ಬಾಲ್ಯದ ನೆನಪುಗಳು-"ಮೇರಿ ಐ ಲವ್ ಯು"

ಬಾಲ್ಯದ ನೆನಪುಗಳು-"ಮೇರಿ ಐ ಲವ್ ಯು"

 ನಾನು ಜಾವೇದ್ ಸುಮಾರು ೧೮ ವರ್ಷಗಳಿಂದ,ಅಂದರೆ ಎಲ್ ಕೆ ಜಿ ಇಂದ ಚಡ್ಡಿದೋಸ್ತರು. ನಾವಿಬ್ಬರೂ ಚಿಕ್ಕವರಿದ್ದಾಗ ತುಂಬಾ ತಂಟೆಗಳನ್ನು ಮಾಡುತ್ತಿದ್ದೆವು. ಶಾಲೆಯಲ್ಲೂ ಕೂಡ ನಾವಿಬ್ಬರು ಕೀಟಲೆಗಳನ್ನು ಮಾಡಿ ಅದನ್ನು ಬೇರೆಯವರ ಮೇಲೆ ಎತ್ತಿ ಕಟ್ಟುತ್ತಿದ್ದೆವು. ಆದ ಕಾರಣ ನಾವು ಶಿಕ್ಷಕರಿಂದ ಶಿಕ್ಷೆ ಅನುಭವಿಸಿದ್ದು ತುಂಬಾನೇ ಕಡಿಮೆ ಎನ್ನಬಹುದು.ಆದರೆ ನಮ್ಮ ದೆಸೆಯಿಂದ ತುಂಬಾ ಜನರು ತೊಂದರೆ ಅನುಭವಿಸುತ್ತಿದ್ದರು. ನಾವು ನಮ್ಮ ತಪ್ಪುಗಳನ್ನು ಬೇರೆಯವರ ಮೇಲೆ ಎತ್ತಿ ಕಟ್ಟುತ್ತಿದ್ದರಿಂದ ಮತ್ತು ನಾವಿಬ್ಬರೂ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸುತ್ತಿದ್ದರಿಂದ ನಮಗೆ ಯಾವ ಶಿಕ್ಷಕರೂ ಬೈಯುತ್ತಿರಲಿಲ್ಲ. ಅದಕ್ಕೆ ಇನ್ನೂ ಒಂದು ಕಾರಣವಿತ್ತು. ನಾವಿಬ್ರೂ ಮಾಡೋ ತಪ್ಪನ್ನೆಲ್ಲ ಮಾಡಿ ಸುಮ್ಮನೆ ಮುಗ್ಧ ಮುಖ ತೋರಿಕೊಂಡು,ಪಿಳಿ ಪಿಳಿ ಕಣ್ಣು ಮಿಟುಕಿಸುತ್ತ ಕುಳಿತುಬಿಡುತಿದ್ದೆವು. ಆದ ಕಾರಣ ಶಿಕ್ಷಕರು ನಮ್ಮನ್ನು ತುಂಬಾ ಮುಗ್ಧರೆಂದು ತಿಳಿದು ಬಿಟ್ಟು ಬಿಡುತ್ತಿದ್ದರು.ಈಗಲೂ ಕೂಡ ಜಾವೇದ್ ನ ಜೊತೆ ನಾವು ಶಾಲೆಯಲ್ಲಿ ಮಾಡಿದ ಕೀಟಲೆಗಳನ್ನು ನೆನೆಸಿಕೊಂಡು ನಗುತ್ತಿರುತ್ತೇನೆ. ಒಂದು ಸಲ ಮಾತ್ರ ನಾವು ನಮ್ಮ ಗುರುಗಳ ಕೋಣೆಯಲ್ಲಿದ್ದ ಟೂಬ್ ಲೈಟ್ ಅನ್ನು ಒಡೆದು,ಅದರಿಂದ ನಮ್ಮ ಗುರುಗಳ ಕೋಣೆಯ ಮಾಲೀಕ ಅದರ ಅಪವಾದ ಹೊರುವಂತೆ ಮಾಡಿದ್ದೆವು. ಇದೇನೂ ನಾವು ಉದ್ದೇಶಪೂರ್ವಕವಾಗಿ ಮಾಡಿದ ಕೀಟಲೆಯಲ್ಲ.ಆದರೆ ಅಪವಾದ ಮಾತ್ರ ಮಾಲಿಕನ ಮೇಲೆ ಬಂದಿದ್ದು ಒಂದು ತಮಾಷೆ.ಆ ಘಟನೆಯನ್ನು ಈಗ ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ. ಸುಮ್ಮನೆ ಓದಿ ನಕ್ಕು ಬಿಡಿ!!!

ಆಗ ತಾನೇ ಒಂಭತ್ತನೇ ತರಗತಿಯ ಪರೀಕ್ಷೆ ಮುಗಿದು ಫಲಿತಾಂಶ ಹೊರಗೆ ಬಂದಿತ್ತು. ನಾನು ತರಗತಿಗೆ ಮೊದಲನೇ ಸ್ಥಾನ ಪಡೆದು ಉತ್ತೀರ್ಣನಾಗಿದ್ದೆ. ಜಾವೇದ್ ಮೂರನೆಯ ಸ್ಥಾನ ಪಡೆದು ಉತ್ತೀರ್ಣನಾಗಿದ್ದ. ಫಲಿತಾಂಶ ನೋಡಲು ಹೋದಾಗ ನಮ್ಮ ಗುರುಗಳಾಗಿದ್ದ ಶ್ರೀ ಹೆಗಡೆ ಸರ್ ನಮ್ಮನ್ನು ಭೆಟ್ಟಿಯಾಗಿ ಅಭಿನಂದಿಸಿದರು.ಆವರು ಆಗ ತಮ್ಮ ಕೋಣೆಯಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಟ್ಯೂಶನ್ ನಡೆಸುತ್ತಿದ್ದರು. ಹೀಗೆಯೇ ಮಾತನಾಡುವಾಗ ನಮಗೂ ಕೂಡ ಅವರ ಟ್ಯೂಶನ್ ಗೆ ಬರಲು ಒತ್ತಾಯಿಸಿದರು. ನಾವು ಕೂಡ ರಜೆಯಲ್ಲಿ ಮಾಡಲು ಕೆಲಸವಿಲ್ಲದೇ ಅಲ್ಲಿ ಇಲ್ಲಿ ಅಲೆಯುತ್ತಿದ್ದೆವು. ಆದ ಕಾರಣ ಅವರ ಬಳಿ ಟ್ಯೂಶನ್ ಗೆ ಹೋಗಲು ಒಪ್ಪಿಕೊಂಡೆವು. ನಮ್ಮ ಜೊತೆ ನನ್ನ ತಮ್ಮ ಗಿರೀಶ್ ನನ್ನೂ ಕೂಡಿಸಿಕೊಂಡೆವು(ಗಿರೀಶ್ ನನ್ನ ಚಿಕ್ಕಮ್ಮನ ಮಗ). ಹಾಗೆಯೇ ಮೂರು ಜನರ ಟ್ಯೂಶನ್ ನಮ್ಮ ಗುರುಗಳ ಕೋಣೆಯಲ್ಲಿ ಶುರುವಾಯಿತು.

ನಮ್ಮ ಗುರುಗಳ ಕೋಣೆ ತುಂಬಾ ಚಿಕ್ಕದಾಗಿತ್ತು. ಆ ಕೋಣೆಯಲ್ಲಿ ಅಬ್ಬಬ್ಬ ಎಂದರೆ ಸುಮಾರು  ಐದರಿಂದ ಆರು ಜನ ಮಾತ್ರ ಕುಳಿತುಕೊಳ್ಳಬಹುದಿತ್ತು.ಒಂದು ಮೂಲೆಯಲ್ಲಿ ಬರೆಯುವ ಬೋರ್ಡ್,ಕುಳಿತುಕೊಳ್ಳಲು ಒಂದು ಕುರ್ಚಿ,ಇನ್ನೊಂದು ಮೂಲೆಯಲ್ಲಿ ಒಂದು ಬಿಂದಿಗೆ,ಒಂದು ಫ್ಯಾನ್ ಹಾಗೂ ಕೆಲವು ಬಟ್ಟೆಗಳು,ಇವಿಷ್ಟು ನಮ್ಮ ಗುರುಗಳ ಆಸ್ತಿಯಾಗಿದ್ದವು. ಆ ಕೋಣೆಯ ಎತ್ತರ ಕೂಡ ತುಂಬಾ ಚಿಕ್ಕದಾಗಿತ್ತು. ನಾವು ಕೈ ಎತ್ತಿದರೆ ಸುಲಭವಾಗಿ ಕೋಣೆಯ ಮೇಲ್ಚಾವನಿಯನ್ನು ಮುಟ್ಟಬಹುದಾಗಿತ್ತು.ನಾವು ಈ ಟ್ಯೂಶನ್ ಗೆ ಹೋಗುತ್ತಿದ್ದುದು ಕೇವಲ ಸಮಯ ಕಳೆಯುವದಕ್ಕಾಗಿ. ಏಕೆಂದರೆ ನಮ್ಮ ಮನೆಯ ಸುತ್ತ ಮುತ್ತ ಆಟ ಆಡಲು ಒಳ್ಳೆಯ ಜಾಗಗಳು ಇರಲಿಲ್ಲ. ಹಾಗೆಯೇ ರಜೆಯ ದಿನಗಳಾಗಿದ್ದರಿಂದ ಕಾಲ ಕಳೆಯುವದು ಕಷ್ಟವಾಗಿತ್ತು. ಆದ ಕಾರಣ ಸುಮ್ಮನೆ ಕಾಲ ಕಳೆಯಲು ನಾವು ಟ್ಯೂಶನ್ ಗೆ ಹೋಗುತ್ತಿದ್ದೆವು.

