ಬಾಲ್ಯದಾಟ

ಬಾಲ್ಯದಾಟ

ಕವನ

ಬಾಲ್ಯದಾಟ ಎನ್ನಲು ಮೊಗವು

ಮಲ್ಲಿಗೆಯಂತೆ ಅರಳುವುದು

ಒಂದೇ, ಎರಡೇ ಬಾಲ್ಯದ ಆಟವು

ಅರಿವು- ತಿಳಿವು ಆಟದ ಪಾಠವು.

 

ಕಣ್ಣಾ ಮುಚ್ಚೆ- ಕಾಡೆ ಕೂಡೆ- 

ಅವರನ್ನು ಬಿಟ್ಟು ಇವರ್ಯಾರು

ಕಲ್ಲಲು ಆಟ, ಬಳೆಯಲು ಆಟ

ಸಂತಸದ ಗೂಡಲಿ ನಲಿದಾಟ.

 

ಹಗ್ಗದಾಟವು ಬಲು ಗಮ್ಮತ್ತಿನಲಿ

ಜಿಗಿ ಜಿಗಿಯುತ ಸಂತಸ ಗಗನದಲಿ

ಕುಂಟೆಪಿಲ್ಲೆ  ಆಟದಿ ಬಾಗಿ ಬಳಕುತ

ಜಾಗ್ರತೆಯಲಿ* ಬಚ್ಚವ * ತಳ್ಳುತಲಿ

 

ಗೋಲಿ,ಬುಗುರಿ,ಚಿನ್ನಿ ದಾಂಡು

ಗೆದ್ದವನಲ್ಲಿ ಭಾರೀ ಗತ್ತಿನ ಗಂಡು

ಕಲ್ಲಿನ ಮೇಲೆ ಕಲ್ಲನು ಜೋಡಿಸಿಟ್ಟು

ಲಗೋರಿ ಎನ್ನುತ ಗುರಿಯನ್ನಿಟ್ಟು...

 

ಮರಳರಾಶಿಯಲಿ ಗೂಡನು ಕಟ್ಟುತ

ಅಂಜುತ ಮೆಲ್ಲನೆ ಮರವನು ಹತ್ತುತ

ಸೈಕಲ್ ಚಕ್ರವ ರಭಸದಲಿ ತಳ್ಳುತ

ಓಡುತ, ಓಡುತ ಆಟವನಾಡುತಲಿ.

 

ಗಾಳಿ ಪಟವನು ಗಾಳಿಗೆ ಹಾರಿಸಿ

ಸೂತ್ರವನು ಹಿಡಿದು ದಾರವ ಬಿಡುತ

ಬಾಲಂಗೋಚಿಯ ಕುಣಿತವ ಕಂಡು

ಮನವದು ಸಾಗಿತ್ತು ಮುಗಿಲೆತ್ತರಕೆ.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

 

ಚಿತ್ರ್