ಬಾಳಿಗೊಂದು ಚಿಂತನೆ - ೨೦೪

ಬಾಳಿಗೊಂದು ಚಿಂತನೆ - ೨೦೪

ಸಜ್ಜನರ ಮನವನ್ನು ಯಾವತ್ತೂ ನೋಯಿಸುವುದು ಶ್ರೇಯಸ್ಸಲ್ಲ ಎಂಬುದು ನಿತ್ಯಸತ್ಯ. ಅವರಿಂದ ಸಮಾಜಮುಖಿ ಕೆಲಸಕಾರ್ಯಗಳು ನಿರಂತರ ಆಗುತ್ತಿರುತ್ತದೆ. ನೋಯಿಸಿದಾಗ ಅದೇ ವಿಷಯದ ಸುತ್ತ ಗಿರಕಿ ಹೊಡೆಯುತ್ತ, ಮಾಡುವ ಕಾರ್ಯಗಳೆಲ್ಲ ಏರುಪೇರಾಗಬಹುದು. ಇದರಿಂದ ಅವರಿಗೂ ಅವರಿಂದ ಪ್ರಯೋಜನ ಹೊಂದುವವರಿಗೂ ತೊಂದರೆ. ಒಳ್ಳೆಯವರ ಒಳ್ಳೆಯತನವನ್ನು ಗುರುತಿಸುವ ಕೆಲಸವಾಗಬೇಕು. ಅವರು ಯಾವತ್ತೂ ಟಾಂಟಾಂ ಮಾಡಿಕೊಂಡು ಹೋಗುವವರಲ್ಲ. ತಮ್ಮ ಬೆನ್ನನ್ನು ತಾವೇ ತಟ್ಟಿ ಹೇಳುವುದು ಮುಜುಗರವೇ ಸರಿ. ಇತ್ತೀಚೆಗಿನ ಹಲವಾರು ಬೆಳವಣಿಗೆಗಳನ್ನು ನೋಡುವಾಗ ವಿಪರ್ಯಾಸವೇ ಸರಿ. ಖಂಡಿಸಿತೋ ಕೆಂಗಣ್ಣಿಗೆ ನೇರ ಗುರಿಯಾಗುತ್ತೇವೆ. ಇದು ಎಲ್ಲಿಗೆ ಹೋಗಿ ತಲುಪಬಹುದೆಂಬ ಭಯವೂ ಕಾಡುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕುವವರು ಯಾರು? ಒಂದೂ ಅರ್ಥವಾಗುವುದಿಲ್ಲ .ಏನೋ ನಾಲ್ಕು ಅಕ್ಷರ ಬರೆದವ ಸಾಹಿತಿ ಅನಿಸಲಾರ. ಸಾಹಿತ್ಯದ ವಿವಿದ ಪ್ರಕಾರಗಳನ್ನು ಅಭ್ಯಸಿಸಿ ಅರೆದು ಕುಡಿದಿರಬೇಕು. ಇತ್ತೀಚೆಗೆ ಈ ವಾಟ್ಸಪ್ ಬಳಗಗಳಲ್ಲಿ ಬರೆಯುವ ಕೆಲವು ಸಾಹಿತ್ಯದ ಪ್ರಕಾರಗಳನ್ನು ಓದಿದಾಗ ಹೀಗೂ ಉಂಟೇ ಅನ್ನಿಸುವುದುಂಟು. ಸಜ್ಜನ ಬಂಧುಗಳಿಗೆ ಇದು ಹಿಡಿಸದು. ಏನಾದರೂ ಹೇಳಹೊರಟರೆ ಅವರ ತೇಜೋವಧೆ ಖಂಡಿತಾ. ಮೊನ್ನೆ ಓರ್ವ ಮಹಾಶಯರು ದೂರವಾಣಿಯಲ್ಲಿ ಹೇಳಿದ ಮಾತು ‘ನೀವ್ಯಾಕೆ ಮೇಡಂ ನನ್ನ ರಚನೆಗೆ ಲೈಕ್ ಕೊಡುವುದಿಲ್ಲ’ ಎಂಬುದಾಗಿ. ಏನು ಹೇಳಬೇಕೆಂದೇ ತೋಚದೆ ಮೊದಲು ಕಾಗುಣಿತ ತಪ್ಪಿಲ್ಲದೆ ಬರೆಯಲು ಕಲಿಯಬೇಕು, ಎರಡೆರಡು ಸಲ ಓದಿ ನಂತರ ಬಳಗಕ್ಕೆ ರವಾನಿಸಿ ಎಂದೆ. ಟೈಪ್ ತಪ್ಪುಗಳಾದರೆ ಗೊತ್ತಾಗುತ್ತದೆ. ಇದು ಎಷ್ಟು ಸಲ ಹೇಳಿದರೂ ಪುನ: ಅದೇ ತಪ್ಪು .ಪ್ರಾಥಮಿಕ ಶಾಲೆಯಲ್ಲಿ ಕೋಪಿ ಬರೆದಂತೆ, ತಿದ್ದಿ ತಿದ್ದಿ ಶಿಕ್ಷಕನೇ ಕಲಿಯಬೇಕಷ್ಟೆ, ಕೆಲವು ಮಕ್ಕಳು ಅದೇ ತಪ್ಪು ಮಾಡುವಂತೆ ಇವರ ಅವಸ್ಥೆ. ಮತ್ತೆ ಎಲ್ಲಿಗೆ ,ಯಾವುದಕ್ಕೆ ಲೈಕ್ ಕೊಡಲಿ? ಅದ್ಯಾಕೊ ಕಾಗುಣಿತ ದೋಷಗಳನ್ನು ಕಂಡಾಗ ಬರಹಗಳು ಎಷ್ಟು ಚೆನ್ನಾಗಿದ್ದರೂ ಮನಸ್ಸಿಗೆ ಹಿಡಿಸದು. ಆದಷ್ಟು ಈ ಬಗ್ಗೆ ಬರೆಯುವವರು ಜಾಗ್ರತೆ ವಹಿಸಬೇಕು. ಅಕ್ಷರ ವ್ಯತ್ಯಾಸವಾದೊಡನೆ ಅವರು ಬರೆದ ಸಾಲುಗಳ ಪದಗಳ ಅರ್ಥವೂ ವ್ಯತ್ಯಾಸವಾಯಿತಲ್ಲ?ಕಲಿತು ಬರೆಯೋಣ ಅಲ್ಲವೇ?ಬರೆಯಲು ತೊಡಗಿದೊಡನೆ ಎಲ್ಲಾ  ಬರಬೇಕೆಂದರೆ ಹೇಗೆ? ತಾಳ್ಮೆ ಬೇಕು, ನಿಧಾನವಾಗಿ, ಸಮರ್ಪಕವಾಗಿ ಕಲಿಯಬೇಕು. ಹೇಳುವುದರಲ್ಲಿ, ಕಲಿಸುವುದರಲ್ಲಿ ಸಣ್ಣವರು, ದೊಡ್ಡವರೆಂದು ಇಲ್ಲ. ಸರಿಯಾಗಿದ್ದರೆ ಚಿಕ್ಕವರ ಮಾತುಗಳನ್ನು ಸಹ ಕೇಳಬಹುದು. ಸಾಹಿತ್ಯ ಕ್ಷೇತ್ರದಲ್ಲಿ ವ್ಯವಸಾಯ ಮಾಡುವವರಲ್ಲಿ ತುಂಬಾ ಚಿಕ್ಕವರು, ದೊಡ್ಡವರು, ಹಿರಿಯರು ಅನುಭವಗಳಲ್ಲಿರಬಹುದು. ಯಾರು ಏನು ಹೇಳಿದರು ನಮಗೆ ಪ್ರಯೋಜನವಾಗುವುದನ್ನು ಸ್ವೀಕರಿಸಿದರಾಯಿತು. ಕಲಿಯುವವರು ನಾಲ್ಕೂ ದಿಕ್ಕುಗಳಿಂದಲೂ ಬಾಚಿ, ಆರಿಸಿ ಕಲಿಯುವುದು ಜಾಣತನ. ‘ಕ್ಷೀರಸಾಗರ ಕಡೆದಾಗ ಮೊದಲು ಹಾಲಾಹಲ ಬಂತು, ಆಮೇಲೆ ಅಲ್ಲವೇ ಅಮೃತ ಬಂದದ್ದು’. ಅದೇ ರೀತಿ ಬರೆದು, ಓದಿ ಕಲಿತಾಗ ಫಲ ಖಂಡಿತಾ.

