ಬಾಲ್ಯದ ಸುಂದರದಿನಗಳು ; ಆ ’ಪ್ರಭಾತ್ ಫೇರಿ’, ’ಒಂದೇಮಾತರಂ,’ ಕೂಗು, ಅಬ್ಬ ಅದೇನುಸೊಬಗು, ಏನುರಮ್ಯ !

ಬಾಲ್ಯದ ಸುಂದರದಿನಗಳು ; ಆ ’ಪ್ರಭಾತ್ ಫೇರಿ’, ’ಒಂದೇಮಾತರಂ,’ ಕೂಗು, ಅಬ್ಬ ಅದೇನುಸೊಬಗು, ಏನುರಮ್ಯ !

ಬರಹ

ನಾನು ಸ್ವಾತಂತ್ರ್ಯಪೂರ್ವದಲ್ಲಿ ಜನಿಸಿ, ಸ್ವಾತಂತ್ರ್ಯೋತ್ತರದ ನಮ್ಮಜನರ, ಜಯೋತ್ಸವದ ಅಮಲಿನಲ್ಲಿ ಮುಳುಗಿತೇಲಿದವನು. ೧೯೪೪ ರ, ಜನವರಿ ೨೪ ರಂದು ನಮ್ಮಪ್ರೀತಿಯ ಕರ್ನಾಟಕರಾಜ್ಯದ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಹುಟ್ಟಿಬಂದವನು. ಪ್ರತಿದಿನವೂ ನಮ್ಮ ಅಪ್ಪ-ಅಮ್ಮಂದಿರು ಹೇಳುತ್ತಿದ್ದದ್ದು, ’ದೇಶಕ್ಕೆ ಸ್ವಾತಂತ್ರ್ಯ ಬಂತು. ನಮ್ಮಮನಸ್ಸಿಗೆ ಬಂದರೀತಿಯಲ್ಲಿ ನಮ್ಮ ಸಮಸ್ಯೆಗಳನ್ನು ನಾವೇ ಸಮಾಲೋಚಿಸಿ ಬಗೆಹರಿಸಿಕೊಳ್ಳಬಹುದು. ಎಂಥಾ ಭಾಗ್ಯನಮ್ಮದು. ಶತಮಾನಗಳಿಂದ ಆಗದ, ಈ ಅಗಾಧ ಕೆಲಸವನ್ನು, ವಯಸ್ಸಾದ, ಮೈಮೇಲೆಬಟ್ಟೆಯನ್ನೂ ಸರಿಯಾಗಿಧರಿಸದ, ನಿಸ್ವಾರ್ಥಪ್ರೇಮದ ಮಹಾನುಭಾವ, ಎಲ್ಲಿಂದಲೋ ಬಂದು ನಮ್ಮನ್ನು ದಾಸ್ಯದಿಂದ ಮುಕ್ತಿಗೊಳಿಸಿದರು. ತಮ್ಮ ಸ್ವಂತ ಪರಿವಾರದವರನ್ನೂ ಗಮನಕೊಡದೆ ಭಾರತಮಾತೆಯ ಸೇವೆಯೊಂದೇ ತಮ್ಮ ಧ್ಯೇಯವೆಂದು ತಿಳಿದು ತಮ್ಮ ತನು-ಮನ-ಧನಗಳನ್ನು ಧಾರೆಯೆರೆದರಲ್ಲಾ ! ಅಬ್ಬ ಎಂತಹಮಹಾತ್ಮರವರು ’! ಅಮ್ಮನಂತೂ ಅವಳ ಪ್ರತಿಮಾತಿನಲ್ಲೂ ಗಾಂಧಿಯವರ ಉದಾಹರಣೆಗಳನ್ನು ಸೇರಿಸದೆ ಬಿಡುತ್ತಿರಲಿಲ್ಲ. ನಮ್ಮ ಇಬ್ಬರು ಅಣ್ಣಂದಿರೂ ರಾಷ್ಟ್ರಪ್ರೇಮದಲ್ಲಿ ಕಡಿಮೆಯಿರಲಿಲ್ಲ ! ಗಾಂಧಿಟೋಪಿಯಿಲ್ಲದೆ ಮನೆಯ-ಹೊರಗೆ ಕಾಲಿಡುತ್ತಿರಲಿಲ್ಲ.

