ಬಾಳಿಗೊಂದು ಕಿವಿಮಾತು

ಬಾಳಿಗೊಂದು ಕಿವಿಮಾತು

ಮಾ(ದಾ)ನವ

ಮಾನವ ಮತ್ತು ದಾನವ ಇಲ್ಲಿ 'ಮಾ'ಮತ್ತು 'ದಾ'ಮಾತ್ರ ಅಕ್ಷರ ವ್ಯತ್ಯಾಸಗಳನ್ನು ನಾವು ಕಾಣಬಹುದು.

ಮಾ--ಮಾರ್ದವತೆ, ಮಧುರತೆ, ಒಳ್ಳೆಯ ಗುಣಗಳು, ಅಮರತ್ವದ ಸಂಕೇತ.

ದ ಅಥವಾ ದಾ--ದಯಾಹೀನತೆ, ಧರ್ಮಭೃಷ್ಟತೆ, ದೌರ್ಜನ್ಯ, ಕೆಟ್ಟ ಕೆಲಸಗಳ ಸಂಕೇತ.

ಎಲ್ಲಿ 'Unity' ಇಲ್ಲವೋ ಅಲ್ಲಿ 'Enemity' ಪ್ರವೇಶ ಮಾಡುತ್ತದೆ. ಇದು ನಗ್ನ ಸತ್ಯ. ನಾವುಗಳು ಒಗ್ಗಟ್ಟಾಗಿದ್ದಾಗ ನಮ್ಮನ್ನು ಏನೂ ಮಾಡಲಾಗದು.'ಅವರ ತಂಟೆಗೆ ಹೋಗುವುದು ಬೇಡ, ಸ್ಟ್ರಾಂಗ್ ಮಹರಾಯ'ಹೇಳಿ ಸುಮ್ಮನಿರುತ್ತಾರೆ. ಯಾರೂ ಬೇಡ, ನಾನೊಬ್ಬನೇ ಎಲ್ಲಾ ಎದುರಿಸಬಲ್ಲೆ ಎಂದು ಕುಳಿತವನ ತಲೆ ಮೇಲೆ ಹಾರ್ತಾರೆ, ಇದು ನಾವೆಲ್ಲ ನಿತ್ಯವೂ ನೋಡುವ, ಅನುಭವಿಸುವ ಸತ್ಯಗಳು. ಏನೇ ಬರಲಿ ಒಗ್ಗಟ್ಟಿರಲಿ ಇದೇ ನಮ್ಮ ಬಾಳಿನ ಬೀಜ ಮಂತ್ರವಾಗಿರಲಿ.

ದುರ್ಗುಣಗಳು ಒಮ್ಮೆ ನಮ್ಮ ಬೆನ್ನಿಗಂಟಿದರೆ ಸುಲಭದಲ್ಲಿ ಬಿಟ್ಟು ಹೋಗದು, ಬಾರದ ಹಾಗೆ ನೋಡಿಕೊಳ್ಳುವುದೇ ಜಾಣತನ. ನೀರು ತುಂಬಿದ ಲೋಟದಲ್ಲಿ ಪಾಯಸವನ್ನು ಹಾಕಲು ಸಾಧ್ಯವಿಲ್ಲ, ಆ ನೀರನ್ನು ಚೆಲ್ಲಿ ಪಾಯಸ ಹಾಕಬೇಕು, ಹಾಗೆಯೇ ಕೆಟ್ಟ ಅಭ್ಯಾಸಗಳನ್ನು ಹೊರಗೆಡಹಿ, ನಾವು ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳೋಣ.

ನರಕಕ್ಕೆ ಆರು ಬಾಗಿಲುಗಳಂತೆ, ಅದುವೇ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ. ಯಾವ ಬಾಗಿಲು ತೆರೆದರೂ ಸುಲಭವಾಗಿ ಒಳಗೆ ಬರಬಹುದು.

'ಕಾಮಂ ಕರ್ಮನಾಶಿನಂ', ಕ್ರೋಧಂ ಜ್ಞಾನ ನಾಶನಂ, ಲೋಭಂ ಭಕ್ತಿ ನಾಶನಂ, ಇದು ನೆನಪಿದ್ದರೆ ಸಾಕು.

ನಾನು ದೇವರವನು, ನಾನೇ ದೇವರು ಎಂದು ತಿಳಿಯಬಾರದು. ಹಾಗೆ ಹೇಳಿದ ಕಂಸ ನಾಶವಾಗಿ ಹೋದ. ರಾವಣ, ಕುಂಭಕರ್ಣರಂಥವರು ಆಸೆಯಿಂದಲೇ ನಾಶವಾದರು. ಇಲ್ಲಿ ದ್ವೇಷವೂ ಒಂದು ಕಾರಣವಾಯಿತು. ನಾವೆಲ್ಲರೂ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಜೀವನವನ್ನು ತಮ್ಮದಾಗಿಸಿಕೊಳ್ಳೋಣ. ಇರುವಷ್ಟು ದಿನ ನಗುನಗುತ್ತಾ ಚೆನ್ನಾಗಿರೋಣ.

-ರತ್ನಾ ಭಟ್ ತಲಂಜೇರಿ