ಬಾಳಕದ ಮೆಣಸಿನಕಾಯಿ (ವಿಧಾನ 1)

Submitted by Shobha Kaduvalli on Thu, 01/17/2013 - 17:40
No votes yet
ಬೇಕಿರುವ ಸಾಮಗ್ರಿ

ಉದ್ದದ ಹಸಿ ಮೆಣಸಿನ ಕಾಯಿ – ¼ ಕೆ.ಜಿ., ಉದ್ದಿನ ಬೇಳೆ – 150 ಗ್ರಾಂ., ಮೆಂತೆ – 50 ಗ್ರಾಂ. ಜೀರಿಗೆ – 50 ಗ್ರಾಂ., ಎಣ್ಣೆ 1 ಟೀ ಚಮಚ, ಉಪ್ಪು – ರುಚಿಗೆ ತಕ್ಕಂತೆ, ಹುಣಿಸೆ ಪುಡಿ – ½ ಟೀ ಚಮಚ, ಇಂಗು 2 ಚಿಟಿಕೆ.

ತಯಾರಿಸುವ ವಿಧಾನ

ಹಸಿ ಮೆಣಸಿನಕಾಯಿಯನ್ನು ತೊಳೆದು ಶುಭ್ರವಾದ ಬಟ್ಟೆಯ ಮೇಲೆ ಹರಡಿ. ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಉದ್ದಿನಬೇಳೆ, ಮೆಂತೆ ಮತ್ತು ಜೀರಿಗೆಯನ್ನು ಹಾಕಿ ಕೆಂಪಗಾಗುವಂತೆ ಹುರಿಯಿರಿ. ಬಾಣಲೆ ಇಳಿಸಿದ ನಂತರ ಇಂಗು ಹಾಕಿ ಮೊಗೆಚಿ. ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಉಪ್ಪನ್ನು ಹಾಕಿ ಎರಡು ಸುತ್ತು ತಿರುಗಿಸಿ. ಪುಡಿಯನ್ನು ಒಂದು ಪುಟ್ಟ ಬೌಲಿನಲ್ಲಿ ಹಾಕಿಟ್ಟುಕೊಳ್ಳಿ. ಈಗ ನೀರು ಆರಿದ ಹಸಿಮೆಣಸಿನಕಾಯಿಯನ್ನು ಒಂದೊಂದಾಗಿ ತೆಗೆದುಕೊಂಡು ಹೊಟ್ಟೆಯ ಭಾಗವನ್ನು ಮಧ್ಯದಲ್ಲಿ ಉದ್ದಕ್ಕೆ ಸೀಳಿ. (ಮೆಣಸಿನ ಕಾಯಿ ಎರಡು ಭಾಗವಾಗಬಾರದು). ತೊಟ್ಟನ್ನು ಹಿಡಿದುಕೊಂಡು ಸೀಳಿದ ಭಾಗನ್ನು ಹೆಬ್ಬೆರಳಿನಿಂದ ಅಗಲಿಸಿ ಪುಡಿಯನ್ನು ಚಮಚದ ಸಹಾಯದಿಂದ ಮೆಣಸಿನ ಕಾಯಿಯ ಒಳಗೆ ತುಂಬಿಸಿ. (ತುದಿಯಿಂದ ಬುಡದವರೆಗೂ ತುಂಬಿಸಬೇಕು). ಎಲ್ಲಾ ಕಾಯಿಗೂ ತುಂಬಿಸಿದ ನಂತರ ಒಂದು ತಟ್ಟೆಯಲ್ಲಿ ಅಥವಾ ಗೆರಸಿಯಲ್ಲಿ ಹಾಕಿ ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ. ಎಣ್ಣೆಯಲ್ಲಿ ಕರಿದು ಸಾರನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet