ಬಾಳಿಗೊಂದು ಚಿಂತನೆ - 108

ಬಾಳಿಗೊಂದು ಚಿಂತನೆ - 108

ಮಾನವನು ಎಲ್ಲದಕ್ಕೂ ಭಗವಂತನನ್ನು ಹೊಣೆಗಾರನನ್ನಾಗಿ ಮಾಡುವುದು, ದೇವರ ಮೇಲೆ ಭಾರ ಹಾಕಿ ಕೂರುವುದು ಸರಿಯಲ್ಲ. ಪುರುಷ ಪ್ರಯತ್ನ ಎಂಬುದು ಬೇರೆಯೇ ಇದೆ. ಪುಟ್ಟ ಕರುವು ಈಗ ತಾನೆ ಹುಟ್ಟಿದರೂ ಸ್ವಲ್ಪ ಹೊತ್ತಿನಲ್ಲಿ ತಾಯಿ ಹಸುವಿನ ಬಳಿ ನಿಂತು ಹಾಲು ಕುಡಿಯಲು ಪ್ರಯತ್ನಿಸುತ್ತದೆ. ಇದು ಪ್ರಾಣಿಗಳ ಸ್ವಭಾವ. ಆದರೆ ನಾವುಗಳು ಏನು ಮಾಡದೆ ದೇವರನ್ನು ನಿಂದಿಸುತ್ತೇವೆ. ನಮ್ಮ ಪೂರ್ವ ಜನ್ಮದ ಕರ್ಮಫಲಗಳು ನಮ್ಮ ಬೆನ್ನ ಹಿಂದೆ ಇರುವ ಅರಿವೇ ನಮಗಿಲ್ಲ.

ಪಾಂಡವರು ಎಲ್ಲವನ್ನೂ ಕಳೆದುಕೊಂಡು ಕಾಡಿಗೆ ತೆರಳಿದರು. ಅಲ್ಲಿ ಏನೂ ಇಲ್ಲ ಎಂದು ದುಃಖಿಸುತ್ತಾ ಕುಳಿತರೆ ಯಾವುದೂ ಆಗುತ್ತಿರಲಿಲ್ಲ. ಪುರುಷ ಪ್ರಯತ್ನ ಎಂಬುದು ಕುರುಕ್ಷೇತ್ರವನ್ನೇ ಹುಟ್ಟು ಹಾಕಿತು.

*ಯಶ್ಚ ದಿಷ್ಟ ಪರೋ ಲೋಕೇ ಯಶ್ಚಾಪಿ ಹಠವಾದಿಕಃ|*

*ಉಭಾವಪಿ ಶಠಾವೇತೌ ಕರ್ಮಬುದ್ಧಿಃ ಪ್ರಶಸ್ಯತೇ||*

ದೇವರು ದೈವ ಎಲ್ಲಾ ಅನುಗ್ರಹಿಸುವರು ಸರಿ. ಭಗವಂತನನ್ನು, ಅದೃಷ್ಟವನ್ನು ಮಾತ್ರ ನಂಬಿ ಕುಳಿತವ ಮಹಾಪುರುಷಾಧಮ. ಸದಾ ಪುರುಷ ಪ್ರಯತ್ನ ಅಗತ್ಯ. ಕಾರ್ಯನಿರತರಾಗುವುದು ಬಹಳ ಮುಖ್ಯ. ದೇವರನ್ನು ನಂಬಿ ಕುಳಿತರೆ ಹೊಟ್ಟೆ ಹೇಗೆ ತುಂಬುವುದು? ದುಡಿಯದೆ ಉಣ್ಣುವುದು, ಉಡುವುದು ಹೇಗೆ? ಹಿಂದಿನ ಜನ್ಮದ ಕರ್ಮಾನುಸಾರ ಈ ಜನ್ಮದಲ್ಲಿ ಭಗವಂತನು ಫಲವನ್ನು ಕರುಣಿಸುವನು. ಅದನ್ನು ಮೀರಲು ಅವನಿಗೂ ಸಾಧ್ಯವಾಗದು. ತನ್ನ ಬುದ್ಧಿಮತ್ತೆಯಿಂದಲೇ ಅಲ್ಲವೇ ಮಾನವನು ಇಂದು ಇಷ್ಟೆಲ್ಲಾ ಸಾಧಿಸಿದ್ದು, ಮೌನವಾಗಿ ಕುಳಿತರೆ ಸಾಧ್ಯವಾಗುತ್ತಿತ್ತೇ?