ಸರಿ. ಸ್ವಾತಂತೋತ್ಸವದದಿನ ಮತ್ತೆ ಬಂತು. ಊರಿನ ಬೀದಿಗಳಲ್ಲೆಲ್ಲಾ ಪ್ರಭಾತ್ಪೇರಿ ಹೊರಡಿಸುತ್ತಿದ್ದರು. ನಮಗೆ ಇದು ಸರಿಯಾಗಿ ಅರ್ಥವಾಗದಿದ್ದರೂ, (’ಫೇರಿ,’ ಯೆಂದರೆ ಹಿಂದಿಭಾಷೆಯಲ್ಲಿ, ಸಾಲಾಗಿ ಕೂಗುತ್ತಾ ಹೋಗುವುದು ಎಂದರ್ಥ). ನಾವೆಲ್ಲಾ ಮಹಾತ್ಮಗಾಂಧಿಕಿ ಜೈ, ಭಾರತ್ಮಾತಾಕೀ ಜೈ, ಜವಹರ್ಲಾಲ್ ನೆಹೄ ಕೀ ಜೈ, ಸರ್ದಾರ್ ಪಟೇಲ್ ಕೀ ಜೈಗಳನ್ನು, ಜೋರಾಗಿ ಹೇಳಿಕೊಂಡು ಠೀವಿಯಿಂದ ನಡೆಯುವುದನ್ನು ಸಮರ್ಪಕವಾಗಿ ಮಾಡುತ್ತಿದ್ದೆವು. ಅದರಿಂದ ಸಿಕ್ಕ ತೃಪ್ತಿನಮಗೆ ಇಂದಿಗೂ ಆ ಒಲವಿನ-ಕ್ಷಣಗಳನ್ನು ಮೆಲುಕುಹಾಕುವಂತೆ ಪ್ರಚೋದಿಸಿದೆ ! ನಾವೆಲ್ಲಾ ಪ್ರಭಾತ್ ಫೇರಿಯಲ್ಲಿ ಭಾಗವಹಿಸಿ, ರಸ್ತೆಗಳಲ್ಲಿ ಕೂಗುತ್ತಾ ಹೋಗುವುದನ್ನು ನಮ್ಮ ತಾಯಂದಿರು, ಅಕ್ಕ-ತಂಗಿಯರು, ಮನೆಯಮುಂದಿನ ಬಾಗಿಲಿಗೆ ಸೇರಿಸಿಕಟ್ಟಿದ ಕಲ್ಲುಚಪ್ಪಡಿ ಮೆಟ್ಟಿಲುಗಳಮೇಲೆ ನಿಂತು, ಆನಂದದಿಂದ ಚಪ್ಪಾಳೆಹೊಡೆಯುವ ದೃಷ್ಯದಿಂದ ನಮಗೆ ಭಾರೀ ಖುಷಿಸಿಗುತ್ತಿತ್ತು. ನಾವೇ ಸ್ವಾತಂತ್ರ್ಯವೆಂಬ ಹೂವನ್ನು ಕಿತ್ತುತಂದು, ನಮ್ಮ ಅಮ್ಮ-ಅಪ್ಪಂದಿರಿಗೆ ತೋರಿಸಿದಷ್ಟು ಅಚ್ಚರಿ, ಹಾಗೂ ಸಂಭ್ರಮ !