*ಮಹತಾಸಾಧ್ಯಕಾರ್ಯಾಣಿ  ಕ್ರಿಯಂತೇಲ್ಪೇನ ಲೀಲಯಾ/*

*ರವೇರವೇಶ್ಯಭೂಗರ್ಭಗೃಹಂ ದೀಪೇನ ದೀಪ್ಯತೇ//*

ಓರ್ವ ಸಾಹಿತಿ ಮಿತ್ರರು ಹೇಳಿದ ಮಾತು ಹೀಗೆ ಸಮಾರಂಭದಲ್ಲಿ ಭೇಟಿಯಾದಾಗ'ಮರಿ ಸಾಹಿತಿಗಳ ಮಾತು, ಮಾರ್ಗದರ್ಶನ ನಾನು ಕೇಳಲಾರೆ, ಅವನಿಗೇನು ಗೊತ್ತು ನನ್ನ ಸಾಮರ್ಥ್ಯ' ಎಂಬುದಾಗಿ. ಸಲ್ಲದು ಹೇಳಿದೆ. ಸಾಹಿತ್ಯದಲ್ಲಿ ಚಿಕ್ಕವರು ದೊಡ್ಡವರೆಂಬ ಪ್ರಶ್ನೆ ಬರಬಾರದು, ಅವನ ವ್ಯವಸಾಯ ಎಷ್ಟು ವರ್ಷದಿಂದ ಇದೆ, ಅನುಭವ ಹೇಗಿದೆ ಅದೇ ದೊಡ್ಡದು ಮತ್ತು ಹಿರಿಯದು.

‘ದೊಡ್ಡವರಿಂದಾಗದ ಕೆಲಸ ಚಿಕ್ಕವರಿಂದಾದದ್ದು ಎಷ್ಟೋ ಇದೆ. ಸೂರ್ಯನ ಬಿಸಿಲು ಬೀಳಲಾರದ ನೆಲಮಾಳಿಗೆಯನ್ನು ಒಂದು ಪುಟ್ಟ ಹಣತೆ ಬೆಳಗಬಲ್ಲುದಲ್ಲವೇ? ಸಜ್ಜನ ಬಂಧುಗಳು ಗಾಳಕ್ಕೆ ಸಿಕ್ಕ ಮೀನುಗಳಾಗಿ ವಿಲವಿಲ ಒದ್ದಾಡದೆ ಗಾಣಕ್ಕೆ ಸಿಕ್ಕ ಕಬ್ಬಿನ ಜಲ್ಲೆಯಂತೆ ತಮ್ಮ ನೈಜ ಗುಣ ಮಾಧುರ್ಯವನ್ನು ಬಿಟ್ಟುಕೊಡದೆ ಸಮಾಜದಲ್ಲಿ  ತಮ್ಮ ಚಟುವಟಿಕೆಗಳನ್ನು ನಡೆಸಲೆಂಬ ಆಶಯ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ : ಸುಭಾಷಿತ ರತ್ನ)

ಚಿತ್ರ ಕೃಪೆ: ಇಂಟರ್ನೆಟ್ ತಾಣ