ಬಾಳಿಗೊಂದು ಚಿಂತನೆ - 102
ಬಿಳಿಯ ಬಣ್ಣದ ಬಟ್ಟೆಯನ್ನು ಬೇರೆ ಯಾವುದೇ ಬಣ್ಣಕ್ಕೂ ಬದಲಾಯಿಸಬಹುದು. ಆದರೆ ಅದು ನಮ್ಮ ಚಾಕಚಕ್ಯತೆ. ಅದೇ ರೀತಿ ಉತ್ತಮರು ಯಾವತ್ತೂ ಉತ್ತಮರೇ. ಬದಲಾಯಿಸಲು ನೋಡಿದರೆ ಎಲ್ಲಿಯಾದರೂ ಅಲ್ಲೊಬ್ಬ ಇಲ್ಲೊಬ್ಬ ಕೆಟ್ಟವರಾಗಲೂ ಬಹುದು, ಸಹವಾಸ ದೋಷದಿಂದ. ಆತ ಯಾವಾಗಲೂ ಬಿಳಿ ಬಣ್ಣವೇ ಆಗಿದ್ದರೆ ಚಂದ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಒಂದಿನಿತು ದಾನಧರ್ಮ ಮಾಡಿದರೆ ಅತ್ಯಧಿಕ ಪುಣ್ಯಫಲ ಸಿಗಬಹುದಂತೆ. ಅನ್ಯಾಯ, ಅಕ್ರಮಗಳಿಂದ ಸಂಪಾದಿಸಿದ ಹಣದಲ್ಲಿ ಭಗವಂತನಿಗೆ ವಜ್ರದ ಕಿರೀಟ ಅರ್ಪಿಸಿದರೂ ನಗಣ್ಯ. ತೋರಿಕೆಯ ಆಡಂಬರವಾಗಬಹುದಷ್ಟೆ. ಎಷ್ಟೋ ಜನ ಮಾಡುವ ಕೆಟ್ಟ ಕೆಲಸಗಳ ಸಂಪಾದನೆಯಿಂದ ದಾನ ಮಾಡುವುದನ್ನು ನಾವು ಓದಿರುತ್ತೇವೆ. ಅದರಲ್ಲೇನೂ ವಿಶೇಷತೆ ಅನಿಸುವುದಿಲ್ಲ. ಅದೇ ಒಬ್ಬ ಬಡವನಾದವ ನೀಡಿದರೆ ನಮಗೆ ಸಂತಸವಾಗುತ್ತದೆ. ನಮ್ಮ ಸುತ್ತಮುತ್ತ ಬಹಳ ಜನ ಅಂಥವರು ಇದ್ದಾರೆ. ನ್ಯಾಯಯುತ ಸಂಪಾದನೆಯ ದಾನವೇ ಶ್ರೇಷ್ಠವಾದ ನೀಡಿಕೆ.
*ಯಾದೃಶೇನ ಹೀ ವರ್ಣೇನ* *ಭಾವ್ಯತೇ ಶುಕ್ಲಮಂಬರಮ್/*
*ತಾದೃಶಂ ಕುರುತೇ* *ರೂಪಮೇತದೇವಮವೇಹಿ ಮೇ//*
ಆಡಂಬರದ ಬದುಕು, ವೈಭೋಗದ ಜೀವನ ಬೇಡ. ಇದ್ದುದರಲ್ಲಿಯೇ ಅನುಸರಿಸಿಕೊಂಡು ಬದುಕು ಕಟ್ಟಿಕೊಳ್ಳುವುದನ್ನು ರೂಢಿಮಾಡಿಕೊಳ್ಳೋಣ. ಬಣ್ಣಬಣ್ಣದ ಜೀವನದ ಮಜಲುಗಳು ಇಲ್ಲದ ಕಾಯಿಲೆಗಳಿಗೆ ನಮ್ಮನ್ನು ದೂಡಬಹದು. ಮತ್ತೆ ಬಾಯಿ ಕಟ್ಟುವುದರಿಂದ ಮೊದಲೇ ಯೋಚಿಸಿದರೆ ನಾಲ್ಕು ದಿನ ಹೆಚ್ಚಿಗೆ ಭೂಮಿ ಮೇಲೆ ಇರಬಹುದಲ್ಲವೇ? ನೆಮ್ಮದಿಯ ಬದುಕು ಮುಖ್ಯ. ಅನ್ಯಾಯ ಅಕ್ರಮಗಳ ಅಡ್ಡದಾರಿ ಬಿಟ್ಟು, ನೇರ, ನ್ಯಾಯವಾದ ದಾರಿಯನ್ನು ಹಿಡಿಯೋಣ. ಎಲ್ಲಿ ಒಳ್ಳೆಯತನವಿದೆಯೋ ಅಲ್ಲಿ ದೇವರ ಆಶೀರ್ವಾದ ಖಂಡಿತಾ ಇದೆ.
ಆಕರ: ಮಹಾಭಾರತ
ಸಂಗ್ರಹ: ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