ಬಾಲ್ಯದ ಸವಿ ನೆನಪುಗಳು

ಬಾಲ್ಯದ ಸವಿ ನೆನಪುಗಳು

ಕವನ

ಬಾಲ್ಯದ ಆಟವ ನೆನದರೆ ಚಂದವು

ಮತ್ತೆ ಮರಳದು ಆ ಶುಭಘಳಿಗೆ

ಅದ್ಭುತ ಅಮೋಘ ಸುಂದರ ಕ್ಷಣವದು

ನಲಿಯುತ ಜಿಗಿಯುವ ಬಾಳಿಗೆ..

 

ಮಕ್ಕಳ ನಲಿವದು ನಕ್ಕರೆ ಬರುವುದೆ

ಹಲವು ಕನಸುಗಳ ಹೊತ್ತಿಗೆ

ಚಕ್ಕನೆ ಓಡುವ ನಲುಮೆಯ ಆಟದಿ

ತೇಲುತ ಕುಣಿಯುವ ಘಳಿಗೆ

 

ಅಬ್ಬಾಬ್ಬ! ಒಂದೆ ಎರಡೆ ಕೀಟಲೆ ಆಟ

ಲಗೋರಿ ಮರಕೋತಿಯಾಟ 

ಬೀದಿಯ ತುಂಬಲು ನಮ್ಮದೆ ದಂಡು

ಬಂಡಿಯನೋಡಿಸಿ ಮೆರೆದಾಟ..

 

ಗಲ್ಲಿಗಲ್ಲಿಯಲಿ ಕ್ರಿಕೇಟ್ ದಾಂಡು ಗೋಲಿ

ಆಡುತ ನೆಗೆಯುತ ಗಮ್ಮತ್ತು

ಈಜಲು ಹೋಗಿ ಅಮ್ಮನಿಂದ ಬತಾಸು

ಬಿಸಿಬಿಸಿ ಏಟುಗಳ ಕಸರತ್ತು....

 

ಬಾಲ್ಯ ಮರೆಯಲುಂಟೆ ಮೈಮನ ಸೊಬಗು

ಎಂದಿಗು ಮರಳದ ಅದ್ಭುತ ಕ್ಷಣ

ಒಂದೊಂದು ನೆನಪು ಅಣಿಮುತ್ತಿನ ಬೆರಗು

ದಾಖಲೆಯ ಸಂಗ್ರಹಿಸಿ ಆಕರ್ಷಣ...

 

ಓದು ಬರಹ ಕಲಿಯುವ ಕ್ಷಣದ ಮಹಿಮೆ

ಗೆಳೆಯರೊಂದಿಗಿನ ಸಾಂಗತ್ಯ

ಮತ್ತೆ ಮತ್ತೆ ಎದೆಯಾಳದಿ ಹೊಮ್ಮುತಿವೆ

ನವ ಕನಸು ನೆನಪುಗಳ ಲಾಲಿತ್ಯ...

 

ಅಪ್ಪನ ಹೆಗಲೆ ವಾಹನ ಸುತ್ತಿಸಿ ಬಂದರು

ಊರುಕೇರಿ ಹೊಲಗದ್ದೆಯ ಸವಾರಿ

ಅಮ್ಮನ ನುಡಿಯೆ ವೇದವಾಕ್ಯ ಕಲಿತೆವು

ಅಕ್ಕ ತಮ್ಮನೊಂದಿಗೆ ಜಗಳದ ಪರಿ...

 

ಅಮ್ಮನೆ ನನಗೆ ಮೊದಲ ಗುರುವು 

ಮೌಲ್ಯವ ಕಲಿಸಿದ ವಿದ್ಯಾದಾತೆ

ಅಪ್ಪನು ಧೈರ್ಯವ ತುಂಬುತ ಬೆಳೆಸಿದ

ನಾಯಕ ಗುರುವು ಜನ್ಮದಾತ....

 

ಬಾಲ್ಯದ ಆಟವು ಮರೆಯದ ಮೇಲಾಟ

ನೆನಪುಗಳ ಮಹಾಮಸ್ತಾಭಿಷೇಕ

ಕನಸುಗಳ ಹೊತ್ತಿಗೆಯ ಮಹಾ ಗ್ರಂಥಾಲಯ

ನೆನಯಬೇಕಷ್ಟೆ ಚಿಣ್ಣರ ಕಾಯಕ....

 

ಬರೆದರು ಮುಗಿಯದ ನೆನಪಿಗೆ ಬರುತಿಹ

ಅನನ್ಯ ಸಾಲುಗಳ ಅನುರಾಗಮಾಲಿಕೆ

ಪ್ರತಿಪುಟದ ಪ್ರತಿಸಾಲು ಅನೂಹ್ಯತೆಯ ಭಾಗ

ಮರೆಯದ ಬಂಧ ಬಾಲ್ಯದ ಚೆಲುವಿಕೆ...

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್