*ಬಾಲ್ಯದ ನೆನೆಪು*
ಬಾಲ್ಯದ ಸೊಬಗಲಿ
ಮೌಲ್ಯವ ರೂಢಿಸಿ
ಕಾಲ್ಯದಿ ಮಿನುಗುವ ತಾರೆಗಳು
ಮಾಲ್ಯವ ಹೊಸೆಯುವ
ಕೌಲ್ಯದ ಚಿಗುರಿವು
ಲೌಲ್ಯದಿ ಮೆರೆಯುವ ಕುಡಿಗಳಿವು||
ಮಧುರತೆ ಬಿಂಬವು
ಹೃದಯದ ಭಾಗದಿ
ಚದುರುವ ಕದಳಿಯ ರಸಬಾಳೆ
ಎದೆಯಲಿ ಹೊಕ್ಕುವ
ಪದಗಳ ಸಾಲಲಿ
ವದನದಿ ಕಂಡಿವೆ ಹೊಂಬಾಳೆ||
ನೆನಪಿನ ಹಂತವು
ಹೊನಲಿನ ಬುಗ್ಗೆಯು
ಬನದಲಿ ಕುಣಿಯುವ ಜೀವಸೆಲೆ
ಮನನದಿ ನಿರತವು
ಸನಿಹದ ಬಂಧವು
ಹನಿಹನಿ ಸುರಿಯುವ ಭಾವದಲೆ||
ಆಟದ ಸಮಯದಿ
ಕೂಟದ ಮಂಥನ
ಸಾಟಿಯು ತೋರದ ಹೂಮಳೆಯು
ನೋಟವ ಬೀರುತ
ಪಾಟಿಯ ಚೀಲದಿ
ನಾಟುವ ರೀತಿಯ ಸುಮಭರಿತ||
ಅಂದದ ಹಂತವು
ಬಂದಿದೆ ನೆನಪಿಗೆ
ನಂದನ ಚೆಲುವನು ಬಿತ್ತುತಿವೆ
ಇಂದಿನ ದಿನದಲಿ
ಚಂದದ ಮಾತದು
ಹಂದರ ಹೊಸೆಯುತ ಸಾಗುತಿವೆ||
ಒಲವಿನ ಚಣವದು
ಬಲುಮೆಯ ಮನದಲಿ
ಫಲವನು ನೀಡುತ ಬೆಳೆದಿಹವು
ಕಲೆಯಲಿ ಬಲೆಯನು
ಕಲಿಸುತ ನಡೆದಿವೆ
ಸಲಿಲದ ನರ್ತನ ಚುಂಬಿತವು||
ಚಿನ್ನಿಯಕೋಲಲಿ
ಬನ್ನಿರಿ ಹೊಡೆಯುತ
ಮುನ್ನುಡಿಯಾಟಕೆ ಫಲಶೃತಿಯು
ನನ್ನೆಯ ಮನದಲಿ
ಹೊನ್ನಿನ ಸಿರಿಯದು
ಜೊನ್ನನ ಬಿಂಬದಿ ಮೆರೆದಿಹವು|
ಮಕ್ಕಳ ವೈಖರಿ
ಸಕ್ಕರೆ ನೋಟದಿ
ಪಕ್ಕನೆ ಪಳಗುತ ನಲಿದಿಹವು
ಅಕ್ಕರೆ ಮಾತಲಿ
ನಕ್ಕುತ ಜಿಗಿಯುತ
ಚಕ್ಕನೆ ಸೇರುವ ಸಂಗಮದಿ|
ಮರೆಯದ ಬಾಲ್ಯವು
ಕರೆದಿದೆ ಮುಂದೆಯು
ಬರೆಯುವ ಕವನದ ಸಾಲಿನಲಿ
ಸುರಿದಿವೆ ಹೂಮಳೆ
ಸರಿಯುತ ತಮವನು
ಧರೆಯಲಿ ಬೀಗುವ ನವಸುಮವು||
ಅಳುಕದ ಮುಗ್ಧತೆ
ಬಳುಕುವ ಬಳ್ಳಿಯು
ಥಳಥಳ ಹೊಳೆಯುವ ತರುಲತೆಯು
ಇಳೆಯಲಿ ಕುಣಿಯುತ
ಕಳೆಯನು ಹೆಚ್ಚಿಸಿ
ಮಳೆಯಲಿ ನೆನೆಯುವ ಮಕ್ಕಳಿವು||
-*ಅಭಿಜ್ಞಾ ಪಿ ಎಮ್ ಗೌಡ*
