ಬಾಳಿಗೊಂದು ಚಿಂತನೆ - 107
ಎದುರಿನಿಂದ ಹಾಲಿನ ಬಿಳುಪಿನಂತೆ ಚಂದಕ್ಕೆ ನಗುತ್ತಾ ಮಾತನಾಡಿ, ಹಿಂದಿನಿಂದ ಬೆನ್ನಿಗೆ ಚೂರಿಯಲ್ಲಿ ಇರಿದಂತೆ ಮಾತನಾಡುವವರನ್ನು ನೋಡುತ್ತೇವೆ. ಅವರು ಯಾವತ್ತೂ ಅಪಾಯದ ಮನುಜರು. ಅಂತಹ ಮನುಷ್ಯರನ್ನು, ಅವರ ಮನಸ್ಸನ್ನು ನಂಬಲೇಬಾರದು. ಯಾರು ಯಾರ ಬಗ್ಗೆ ಏನು ಹೇಳಿದರೂ ಅವರ ಮಾತಿನಲ್ಲಿರುವ ಸತ್ಯಾಸತ್ಯತೆಯನ್ನರಿತು ವ್ಯವಹರಿಸುವುದು ಜಾಣತನ. ಸರಿಯಾದ ಪುರಾವೆಗಳಿವೆ ಎಂದಾದರೆ ಮತ್ತೆ ಆ ಗೋಮುಖವ್ಯಾಘ್ರಗಳನ್ನು ದೂರವೇ ಇಡಬೇಕು.
*ಪರೋಕ್ಷೇ ಕಾರ್ಯಹಂತಾರಂ* *ಪ್ರತ್ಯಕ್ಷೇ ಪ್ರಿಯವಾದಿನಮ್|*
*ವರ್ಜಯೇತ್ತಾದೃಶಂ ಮಿತ್ರಂ* *ವಿಷಕುಂಭಂ ಪಯೋಮುಖಮ್||*
ಮರೆಯಲ್ಲಿ ನಿಂತುಕೊಂಡು ನಮ್ಮ ಕೆಲಸಗಳನ್ನು ಹಾಳುಮಾಡುವ, ಕೆಟ್ಟ ಮನಸ್ಸಿನವರು, ಕೆಟ್ಟದನ್ನೇ ಆಲೋಚಿಸುವವರು ಇರುತ್ತಾರೆ. ಅವರು ಎದುರಿನಿಂದ ಸವಿಯಾಗಿ ಮಾತನಾಡುವ ಸ್ವಭಾವದವರೂ ಆಗಿರಬಹುದು. ಹಾಗಿದ್ದವರ ಬುದ್ಧಿ ಗೊತ್ತಾದ ತಕ್ಷಣ ತೊರೆಯಬೇಕು. ಅಂಥವರ ಸ್ನೇಹ ಅಪಾಯ. ಅವರು ನಮ್ಮ ಬದುಕಿನಲ್ಲಿ ಆಟ ಆಡುವವರು.
ಹಾಲಿನಂತಹ ಮೊಗವನ್ನು ಹೊಂದಿದ ವಿಷವನ್ನೇ ಒಡಲಲ್ಲಿ ತುಂಬಿಕೊಂಡ ಮಡಿಕೆಯಂತೆಯೇ ಸರಿ. ಹತ್ತಿರ ಸಹ ಸೇರಿಸಬಾರದು ಅವರನ್ನು. ದುಷ್ಟರಿಂದ ದೂರವಿದ್ದಷ್ಟೂ ಬಾಳು ಸುಂದರ, ಮಾನಸಿಕ ಶಾಂತಿ ಲಭಿಸುವುದು. ಇಲ್ಲದಿದ್ದರೆ ನಾವು ಮನಸ್ಸಿನಲ್ಲಿಯೇ ಕೊರಗಿ ನಮ್ಮ ಮಾನಸಿಕ ಶಾಂತಿ, ನೆಮ್ಮದಿ, ಆರೋಗ್ಯ ಹಾಳಾಗಬಹುದು. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು.
-ರತ್ನಾ ಭಟ್ ತಲಂಜೇರಿ
(ಶ್ಲೋಕ: ಸರಳ ಸುಭಾಷಿತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