ಕೊನೆಗೆ, ಊರಿನ ’ಟೌನ್ ಹಾಲ್’, ನಲ್ಲಿ ನಮ್ಮ ಊರಿನ ಗಣ್ಯರ ಭಾಷಣಗಳನ್ನು ಎವೆಯಿಕ್ಕದೆ ವೀಕ್ಷಿಸಿ ಸೀ-ಬೂಂದಿ-ಕಾಳು ಕೊಟ್ಟಮೇಲೆ, ಓಡಿ-ಮನೆಗೆಬರುವುದು. ಮೊದಲು, ತಹಸೀಲ್ದಾರರು ಭಾಷಣ ಮಾಡಿದಮೇಲೆ, ಊರಿನ ಪುಢಾರಿಗಳೆಲ್ಲಾ ಹೇಳಿತ್ತಿದ್ದದ್ದು, ಮೊದಲು ನುಡಿಸಿದರಾಗವನ್ನೇ. ನಮಗೆಲ್ಲಾ ಭಾಷಣ ಬಾಯಿಪಾಠವಾಗಿತ್ತು. ಕೃಷ್ಣಯ್ಯ ಶೆಟ್ಟರು ಮಾಡುತ್ತಿದ್ದ ಭಾಷಣ, ಟೌನ್ ಹಾಲಿನ ದಪ್ಪಗೋಡೆಗಳನ್ನು ಸಿಡಿದು ರಸ್ತೆಯವರೆಗೂ ಹೋಗುತ್ತಿತ್ತು. ಅವರು ತಮ್ಮದನಿಯನ್ನು ಮೇಲೇರಿಸಿ, "ನಾವೇನೂ ಸುಮ್ಮನಿರಲಿಲ್ಲ ; ಮಹಾತ್ಮರ ಜೊತೆಯಲ್ಲಿ ನಾವೂ ಹೋದೆವು. ನಮ್ಮೆಲ್ಲರಿಗೂ ಇದು ಹೆಮ್ಮೆಯ ವಿಷಯ. ನಾವೂ ...ಜೈಲಿನಲ್ಲಿ ೧೦-೧೫ ದಿನ ಇದ್ದೆವು ". ಇತ್ಯಾದಿಗಳಬಗ್ಗೆ ಹೇಳಿದಾಗ, ಪಕ್ಕದ ಹಿರಿಯರು ನಮ್ಮನ್ನು ನೋಡಿ ಚಪ್ಪಾಳೆ ತಟ್ಟಿರೆಂದು, ಸನ್ನೆಮಾಡುತ್ತಿದ್ದರು. ನಮಗೆ ಅಷ್ಟೇ ಸಾಕು. ಭಾಷಣಕೇಳಿಸದಷ್ಟು ಜೋರಾಗಿ ಚಪ್ಪಾಳೆ ಹೊಡೆದದ್ದೇ ಹೊಡೆದದ್ದು. ಈ ಸಮಾರಂಭಮುಗಿದಮೇಲೆ, ನಮ್ಮ ಸಂತಸ, ಯುದ್ಧದಿಂದ ಗೆದ್ದು ವಾಪಸ್ಸಾಗುವುದಕ್ಕಿಂತಾ ಮಿಲಾಗಿತ್ತು ಅಂತ ಈಗ ನನಗೆ ಅನ್ನಿಸುತ್ತಿದೆ. ನಾವು ಸ್ವಲ್ಪ ದೊಡ್ಡವರಾದಾಗ ಕೃಷ್ಣಯ್ಯ ಸೆಟ್ಟರ ಬಂಡವಾಳ ಹೊರಗೆ ಬಯಲಾಗಿತ್ತು. ಹೊಳಲ್ಕೆರೆ ವ್ಯವಸಾಯೋತ್ಪನ್ನ ಸಹಕಾರಿಸಂಘದಲ್ಲಿ ಸಿಮೆಂಟ್, ಕಬ್ಬಿಣ, ಸಕ್ಕರೆ, ಕೊಂಡು, ಕಾಳಸಂತೆಯಲ್ಲಿ ಒಂದಕ್ಕೆ ಎರಡರಷ್ಟುಮಾರಿ ಹಣಸಂಪಾದಿಸುವವರಲ್ಲಿ ನಮ್ಮ ಕೃಷ್ಣಯ್ಯಸೆಟ್ಟರು ಅಗ್ರಗಣ್ಯರು !