ದಿನಾಲೂ ನಾನು,ಜಾವೇದ್ ಮತ್ತು ಗಿರೀಶ್ ಮೂವರು ಟ್ಯೂಶನ್ ಗೆ ಸೈಕಲ್ ಮೇಲೆ ಹೋಗುತ್ತಿದ್ದೆವು. ನನಗೆ ಚಿಕ್ಕಂದಿನಿಂದಲೂ ರಾಜಕುಮಾರರ ಚಿತ್ರಗೀತೆಗಳೆಂದರೆ ತುಂಬಾ ಅಚ್ಚುಮೆಚ್ಚು.ಆದ ಕಾರಣ ಒಂದು ದಿನ ಟ್ಯೂಶನ್ ಗೆ ಹೋಗುವಾಗ ರಾಜಕುಮಾರರ "ಶ್ರಾವಣ ಬಂತು" ಚಿತ್ರದ "ಮೇರಿ ಮೇರಿ ಮೇರಿ...ಐ ಲವ್ ಯು" ಹಾಡನ್ನು ಹಾಡುತ್ತ ಹೋಗುತ್ತಿದ್ದೆ.ಅದನ್ನು ಕೇಳಿದ ಜಾವೇದ್ ಮತ್ತು ಗಿರೀಶ್ "ಏನಪ್ಪಾ, ತುಂಬಾ ಮೂಡ್ ನಲ್ಲಿದಿಯಾ? ಯಾರು ಮೇರಿ ? " ಅಂತ ಪೀಡಿಸಲು ಶುರು ಮಾಡಿದರು. ಅದಕ್ಕೆ ನಾನು "ಯಾರೂ ಇಲ್ಲ ಕಣೋ,ಇಂದು ಚಿತ್ರ ಗೀತೆ" ಅಂದೆ. ಅದಕ್ಕೆ ಅವರು "ನಮಗೆ ಗೊತ್ತು.ಯಾರೋ ಮೇರಿ ಅನ್ನೋವಳಿಗೆ ಹಾಡ್ತಾ ಇದ್ದೀಯ ಮಗನೆ" ಎಂದು ರೇಗಿಸತೊಡಗಿದರು. ನನಗೆ ಕೋಪ ಬಂದು ಅವರನ್ನು ಅಟ್ಟಾಡಿಸತೊಡಗಿದೆ. ಹಾಗೆ ಹೀಗೆ ಅಟ್ಟಾಡಿ ಕಡೆಗೆ ಎಲ್ಲರೂ ಟ್ಯೂಶನ್ ಗೆ ಬಂದೆವು. ನಾವು ಏದುಸಿರು ಬಿಡುತ್ತಿದ್ದುದನ್ನು ನೋಡಿ ಹೆಗಡೆ ಸರ್ "ಯಾಕ್ರೋ ಹೀಗೆ ಏದುಸಿರು ಬಿಡುತಿದ್ದೀರ ?" ಎಂದು ಕೇಳಿದರು. ಆಗ ನಾವು "ಏನಿಲ್ಲ ಸರ್...ತುಂಬಾ ಬಿಸಿಲು ಇದೆ ಅದಕ್ಕೆ ಸ್ವಲ್ಪ ದಣಿವು" ಎಂದು ಹಸಿ ಸುಳ್ಳು ಒಂದನು ಬಿಟ್ಟೆವು.ಅದಕ್ಕೆ ಅವರು "ಸರಿ ಫ್ಯಾನ್ ಹಾಕುತ್ತೇನೆ ಇರಿ" ಎಂದು ಫ್ಯಾನ್ ಹಾಕಿದರು. ಹಾಗೆ ಸರ್ ಪಾಠ ಶುರು ಮಾಡಿದರು. ಆದರೆ ಇವೆರಡು ಮಂಗಗಳು(ಜಾವೇದ್ ಮತ್ತು ಗಿರೀಶ್) "ಮೇರಿ ಮೇರಿ ಐ ಲವ್ ಯು" ಅಂತ ಪಿಸುಗುಟ್ಟುತ್ತ ನನಗೆ ಕೀಟಲೆ ಮಾಡಲು ಶುರು ಮಾಡಿದರು.

