ಬಾಲ್ಯದ ಒಂದು ಘಟನೆ

ಬಾಲ್ಯದ ಒಂದು ಘಟನೆ

ಬರಹ

ನಾನ್ ಆವಾಗ 3ನೇ ತರಗತಿಯಲ್ಲಿ ಓದುತಿದ್ದೆ, ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿತ್ತು. ರಜೆ ಬಂತೆಂದರೆ ಸಂತಸದ ಮನೆಗೆ ಏಣಿ ಹಾಕುತ್ತಿದ್ದಂತ ಕಾಲವದು ಬೆಳಗ್ಗೆ ಮನೆ ಬಿಟ್ಟರೆ ಸಂಜೆಯೋ ಇಲ್ಲ ರಾತ್ರಿನೋ ಮತ್ತೆ ಮನೆ ಸೇರುತ್ತಿದ್ದು.

ಕ್ರಿಕೆಟ್ ಆಡೋದು, ಚಿನ್ನಿದಾಂಡು ಆಡೋದು, ಈಜಾಡೋದು, ಮಾವಿನಕಾಯಿ, ಗೋಡುಂಬಿ ಹಣ್ಣುಗಳನ್ನು ಅವರಿವರ ಮರಗಳಲ್ಲಿ ಕಿತ್ತು ತಿನ್ನೊದು, ಇವೇ ರಜೆಯಲ್ಲಿ ನಮ್ಮ ದಿನನಿತ್ಯದ ಕೆಲಸಗಳಾಗಿರುತ್ತಿದ್ದವು. ವಿಶೇಷವಾಗಿ ಊರಿನಲ್ಲಿ ಏನೇ ತರಲೆ ಕೆಲಸಗಳು ನೆಡೆದಿದ್ದರೆ ಅದರ ಹಿಂದೆ ನಮ್ಮ ಗ್ಯಾಂಗಿನ ಸದಸ್ಯರುಗಳ ಕೈವಾಡವಿರುತಿತ್ತು.
ನಮ್ಮೂರು ಮೊದಲೇ ಹೇಳಿಕೇಳಿ ಚಿಕ್ಕದಾದ ಊರು ಏನಾದರೂ ಘಟನೆಗಳು ನೆಡೆದರೆ ಬಹುಬೇಗನೆ ವಿಷಯ ಊರ ತುಂಬೆಲ್ಲಾ ಹರಡುತ್ತಿತ್ತು. ಅಂತಹ ಅನೇಕ ಘನಂಧಾರಿ ಕೆಲಸಗಳಿಗೆ ನಾವುಗಳು ಆಗಾಗ ಕಾರಣರಾಗುತ್ತಿದ್ದೆವು. ಓಮ್ಮೆ ಕ್ರಿಕೆಟ್ ಆಡಿ ದಣಿದು ಬಿರುಬಿಸಿಲ ದಾಹ ನೀಗಿಸಿಕೊಳ್ಳಲು ನಮ್ಮ ಗ್ಯಾಂಗ್ ಲೀಡ್ರು ಪರಮೇಶಿ ಜೊತೆ ಸೇರಿ ಅಪಾಯಕಾರಿ ಯೋಜನೆಯೊಂದನ್ನು ಎಲ್ಲರೂ ನಿರ್ಧರಿಸಿ, ಅದರಂತೆ ನಮ್ಮೂರ ರೇವೇಗೌಡ್ರ ತೆಂಗಿನ ತೋಟದಲ್ಲಿ ಒಬ್ಬರಿಗೆ ತಲಾ ಎರಡೆರಡರಂತೆ ಹನ್ನೆರಡು ಎಳನೀರನ್ನು ನಮ್ಮತ್ತೆ ಮಗ ಮಂಜ ಮರ ಏರಿ ಕಿತ್ತುಹಾಕಿದ. ಆಸೆ ದುರಾಸೆಯಾಗಿ ತೆಂಗಿನಕಾಯಿಯನ್ನು ಸಹ ಮರದಿಂದ ಕಿತ್ತುಹಾಕಲು ನಾವುಗಳು ಅವನಿಗೆ ಆದೇಶ ಕೊಟ್ಟೆವು. ಕಂಠಪೂರ್ತಿ ಎಳನೀರನ್ನು ಕುಡಿದು, ತೆಂಗಿನಕಾಯಿಯನ್ನು ಚನ್ನಬಸವಯ್ಯನವರ ಅಂಗಡಿಗೆ ಹಾಕಲು ಹೊರಟೆವು. ಆಗಲೇ ನಮ್ಮ ಈ ಸತ್ಕಾರ್ಯದ ವಿಷಯ ಊರಲ್ಲೆಲ್ಲಾ ಹರಡಿತ್ತು!

