ಬಾಳಿಗೊಂದು ಚಿಂತನೆ - 106
ಮಾನವ ಜನ್ಮ ಎಷ್ಟೋ ವರ್ಷಗಳ ಪುಣ್ಯದಫಲದಿಂದ ಸಿಗುವುದಂತೆ. ಆದರೆ ನಾವೇನು ಮಾಡುತ್ತೇವೆ? ಇರುವ ಈ ಜನ್ಮದಲ್ಲಿ ನಾನೇ ಎಂಬ ಅಹಂನ್ನು ತುಂಬಿಕೊಳ್ಳುತ್ತೇವೆ. ಇದ್ದಾಗ ಸ್ವಲ್ಪವೂ ನೀಡಲು ಮನಸ್ಸೇ ಮಾಡುವುದಿಲ್ಲ. ನಮಗೆ ಸಮಾಜ ಏನು ಕೊಟ್ಟಿದೆ? ಎಂಬ ಪ್ರಶ್ನೆ ಬೇಡ. ನಾವು ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದೇವೆ ಅದು ಲೆಕ್ಕಕ್ಕೆ ಸಿಗುವಂತದ್ದು. ಈ ಮಾನವ ಜನ್ಮವನ್ನು ಆದಷ್ಟೂ ಉತ್ತಮ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳೋಣ ಆಗದೇ? ಮುಂದೆ ಜನ್ಮ ಇದೆಯೇ ಇಲ್ಲವೇ ನಮಗರಿಯದು. ನಮ್ಮ ಜೊತೆಗೆ ನಮ್ಮನ್ನೇ ನಂಬಿದವರು ಇದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನಮ್ಮ ಮಕ್ಕಳು ಮುಂದಿನ ಸಂಪತ್ತು. ಅವರನ್ನು ಒಳ್ಳೆಯ ವಿದ್ಯಾಭ್ಯಾಸ ನೀಡಿ, ಮುಂದೆ ಉತ್ತಮೋತ್ತಮ ಜೀವನ ಮಾಡುವ ಹಾಗೆ ಮಾಡಬೇಕಾದವರು ಹಿರಿಯರಾದ ನಾವುಗಳು. ಮಕ್ಕಳಿಗೆ ಆಸ್ತಿ, ಹಣ, ಅಂತಸ್ತು, ಅಹಮಿಕೆ ಪೇರಿಸಿಡಬೇಡಿ. ಅವರನ್ನೇ ಆಸ್ತಿಯನ್ನಾಗಿ ತಯಾರು ಮಾಡಬೇಕು. ಅವರ ತೋಳುಗಳಿಗೆ ಧೈರ್ಯ, ಶಕ್ತಿ ತುಂಬುವ ಕೆಲಸವಾಗಬೇಕು. ತನುವಿಗೆ ಆತ್ಮವಿಶ್ವಾಸ, ದೃಢತೆ, ನಿಶ್ಚಿತ ಗುರಿ, ಸಂಕಲ್ಪ, ನೈತಿಕ ಮೌಲ್ಯಗಳನ್ನು ನೀಡಿ ಗಟ್ಟಿಗೊಳಿಸುವ ಕೆಲಸವಾದರೆ, ಉತ್ತಮ ಸಮಾಜದ ನಿರ್ಮಾಣಕ್ಕೆ ನಮ್ಮ ಕೊಡುಗೆ ಸಲ್ಲಿಸಿದಂತಾಗುತ್ತದೆ.ದೇಹ ಅಳಿದರೂ ನಮ್ಮ ನೆನಪು ಚಿರಸ್ಥಾಯಿಯಾಗಿರಲು ನಮ್ಮ ಶುದ್ಧ ವ್ಯವಹಾರಗಳು ಮಾತ್ರ ಕಾರಣವಾಗಬಲ್ಲುದು.
ದೇಹ ಅವಸಾನವಾದರೂ ಆತ್ಮಕ್ಕೆ ಸಾವಿಲ್ಲ. ಹುಟ್ಟು ಸಾವುಗಳಿಲ್ಲದ ದಿವ್ಯ ಜ್ಯೋತಿಯೇ ಆತ್ಮ.
*ವಾಸಾಂಸಿ ಜೀರ್ಣಾನಿ ಯಥಾ ವಿಹಾಯ*
*ನವಾನಿ ಗೃಹ್ಣಾತಿ ನರೋಪರಾಣಿ|*
*ಕಥಾ ಶರೀರಾಣಿ ವಿಹಾಯ ಜೀರ್ಣಾನಿ*
*ಅನ್ಯಾನಿ ಸಂಯಾತಿ ನವಾನಿ ದೇಹೀ||*
ನಾವು ಹಾಳಾದ, ಹಳತಾದ, ಜೀರ್ಣವಾದ ವಸ್ತ್ರಗಳನ್ನು ಎಸೆದು, ಹೊಸದನ್ನು ಹೇಗೆ ಧರಿಸುತ್ತೇವೆಯೋ ಹಾಗೆಯೇ ಜೀವ ಜೀರ್ಣವಾದ ದೇಹ ಬಿಟ್ಟು, ಹೊಸದಾಗಿರುವ ದೇಹವನ್ನು ಪ್ರವೇಶಿಸುವುದು. ಇದು ನಿತ್ಯಸತ್ಯ ವಿಚಾರ. ದೇಹ ಅಳಿದಾಗ ಇತರರಿಗೆ ದುಃಖವಾಗುವುದು ಸಹಜ. ಅದನ್ನೆಲ್ಲ ನಿಧಾನವಾಗಿ ಮರೆತು ಮುಂದಿನ ಬದುಕಿಗಾಗಿ ಸಜ್ಜಾಗುವುದು ನಮ್ಮ ಕರ್ತವ್ಯ. ಮಾನವ ಜನ್ಮದ ಬುವಿಯ ಮೇಲಿನ ಬಂಧವೇ ಹೀಗೆ ಸಾಗಬೇಕಿದೆ. ಕಾಲಕ್ಕೆ ಬದಲಾವಣೆಗೆ ಸರಿಯಾದ ಹೊಂದಾಣಿಕೆ ಮಾಡಿಕೊಂಡು ಜೀವಿಸೋಣ, ಬದುಕು ಸಾರ್ಥಕ ಪಡಿಸಿಕೊಳ್ಳೋಣ.
(ಆಕರ ಗ್ರಂಥ: ಉಪದೇಶಾಮೃತ)
ಸಂಗ್ರಹ: ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