ಹಾಗೆ ಸ್ವಲ್ಪ ಸಮಯದ ನಂತರ ಹೆಗಡೆ ಸರ್ ವಿರಾಮ ತೆಗೆದುಕೊಳ್ಳಲು ಬಯಸಿ ಪಾಠ ನಿಲ್ಲಿಸಿದರು. ನಮಗೆ "ನಾನು ಇಲ್ಲೇ ಪಕ್ಕದ ಹೋಟೆಲಿನಲ್ಲಿ ಚಹಾ ಕುಡಿದುಬರುತ್ತೇನೆ. ಅಲ್ಲಿಯವರೆಗೂ ಓದಿಕೊಂಡಿರಿ" ಎಂದು ಚಹಾ ಕುಡಿಯಲು ಹೋದರು. ಆಗ ನಾನು ಮೇಲೆ ಎದ್ದು ಗುರುಗಳ ಕುರ್ಚಿಯ ಮೇಲಿದ್ದ ಪುಸ್ತಕ ನೋಡಲು ಹೋದೆನು. ಆಗ ನನ್ನ ಹಿಂದೆ ಜಾವೇದ್ ಮತ್ತು ಗಿರೀಶ್ ಏಕ ಕಾಲಕ್ಕೆ "ಮೇರಿ ಮೇರಿ ಮೇರಿ...ಐ ಲವ್ ಯು" ಅಂತ ಜೋರಾಗಿ ಹಾಡತೊಡಗಿದರು. ನನಗೆ ಕೋಪ ಉಕ್ಕಿ ಬಂದು ಸೀದಾ ಗುರುಗಳ ಕುರ್ಚಿ ಮೇಲೆ ಎತ್ತಿದೆ ನೋಡಿ, ಮೇಲ್ಚಾವನಿಯಲ್ಲಿದ್ದ ಟೂಬ್ ಲೈಟ್ "ಢಬ್" ಎಂದು ಸದ್ದು  ಮಾಡುವದರೊಂದಿಗೆ ಚೂರು ಚೂರಾಗಿ ಕೆಳಗೆ ಬಿತ್ತು. ನಾನು ಎತ್ತಿದ ಕುರ್ಚಿಯೇ ಈ ಅವಾಂತರಕ್ಕೆ ಕಾರಣವಾಗಿತ್ತು. ನಂಗೆ ಗಾಬರಿ ಭಯ ಎರಡೂ ಒಟ್ಟಿಗೆ ಉಂಟಾಗಿ ತಲೆಯ ಮೇಲೆ ಕೈ ಹೊತ್ತು ಈ ಎರಡು ಕತ್ತೆಗಳ ಮುಂದೆ ಕುಳಿತೆ. ಈ ಇಬ್ಬರೂ ನನ್ನ ಅವಸ್ಥೆ ನೋಡಿ ಕಿಸಿ ಕಿಸಿ ಎಂದು ಹಲ್ಲು ಕಿಸಿಯಲು ಶುರು ಮಾಡಿದರು. ಅದರಿಂದ ನನಗೆ ಕೋಪ ಬಂದು "ನನ್ನ ಮಕ್ಕಳ !!! ಮಾಡೋದೆಲ್ಲ ಮಾಡಿ ಬಿಟ್ಟು ಈಗ ಹಲ್ಲು ಕಿಸಿತಿದೀರ. ಈಗ ಏನು ಮಾಡುವದು ಹೇಳಿ" ಎಂದು ಜೋರು ಮಾಡಿದೆ.ಆಗ ಜಾವೇದ್ "ಹಿಡಿ!!  ಈ ಶೇಂಗ ಬೀಜ ತಿನ್ನು. ನಾನು ಏನು ಮಾಡಬೇಕೆಂದು ಹೇಳುತ್ತೇನೆ" ಎಂದು ಶೇಂಗಾ ಬೀಜ ತಿನ್ನಲು ಕೊಟ್ಟನು. ನನಗೆ ಮೊದಲೇ ಪ್ರಾಣ ಸಂಕಟ.