ಬಾಳಿಗೊಂದು ಚಿಂತನೆ - 109

ಬಾಳಿಗೊಂದು ಚಿಂತನೆ - 109

ವಿಯೋಗವಾದಾಗ ದುಃಖವಾಗುವುದು ಸಹಜ. ಆದರೆ ಅದು ಅನಿವಾರ್ಯ ಅಲ್ಲವೇ? ವಿಯೋಗವೆಂಬುದು ವಿಧಿಯಾಟ ಜೀವಿಗಳೇನು ಮಾಡಲಾದೀತು? ಜೀವ ಜನ್ಮ ತಾಳುವುದು ಅವನ ಆಟ, ಕರೆಸಿಕೊಳ್ಳುವುದೂ ಅವನ ಆಟ. ಅವನ ಆಟಗಳ ಮಧ್ಯೆ ನಮ್ಮ ಒಂದಷ್ಟು ಬದುಕು ತಾಕಲಾಟಗಳು. ನಾವು ನಮ್ಮ ಮನೆಯ ಸದಸ್ಯರನ್ನು, ಆಪ್ತರನ್ನು ಕಳಕೊಂಡಾಗ ಸಂಕಟ, ನೋವು, ದುಃಖ,ಹತಾಶೆ ಎಲ್ಲವೂ ಆಗುವುದು ಸಹಜ. ಯಾರೋ ಏನೋ ಗುರುತು ಪರಿಚಯವಿಲ್ಲದವರಿಗೆ ಅಸೌಖ್ಯವಾದಾಗ, ನೋವಾದಾಗಲೂ, ಕಳಕೊಂಡಾಗಲೂ ಬೇಸರ ಅನುಭವಿಸುತ್ತೇವೆ. ಇದನ್ನೇ ಮಾನವತೆ, ಆರ್ದ್ರತೆ ಎನ್ನುವುದು. 

ನಾವು ಯಾವುದೋ ಊರಿಗೆ ಪ್ರಯಾಣಿಸಲು ವಾಹನಗಳಿಗೆ ಹತ್ತುತ್ತೇವೆ. ಇಳಿಯುವ ಊರು ಬಂದಾಗ ಇಳಿಯಲೇ ಬೇಕಲ್ಲವೇ? ಹಾಗೆ ಅಲ್ಲವೇ ಬದುಕು ಸಹ. ಬಂದವರು ಇಲ್ಲೇ ಇದ್ದರೆ ಹೊಸಬರಿಗೆ ಸ್ಥಳಾವಕಾಶ ಬೇಕಲ್ಲವೇ?  

*ವಾಸವೃಕ್ಷೇ ಸಮಾಗಮ್ಯ ವಿಗಚ್ಛಂತಿ ಯಥಾಂಡಜಾಃ|*

*ನಿಯತಂ ವಿಪ್ರಯೋಗಾಂತಸ್ತಥಾ ಭೂತಸಮಾಗಮಃ||*

ಹೇಗೆ ತಮ್ಮ ತಂಗುದಾಣದ, ತಾವು ಗೂಡುಕಟ್ಟಿ ವಾಸಿಸುತ್ತಿರುವ ಮರಗಳಿಗೆ ಪಕ್ಷಿಗಳು ಸಾಯಂಕಾಲ ಬಂದು, ಮರುದಿನ ನೇಸರನ ಆಗಮನವಾದೊಡನೆ ಹಾರಿ ಹೋಗುವವೋ ಹಾಗೆಯೇ ಜಗದ ಜೀವರ ಸಮಾಗಮ ವಿಯೋಗ  ವಿಧಿನಿಯಮ. ಮೀರುವ ಅಧಿಕಾರ ಯಾರಿಗೂ ಇಲ್ಲ. ಹೊಸನೀರು ಹರಿದು ಬಂದಾಗ ಹಳೆಯ ನೀರು ಕೊಚ್ಚಿ ಹೋಗಲೇ ಬೇಕಲ್ಲ. ಚಿಗುರೆಲೆಗಳು ಮೂಡಿದಂತೆ ಹಣ್ಣೆಲೆಗಳು ಬೀಳಲೇ ಬೇಕು. ಪ್ರಕೃತಿಯಾಟ. ಹಾಗೆಯೇ ಬದುಕು ಸಹ.

ಭಗವಂತ ನೀಡಿದ ಈ ದೇಹವನ್ನು ಆದಷ್ಟೂ ಉತ್ತಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಇರುವಷ್ಟು ದಿನ ನೆಮ್ಮದಿಯ ಜೀವನ ನಡೆಸೋಣ, ಪುನೀತರಾಗೋಣ.

(ಶ್ಲೋಕ: ಸುಭಾಷಿತ ಮಾಲಾ)

ಸಂಗ್ರಹ- ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