ಬಾಲ್ಯ ವಿವಾಹ - ಒಂದು ಗಝಲ್

ಬಾಲ್ಯ ವಿವಾಹ - ಒಂದು ಗಝಲ್

ಕವನ

ಯಾರ ಮದುವೆಯೋ ಏಕೆ ಸಡಗರವೋ ಒಂದೂ ತಿಳಿಯದಾದೆನು ನಾನು

ಭಾರ ವಸನವು ಹೊಳೆಯುವ ಆಭರಣಗಳು ಕುತೂಹಲ ತಡೆಯದಾದೆನು ನಾನು

 

ಮನೆತುಂಬಾ ಹೆಣ್ಮಕ್ಕಳು ಇದ್ದಾಗ ಕೈತೊಳೆಯ ಬಯಸಿದರೇ ಪೋಷಕರು

ಮನದಿ ತಳಮಳ ಕಾಲ ಕೆಳಗಿನ ನೆಲ ಬಿರಿದಂತೆ ದುಗುಡ ಸಹಿಸದಾದೆನು ನಾನು

 

ಅಸಹಾಯಕ ಪರಿಸ್ಥಿತಿಗೆ ವಿಧಿ ಲಿಖಿತವೇ ಕಾರಣವೇ

ಮಾಸದ ನೋವು ಎದೆಯಾಳದಿ ಚುಚ್ಚುತಿದೆ ಜೀವಂತ ಶವದಂತಾದೆನು ನಾನು

 

ಶಾಲೆಗೆ ಹೋದರೆ ನಾಲ್ಕಕ್ಷರ ಕಲಿತರೆ ಸ್ವಾಭಿಮಾನಿಯಾದರೆ ತಪ್ಪೇನು

ಮೂಲೆಗೆ ತಳ್ಳುತ ಜರಿದು ಒಮ್ಮೆ ಇಲ್ಲಿಂದ ಹೋಗೆಂದಾಗ ದಿಕ್ಕೇ ತೋಚದಂತಾದೆನು ನಾನು

 

ಸಮಯವು ಆಟದ ಬೆಟ್ಟದಷ್ಟು ಜವಾಬ್ಧಾರಿ ಅನ್ಯಾಯವ ನೋಡಲಾರಳು ಶ್ರೀ

ಸಮಾಜ ಸುಧಾರಣೆ ಬಾಲ್ಯವಿವಾಹ ನಿಷೇಧ ಬರಿಯ ಮಾತಿನಲ್ಲೋ ಅರಿಯದಾದೆನು ನಾನು

 

- ಪದ್ಮಶ್ರೀ ಪ್ರಶಾಂತ್

 

ಚಿತ್ರ್