ಇನ್ನೇನು ಹೆಗಡೆ ಸರ್ ಬಂದು ಬಿಡುತ್ತಾರೆ. ಕೋಣೆಗೆ ಬಂದು ಈ ಅವಾಂತರವನ್ನು ನೋಡಿದರೆ ಮುಗೀತು ನನ್ನ ಕಥೆ. ಈ ಶನಿಗಳು ನೋಡಿದರೆ ಪರಿಸ್ಥಿಯ ಅರಿವಿಲ್ಲದೆ ಶೇಂಗಾ ತಿನ್ನುತ್ತಿದ್ದಾರೆ. ಸರಿ ನಾನೇ ಏನಾದರು ಮಾಡಬೇಕೆಂದು ನಿರ್ಧರಿಸಿ ಮೂಲೆಯಲ್ಲಿದ್ದ ಕಸಬರಿಗೆಯನ್ನು ತೆಗೆದುಕೊಂಡು ಬೇಗ ಬೇಗ ಟೂಬ್ ಲೈಟ್ ನ ಗಾಜಿನ ಚೂರುಗಳನ್ನು ಬಳಿದು ನನ್ನ ಬ್ಯಾಗಿಗೆ ತುಂಬಿದೆ. ಹಾಗೆ ಬ್ಯಾಗಿಗೆ ತುಂಬಿ ಕಸಬರಿಗೆ ಮೂಲೆಗೆ ಎಸೆದಿದ್ದೆ ಅಷ್ಟೊತ್ತಿಗೆ ಹೆಗಡೆ ಸರ್ ಒಳಗೆ ಬಂದೆ ಬಿಟ್ಟರು. ಇದನ್ನು ನೋಡಿ ಈ ಇಬ್ಬರು ಹಲ್ಲು ಕಿಸಿಯುವದು ಇನ್ನು ಜೋರಾಯಿತು.

ಆಗ ಹೆಗಡೆ ಸರ್ "ಯಾಕ್ರೋ ನಗುತ್ತಿದ್ದಿರ?" ಎಂದು ಕೇಳಿದರು. ಆಗ ನಾನು ಜಾವೆದ್ ಮತ್ತು ಗಿರೀಶ್ ಗೆ ಕೆಟ್ಟ ಕಣ್ಣು ತೋರಿಸಿ ಸುಮ್ಮನಿರಲು ಸೂಚಿಸಿದೆ. ಆಗ ಅವರು "ಏನಿಲ್ಲ ಸರ್...ಹರೀಶ್ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾನೆ. ಅದಕ್ಕೆ ನಗುತ್ತಿದ್ದೇವೆ" ಎಂದರು. ಆಗ ಅವರು "ನೀನ್ಯಾಕೋ ಹಾಗೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದಿಯ?" ಎಂದು ಕೇಳಿದರು. ಅದಕ್ಕೆ ನಾನು ಏನು ಮಾತನಾಡಲಾರದೆ ಸುಮ್ಮನೆ ಇಷ್ಟಗಲ ಹಲ್ಲು ಬಿಟ್ಟು "ಏನಿಲ್ಲ ಸರ್" ಎಂದು ತಲೆ ಕೆರೆಯುತ್ತ ಕುಳಿತುಕೊಂಡೆ. ಆಗ ಸರ್ ಹೆಚ್ಚಿಗೆ ತಲೆ ಕೆಡಿಸಿಕೊಳ್ಳದೆ ಪಾಠ ಮುಂದುವರೆಸಿದರು.ನನಗೆ ಒಳಗೊಳಗೇ ಭಯ ಎಲ್ಲಾದರೂ ಸರ್ ಅಪ್ಪಿ ತಪ್ಪಿ ಮೇಲೆ ನೋಡಿದರೆ ಏನು ಗತಿ ? ನನ್ನ ತಿಥಿಯಾಗುತ್ತಿತ್ತು ಅಷ್ಟೇ. ಪುಣ್ಯಕ್ಕೆ ಅದು ಹಗಲು ಹೊತ್ತು ಆಗಿದ್ದರಿಂದ ಮತ್ತು ಗುರುಗಳ ಲಕ್ಷ್ಯ ಪಾಠದ ಕಡೆಗೆ ಇದ್ದಿದುದರಿಂದ ಅವರಿಗೆ ಟೂಬ್ ಲೈಟ್ ಇಲ್ಲದಿದ್ದುದು ಗಮನಕ್ಕೆ ಬರಲಿಲ್ಲ. ಹಾಗೆ ಅಂದಿನ ಟ್ಯೂಶನ್ ಮುಗಿಸಿ ಮನೆಗೆ ನಡೆದೆವು. ಮನೆಗೆ ಹೋಗುವಾಗ ನಾನು  ಜಾ ಮತ್ತು ಗಿ ಮೇಲೆ ಬೈಯ್ಗುಳಗಳ ಸುರಿಮಳೆಯನ್ನೇ ಸುರಿಸಿದೆ. ಆದರೆ ಸದ್ಯದ ಮಟ್ಟಿಗೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದೆವು. ಆದರೆ ಆ ದೊಣ್ಣೆ ಹೋಗಿ ಪಾಪ ಬೇರೆಯವರಿಗೆ ತಗುಲಿತ್ತು !!!

ನಾವು ಎಂದಿನತೆಯೇ ಮರುದಿನ ಟ್ಯೂಶನ್ ಗೆ ಹೋದೆವು. ಜಾ ಮತ್ತು ಗೀ ಇಬ್ಬರೂ ಹಿಂದಿನ ದಿನದ ಘಟನೆ ನೆನೆಸಿಕೊಂಡು ನಗುತ್ತಿದ್ದರು. ಆದರೆ ನನಗೆ ಮಾತ್ರ ಒಳಗೆ ಅಳುಕು.ಅದರ ಜೊತೆಗೆ ಇನ್ನೂ ಒಂದು ಸಮಾಧಾನ ಏನೆಂದರೆ ನಮ್ಮ ಬ್ಯಾಚ್ ಆದ ಮೇಲೆ ಇನ್ನೊಂದು ಬ್ಯಾಚ್ ಟ್ಯೂಶನ್ ಗೆ ಬರುತ್ತಿದ್ದಿದರಿಂದ ಮತ್ತು ಸರ್ ಸಂಜೆಯಾದ ಮೇಲೆಯೇ ಟೂಬ್ ಲೈಟ್ ಹಚ್ಚುತಿದ್ದುದರಿಂದ,ನಾನು ಸಿಕ್ಕಿ ಬೀಳುವ ಸಾಧ್ಯತೆ ತುಂಬಾ ಕಡಿಮೆ ಇತ್ತು. ಆದ ಕಾರಣ ಸ್ವಲ್ಪ ಧೈರ್ಯವಾಗಿದ್ದೆ. ಹಾಗೆ ಟ್ಯೂಶನ್ ಸಮೀಪಿಸಿದಾಗ ಸರ್ ಇನ್ನು ಬಂದಿರಲಿಲ್ಲ. ಆದ ಕಾರಣ ನಾವು ಟ್ಯೂಶನ್ ಹೊರಗೆ ಮೆಟ್ಟಿಲ ಮೇಲೆ ಕುಳಿತಿದ್ದೆವು. ಆಗ ಕೋಣೆಯ ಮಾಲಿಕರಾದ ಗಣೇಶ್ ಅವ್ರು ನಮ್ಮ ಪಕ್ಕ ಬಂದು ಕುಳಿತರು. ಅವರು ಒಮ್ಮಿಂದೊಮ್ಮಲೆ ನಮಗೆ "ಏನಪ್ಪಾ ! ನಿಮ್ಮ ಸರ್ ಇಂಥವರು ಅಂತ  ತಿಳಿದುಕೊಂಡಿರಲಿಲ್ಲ" ಎಂದರು. ಆಗ ನಮಗೇನು ಅರ್ಥವಾಗದೇ "ಯಾಕೆ ಸರ್ ? ಏನಾಯ್ತು ?" ಎಂದು ಕೇಳಿದೆವು. ಆಗ ಅವರು "ಅಲ್ಲ, ನಾನು ಸುಮ್ಮನೆ ಇರಲಿ ಅಂತ ನಿಮ್ಮ ಸರ್ ಕೋಣೆಯದು ಒಂದು ನಕಲಿ ಕೀಲಿ ಕೈ ಮಾಡಿಸಿ ಇಟ್ಟುಕೊಂಡಿದ್ದೆ. ಅದಕ್ಕೆ ನಿಮ್ಮ ಸರ್ ನನ್ನ ಬಳಿ ನನ್ನ ಬಳಿ ನಕಲಿ ಕೀಲಿ ಕೈ ಇದ್ದಿದರಿಂದ ಅದನ್ನ ಬಳಸಿ ಟೂಬ್ ಲೈಟ್ ಕಳುವು ಮಾಡಿದ್ದೇನೆಂದು ಹೇಳುತ್ತಿದ್ದಾರೆ. ಅಲ್ಲಾ, ನಾನೇನು ಅಷ್ಟು ಕೆಟ್ಟವನೇ ? ಅಥವಾ ನಕಲಿ ಕೀಲಿ ಕೈ ಇಟ್ಟುಕೊಂಡಿದ್ದು ತಪ್ಪೇ ? " ಎಂದು ನ್ಯಾಯ ಕೇಳಲು ಶುರು ಮಾಡಿದರು!!!! ನಮಗೆಲ್ಲರಿಗೂ ಒಳಗೊಳಗೇ ನಗು!!! ಆದರೆ ಪಾಪ ಮಾಲಿಕನ ಪರಿಸ್ಥಿತಿ ಕಂಡು ಮರುಕವಾಯಿತು. ಆದರೂ ಕೂಡ ನಾವು ಸಿಕ್ಕಿ ಹಾಕಿಕೊಳ್ಳಲು ಇಚ್ಚಿಸದೆ, ಮಾಲಿಕರಿಗೆ ಏನೋ ಹೇಳಿ ಅಲ್ಲಿಂದ ನುನುಚಿಕೊಂಡೆವು. ಹಾಗೆ ಸ್ವಲ್ಪ ಸಮಯದ ನಂತರ ವಾಪಸು ಬಂದಾಗ ಗಣೇಶ್ ಅಲ್ಲಿರಲಿಲ್ಲ. ಗುರುಗಳು ಅದಾಗಲೇ ಬಂದಿದ್ದರು.

ನಾವು ಟ್ಯೂಶನ್ ಒಳಗೆ ಹೋದಾಗ, ಹೆಗಡೆ ಸರ್ ನಮಗೆ "ಏನು ಕಾಲ ಬಂತಪ್ಪ!!! ಈ ಕೋಣೆಯ ಮಾಲಿಕನಿಗೆ ನಕಲಿ ಕೀಲಿ ಕೈ ಕೊಟ್ಟರೆ, ಅವನು ಅದನ್ನು ಬಳಸಿ ಟೂಬ್ ಲೈಟ್ ಕದ್ದಿದ್ದಾನೆ. ಯಾರನ್ನು ನಂಬುವದು ಯಾರನ್ನು ಬಿಡುವದು ಗೊತ್ತಾಗುತ್ತಿಲ್ಲ" ಎಂದರು. ಆಗ ನನಗೆ ನನ್ನ ತಪ್ಪೊಪ್ಪಿಕೊಂಡು ಬಿಡಬೇಕೆಂದು ನಾಲಿಗೆ ತುದಿಗೆ ಬಂದಿದ್ದರೂ ತುಂಟ ಮನಸ್ಸು ಅದನ್ನು ತಪ್ಪಿಸಿತು!!! ಹೀಗೆ ನಾವು ಮಾಡಿದ ಅವಾಂತರದಿಂದಾಗಿ ಪಾಪ ಗಣೇಶ್ ಅವ್ರು ಅಪವಾದ ಹೊರಬೇಕಾಯಿತು. ಈಗಲೂ ಕೂಡ ಹೆಗಡೆ ಸರ್ ಗೆ ಆಗಲಿ ಅಥವಾ ಗಣೇಶ್ ಅವರಿಗಾಗಲಿ ನಿಜ ಸಂಗತಿ ಗೊತ್ತಿಲ್ಲ. ಅವರೇನಾದರೂ ಈ ಲೇಖನ ಓದಿದರೆ ನನಗೆ ಒದೆಯುತ್ತಾರೆ ಅಷ್ಟೇ!!!!

Comments