ನಮ್ಮ ಜೀವನದಲ್ಲಿ ಪ್ರಪ್ರಥಮವಾಗಿ ಪರದೇಶದಲ್ಲಿದ್ದೇವೆ. ಅಮೆರಿಕದಲ್ಲಿದ್ದರೂ, ಅದು ನಮ್ಮದೇಶದಷ್ಟೇ ಪ್ರಿಯವಾಗಿದೆ. ಕಾರಣ, ನಮ್ಮ ಮಗನಮನೆಯಲ್ಲಿ ನಾವಿರುವುದರಿಂದ. ಅಮೆರಿಕನ್ನರು ತಮ್ಮ ಜನಜೀವನದಲ್ಲಿ ಹೆಮ್ಮೆಯಿಂದ ಅಳವಡಿಸಿಕೊಂಡಿರುವ ಸ್ವಾತಂತ್ರ್ಯದ ಬಗ್ಗೆ ಮೊದಮೊದಲು ಹೆಮ್ಮೆಯೆನಿಸಿದರೂ, ನಮಗೆ ಕೊನೆಗನ್ನಿಸಿದ್ದು ಇಷ್ಟು. ಅವರ ಗೃಹಸ್ತಜೀವನದ ಅವ್ಯವಸ್ಥಿತ, ಅಸ್ಥಿರಸನಿವೇಷಗಳನ್ನು ನೋಡಿಬೇಸರವಾಗುತ್ತದೆ. ಒಬ್ಬ ವ್ಯಕ್ತಿ, ತನ್ನ ಬಟ್ಟೆ ಕಳಚಿದಂತೆ ಒಬ್ಬಹೆಣ್ಣಿನ ಸಂಗವನ್ನು ತ್ಯಜಿಸಿ, ತನ್ನಸಂತಾನವನ್ನೂ ಲೆಕ್ಕಿಸದೆ ಮತ್ತೊಂದು ಹೆಣ್ಣಿನ ಸಹವಾಸವನ್ನು ಆಶ್ರಯಿಸುವುದು, ಎಷ್ಟು ಸಮಂಜಸ ? ಮಕ್ಕಳಿಗೆ ತಂದೆತಾಯಿಗಳ ಸಾನ್ನಿಧ್ಯವೆಲ್ಲಿ ? ಅವರಿಗೆ ಜೀವನಮೌಲ್ಯಗಳ ಬಗ್ಗೆಯ ತಿಳುವಳಿಕೆ ಕೊಡಲು ತಂದೆ-ತಾಯಿಗಳು ಒಟ್ಟಿಗೆ ಇರುವುದು ಮುಖ್ಯವಲ್ಲವೆ ! ವಯಸ್ಕರು ತಮ್ಮಜೀವನದ ವ್ಯವಹಾರದಲ್ಲಾದ ೧೦೦ ಡಾಲರ್ ಗಳ ವ್ಯತ್ಯಾಸಕ್ಕೆ ಮಾಡಿಕೊಳ್ಳುವ ವಿವಾಹ ವಿಚ್ಛೇದನಗಳು, ಇತ್ಯಾದಿಗಳನ್ನು ಟೆಲಿವಿಶನ್ ನಲ್ಲಿ ಹಾಗೂ ನಿಜಜೀವನದಲ್ಲಿ ಕಂಡಾಗ, ನಮಗಾಗುವ ಮಾನಸಿಕಯಾತನೆ ಅಪಾರ. ಅವರು ಪೂಜಿಸುತ್ತಿರುವ ಅತಿಹೆಚ್ಚಿನ ಸ್ವಾತಂತ್ರ್ಯ ಮಾರಕವಾಗಿದೆಯಲ್ಲ , ಎನ್ನಿಸುತ್ತಿದೆ. ಕಾರಣ, ಸ್ವಚ್ಛಂದ ಪ್ರವೃತ್ತಿ, ನಿಜವಾಗಿ ಸ್ವಾತಂತ್ರ್ಯದ ವಿರೋಧಿ ! ಮಕ್ಕಳಿಗೆ ಒಂದು ಹಂತ ಬರುವವರೆಗೆ ಅತಿ-ಸ್ವತಂತ್ರ್ಯಕೊಡುವುದು ಕ್ಷೇಮಕರವೇ ? ಇದನ್ನು ಹಲವರು ಹಲವು ರೀತಿಯಲ್ಲಿ ಅರ್ಥೈಸುತ್ತಾರೆ. ಒಟ್ಟಿನಲ್ಲಿ ಈ ಮಾನವಕುಲದ ಇತಿಹಾಸದಲ್ಲಿ ಜೀವನದಬಗ್ಗೆ ಕೋಟಿಗಟ್ಟಲೆಜನ ಏನೇನೋ ಹೇಳಿದ್ದರೂ, ಇದೇ ಸಂತೃಪ್ತ, ಸಂಪದ್ಭರಿತ ಮೌಲ್ಯಾಧಾರಿತ ಜೀವನದ ಕೊನೆಯ ವಿವರಣೆ, ಎಂದು ಮಾತ್ರಾ ಹೇಳಿಲ್ಲ. ಇದು ಇಂಥವರು ಹೇಳಿದ್ದು. ಅವರ ಮತ, ಅಭಿಪ್ರಾಯ, ಹೀಗಿದೆ. ಹೀಗೆಮಾಡಿದರೆ ಬಹುಶಃ ಒಳ್ಳೆಯದು. ಇತ್ಯಾದಿ. " ಇದೇ ಕೊನೆ, ತಿಳಿದೆಯಾ "? ಅನ್ನುವಮಾತನ್ನು ಯಾರೂ ಹೇಳಲಾರರು. ಇದೇ ಜೀವನದ ರಹಸ್ಯ. ಪ್ರತಿಯೊಬ್ಬರೂ ತಮ್ಮಜೀವನದಲ್ಲಿ ತಾವೇ ಕಂಡುಕೊಳ್ಳಬೇಕಾದ ಪರಮಸತ್ಯ ! ಯಾರಾದರೂ ಮಾರ್ಗದರ್ಶನ ಮಾಡಬಹುದು. ಆದರೆ , ಅನುಭವಿಸಿ ಗ್ರಹಿಸುವುದು ನಮಗೇ ಬಿಟ್ಟಿದ್ದು !

ಎಲ್ಲಿಂದ ಎಲ್ಲಿಗೋ ಹೋದೆ. ಕ್ಷಮಿಸಿ. ನಮ್ಮ ಭಾರತವನ್ನು ನಾನು ನಿಮ್ಮಂತೆ, ಮತ್ತೆಲ್ಲರಂತೆ, ಅತ್ಯಂತಪ್ರೀತಿಸುತ್ತೇನೆ. ನನ್ನ ಮಗನಿಗೆ, ಹಾಗೂ ಬೇರೆಮಕ್ಕಳಿಗೆ ನಾನು ಹೇಳುವುದಿಷ್ಟೆ. ಪ್ರಪಂಚ ವಿಶಾಲವಾಗಿದೆ. ಹೊರಗೆಹೋಗಿ. ಕಲಿಯಿರಿ. ನಮ್ಮ ಸುಸಂಸ್ಕೃತಿಯನ್ನು ಬೇರೆಯವರಿಗೂ ಕಲಿಸಿ. ಆಮೇಲೆ ದಯಮಾಡಿ ನಮ್ಮದೇಶಕ್ಕೆ ವಾಪಸ್ ಬನ್ನಿ. ನಮ್ಮನಾಡನ್ನು ಪುನರ್ನಿರ್ಮಿಸಿ. ಅಮೆರಿಕ ವಲಸಗಾರರನಾಡು. ಹೇಗೆಕಟ್ಟಿದ್ದಾರೆ ವೀಕ್ಷಿಸಿ. ತಮ್ಮತನು-ಮನ-ಧನಗಳನ್ನೆಲ್ಲಾ ಸುರಿದು ಒಂದು ಸಶಕ್ತರಾಷ್ಟ್ರವನ್ನು ಅವರು ಹೇಗೆನಿರ್ಮಿಸಿದರು ? ಅದನ್ನು ಅರಿಯಿರಿ. ಮತ್ತೆ ಹಿಂದಿರುಗಿ ಬನ್ನಿ. ಪೌರಾತ್ಯದೇಶಗಳಾದ, ಚೀನಾ, ಕೊರಿಯ, ಜಪಾನ್, ಸಿಂಗಪುರಗಳಕಡೆ ಸ್ವಲ್ಪನೋಡಿ ಕಲಿಯೋಣ. ಅವರೆಲ್ಲರ ಒಳ್ಳೆಯತನ, ಕಾರ್ಯನಿಷ್ಠೆ, ಸಮಯದ ಅರಿವು, ಜವಾಬ್ದಾರಿಯನ್ನು ಹಂಚಿಕೊಂಡು ಸಾಧಿಸುವ ಕಲೆ, ನಗುಮುಖದಿಂದ ಸಮಸ್ಯೆಗಳನ್ನು ಎದುರಿಸುವ ಕಲೆಗಳನ್ನು ಕಲಿಯೋಣ. ನಾವೆಲ್ಲರೂ ಒಟ್ಟುಗೂಡಿ, ಸಂಪದ್ಭರಿತ ಭಾರತವನ್ನು ಪುನರ್ನಿರ್ಮಿಸೋಣ!

ಭಾರತ್ ಮಾತಾಕೀ ಜೈ. ಮಹಾತ್ಮಗಾಂಧಿಕಿ ಜೈ, ಜವಹರ್ಲಾಲ್ ನೆಹೄ ಕೀ ಜೈ, ಸರ್ದಾರ್ ಪಟೇಲ್ ಕೀ ಜೈ........ಭಾರತದ ನವಯುವಕರಿಗೆ ಜೈ..ವಿಶ್ವದಹೊಸ-ಹೊಸತಂತ್ರಜ್ಞಾನಗಳಿಗೆ ಜೈ.. ಜೈ....ಜೈ...

-ಆಗಸ್ಟ್ ೧೫ ನೆ ದಿನದ ನಮ್ಮ, " ಸ್ವಾತಂತ್ರ್ಯದಿನದ ಹಬ್ಬ" ಕ್ಕಾಗಿ ಬರೆದ ವಿಶೇಷ ಲೇಖನ.

ಚಿಕಾಗೊನಗರ, ಯು. ಎಸ್. ಎ.