ಬಾಲ್ಯದಲ್ಲೇ ಶಿಕ್ಷಣ ಪಡೆಯಬೇಕು ಏಕೆ...?
ಮಕ್ಕಳೇ.... ನಾವೆಲ್ಲ ಇಂದು ಶಾಲಾ ಕಾಲೇಜಿನಲ್ಲಿ ಜ್ಞಾನ ಪಡೆಯಲು ಹೋಗುತ್ತಿದ್ದೇವೆ. ಏಕೆಂದರೆ ಈ ಕಥೆ ಓದಿ.
ಒಂದೂರಿನಲ್ಲಿ ಒಬ್ಬ ಭಿಕ್ಷುಕನಿದ್ದನು. ಆ ಊರಿನಲ್ಲಿ ಒಮ್ಮೆ ಹಬ್ಬ ಆಚರಣೆಯನ್ನು ಬಹಳ ಸಡಗರದಿಂದ ಆಚರಿಸುತ್ತಿದ್ದರು. ಆ ದಿನ ಎಲ್ಲಾ ಮನೆಗಳಲ್ಲಿ ಬಗೆ ಬಗೆಯ ಸಿಹಿ ತಿನಿಸು ಪಲ್ಲೆ ತಯಾರಿಸಿದ್ದರು. ಆ ಭಿಕ್ಷುಕ ಒಂದು ಮನೆಗೆ ಭಿಕ್ಷೆ ಬೇಡಲು ಹೋದನು. ಆ ಮನೆಯ ಯಜಮಾನಿ ತಯಾರಿಸಿದ ಎಲ್ಲಾ ಬಗೆಯ ಆಹಾರ ಪದಾರ್ಥಗಳನ್ನು ನೀಡಲು ತಂದಳು. ಭಿಕ್ಷುಕ ಭಿಕ್ಷಾ ಪಾತ್ರೆಯನ್ನು ಆಕೆಯ ಮುಂದಿಟ್ಟ. ಆಹಾರ ಪದಾರ್ಥಗಳನ್ನು ಭಿಕ್ಷಾ ಪಾತ್ರೆಗೆ ಹಾಕುವ ಮುನ್ನ ಆ ಯಜಮಾನಿ ಭಿಕ್ಷಾ ಪಾತ್ರೆ ನೋಡಿದಳು. ತುಂಬಾ ಕೊಳಕಾಗಿತ್ತು. ಆಕೆ ಹೇಳಿದಳು,"ಇಷ್ಟು ಒಳ್ಳೆಯ ರುಚಿಯಾದ ಆಹಾರವನ್ನು ಈ ಕೊಳಕು ಬಿಕ್ಷಾ ಪಾತ್ರೆಗೆ ಹಾಕುವುದೇ ಛೇ", ಇದನ್ನು ತೊಳೆದುಕೊಂಡು ಬಾ ಎಂದಳು. ಅದಕ್ಕೆ ಆ ಭಿಕ್ಷುಕ ಹೇಳಿದ "ಇದೇ ಭಿಕ್ಷಾ ಪಾತ್ರೆಯನ್ನೇ ನನ್ನ ತಂದೆ ಬಳಸಿದ್ದು, ಆತನು ತೊಳೆದಿಲ್ಲ. ಅದನ್ನೇ ನಾನು ಬಳಸುತ್ತಿದ್ದೇನೆ, ನಾನು ತೊಳೆದಿಲ್ಲ. ಇದಕ್ಕೆ ಹಾಕಿ ತಾಯಿ ಎಂದನು. ಅದಕ್ಕೆ ಆ ಮನೆಯೊಡತಿ ಹೇಳಿದಳು ನಾನು ಅತಿ ಪ್ರೀತಿಯಿಂದ ತಯಾರಿಸಿದ ಈ ರುಚಿಯಾದ ಆಹಾರವನ್ನು ಈ ಕೊಳಕು ಪಾತ್ರೆಗೆ ಹಾಕಿದರೆ ಆಹಾರ ಹಾಳಾಗುತ್ತದೆ, ಅದರ ರುಚಿ ನಿನಗೆ ಸಿಗುವುದಿಲ್ಲ. ನಾನು ಹಾಕುವುದಿಲ್ಲ ಎಂದಳು. ನಮ್ಮ ಮನಸ್ಸು ಕೂಡ ಈ ಕಥೆಯಲ್ಲಿ ಬರುವ ಭಿಕ್ಷಾ ಪಾತ್ರೆ ಇದ್ದಂತೆ. ಮಕ್ಕಳ ಮನಸ್ಸು ಸ್ವಚ್ಛವಾಗಿರುತ್ತದೆ. ಮನಸ್ಸು ಹೊಲಸು ಆಗಿರುವುದಿಲ್ಲ. ಆ ವಯಸ್ಸಿನಲ್ಲಿ ಮಕ್ಕಳಲ್ಲಿ ಅಹಂ, ಮಮಕಾರ, ದ್ವೇಷ, ಕಾಮ, ಕ್ರೋಧ, ಲೋಭ, ಮದ ಮತ್ತು ಮತ್ಸರ ಮುಂತಾದವುಗಳು ಮಕ್ಕಳ ಮನಸ್ಸನ್ನು ಪ್ರವೇಶಿಸಿರುವುದಿಲ್ಲ.
ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಪ್ರಪಂಚದ ಆಸೆಗಳಿಂದ ಮಲಿನವಾಗಿರುವುದಿಲ್ಲ. ಹಾಗಾಗಿ ಆ ವಯಸ್ಸಿನಲ್ಲಿ ವಿದ್ಯೆ ನೀಡಬೇಕು. ಇದರಿಂದ ಮನಸ್ಸು ಸುಂದರವಾಗಿ, ಜಗತ್ತು ಆನಂದವಾಗಿ ಅನುಭವಿಸಲು ಸಾಧ್ಯ. ಈ ಜಗತ್ತು ಸ್ವರ್ಗ ಇದ್ದಂತೆ, ಅದು ಅಷ್ಟೊಂದು ವೈವಿಧ್ಯಮಯ ಮತ್ತು ಪರಿವರ್ತನಾಶೀಲ. ಇದನ್ನು ಸುಂದರ ಮನಸ್ಸಿನಿಂದ, ಮಧುರ ಭಾವದಿಂದ ನೋಡಿದರೆ, ಆನಂದ ಉಂಟಾಗುತ್ತದೆ. ಹಾಗಾಗಿ ಈ ಸುಂದರ ಜಗತ್ತಿನ ಜ್ಞಾನ ತಿಳಿದುಕೊಳ್ಳಬೇಕು ಅದನ್ನು ಸುಂದರವಾಗಿ ಅನುಭವಿಸಬೇಕಾಗುತ್ತದೆ.
ವಯಸ್ಸಾಗುತ್ತಿದ್ದಂತೆ ಹಾರ್ಮೋನ್ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಒಂದು ಹಂತದ ನಂತರ ಕಡಿಮೆಯಾಗುತ್ತಾ ಬರುತ್ತದೆ. ನಮ್ಮ ಕಣ್ಣು ಕಿವಿಯ ಮೂಲಕ ಹೊಲಸು ಪ್ರವೇಶವಾಗುತ್ತದೆ. ಈ ಹೊಲಸು ನಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ನಮ್ಮ ಭಾವವನ್ನು ಹಾಳುಮಾಡುತ್ತದೆ. ಹಾಳಾದ ಭಾವ ಮತ್ತು ಮನಸ್ಸಿಗೆ ಎಷ್ಟೇ ಸುಂದರ ಜ್ಞಾನ ಹಾಕಿದರೂ ಮೊದಲೇ ಮನಸ್ಸಿನಲ್ಲಿ ತುಂಬಿರುವ ಹೊಲಸಿನ ಜೊತೆ ಸುಂದರ ಜ್ಞಾನ ಬೆರೆತು ಜ್ಞಾನವು ಹೊಲಸಾಗುತ್ತದೆ. ಅಂದರೆ ಮಲಿನ ಬಿಕ್ಷಪಾತ್ರೆಗೆ ರುಚಿಯಾದ ಅಡುಗೆ ಹಾಕಿದರೆ, ಆ ಮಲಿನದ ಜೊತೆ ಸೇರಿ ಆಹಾರ ಹಾಳದಂತೆ.