ವಿಷಯ ಸೋರಿಕೆ ಮಾಡಿದವನು ನಮ್ಮ ಗ್ಯಾಂಗಿನ ಸದಸ್ಯ ಸತಿ. ಒಂದು ಎಳನೀರನ್ನು ಅವನಿಗೆ ಕಡಿಮೆ ಕೊಟ್ಟಿದ್ದಕ್ಕೆ ಸಿಡಿದ್ದೆದ್ದು ನಮಗೆ ಮುಳುವಾಗಿದ್ದನು. ಬೇರೆಯವರ ತೋಟದಲ್ಲಿ ತೆಂಗಿನ ಕಾಯಿಯನ್ನು ಮರದಿಂದ ಕೆಡವುದು ಇರಲಿ, ಬಿದ್ದ ಒಂದು ಕಾಯಿಯನ್ನು ತೆಗೆದು ಕೊಂಡರೆ ಐವತ್ತು ರೂಪಾಯಿ ದಂಡ ತೆರಬೇಕಾದ ನಿಯಮ ನಮ್ಮೂರಲ್ಲಿ ಇತ್ತು. ಇನ್ನೂ ನಾವುಗಳು ಮಾಡಿದ್ದು ಮಹಾಪರಾಧವೇ ಆಗಿತ್ತು. ಆದರೆ ಅರಿವಿಲ್ಲದ ಹುಡುಗರು ಎಂಬ ಶ್ರೀರಕ್ಷೆ ನಮ್ಮನ್ನು ಕಾಪಾಡಿತ್ತು. ನಿಯಮದ ಪ್ರಕಾರ ನಮಗೆ ಶಿಕ್ಷೆ ಕೊಟ್ಟಿದ್ದರೆ ಎರಡುದಿನ ಕತ್ತಲೆ ಕೋಣೆಯಲ್ಲಿ ನಮ್ಮನ್ನು ಕೂಡಿಹಾಕಬೇಕಿತ್ತು!

ಕಾಲಚಕ್ರ ಉರುಳಿದೆ. ಅಂದು ನಮ್ಮೂರಿನ ಜನರೆದರು ಖಳನಾಯಕರಾಗಿದ್ದ ನಮ್ಮ ಗುಂಪಿನ ಗೆಳೆಯರೆಲ್ಲ ಇಂದು ನಾಡಿನ ಸತ್ ಪ್ರಜೆಗಳಾಗಿದ್ದಾರೆ. ನನ್ನ ಬಾಲ್ಯ ಸ್ನೇಹಿತ ಸತಿ ಸದ್ಯ ಹೆಬ್ರಿ (ಆಗುಂಬೆ ಹತ್ತಿರ) ಎಂಬಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಹೈಸ್ಕೂಲ್ ಅಧ್ಯಾಪಕರ ಆಯ್ಕೆಗೆ ಕರ್ನಾಟಕ ಸರಕಾರ ನೆಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಇಡೀ ಜಿಲ್ಲೆಗೇ ಎರಡನೇ ಸ್ಥಾನ ಪಡೆದ ಹಿರಿಮೆ ಈತನದು. ನಮ್ಮ ಗ್ಯಾಂಗ್ ಲೀಡ್ರು ಪರಮೇಶಿ ಮನೆಯಲ್ಲಿ ಆರ್ಥಿಕ ವ್ಯವಸ್ಥೆ ಸರಿಯಾಗಿಲ್ಲದ್ದರಿಂದ ಕಷ್ಟಪಟ್ಟು ದುಡಿದು ತಂಗಿಯನ್ನು ಅಧ್ಯಾಪಕಿಯನ್ನಾಗಿಸಿ, ತನ್ನ ಸ್ವಂತ ಖರ್ಚಿನಿಂದ ಅವಳ ಮದುವೆ ಮಾಡಿದಂತಹ ಸಾಧಕ ಅವನು. ಇನ್ನೂ ನಮ್ಮತ್ತೆ ಮಗ ಮಂಜ ಇವನಿಗೆ ಸರಿಯಾದ ಮಾರ್ಗದರ್ಶನ ಮತ್ತು ಆರ್ಥಿಕ ವ್ಯವಸ್ಥೆ ಇದ್ದಿದ್ದರೆ ಇಂಡಿಯಾ ಕ್ರಿಕೆಟ್ ಟೀಮಿನಲ್ಲಿ ಅಲ್ಲದಿದ್ದರೂ ರಣಜಿ ಮಟ್ಟದಲ್ಲಿನ ಕ್ರಿಕೆಟ್ ತಂಡದ ಖಾಯಂ ಸದಸ್ಯನಾಗುವ ಪ್ರತಿಭೆ ಈತನದು. ಅಷ್ಟು ಸೊಗಸಾಗಿ ಕ್ರಿಕೆಟ್ ಆಡುತ್ತಾನೆ. ಅವನ ಆಟದ ಶೈಲಿಯನೊಮ್ಮೆ ನೋಡುವಾಸೆ ಇದ್ದರೆ ನನ್ನ ಜೊತೆ ಒಂದುಸಲ ನಮ್ಮೂರಿಗೆ ಹೋಗುವ ಬನ್ನಿ. - ನಿಮ್ಮ ಸುನಿಲ್ ಮಲ್ಲೇನಹಳ್ಳಿ