ಬಾಳಿಗೊಂದು ಚಿಂತನೆ - 103
ಯಾವುದೇ ತಪ್ಪನ್ನು ಮಾಡದ ಮುಗ್ಧರಿಗೆ ಮೋಸ ಮಾಡಬಾರದು.ಆ ಮೋಸವು ಹಾಲಾಹಲ ವಿಷಕ್ಕಿಂತಲೂ ಘೋರ. ಮಹಾಪಾಪದ ಕೆಲಸ. ವಿಷ, ಹಾಲಾಹಲವು ಕುಡಿದವನ ಜೀವ ತೆಗೆಯುತ್ತದೆ. ಆದರೆ ಪಾಪದವರಿಗೆ ಮಾಡಿದ ದ್ರೋಹ ಸಂಪೂರ್ಣ ವಂಶವನ್ನೇ ನಾಶ ಮಾಡುತ್ತದೆ.
*ದ್ರೋಹೋ ನಿರಾಗಸಾಂ ಲೋಕೇ ಹೀನೋ ಹಾಲಾಹಲಾದಪಿ|*
*ಅಯಂ ಹಂತಿ ಕುಲಂ ಸಾಗ್ರಂ ಭೋಕ್ತಾರಂ ಕೇವಲಂ ತು ಸಃ||*
ನಾವು ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ, ಬಂಧುಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ಓದುತ್ತಾ, ಕೇಳುತ್ತಾ, ನೋಡುತ್ತಾ ಇರುತ್ತೇವೆ. ಮೋಸಮಾಡಿದ ಹಲವಾರು ವಿಷಯಗಳು ಬರುತ್ತಿರುತ್ತದೆ. ಇವರಿಗೆಲ್ಲ ಆ ಭಗವಂತ ಹೃದಯವನ್ನು ಕೊಡಲಿಲ್ಲವೇನೋ ಎಂದು ಎಷ್ಟೋ ಸಲ ಅನಿಸಿದ್ದಿದೆ. ಒಬ್ಬನನ್ನು ತುಳಿದು ಮತ್ತೊಬ್ಬ ಬದುಕುವುದಕ್ಕೆ ನರಿಬುದ್ಧಿ ಹೇಳಬಹುದು. ಅದು ಮನುಷ್ಯತ್ವ ಖಂಡಿತಾ ಅಲ್ಲ. ಜೀವನವಿರಬಹುದು, ಬರವಣಿಗೆಯ ಕ್ಷೇತ್ರವಿರಬಹುದು. ಅಂಥವರು ಘೋರ ವಿಷಸರ್ಪಗಳಿಗಿಂತಲೂ ಕೀಳು ಮಟ್ಟದವರು. ಪಾಪಪ್ರಜ್ಞೆ ಎಂಬುದು ಕಿಂಚಿತ್ತೂ ಇಲ್ಲದವರು. ಎಲ್ಲಾ ಗೊತ್ತಾಗುವಾಗ ಇವರು ಮುಳುಗಿ ಹೋಗುವುದು ಕಂಡಿದ್ದೇವೆ. ದುರ್ಜನರಿಂದ, ಮೋಸಗಾರರಿಂದ ಸಾಧ್ಯವಿದ್ದಷ್ಟೂ ದೂರವಿರುವುದೇ ಲೇಸು. ‘ದೇಹದ ಮೇಲಿನ ತುರಿಕೆ ಕಜ್ಜಿನಂತೆ’ ಕೆರೆದಷ್ಟೂ ಹೆಚ್ಚೆಚ್ಚು ಗಾಯವಾಗಿ ಬಳಲಬೇಕಾಗಬಹುದು. ಯಾರಾದರೂ ಬಯಸಿ ಬೆಂಕಿಕೆಂಡವನ್ನು ಕೈಯಲ್ಲಿ ಹಿಡಿಯುತ್ತಾರೆಯೇ? ಹಾಗಾಗಿ ಪೂರ್ತಿ ಮೋಸ ಹೋಗಿ ಪಶ್ಚಾತ್ತಾಪ ಪಡುವ ಮೊದಲೇ ಎಚ್ಚೆತ್ತುಕೊಂಡು ನಮ್ಮಷ್ಟಕ್ಕೆ ಇದ್ದುಬಿಡೋಣ. ಬಾಳಿನ ಹಾದಿಯಲ್ಲಿ ನೆಮ್ಮದಿ ಮುಖ್ಯ, ಅದು ನಮ್ಮ ಕೈಯಲ್ಲೇ ಇದೆ.
(ಶ್ಲೋಕ: ಸರಳ ಸುಭಾಷಿತ)
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