ಯಾವುದೇ ಕಾರ್ಯಸಾಧನೆ ಮಾಡಿ ನಮಗೆ ಫಲ ಸಿಗಲು ‘ದೈವ-ಅದೃಷ್ಟ-ಪೌರುಷ’ ಈ ಮೂರು ಬೇಕು. ಕರ್ತವ್ಯ ಮಾಡೋಣ, ಫಲಗಳನ್ನು ಪಡೆಯೋಣ. ದೈವ ಮತ್ತು ಅದೃಷ್ಟ ಮಾತ್ರ ನಂಬಿ ಕುಳಿತರೆ ಏಳಿಗೆಯಾಗದು, ಕರ್ಮವನ್ನು ಮಾಡಿ ಎಲ್ಲವನ್ನೂ ಗಳಿಸುವುದು ಸೂಕ್ತ. ಹಾಗೆ ಒಬ್ಬ ರೈತನು ಕಷ್ಟ ಪಟ್ಟು ವ್ಯವಸಾಯ ಮಾಡಿ ಬೆಳೆ ಬಂದಾಗ ಅನಾಹುತ, ಪ್ರಕೃತಿ ವಿಕೋಪಗಳಿಂದ ಕೈಗೆ ಸಿಗದಿರಬಹುದು. ಇಲ್ಲಿ ನಾವು ಒಂದು ಆಲೋಚಿಸಬಹುದು, ಪುರುಷ ಪ್ರಯತ್ನ ಸಫಲವಾಗಲು ದೇವರ ಅನುಗ್ರಹ, ಅದೃಷ್ಟ ಎರಡೂ ಬೇಕು. ನಿರಾಸೆ ಮಾಡದೆ ಮುಂದಿನ ಸಲ ರೈತ ಪ್ರಯತ್ನಿಸಿದಾಗ ಪ್ರಯೋಜನವಾಗಬಹುದು.

ಆದ್ದರಿಂದ ಸ್ನೇಹಿತರೇ, ನಮ್ಮಿಂದ ಆದಷ್ಟೂ ಕೆಲಸ, ಪ್ರಯತ್ನ, ಮಾಡೋಣ. ದುಡಿಯೋಣ. ಬದುಕುವ ದಾರಿಯನು ನಾವು ನಾವೇ ಅರಸೋಣ. ಯಾರ ಮೇಲೂ ಅವಲಂಭಿತರಾಗಿರುವುದು ಬೇಡ. ನಮ್ಮ ಮಕ್ಕಳನ್ನು ಅದೇ ದಿಕ್ಕಿನಲ್ಲಿ ಬೆಳೆಸಿ, ಸಾಕಿ, ಕಲಿಸಿ ಅವರ ತೋಳುಗಳಿಗೆ ಶಕ್ತಿಯನ್ನು ತುಂಬಿ, ಅವರ ಕಾಲಮೇಲೆ ಅವರು ನಿಲ್ಲುವ ಹಾಗೆ ಮಾಡೋಣ.

-ರತ್ನಾ ಕೆ.ಭಟ್ ತಲಂಜೇರಿ 

(ಆಕರ ಗ್ರಂಥ: ಮಹಾಭಾರತ ಚಿಂತನಂ)

ಚಿತ್ರ ಕೃಪೆ: ಇಂಟರ್ನೆಟ್ ತಾಣ