರ್ಯರೇ ಭಾಗ್ಯಶಾಲೆಗಳು ಎಂಬುದು ಈ ಸಂಸ್ಮರಣಾ ಗ್ರಂಥ ಓದಿದಾಗ ಯಾರಿಗಾದರೂ ಅನಿಸದೇ ಇರಲಾರದು. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಸಮಾಜಕ್ಕೆ ಮಾದರಿಯಾಗುವಂತೆ ಹೇಗೆ ಬಾಳಿ ಬದುಕಬಹುದು ಎಂಬುದಕ್ಕೆ ಬಾಲಕೃಷ್ಣ ಆಚಾರ್ಯರು ಸಾಕ್ಷಿಯಾಗಿದ್ದು, ಸ್ಮೃತಿ ಸೌರಭವನ್ನು ಓದುವ ಮೂಲಕ ಇತರರು ಬಹುವಷ್ಟು ಸ್ಪೂರ್ತಿಯನ್ನು ತಮ್ಮದನ್ನಾಗಿಸಿಕೊಳ್ಳಬಹುದು ಎಂಬುದರಲ್ಲಿ ಅನುಮಾನವಿಲ್ಲ.

ಈ ಗ್ರಂಥದಲ್ಲಿ ಬಾಲೃಷ್ಣ ಆಚಾರ್ಯರ ಬಾಲ್ಯದ ಗೆಳೆಯರು, ಬಂಧುಗಳು, ಒಡನಾಡಿಗಳು, ಸಹೋದ್ಯೋಗಿಗಳ ಸಹಿತ ಒಟ್ಟು ಎಂಭತ್ತಕ್ಕೂ ಅಧಿಕ ಮಂದಿ ಆಚಾರ್ಯರ ಬದುಕು - ಬರೆಹ, ಸಿದ್ಧಿ - ಸಾಧನೆಗಳ ಕುರಿತು ಬರೆದ ಲೇಖನಗಳಿವೆ.

~ ಶ್ರೀರಾಮ ದಿವಾಣ, ಉಡುಪಿ