ಇನ್ನೊಂದು ಕಥೆ: ಒಂದು ಬೇವಿನ ಮರದಲ್ಲಿ ಇರುವೆ ಕುಟುಂಬ ವಾಸವಾಗಿತ್ತು. ಬೇವಿನ ರಸ ಹೀರಿ ಹೀರಿ ಅದರ ಬಾಯಿ ಕಹಿಯಾಗಿತ್ತು. ಅಲ್ಲಿಗೆ ಸಕ್ಕರೆ ಬೆಟ್ಟದಿಂದ ಮತ್ತೊಂದು ಇರುವೆ ಬಂದು ಹೇಳಿತು. "ಇದೇನು ನೀನು ಬರೀ ಕಹಿ ತಿನ್ನುತ್ತಿ. ನನ್ನ ಸಕ್ಕರೆ ಬೆಟ್ಟಕ್ಕೆ ಬಾ. ಅಲ್ಲಿ ಸವಿ ಸವಿಯಾದ ಸಿಹಿ ತಿನ್ನುವೆ" ಎಂದಿತು. ಆಗ ಈ ಇರುವೆ ತನ್ನ ಪತ್ನಿಗೆ ಹೋಗಿ ಹೇಳಿತು, "ನಾನು ಮೊದಲು ಹೋಗಿ ನೋಡಿಕೊಂಡು ಬರುತ್ತೇನೆ. ನಂತರ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ". ಆಗ ಆ ಪತ್ನಿ ಇರುವೆ ತನ್ನ ಗಂಡನಿಗೆ ಮಧ್ಯದಲ್ಲಿ ಹಸಿವಾಗದಿರಲೆಂದು ಬುತ್ತಿ ನೀಡಿತು ಅಂದರೆ ಒಂದು ಬೇವಿನ ಕಡ್ಡಿ ತುಂಡನ್ನು ನೀಡಿತು. ಅದನ್ನು ಬಾಯಲ್ಲಿ ಇಟ್ಟುಕೊಂಡು ಸಕ್ಕರೆ ಬೆಟ್ಟಕ್ಕೆ ಹೋಯಿತು. ಸವಿ ಸವಿ ಸಕ್ಕರೆ ತಿಂದರೂ ಅದಕ್ಕೆ ಸಿಹಿ ಗೊತ್ತಾಗಲಿಲ್ಲ, ಆಗ ಸಕ್ಕರೆ ಬೆಟ್ಟದ ಇರುವೆ, "ನಿನ್ನ ಬಾಯಿ ತೆರೆ" ಎಂದಿತು. ಬಾಯಿ ತೆರೆದರೆ ಅದರ ಬಾಯಲ್ಲಿ ಬೇವಿನ ಕಡ್ಡಿ ಇತ್ತು. "ಮೊದಲು ಅದನ್ನು ತೆಗೆ ನಂತರ ತಿನ್ನು" ಎಂದಿತು. ಅದನ್ನು ಹೊರಹಾಕಿ ತಿಂದಾಗ ಅದರ ಸಿಹಿಯನ್ನು ಅನುಭವಿಸಿತ್ತು. ನಮ್ಮ ಹೊಲಸಾದ ಮನಸ್ಸು ಕೂಡ ಬೇವಿನ ಕಡ್ಡಿ ಇಟ್ಟುಕೊಂಡಂತೆ. ಅದರಿಂದ ಸಿಹಿ ಅನುಭವಿಸಲು ಸಾಧ್ಯವಿಲ್ಲ. ಅದಕ್ಕಾಗಿ ಮಕ್ಕಳೇ ಈಗ ಸಿಕ್ಕಿರುವ ಅವಕಾಶ ನಮ್ಮ ಜೀವನ ಸುಂದರಗೊಳಿಸಲು ಬೇಕಾದ ಜ್ಞಾನ. ಅದಕ್ಕಾಗಿ ನಮ್ಮ ಸ್ವಚ್ಛ ಮನಸ್ಸನ್ನು ಬಳಸಿ ತಾಜಾ ಜ್ಞಾನ ತುಂಬಿಕೊಳ್ಳೋಣ.
-ಎಂ.ಪಿ. ಜ್ಞಾನೇಶ್, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