ಬಾಲ ಮೇಧಾವಿ (ವಿಶ್ವಕಥಾಕೋಶ -೧೮)
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.
ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.
ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”
ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ.
“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”
ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಹದಿನೆಂಟನೆಯ ಸಂಪುಟ ‘ಬಾಲ ಮೇಧಾವಿ'. ವಿಶ್ವಕಥಾಕೋಶದ ಈ ಸಂಪುಟದಲ್ಲಿ ಜರ್ಮನಿ ದೇಶದ ಕಥೆಗಳಿವೆ. ಈ ಸಂಪುಟಕ್ಕಾಗಿ ಜರ್ಮನಿಯ ಹದಿನೈದು ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಸಾಮಾನ್ಯ ಕಥೆಗಾರ ಟೊಮಾಸ್ ಮಾನನ ‘ಬಾಲ ಮೇಧಾವಿ' ಸರ್ವಾಧಿಕಾರದ ಕ್ಷಿಪ್ರ ಉತ್ಕರ್ಷವನ್ನು ಕಲೆಯ ಕನ್ನಡಿಯಲ್ಲಿ ಸೆರೆ ಹಿಡಿದಿದೆ. ವಿವಿಧ ಸ್ಥರಗಳಲ್ಲಿ ಕೆಲಸ ಮಾಡುವ ಮನುಷ್ಯ ಮನಸ್ಸುಗಳ ಕಲಾತ್ಮಕ ಚಿತ್ರಣ ಮಹಾಪ್ರಭೃತಿ ಗುಅಟೆಯ ‘ಗೋರಿಯಾಚೆಗೂ ಜಾರದಿದೆ ನೆನಪು' ಇವೆರಡರ ನಡುವೆ ಇವೆ ವೈವಿಧ್ಯಪೂರ್ಣ ಕಥೆಗಳು. ಜರ್ಮನ್ ಬದುಕಿನ ಬಗ್ಗೆ ಕನ್ನಡ ಓದುಗರ ಅರಿವಿನ ಅಂಚನ್ನು ಈ ಕಥೆಗಳು ವಿಸ್ತರಿಸುತ್ತವೆ ಎಂದು ಸಂಪಾದಕರು ಅಭಿಪ್ರಾಯ ಪಟ್ಟಿದ್ದಾರೆ.
ಈ ಪುಸ್ತಕದಲ್ಲಿ ಇರುವ ೧೫ ಕಥೆಗಳೆಂದರೆ, ಬಾಲ ಮೇಧಾವಿ (ಟೊಮಾಸ್ ಮಾನ್), ಆಸರೆ (ಅನ್ನಾ ಸೇಘರ್ಸ್), ಎರಡು ನಿಮಿಷ (ಬ್ರೂನೋ ಆಪಿಟ್ಸ್), ಸರಳ ಸಂಗತಿಗಳು (ವಾಲ್ಟರ್ ಕೌಫ್ ಮಾನ್), ದಿವ್ಯ ದರ್ಶನ (ಆರ್ನೋಲ್ಡ್ ಟ್ಸ್ ವೈಗ್), ಕಳಾಹೀನೆ ಅನ್ನಾ (ಹೈನ್ ರಿಕ್ ಬೂಲ್), ಎಡಚರು ( ಗೂಂಟೂರ್ ಗ್ರಾಸ್), ನರಕದೊಳಗೊಂದು ಸ್ವಗತ (ಗೂಂಟೂರು ಹೋಫೆ), ಕತ್ತಲಲ್ಲಿ ಹುಟ್ಟಿತೊಂದು ಭಾಷೆ (ವೋಲ್ಫ್ ಗಾಂಗ್ ಕೋಲ್ ಹಾಸೆ), ನಿಜವಾಗಿ ಅಳಿಯುವುದು ಕಟ್ಟಕಡೆಯ ವ್ಯಕ್ತಿ ಮಾತ್ರ (ಡೀನಾ ನೇಲ್ ಕೆನ್), ಎಪ್ಪತ್ತು ವರ್ಷ ( ಗೂಂಟರ್ ರ್ಯೂಕರ್), ಇಬ್ಬರು ಮಕ್ಕಳು (ಬೆರ್ ಟೋಲ್ಟ್ ಬ್ರೆಶ್ಟ್), ದೊಡ್ಡ ಪಡಸಾಲೆಯಲ್ಲಿ (ಟಿಯೋಡೋರ್ ಶ್ಟೋರ್ಮ್), ಕ್ಷಮಿಸವರನೆಲೆ ತಂದೆ (ಯೊಹಾನ್ ಪೇಟೆರ್ ಹೇಬೆಲ್ ), ಗೋರಿಯಿಂದಾಚೆಗೂ ಜಾರದಿದೆ ನೆನಪು (ಯೋಹಾನ್ ವೋಲ್ಫ್ ಗಾಂಗ್ ಫಾನ್ ಗುಅಟೆ).
ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ಎಚ್. ಎಸ್. ರಾಘವೇಂದ್ರ ರಾವ್ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೭೫ ಪುಟಗಳನ್ನು ಹೊಂದಿದೆ. ಜರ್ಮನಿ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.