ಬಾಳಿಗೊಂದು ಚಿಂತನೆ (10) - ಮನಸ್ಸು
ಮನಸ್ಸು ಎನ್ನುವುದು *ನೀರು ತುಂಬಿದ ಬಾಟಲಿಯಂತೆ*. ಯಾವ ಬಣ್ಣದ ಬಾಟಲಿಯಲ್ಲಿ ನೀರು ಹಾಕುತ್ತೇವೆಯೋ, ಆ ಬಾಟಲಿಯ ಬಣ್ಣ ಬರುತ್ತದೆ. ಮನಸ್ಸು ಓಡುವ ಕುದುರೆಯಂತೆ. ಅದನ್ನು ಬೇಕಾದ ಹಾಗೆ ನಿಲ್ಲಿಸಲು ನಮಗೆ ತಿಳಿದಿರಬೇಕು. ಏರುಪೇರುಗಳಿಂದ ಮನಸ್ಸು ಒಮ್ಮೊಮ್ಮೆ ಓಲಾಡುತ್ತದೆ, ನಮ್ಮ ಕೈಯಿಂದ ಜಾರಿ ಹೋಗುತ್ತದೆ. ಜಾರುವ ದಾರಿ ಹೇಗಿದೆ, ಹೇಗೆ ಜಾರಿದರೆ ಒಳಿತಾಗಬಹುದು? ಅದು ನಮ್ಮ ನಮ್ಮ ಕೈಯಲ್ಲೇ ಇದೆ.
ದೃಷ್ಟಿಯಂತೆ ನಮ್ಮ ಮನಸ್ಸು. ದೃಷ್ಟಿ ಹೇಗೋ ಹಾಗೆ ಸೃಷ್ಟಿ ಸಹ. ಮನಸ್ಸನ್ನು ಹತೋಟಿಯಲ್ಲಿಟ್ಟು, ಋಜುಮಾರ್ಗ (ಸತ್ಯ ಮಾರ್ಗ) ದಲ್ಲಿ ನಡೆಯುವವನಿಗೆ ಶಾಂತಿ, ನೆಮ್ಮದಿ ಎಲ್ಲವೂ ಸಿದ್ಧಿಸುತ್ತದೆ. ವ್ಯತಿರಿಕ್ತ ವರ್ತನೆಗಳು ನೋವು, ಸಂಕಟ, ದುಃಖಗಳಿಗೆ ಕಾರಣವಾಗುತ್ತದೆ.
ವಸ್ತ್ರವನ್ನು ಮಾಡಲು ಹತ್ತಿಯನ್ನು ಬಳಸಲಾಗುತ್ತದೆ. ಹತ್ತಿಯ ದಾರಗಳಂತಿರಬೇಕು ನಮ್ಮ ಮನಸ್ಸು. ಬುದ್ಧಿಯನ್ನು ಆಧಾರವಾಗಿಟ್ಟುಕೊಂಡು ವ್ಯವಹರಿಸುವುದು, ಮನಸ್ಸಿನ ಹತೋಟಿಗೆ ಕಡಿವಾಣ ಹಾಕಿದಂತೆ. ಮನಸ್ಸಿನಿಂದ *ಮಾಧವನಾಗಲು* ಸಾಧ್ಯ. ಭಗವಂತನಿಗೆ ಅಭಿಮುಖವಾಗಿ ಸಾಗುವಂತೆ ಮನಸ್ಸನ್ನು ಇಟ್ಟುಕೊಳ್ಳುವುದೇ ಸಾಧನೆ. ವಕ್ರಗತಿಯಿಂದ ಮನಸ್ಸು ಚಲಿಸಿದರೆ *ಕಂಡದ್ದನ್ನೆಲ್ಲಾ ಕಚ್ಚುವ ವಿಷದ ಹಾವಾಗಿ ಪರಿಣಮಿಸಬಹುದು*.
ಕಣ್ಣು,ಕಿವಿ,ನಾಲಿಗೆಗಳ ದಾಸನಾಗಿರದ ಮನಸ್ಸು ಒಳ್ಳೆಯದು. ಮನಸ್ಸು ಒಬ್ಬ ಉತ್ತಮ ದಕ್ಷ ಕಾವಲುಗಾರ ಇದ್ದ ಹಾಗೆ. ಆ ಕಾವಲುಗಾರನಿಗೆ ವೇತನ ಕೊಡುವವ ಕಣ್ಣಿಗೆ ಕಾಣದ ದಿವ್ಯ ಶಕ್ತಿ. ನಿರಂತರವಾಗಿ ಓಡುತ್ತಿರುವ ಮನಸ್ಸನ್ನು ಭಗವಂತನ ಮೇಲಿನ ಪ್ರೇಮ, ಭಕ್ತಿ, ಸಾಧನೆ, ಭಜನೆ, ಸತ್ಸಂಗ, ಆಧ್ಯಾತ್ಮ, ಆಧ್ಯಾತ್ಮಿಕ ವಿಚಾರಗಳ ಅರಿವು ಇವುಗಳಿಂದ ನಿಯಂತ್ರಿಸೋಣ, ಮಾಧವರಾಗೋಣ.
-ರತ್ನಾಭಟ್ ತಲಂಜೇರಿ
ಪೆನ್ಸಿಲ್ ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು