ಬಾಳಿಗೊಂದು ಚಿಂತನೆ - 100
ನಾವು ಯಾರ ಬಗ್ಗೆಯೂ ವಿಷಯ ಸರಿಯಾಗಿ ತಿಳಿಯದೆ ಮಾತನಾಡಬಾರದು. ಉತ್ತಮ ಹೃದಯಗಳನ್ನು ಘಾಸಿಗೊಳಿಸಬಾರದು. ನಾಲ್ಕು ಹೊಡೆತ ತಿಂದರೂ ಕಾಲ ಅದನ್ನು ಹೋಗಲಾಡಿಸಬಹುದು. ಆದರೆ ಮಾತಿನ ವ್ಯಂಗ್ಯ ಯಾವತ್ತೂ ಹೃದಯದಿಂದ, ಮನಸ್ಸಿನಿಂದ ಹೊರಹೋಗದು. ಶ್ರೇಷ್ಠ ಮನುಷ್ಯ ಜನ್ಮವೆತ್ತಿ ಬಂದ ನಾವುಗಳು ಈ ರೀತಿ ತಪ್ಪನ್ನೆಸಗಿ, ಇತರರ ಬದುಕಿನ ಚುಚ್ಚುವ ಮುಳ್ಳುಗಳಾಗಬಾರದು. ಎಲ್ಲರಿಗೂ ಅವರವರದೇ ಆದ ಒಂದು ಜೀವನವಿದೆ ಅಲ್ಲವೇ? ಇನ್ನೊಬ್ಬರ ಸಂತೋಷವನ್ನು ಹಾಳು ಮಾಡುವ ಅಧಿಕಾರ ನಮಗೆ ಕೊಟ್ಟವರಾರು? ಮಾಡಿದ್ದನ್ನೆಲ್ಲ ನೋಡಲೊಬ್ಬ ಮೇಲೆ ಕುಳಿತಿದ್ದಾನೆಂಬ ಪ್ರಜ್ಞೆ ಇದ್ದರೆ, ತಪ್ಪುಗಳು ಕಡಿಮೆಯಾಗಬಹುದಿತ್ತು. ಆದರೆ ಆ ಸಮಯದಲ್ಲಿ ಅದು ಇರುವುದಿಲ್ಲ. ಅವರ ವಿಷಯ ಇವರ ಹತ್ತಿರ, ಇವರ ವಿಷಯ ಅವರ ಹತ್ತಿರ ಹೇಳಿ ತಾನು ಉತ್ತಮ, ತಾನು ಸಾಧು, ತಾನು ಯಾರ ತಂಟೆಗೂ ಹೋಗದವ ಎಂದು ಹೇಳುವ ಮನಸ್ಥಿತಿ ಯಾಕೆ? ಒಂದು ದಿನ ಸಿಕ್ಕಿ ಬಿದ್ದಾಗ ಆ ದೇವರು ಸಹ ಬರಲಾರ ಕಾಪಾಡಲು. ಮೇಲೆ ನೋಡಿ ಬಾಯಿಯ ಎಂಜಲನ್ನು ಉಗುಳಿದರೆ ಏನಾಗಬಹುದೆಂದು ಒಂದು ಕ್ಷಣ ಯೋಚಿಸೋಣ. ಆಗಸಕ್ಕೆ ಬೂದಿ ಹಾರಿಸುತ್ತೇನೆಂದು ಹೊರಟರೆ, ಹಾರಿಸಿದವನ ಮುಖಕ್ಕೆ ಬೀಳಬಹುದು. ನಾವು ನಮ್ಮ ಬದುಕು, ನೆಮ್ಮದಿ, ಆರೋಗ್ಯ ಮುಖ್ಯ, ಏನಾದರೂ ಭಗವಂತ ಕೊಟ್ಟಿದ್ದಾನೋ, ನಮ್ಮ ಬಳಿ ಇದೆಯೋ ಇತರರಿಗೂ ನೀಡಿ ಸಹಕರಿಸಿ ಸಂತೋಷಪಡೋಣ.
*ನಿಂದಾಂ ಯಃಕುರುತೇ ಸಾಧೋಃ* *ತಥಾ ಸ್ವಂ* *ದೂಷಯತ್ಯಸೌ/*
*ಖೇ ಭೂತಿಂ ಯಃ* *ಕ್ಷಿಪೇದುಚ್ಚೈಃಮೂರ್ಧ್ನಿ ತಸ್ಯೈವ ಸಾ* *ಪತೇತ್//*
(ಶ್ಲೋಕ: ಸುಭಾಷಿತ ಸಾರ)
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಅಂತರ್ಜಾಲ ತಾಣ